Kanpur Road Accident: ಮದ್ಯಪಾನ ಮಾಡಿ ಡ್ರೈವಿಂಗ್‌, ಕಾಲುವೆಗೆ ಬಿದ್ದ ಟ್ರ್ಯಾಕ್ಟರ್‌ಗೆ 26 ಮಂದಿ ಬಲಿ!

By Santosh Naik  |  First Published Oct 2, 2022, 4:04 PM IST

ಶನಿವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಟ್ರ್ಯಾಕ್ಟರ್‌ ಟ್ರಾಲಿ ಅಪಘಾತದಲ್ಲಿ 26 ಮಂದಿ ಸಾವು ಕಂಡಿರುವ ದಾರುಣ ಘಟನೆ ನಡೆದಿದೆ. ಒಟ್ಟು 45 ಮಂದಿ ಪ್ರಯಾಣಿಕರು ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ ಕಾಲುವೆಗೆ ಬಿದ್ದು ಘಟನೆ ಸಂಭವಿಸಿದೆ.
 


ಕಾನ್ಪುರ (ಅ.2): ಉತ್ತರ ಪ್ರದೇಶದ ಕಾನ್ಪುರದಲ್ಲಿ ಶನಿವಾರ ರಾತ್ರಿ ಟ್ರ್ಯಾಕ್ಟರ್-ಟ್ರಾಲಿ ಅಪಘಾತದಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 13 ಮಹಿಳೆಯರು ಮತ್ತು 13 ಮಕ್ಕಳು ಸೇರಿದ್ದಾರೆ. ಟ್ರಾಕ್ಟರ್ ಟ್ರಾಲಿ ಕಾಲುವೆಗೆ ಬಿದ್ದಿದ್ದು, ಅದರಲ್ಲಿ 45 ಮಂದಿ ಪ್ರಯಾಣ ಮಾಡುತ್ತಿದ್ದರು. ಈ ಜನರು ಉನ್ನಾವೋದ ಚಂದ್ರಿಕಾ ದೇವಿ ದೇವಸ್ಥಾನ ದಿಂದ ಪೂಜೆ ಸಲ್ಲಿಸಿದ ನಂತರ ಕಾನ್ಪುರಕ್ಕೆ ಹಿಂತಿರುಗುತ್ತಿದ್ದರು. ಎಲ್ಲರೂ ಕೊರ್ತಾ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಮದ್ಯಪಾನ ಮಾಡಿ ಡ್ರೈವಿಂಗ್‌ ಮಾಡುತ್ತಿದ್ದ ಎಂದು ಹೇಳಲಾಗಿದೆ. ಮದ್ಯಪಾನ ಮಾಡಿದ ಕಾರಣ, ಟ್ರ್ಯಾಕ್ಟರ್‌ ಡ್ರೈವಿಂಗ್‌ ಮಾಡೋದು ಬೇಡ ಎಂದು ಮಹಿಳೆಯರು ಪರಿಪರಿಯಾಗಿ ಬೇಡಿಕೊಂಡರೂ ಆತ ಒಪ್ಪಿರಲಿಲ್ಲ. ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಟ್ರ್ಯಾಕ್ಟರ್‌ ಚಾಲಕನ ಮಗನ ಮುಂಡನ ಕಾರ್ಯ ಕೂಡ ನಡೆದಿತ್ತು. ಟ್ರ್ಯಾಕ್ಟರ್‌ ಚಾಲಕ ಬದುಕಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಘಟಂಪುರ ಕ್ಷೇತ್ರದ ಕೊರ್ತಾ ಗ್ರಾಮಕ್ಕೆ ಸಿಎಂ ಯೋಗಿ ಭಾನುವಾರ ಆಗಮಿಸಿದ್ದಾರೆ. ಅಲ್ಲಿ ಅಪಘಾತದಲ್ಲಿ ಮಡಿದವರ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಆದರೆ, ಯೋಗಿ ಆದಿತ್ಯನಾಥ್‌ ಬರುವ ಮುನ್ನವೇ 26 ಶವಸಂಸ್ಕಾರ ನೆರವೇರಿದೆ. ಮಕ್ಕಳ 13 ಶವಗಳನ್ನು ಹೂಳಲಾಗಿದ್ದರೆ, ಮಹಿಳೆಯರ 13 ಶವಗಳನ್ನು ಸುಡಲಾಗಿದೆ. ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಯೋಗಿ ಆದಿತ್ಯನಾಥ್‌ ತೆರಳಿದ್ದಾರೆ.

Update | A major accident in , a trolley full of devotees returning from Chandrika Devi temple overturned, in which 27 people have died. pic.twitter.com/uRg2FMjAcX

— Himanshu dixit 💙 (@HimanshuDixitt)


ಅದೇ ವೇಳೆ ಸಿಎಂ ಯೋಗಿ ಆದಿತ್ಯನಾಥ್ (yogi adityanath) ಕಾನ್ಪುರದ (Kanpur) ಹಲಾತ್ ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗಕ್ಷೇಮ ವಿಚಾರಣೆ ಮಾಡಿದರು. ಯಾವುದೇ ಗಂಭೀರ ಪ್ರಮಾಣದ ಗಾಯಾಳುಗಳು ಆಸ್ಪತ್ರೆಯಲ್ಲಿಲ್ಲ ಎಂದು ಯೋಗಿ ಆದಿತ್ಯನಾಥ್‌ಗೆ ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಅಪಘಾತಗಳು ಮುದೆ ಆಗದಂತೆ ಕ್ರಮ ಕೈಗೊಳ್ಳುವಂತೆ ಎನ್‌ಎಚ್‌ಎಐ (Kanpur Road Accident) ಹಾಗೂ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದು, ಮೃತರ ಸಂಬಂಧಿಕರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು. ಅದರೊಂದಿಗೆ ಈ ಘಟನೆಯನ್ನು ಮುಂದಿಟ್ಟಿಕೊಂಡು ಮುಂದೆ ಅಪಘಾತಗಳು ಸಂಭವಿಸದಂತೆ ಜಾಗೃತಿ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಟ್ರ್ಯಾಕ್ಟರ್‌ ಟ್ರಾಲಿಗಳನ್ನು (Tractor trolley) ಕೃಷಿ ಕಾರ್ಯಗಳಿಗೆ ಮಾತ್ರವೇ ಬಳಸಿ ಎಂದು ಇದೇ ವೇಳೆ ಸಿಎಂ ಜನರಲ್ಲಿ ಮನವಿ ಮಾಡಿದರು. ಈ ವೇಳೆ ಗ್ರಾಮದಲ್ಲಿ ಸಚಿವ ರಾಕೇಶ್‌ ಸಾಚಾನ್‌ ಕೂಡ ಉಪಸ್ಥಿತರಿದ್ದರು. ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಕೂಡ ಗ್ರಾಮಕ್ಕೆ ಆಗಮಿಸಿದ್ದಲ್ಲದೆ,  ಒಂದೇ ಬಾರಿಗೆ ರಾಶಿ ರಾಶಿ ಮೃತ ದೇಹಗಳನ್ನು ನೋಡಿ ಕಣ್ಣೀರಿಟ್ಟರು. ಅಲ್ಲದೆ, ಅಳುತ್ತಿದ್ದ ಮಹಿಳೆಯರಿಗೆ ಸಾಂತ್ವನ ಮಾಡುವ ಪ್ರಯತ್ನ ಮಾಡಿದರು. ಅಳಲು ತೋಡಿಕೊಳ್ಳುತ್ತಿದ್ದ ಮಹಿಳೆಯೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ, ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಟ್ವೀಟ್‌ ಮಾಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ ಪರಿಹಾರ ಹಾಗೂ ಗಾಯಾಳು ಕುಟುಂಬಗಳಿಗೆ 50 ಸಾವಿರ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

Tap to resize

Latest Videos

ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯುಟ್ಯೂಬರ್ 'ಸ್ಕೈಲಾರ್ಡ್' ಖ್ಯಾತಿಯ ಅಭ್ಯುದಯ್ ಸಾವು

ಎಡಿಜಿ ಭಾನು ಭಾಸ್ಕರ್ ಅವರು ನಿರ್ಲಕ್ಷ್ಯದ ಕಾರಣ ಸಾದ್ ಪೊಲೀಸ್ ಠಾಣೆ ಪ್ರಭಾರಿ ಆನಂದ್ ಪಾಂಡೆ ಸೇರಿದಂತೆ 4 ಪಿಆರ್‌ವಿ ಜವಾನರನ್ನು ಅಮಾನತುಗೊಳಿಸಿದ್ದಾರೆ. ಅಪಘಾತದ ಬಗ್ಗೆ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಯಲಿದೆ. ಸ್ಥಳೀಯರು ಮಾಹಿತಿ ನೀಡಿದ ನಂತರವೂ ಸರಿಯಾದ ಸಮಯಕ್ಕೆ ಈ ಜನರು ತಲುಪಲಿಲ್ಲ. ಆಡಳಿತ ನಿರ್ಲಕ್ಷ್ಯವೇ ಕಾರಣ ಎಂದು ಜನರೂ ಆರೋಪಿಸಿದ್ದಾರೆ. ಆಂಬ್ಯುಲೆನ್ಸ್ ತಡವಾಗಿ ಬಂದಿತು ಎನ್ನುತ್ತಾರೆ. ಸಮಯಕ್ಕೆ ಸರಿಯಾಗಿ ಬಂದಿದ್ದರೆ ಒಂದಷ್ಟು ಜೀವಗಳನ್ನು ಉಳಿಸಬಹುದಿತ್ತು ಎನ್ನುವುದು ಜನರ ಅಭಿಪ್ರಾಯವಾಗಿದೆ. 
ಸುಮಾರು ಒಂದೂವರೆ ವರ್ಷದ ಹಿಂದೆ ಘಟಂಪುರ ಕೊರ್ತ(Kortha) ಗ್ರಾಮದ ಜ್ಞಾನವತಿ, ಈಗಾಗಲೇ ತಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗುವಿಗಾಗಿ ಹರಕೆ ಹೊತ್ತಿದ್ದರು.

Cyrus Mistry Death ಅಪಘಾತದಲ್ಲಿ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸಾವು!

ನವರಾತ್ರಿಯ ವೇಳೆ ಉನ್ನಾವೊದ ಬಕ್ಸರ್‌ನ ಚಂದ್ರಿಕಾ ದೇವಿ ದೇವಸ್ಥಾನಕ್ಕೆ ಮುಂಡನ ಕಾರ್ಯವನ್ನು ಮಾಡುವುದಾಗಿ ಕೇಳಿಕೊಂಡಿದ್ದರು. ಆದರೆ, ಜ್ಞಾನವತಿಯ 7 ತಿಂಗಳ ಮಗ, ಅಭಿ ಈಗ ಹಾಲೆಟ್‌ ಎಮರ್ಜೆನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಹೆಣ್ಣು ಮಗಳು ದಿಯಾಳನ್ನು ಕಳೆದುಕೊಂಡಿದ್ದಾರೆ.  ಅಪಘಾತದಲ್ಲಿ ಜ್ಞಾನವತಿಯ ಅತ್ತೆ ಜಾನಕಿ ಕೂಡ ಸಾವನ್ನಪ್ಪಿದ್ದಾರೆ. ಜ್ಞಾನವತಿ ಅವರ ಕುಟುಂಬದಲ್ಲಿ ಒಟ್ಟು 12 ಮಂದಿ ಸಾವು ಕಂಡಿದ್ದಾರೆ. ಟ್ರಾಲಿ ಪಲ್ಟಿಯಾದಾಗ ತುಂಬಾ ಜನ ಕೈಕಾಲು ಮುರಿದುಕೊಳ್ಳಬಹುದು ಎಂದುಕೊಂಡಿದ್ದೆ. ಆದರೆ, ಇಷ್ಟು ಜನ ಸಾವು ಕಾಣುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಜ್ಞಾನವತಿ ಹೇಳಿದ್ದಾರೆ.

click me!