
ಕಾನ್ಪುರ (ಜು.19): ಟ್ಯಾಟೂ ಪಾರ್ಲರ್ ಒಂದರಲ್ಲಿ ಟ್ಯಾಟೂ ಹಾಕಿಸಿಕೊಂಡ ಮಹಿಳೆಯೊಬ್ಬರಿಗೆ ಎಚ್‌ಐವಿ (HIV) ಸೋಂಕು ತಗುಲಿರುವುದು ದೃಢಪಟ್ಟಿದೆ. ಟ್ಯಾಟೂ ಮಾಡಿಸಿಕೊಂಡ ಕೆಲವೇ ದಿನಗಳಲ್ಲಿ ಜನನೇಂದ್ರಿಯದಲ್ಲಿ ತೀವ್ರ ಸ್ವರೂಪದ ಸೋಂಕು (Infection) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಈ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಕಾನ್ಪುರ ಮೂಲದ 32 ವರ್ಷದ ಮಹಿಳೆಗೆ ಈ ದುರ್ಗತಿ ಬಂದಿದೆ. ಈಕೆ ಇತ್ತೀಚೆಗೆ ದೆಹಲಿಯ ಟ್ಯಾಟೂ ಪಾರ್ಲರ್ ಒಂದರಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು. ಟ್ಯಾಟೂ ಮಾಡಿಸಿಕೊಂಡ ಕೆಲವೇ ವಾರಗಳಲ್ಲಿ ಜನನೇಂದ್ರಿಯದಲ್ಲಿ ತೀವ್ರ ಸೋಂಕು ಕಾಣಿಸಿಕೊಂಡಿದ್ದರಿಂದ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಮಹಿಳೆಯನ್ನು ಪರೀಕ್ಷಿಸಿದ ಕಾನ್ಪುರದ ಜಿವಿಎಸ್‌ಎಂ (GVSM) ಮೆಡಿಕಲ್ ಕಾಲೇಜಿನ ವೈದ್ಯರು, ಬೇರೆ ಯಾರಿಗೋ ಬಳಸಿದ ಸೂಜಿಯನ್ನು (Needle) ಸೋಂಕು ರಹಿತಗೊಳಿಸದೆ ಈ ಮಹಿಳೆಗೂ ಬಳಸಿರುವುದರಿಂದಲೇ ಎಚ್‌ಐವಿ ತಗುಲಿದೆ ಎಂದು ಬಲವಾಗಿ ಶಂಕಿಸಿದ್ದಾರೆ. ಪ್ರಸ್ತುತ ವೈದ್ಯರು ಎಚ್‌ಐವಿ ಹರಡುವಿಕೆಯ ನಿಖರ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ಜನನೇಂದ್ರಿಯದಲ್ಲಿ ಉಂಟಾದ ಸೋಂಕಿನಿಂದಾಗಿ ಮಹಿಳೆ ಕಾನ್ಪುರದ ಗಣೇಶ್ ಶಂಕರ್ ವಿದ್ಯಾರ್ಥಿ ಮೆಮೋರಿಯಲ್ (GVSM) ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದರು. ಚಿಕಿತ್ಸೆಯ ಭಾಗವಾಗಿ ವೈದ್ಯರು ಮಹಿಳೆಗೆ ಹೆಪಟೈಟಿಸ್-ಬಿ ಮತ್ತು ಎಚ್‌ಐವಿ ಪರೀಕ್ಷೆಗಳನ್ನು ನಡೆಸಿದರು. ಈ ಪರೀಕ್ಷಾ ವರದಿಯಲ್ಲಿ ಎಚ್‌ಐವಿ ಪಾಸಿಟಿವ್ ಎಂದು ಬಂದಾಗ ವೈದ್ಯರು ಬೆಚ್ಚಿಬಿದ್ದಿದ್ದಾರೆ. ಸದ್ಯ ಮಹಿಳೆಗೆ ಆಂಟಿ-ರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆಯನ್ನು ಆರಂಭಿಸಲಾಗಿದೆ.
ಮಹಿಳೆಯು ಸುಮಾರು ಒಂದು ವಾರದ ಮುಂಚೆ ಆಸ್ಪತ್ರೆಯ ಚರ್ಮರೋಗ (Dermatology) ವಿಭಾಗಕ್ಕೆ ಚಿಕಿತ್ಸೆಗಾಗಿ ಬಂದಿದ್ದರು ಎಂದು ಅಲ್ಲಿನ ವೈದ್ಯರಾದ ಡಾ. ಶ್ವೇತಾಂಕ್ ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವುದಕ್ಕಿಂತ ಎರಡು ವಾರಗಳ ಮುಂಚೆ ಆಕೆ ದೆಹಲಿಯ ಪಾರ್ಲರ್‌ನಲ್ಲಿ ಟ್ಯಾಟೂ ಮಾಡಿಸಿಕೊಂಡಿದ್ದರು. ಟ್ಯಾಟೂ ಹಾಕಿಸಿಕೊಂಡ ತಕ್ಷಣವೇ ಆಕೆಗೆ ಜನನೇಂದ್ರಿಯದಲ್ಲಿ ಸೋಂಕು ಕಾಣಿಸಿಕೊಂಡಿದೆ. ಹಚ್ಚೆ ಹಾಕಲು ಬಳಸಿದ ಸೂಜಿಯ ಮೂಲಕವೇ ಎಚ್‌ಐವಿ ದೇಹ ಸೇರಿದೆ ಎಂಬ ಬಲವಾದ ವಾದಕ್ಕೆ ವೈದ್ಯರು ಬಂದಿದ್ದರೂ, ಮುಂದಿನ ತನಿಖೆಗಳ ನಂತರವಷ್ಟೇ ಅಧಿಕೃತವಾಗಿ ಮೂಲವನ್ನು ದೃಢೀಕರಿಸಲಾಗುವುದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಎಆರ್‌ಟಿ (ART) ಚಿಕಿತ್ಸೆಯ ಮೂಲಕ ಎಚ್‌ಐವಿ ಸೋಂಕನ್ನು ಹತೋಟಿಯಲ್ಲಿಡಬಹುದು ಎಂದು ಡಾ. ಶ್ವೇತಾಂಕ್ ಸ್ಪಷ್ಟಪಡಿಸಿದ್ದಾರೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ದೀರ್ಘಕಾಲದ ಚಿಕಿತ್ಸೆಯ ಮೂಲಕ ನಿಯಂತ್ರಣದಲ್ಲಿಡಬಹುದು. ಇದರೊಂದಿಗೆ, ಟ್ಯಾಟೂ ಪಾರ್ಲರ್‌ಗಳಲ್ಲಿ ಸೂಜಿಗಳನ್ನು ಸಮರ್ಪಕವಾಗಿ ಅಟೋಕ್ಲೇವ್ (ಸೋಂಕು ರಹಿತ) ಮಾಡದೆ ಬಳಸುವುದರಿಂದ ಕೇವಲ ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ಮಾತ್ರವಲ್ಲದೆ, ಇನ್ನು ಹತ್ತಾರು ಭೀಕರ ಚರ್ಮರೋಗಗಳು ಹರಡುತ್ತವೆ ಎಂದು ವೈದ್ಯರು ಸಾರ್ವಜನಿಕರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ