ಭಾರತದ ಸೋಲಾರ್‌ ವಸ್ತುಗಳ ಮೇಲೆ ಟ್ರಂಪ್‌ 126% ತೆರಿಗೆ

Kannadaprabha News   | Kannada Prabha
Published : Feb 26, 2026, 05:11 AM IST
Donald Trump

ಸಾರಾಂಶ

ಭಾರತದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.10ಕ್ಕೆ ಇಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ಕಾರ ಇದೀಗ ಸೋಲಾರ್‌ ವಸ್ತುಗಳ ಮೇಲೆ ಶೇ.126ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ.

ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.10ಕ್ಕೆ ಇಳಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸರ್ಕಾರ ಇದೀಗ ಸೋಲಾರ್‌ ವಸ್ತುಗಳ ಮೇಲೆ ಶೇ.126ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದೆ.

ಭಾರತ ಸರ್ಕಾರವು ಅವುಗಳ ಉತ್ಪಾದನೆಗೆ ನೀಡುತ್ತಿರುವ ಸಬ್ಸೀಡಿಗಳು ನ್ಯಾಯೋಚಿತವಾಗಿಲ್ಲ; ಕಡಿಮೆ ಖರ್ಚಲ್ಲಿ ಉತ್ಪಾದಿಸಿ ಅಮೆರಿಕಕ್ಕೆ ಸುರೀತಾರೆ ಎಂದು ಆರೋಪಿಸಿ ಈ ನಿರ್ಧಾರ ಕೈಗೊಂಡಿದೆ. ಇದರನ್ವಯ ಇನ್ನು ಭಾರತದಿಂದ ರಫ್ತಾಗುವ ಸೌರಫಲಕ ಮತ್ತು ಸೆಲ್‌ಗಳ ಮೇಲೆ ಶೇ.126ರಷ್ಟು ತೆರಿಗೆ ಬೀಳಲಿದೆ.

ಈ ಬಗ್ಗೆ ಹೊರಡಿಸಲಾಗಿರುವ ಆದೇಶದಲ್ಲಿ, ‘2022ರಲ್ಲಿ 762 ಕೋಟಿ ರು. ಮೊತ್ತದ ಸೋಲಾರ್‌ ಉಪಕರಣಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿತ್ತು. 2024ರಲ್ಲಿ ಇದು 7.2 ಸಾವಿರ ಕೋಟಿ ರು. ಆಗಿದೆ. ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್‌ ದೇಶಗಳು ಕಡಿಮೆ ದರದಲ್ಲಿ ಸೋಲಾರ್‌ ಉಪಕರಣಗಳನ್ನು ಉತ್ಪಾದಿಸಿ ಅಮೆರಿಕದ ಮಾರುಕಟ್ಟೆಗೆ ಸುರಿಯುತ್ತಿದ್ದಾರೆ. ಇದರ ವಿರುದ್ಧ ನಮ್ಮ ಆರ್ಥಿಕ ಸಚಿವಾಲಯ ತನಿಖೆ ನಡೆಸುತ್ತಿದೆ’ ಎನ್ನಲಾಗಿದೆ.ಇಂಡೋನೇಷ್ಯಾ ಮೇಲೆ ಶೇ. 86ರಿಂದ ಶೇ.143ರಷ್ಟು ಹಾಗೂ ಲಾವೋಸ್‌ ಮೇಲೆ ಶೇ.81ರಷ್ಟು ತೆರಿಗೆ ವಿಧಿಸಲಾಗಿದೆ. 2025ರ ಆರಂಭದಲ್ಲಿ ಭಾರತ ಮತ್ತು ಈ 2 ರಾಷ್ಟ್ರಗಳು ಅಮೆರಿಕದ ಒಟ್ಟು ಸೋಲಾರ್‌ ಉಪಕರಣಗಳ ಆಮದಿನಲ್ಲಿ ಶೇ.57ರಷ್ಟು ಪಾಲನ್ನು ಹೊಂದಿದ್ದವು.

ಅಮೆರಿಕನ್ನರಿಗೆ ಇನ್ನು ಆದಾಯ ತೆರಿಗೆಯಿಂದ ಮುಕ್ತಿ: ಟ್ರಂಪ್‌

ವಾಷಿಂಗ್ಟನ್‌: ‘ನಾನು ವಿದೇಶಗಳ ಮೇಲೆ ಹೇರಿರುವ ಆಮದು ತೆರಿಗೆಯಿಂದಾಗಿ ಕೋಟ್ಯಂತರ ಡಾಲರ್‌ ಸಂಗ್ರಹವಾಗುತ್ತಿದೆ. ಆದ್ದರಿಂದ ಇನ್ನು ಸ್ವಲ್ಪ ಸಮಯದಲ್ಲೇ ಅಮೆರಿಕನ್ನರು ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇರುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಅವರು, ‘ಇಷ್ಟು ವರ್ಷ ನಮ್ಮನ್ನು ಸುಲಿಗೆ ಮಾಡಿದ ದೇಶಗಳೆಲ್ಲ ಈಗ ನಮಗೇ ಕೋಟ್ಯಂತರ ಡಾಲರ್‌ ಪಾವತಿಸುತ್ತಿವೆ. ಆ ದೇಶಗಳಿಗೆ ಲಾಭವಿಲ್ಲದಿದ್ದರೂ ನಮಗೆ ಭರ್ಜರಿ ಲಾಭ ಆಗುತ್ತಿದೆ. ಅಂತೆಯೇ ಇದರಿಂದ ಆರ್ಥಿಕವಾಗಿ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಲಾಭವಾಗುವಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದೇನೆ. ಹಾಗಾಗಿ, ಅಮೆರಿಕದ ಜನರ ಮೇಲೆ ಹೊರೆಯಾಗಿರುವ ಆದಾಯ ತೆರಿಗೆಯನ್ನು ಅವರು ಇನ್ನು ಕಟ್ಟುವ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು. ಇದಕ್ಕೂ ಮೊದಲು ಹಲವು ಬಾರಿ ಟ್ರಂಪ್‌ ಆದಾಯ ತೆರಿಗೆ ರದ್ದತಿಯ ಬಗ್ಗೆ ಮಾತನಾಡಿದ್ದರು.

ಇರಾನ್‌ ಜತೆ ರಾಜತಾಂತ್ರಿಕ ಮಾತುಕತೆಗೆ ಆದ್ಯತೆ: ಟ್ರಂಪ್‌

ವಾಷಿಂಗ್ಟನ್‌: ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕ ಸರ್ವಸನ್ನದ್ಧವಾಗಿದೆ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ವರಸೆ ಬದಲಿಸಿದ್ದು, ‘ಅಣ್ವಸ್ತ್ರ ಹೊಂದಲು ನಾವು ಇರಾನ್‌ಗೆ ಎಂದೂ ಬಿಡುವುದಿಲ್ಲ. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ರಾಜತಾಂತ್ರಿಕ ಮಾರ್ಗದಲ್ಲಿ ಬಗೆಹರಿಸಲು ಬಯಸುತ್ತೇನೆ’ ಎಂದಿದ್ದಾರೆ.ಸಂಸತ್ತಿನಲ್ಲಿ ಮಾತನಾಡಿದ ಅವರು, ‘ನಾವು ಎಂದೂ ಅಣ್ವಸ್ತ್ರ ಹೊಂದುವುದಿಲ್ಲ ಎಂಬ ಮಾತು ಇನ್ನೂ ಇರಾನ್‌ ಕಡೆಯಿಂದ ಬಂದಿಲ್ಲ. ಬದಲಿಗೆ, ಅಮೆರಿಕವನ್ನು ತಲುಪಬಲ್ಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸತ್ತಿದ್ದಾರೆ’ ಎಂದ ಟ್ರಂಪ್‌, ಕಳೆದ ವರ್ಷ ತಾವು ಇರಾನ್‌ನ ಅಣುಕೇಂದ್ರಗಳ ಮೇಲೆ ಮಾಡಿದ ಆಪರೇಷನ್‌ ಮಿಡ್‌ನೌಟ್‌ ಹ್ಯಾಮರ್‌ಅನ್ನು ನೆನಪಿಸಿಕೊಂಡರು. ಈ ಮೂಲಕ ಯಾವುದನ್ನೂ ನೇರವಾಗಿ ಹೇಳದೇ ನಿಗೂಢ ನುಡಿಗಳನ್ನು ಆಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live ಇಸ್ರೇಲ್‌ ಸಂಸತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಇತಿಹಾಸ!
ಒಂದೇ ವರ್ಷದಲ್ಲಿ ಚಿನ್ನದ ಚೋರಿ ರನ್ಯಾಳಿಂದ 1.27 ಕ್ವಿಂಟಲ್ ಚಿನ್ನ ಸ್ಮಗ್ಲಿಂಗ್!