ಮಹಾ ಸ್ಫೋಟಕ ಕಾರ್ಖಾನೆ ಸ್ಫೋಟಕ್ಕೆ 18 ಮಂದಿ ಬಲಿ

Kannadaprabha News   | Kannada Prabha
Published : Mar 02, 2026, 05:03 AM IST
Maharashtra

ಸಾರಾಂಶ

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟಕ್ಕೆ 21 ಜನ ಬಲಿಯಾದ ಮಾರನೇ ದಿನವೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದೆ ಹಾಗೂ 18 ಜನ ಪ್ರಾಣ ಕಳೆದುಕೊಂಡಿದ್ದಾರೆ.

ನಾಗ್ಪುರ: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪಟಾಕಿ ಕಾರ್ಖಾನೆ ಸ್ಫೋಟಕ್ಕೆ 21 ಜನ ಬಲಿಯಾದ ಮಾರನೇ ದಿನವೇ ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಫೋಟಕ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದೆ ಹಾಗೂ 18 ಜನ ಪ್ರಾಣ ಕಳೆದುಕೊಂಡಿದ್ದಾರೆ.

ನಾಗ್ಪುರ ಜಿಲ್ಲೆಯ ಕಟೋಲ್ ತೆಹಸಿಲ್‌ನ ರೌಲ್‌ಗಾಂವ್‌ನಲ್ಲಿರುವ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಕ ಎಸ್‌ಬಿಎಲ್‌ ಎನರ್ಜಿ ಲಿ.ನಲ್ಲಿ ಭಾನುವಾರ ಬೆಳಗ್ಗೆ ನಡೆದ ಈ ಘಟನೆಯಲ್ಲಿ 24ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವಶೇಷಗಳಡಿಯಿಂದ ಮೃತದೇಹಗಳನ್ನು ತೆಗೆಯಲಾಗುತ್ತಿದ್ದು, ಗಾಯಾಳುಗಳನ್ನು ತುರ್ತಾಗಿ ನಾಗ್ಪುರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲವರ ದೇಹದ ಶೇ.80ರಷ್ಟು ಭಾಗ ಸುಟ್ಟುಹೋಗಿದೆ.

ಘಟನೆಗೆ ಸಂತಾಪ ಸೂಚಿಸಿರುವ ಸಿಎಂ ದೇವೇಂದ್ರ ಫಡ್ನವೀಸ್‌, ಕಾರಣ ಪತ್ತೆಗೆ ತನಿಖೆಗೆ ಆದೇಶಿಸಿದ್ದಾರೆ.

ಕಾರ್ಖಾನೆಯ ಪ್ರತಿನಿಧಿಗಳು ಮಾತನಾಡಿ, ‘ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಕಂಪನಿಯ ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ದುರ್ಘಟನೆ ಘಟಿಸಿದೆ. ಆ ವೇಳೆ ಅಲ್ಲಿ ಉತ್ಪಾದನಾ ಕಾರ್ಯ ನಡೆಯುತ್ತಿರಲಿಲ್ಲವಾದ್ದರಿಂದ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ’ ಎಂದರು.

ದೇಹ ಛಿದ್ರ:

ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿದ್ದವರ ದೇಹಗಳು ಛಿದ್ರವಾಗಿದ್ದು, ಗುರುತು ಪತ್ತೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಮೃತರ ಪತ್ತೆಗಾಗಿ ಅವರ ಸಂಬಂಧಿಕರ ರಕ್ತವನ್ನು ಸಂಗ್ರಹಿಸಿ, ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಸಂತಾಪ:

ಸ್ಫೋಟದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ರು. ಮತ್ತು ಗಾಯಾಳುಗಳಿಗೆ 50,000 ರು. ನೆರವು ಘೋಷಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಂತಾಪ ಸೂಚಿಸಿದ್ದಾರೆ.

ಆಗಿದ್ದೇನು?

- ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಸ್ಫೋಟಕ ಕಾರ್ಖಾನೆಯಲ್ಲಿ ಸ್ಫೋಟ

- ಕಾರ್ಖಾನೆಯ ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ಏಕಾಏಕಿ ಭಾರಿ ಬ್ಲಾಸ್ಟ್‌

- ವಿಚಿತ್ರವೆಂದರೆ ಯಾವುದೇ ಉತ್ಪಾದನಾ ಕಾರ್ಯ ನಡೆಯದಿರುವಾಗ ಈ ದುರಂತ

- ಹೀಗಾಗಿ ಸ್ಫೋಟಕ್ಕೆ ಏನು ಕಾರಣ ಎಂಬುದು ಈಗಲೂ ನಿಗೂಢ. ತನಿಖೆಗೆ ಆದೇಶ

- ಅನೇಕರ ದೇಹ ಗುರುತು ಸಿಗದಷ್ಟು ಛಿದ್ರ. ಶವ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ

- ಮೃತರ ಕುಟುಂಬಕ್ಕೆ ₹2 ಲಕ್ಷ, ಗಾಯಾಳುಗಳಿಗೆ ₹50,000 ಪರಿಹಾರ. ಗಣ್ಯರ ಶೋಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತೈಲ ಬಿಕ್ಕಟ್ಟು ಉಂಟಾದರೆ ದೇಶ ರಕ್ಷಣೆಗೆ ಉಡುಪಿ, ಮಂಗ್ಳೂರು ಸಿದ್ಧ : ಕೇಂದ್ರ
ಪಾಕಿಸ್ತಾನ, ವೆನಿಜುವೆಲಾ ಬಳಿಕ ಚೀನಾ ಶಸ್ತ್ರಾಸ್ತ್ರ ನಂಬಿ ಕೆಟ್ಟ ಇರಾನ್