
ಚೆನ್ನೈ: ಮಾಜಿ ಕೇಂದ್ರ ಸಚಿವ ಮತ್ತು ಈಗಿನ ಡಿಎಂಕೆ ಸಂಸದ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಮತ್ತು ಸನ್ ಟಿವಿ ನೆಟ್‌ವರ್ಕ್‌ನ ಮುಖ್ಯಸ್ಥ ಕಲಾನಿಧಿ ಮಾರನ್ ನಡುವೆ ವಿರಸ ಉಂಟಾಗಿದೆ. 2003 ರಲ್ಲಿ ತಂದೆ ಮುರಸೊಲಿ ಮಾರನ್ ಅವರ ಮರಣದ ನಂತರ ಕಲಾನಿಧಿ ಮಾರನ್ ತಮ್ಮ ತಂದೆ ಸ್ಥಾಪಿಸಿದ್ದ ಮಾಧ್ಯಮ ಸಾಮ್ರಾಜ್ಯವನ್ನು ವಂಚನೆಯಿಂದ ವಶಪಡಿಸಿಕೊಂಡಿದ್ದಾರೆ ಎಂದು ಸಂಸದ ದಯಾನಿಧಿ ಮಾರನ್ ಆರೋಪಿಸಿದ್ದು, ಸೋದರನಿಗೆ ಕಾನೂನು ನೋಟೀಸ್ ಕಳುಹಿಸಿದ್ದಾರೆ.
ಕಾನೂನು ನೋಟೀಸ್‌ನಲ್ಲಿ, ಇತರ ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಕಲಾನಿಧಿ ಮಾರನ್ ಸನ್ ಟಿವಿಯ ಷೇರುಗಳನ್ನು ಕಾನೂನುಬಾಹಿರವಾಗಿ ವರ್ಗಾಯಿಸಿದ್ದಾರೆ ಎಂದು ದಯಾನಿಧಿ ಮಾರನ್ ಆರೋಪಿದಿದ್ದಾರೆ. ಕಲಾನಿಧಿ ಮಾರನ್ ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ ಎಂದು ದಯಾನಿಧಿ ಮಾರನ್ ಆರೋಪಿಸಿ ಪರಿಹಾರ ಕೋರುತ್ತಿದ್ದಾರೆ. ಈ ಆರೋಪ ಸಾಬೀತಾದರೆ, ಸನ್ ಟಿವಿಯ ₹30,000 ಕೋಟಿ ಸಾಮ್ರಾಜ್ಯವನ್ನು ಮರುರೂಪಿಸಬೇಕಾಗುತ್ತದೆ. ಇದು ಅದರ ಷೇರು ಮತ್ತು ಆಡಳಿತದ ಮೇಲೆ ಭಾರಿ ಪರಿಣಾಮ ಬೀರಲಿದೆ.
ಮಾರನ್ ಕುಟುಂಬದ ಪರಂಪರೆ
ಮಾರನ್ ಕುಟುಂಬವು ತಮಿಳುನಾಡಿನ ಮಾಧ್ಯಮ ಮತ್ತು ರಾಜಕೀಯದಲ್ಲಿ ಭಾರಿ ಪ್ರಾಬಲ್ಯ ಹೊಂದಿದೆ. ಕಲಾನಿಧಿ ಮಾರನ್ ಸನ್ ಟಿವಿಯನ್ನು ಭಾರತದ ಅತಿದೊಡ್ಡ ನೆಟ್‌ವರ್ಕ್ ಆಗಿ ನಿರ್ಮಿಸಿದರೆ, ದಯಾನಿಧಿ ಮಾರನ್ ರಾಜಕೀಯದತ್ತ ಗಮನ ಹರಿಸಿ, ದೂರಸಂಪರ್ಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅಣ್ಣ ತಮ್ಮಂದಿರ ನಡುವಿನ ಈ ಸ್ಪರ್ಧೆಯು ಕುಟುಂಬದ ವ್ಯಾಪಕ ವ್ಯಾಪಾರ ಹಿತಾಸಕ್ತಿಗಳ ಉತ್ತರಾಧಿಕಾರ ಮತ್ತು ನಿಯಂತ್ರಣದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.
ಕಲಾನಿಧಿ ಮಾರನ್ ಸಾಮ್ರಾಜ್ಯ
₹25,000 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಕಲಾನಿಧಿ ಮಾರನ್ ಸನ್ ಟಿವಿ, ಸನ್ NXT ಮತ್ತು ರೆಡ್ FM ಅನ್ನು ನಿಯಂತ್ರಿಸುತ್ತಿದ್ದಾರೆ. ₹200 ಕೋಟಿ ಮೌಲ್ಯದ ಚೆನ್ನೈ ಮಹಲು, ಖಾಸಗಿ ಜೆಟ್ ವಿಮಾನಗಳು ಮತ್ತು ಐಷಾರಾಮಿ ಕಾರುಗಳು ಅವರ ಐಷಾರಾಮಿ ಜೀವನಶೈಲಿಯಲ್ಲಿ ಸೇರಿವೆ. ಅವರ ಪತ್ನಿ ಕಾವೇರಿ ಮಾರನ್ ಸನ್ ಗ್ರೂಪ್‌ನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ದಯಾನಿಧಿ ಮಾರನ್ ರಾಜಕೀಯ ಪ್ರಭಾವ
ಇತ್ತ ₹500+ ಕೋಟಿ ನಿವ್ವಳ ಮೌಲ್ಯ ಹೊಂದಿರುವ ದಯಾನಿಧಿ ಮಾರನ್ ಡಿಎಂಕೆಯಲ್ಲಿ ರಾಜಕೀಯ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಸನ್ ಗ್ರೂಪ್‌ನಲ್ಲಿ ಗಮನಾರ್ಹ ರಿಯಲ್ ಎಸ್ಟೇಟ್ ಮತ್ತು ಷೇರುಗಳನ್ನು ಹೊಂದಿದ್ದಾರೆ. ಅವರ ಕಾನೂನು ಕ್ರಮವು ಅವರ ಷೇರುಗಳನ್ನು ಸಕ್ರಿಯವಾಗಿ ಮರಳಿ ಪಡೆಯುವುದರ ಸೂಚನೆಯಾಗಿದೆ.
ಸನ್ ಟಿವಿಯ ಷೇರು ಮೇಲೆ ಪರಿಣಾಮ
ಕಲಾನಿಧಿ ಮಾರನ್ ಮತ್ತು ಅವರ ಕುಟುಂಬವು ಸನ್ ಟಿವಿಯ 75% ಷೇರುಗಳನ್ನು ಹೊಂದಿದೆ. ಪ್ರತಿ ಷೇರುಗಳು ₹600–700 ರ ನಡುವೆ ವಹಿವಾಟು ನಡೆಸುತ್ತಿವೆ. ವಿಶೇಷವಾಗಿ ದಯಾನಿಧಿ ಮಾರನ್ ಕಾನೂನು ಮೊರೆ ಹೋರಗಿರುವುದರಿಂದ ನ್ಯಾಯಾಲಯದ ಆದೇಶ ಬಂದು ಷೇರು ಮರುಹಂಚಿಕೆ ಅಥವಾ ಪರಿಹಾರ ಪಡೆದರೆ. ದೀರ್ಘಕಾಲದ ಕಾನೂನು ಹೋರಾಟವು ಸಂಸ್ಥೆಯ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮಾರನ್ ಕುಟುಂಬದ ಹಿಂದಿನ ಹಗರಣಗಳು
ಮಾರನ್ ಕುಟುಂಬಕ್ಕೆ ವಿವಾದಗಳು ಹೊಸದೇನಲ್ಲ. ಈ ಹಿಂದೆ ಏರ್‌ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ದಯಾನಿಧಿ ತನಿಖೆಗಳನ್ನು ಎದುರಿಸಿದ್ದರು. ಹಾಗೆಯೇ ಸನ್ ಟಿವಿಯ ಕಚೇರಿ ಮೇಲೆ ಹಲವರು ಬಾರಿ ಐಟಿ ದಾಳಿಗಳು ನಡೆದಿದ್ದವು. ಇವು ಕುಟುಂಬದ ಖ್ಯಾತಿಯನ್ನು ಕುಗ್ಗಿಸಿವೆ.
ದಯಾನಿಧಿ ಮಾರನ್ ಆಸ್ತಿಗಳು
ದಯಾನಿಧಿ ಮಾರನ್ ತಮ್ಮ ಇತ್ತೀಚಿನ ಚುನಾವಣಾ ಅಫಿಡವಿಟ್‌ನಲ್ಲಿ ಸುಮಾರು ₹7.8 ಕೋಟಿ ಮೌಲ್ಯದ ಆಸ್ತಿಗಳನ್ನು ಘೋಷಿಸಿದ್ದಾರೆ. ಅವರ ಹೂಡಿಕೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ರಿಲಯನ್ಸ್ ಪವರ್ ಮತ್ತು ಇಂಡಿಯನ್ ಎನರ್ಜಿ ಎಕ್ಸ್‌ಚೇಂಜ್‌ನಂತಹ ಪ್ರಮುಖ ಕಂಪನಿಗಳ ಷೇರುಗಳು ಸೇರಿವೆ. ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿದ್ದರೂ, ಅವರ ವೈಯಕ್ತಿಕ ಸಂಪತ್ತು ಮತ್ತು ಷೇರುಗಳು ಅವರ ಅಣ್ಣನಿಗೆ ಹೋಲಿಸಿದರೆ ಭಾರೀ ಕಡಿಮೆ.
ಕಲಾನಿಧಿ ಮಾರನ್ ಆಸ್ತಿಗಳು
ಸನ್ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷರಾದ ಕಲಾನಿಧಿ ಮಾರನ್ ಭಾರತದ ಶ್ರೀಮಂತ ಮಾಧ್ಯಮ ಉದ್ಯಮಿಗಳಲ್ಲಿ ಒಬ್ಬರು. ಸನ್ ಟಿವಿ ನೆಟ್‌ವರ್ಕ್‌ನಲ್ಲಿ ₹17,000 ಕೋಟಿಗೂ ಹೆಚ್ಚು ಮೌಲ್ಯದ 75% ಷೇರುಗಳನ್ನು ಹೊಂದಿದ್ದಾರೆ. ಅವರ ಸಾಮ್ರಾಜ್ಯವು ದೂರದರ್ಶನ, FM ರೇಡಿಯೋ, ಮುದ್ರಣ, OTT (Sun NXT) ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಂತಹ ಐಪಿಎಲ್ ಕ್ರಿಕೆಟ್ ತಂಡಗಳವರೆಗೆ ವ್ಯಾಪಿಸಿದೆ. ಹಲವಾರು ಆದಾಯ ಮೂಲಗಳು ಅವರ ನಿವ್ವಳ ಮೌಲ್ಯವನ್ನು ₹26,000 ಕೋಟಿಯಿಂದ ₹33,000 ಕೋಟಿ ಎಂದು ಅಂದಾಜಿಸಿವೆ, ಇದು ಅವರನ್ನು ತಮಿಳುನಾಡಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ.
ಕೌಟುಂಬಿಕ ಕಲಹಕ್ಕೆ ಕಾರಣವಾದ ಷೇರು ವಿವಾದ
ಜೂನ್ 2025 ರಲ್ಲಿ ಒಂದು ಆಘಾತಕಾರಿ ತಿರುವು ಸಂಭವಿಸಿತು, ಕಲಾನಿಧಿ ಮಾರನ್ 2003 ರಲ್ಲಿ 12 ಲಕ್ಷ ಸನ್ ಟಿವಿ ಷೇರುಗಳನ್ನು ಅನ್ಯಾಯವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ದಯಾನಿಧಿ ಮಾರನ್ ಕಾನೂನು ನೋಟೀಸ್ ಕಳುಹಿಸಿದರು. ಈಗ ಸಾವಿರಾರು ಕೋಟಿ ಮೌಲ್ಯದ ಆ ಷೇರುಗಳನ್ನು ಸರಿಯಾದ ಅನುಮೋದನೆ ಅಥವಾ ಮೌಲ್ಯಮಾಪನವಿಲ್ಲದೆ ತೆಗೆದುಕೊಳ್ಳಲಾಗಿದೆ ಎಂದು ದಯಾನಿಧಿ ಹೇಳುತ್ತಾರೆ. ಇದು ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಿಸಿದೆ.
ಸನ್ ಟಿವಿ ಮತ್ತು ಸಾರ್ವಜನಿಕ ಮಾರುಕಟ್ಟೆಗಳ ಮೇಲೆ ಪರಿಣಾಮ
ಈ ವಿವಾದದ ನಂತರ, ಸನ್ ಟಿವಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಸುಮಾರು 5% ಕುಸಿತ ಕಂಡವು. ಕೌಟುಂಬಿಕ ಕಲಹ ಮತ್ತು ಸಂಭಾವ್ಯ ಕಾರ್ಪೊರೇಟ್ ದುರ್ನಡತೆಯ ಸುದ್ದಿಗಳಿಗೆ ಹೂಡಿಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಕಲಾನಿಧಿ ಮೇಲೆ ಕಾನೂನು ಒತ್ತಡ ಹೇರುವ ಮೂಲಕ, ಗಂಭೀರ ವಂಚನೆ ತನಿಖಾ ಕಚೇರಿ (SFIO) ಮೂಲಕ ಸರ್ಕಾರಿ ತನಿಖೆ ನಡೆಸಬೇಕೆಂದು ದಯಾನಿಧಿ ಮಾರನ್ ಒತ್ತಾಯಿಸಿದ್ದಾರೆ.
ದಯಾನಿಧಿ ಮಾರನ್ ರಾಜಕೀಯದಲ್ಲಿ ಮುಂದುವರಿದರೆ, ಕಲಾನಿಧಿ ಮಾರನ್ ವ್ಯಾಪಾರ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇತ್ತೀಚಿನ ಕಾನೂನು ಹೋರಾಟವು ರಾಜಕೀಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ