ಮತಪಟ್ಟಿ ಪರಿಷ್ಕರಣೆಯಲ್ಲಿ ಇನ್ನು ಜಡ್ಜ್‌ಗಳೂ ಭಾಗಿ!

Kannadaprabha News   | Kannada Prabha
Published : Feb 21, 2026, 05:15 AM IST
Supreme court

ಸಾರಾಂಶ

ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂಕೋರ್ಟ್‌, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಲಾ ಒಬ್ಬ ಜಿಲ್ಲಾ ಜಡ್ಜ್‌ಗಳನ್ನು ಮತದಾರರ ದೂರು ನಿರ್ವಹಣೆಗೆಂದು ನಿಯೋಜಿಸಿ ಆದೇಶ ಹೊರಡಿಸಿದೆ.

ನವದೆಹಲಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವ ಸುಪ್ರೀಂಕೋರ್ಟ್‌, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತಲಾ ಒಬ್ಬ ಜಿಲ್ಲಾ ಜಡ್ಜ್‌ಗಳನ್ನು ಮತದಾರರ ದೂರು ನಿರ್ವಹಣೆಗೆಂದು ನಿಯೋಜಿಸಿ ಆದೇಶ ಹೊರಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ನಡುವೆ ವಿಶ್ವಾಸದ ಕೊರತೆ ಎದುರಾಗಿದೆ ಎಂದು ಬಣ್ಣಿಸಿರುವ ಸುಪ್ರೀಂಕೋರ್ಟ್‌, ಮತಪಟ್ಟಿ ಪರಿಷ್ಕರಣೆಗೆ ಅಗತ್ಯ ಪ್ರಮಾಣದ ಹಿರಿಯ ಅಧಿಕಾರಿಗಳನ್ನು ಒದಗಿಸಲು ವಿಫಲವಾದ ರಾಜ್ಯ ಸರ್ಕಾರದ ಕ್ರಮದ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಗತ್ಯ ಪ್ರಮಾಣದ ಅಧಿಕಾರಿಗಳ ನಿಯೋಜನೆಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್‌ಗೆ ಸೂಚಿಸಿದೆ.

ದೂರು ಪರಿಶೀಲನೆ ಹೊಣೆ:

ರಾಜ್ಯದಲ್ಲಿ ನಡೆಸಲಾಗುತ್ತಿರುವ ಮತಪಟ್ಟಿ ಪ್ರಕ್ರಿಯೆಯಲ್ಲಿ ಭಾರೀ ಲೋಪದೋಷವಿದೆ ಎಂದು ಆರೋಪಿಸಿ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಚುನಾವಣಾ ಆಯೋಗಕ್ಕೆ ನೆರವಾಗಲು ಪ್ರತಿ ಜಿಲ್ಲೆಗೆ ಒಬ್ಬರಂತೆ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಿಸುವಂತೆ ಕಲ್ಕತಾ ಹೈಕೋರ್ಟ್‌ಗೆ ಸೂಚಿಸಿತು. ಅವರು ಮತಪಟ್ಟಿಯಿಂದ ಕೈಬಿಡಲಾದ ಹೆಸರುಗಳು ಕುರಿತು ಕೇಳಿಬಂದ ದೂರುಗಳನ್ನು ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಿದೆ.

ಇದೇ ವೇಳೆ ಮತಪಟ್ಟಿ ಪರಿಷ್ಕರಣೆಗೆ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ಸಂಚಾರ ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯ ಫೆ.28ರೊಳಗೆ ಮತಪಟ್ಟಿ ಪರಿಷ್ಕರಣೆ ಕುರಿತ ಕರಡು ವರದಿ ಪ್ರಕಟಿಸಲು ಸೂಚಿಸಿತು.

ಟಿಎಂಸಿ ದೂರೇನು?:

ಪಶ್ಚಿಮ ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆ ವೇಳೆ ಅಕ್ರಮ ಎಸಗಲಾಗುತ್ತಿದೆ. ಟಿಎಂಸಿ ಪರ ಇರುವ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಮತದಾರರ ಹೆಸರನ್ನು ರದ್ದುಪಡಿಸಲಾಗುತ್ತಿದೆ. ಬಿಜೆಪಿಯ ಸೂಚನೆ ಅನ್ವಯ ಚುನಾವಣಾ ಆಯೋಗ ಇಂಥ ಕೃತ್ಯ ಎಸಗುತ್ತಿದೆ. ಈ ಅಕ್ರಮದಲ್ಲಿ ಬಿಜೆಪಿ ಮತ್ತು ಆಯೋಗ ಕೈಜೋಡಿಸಿವೆ ಎಂಬುದು ಮಮತಾ ಬ್ಯಾನರ್ಜಿ ಆರೋಪ.

ಟಿಎಂಸಿ ಸ್ವಾಗತ, ಬಿಜೆಪಿ ಬೇಸರ:

ನ್ಯಾಂಯಾಂಗ ಅಧಿಕಾರಿಗಳನ್ನು ನಿಯೋಜಿಸುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಆಡಳಿತಾರೂಢ ಟಿಎಂಸಿ, ‘ಜನರಿಗೆ ಸಿಕ್ಕ ದೊಡ್ಡ ಗೆಲುವು’ ಎಂದು ಶ್ಲಾಘಿಸಿದೆ, ಆದರೆ ರಾಜ್ಯ ಸರ್ಕಾರವು ತಳಮಟ್ಟದಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಆಯೋಗಕ್ಕೆ ಸುಪ್ರೀಂ ನಾಕೌಟ್‌ ಪಂಚ್‌

ಇದು ಬಂಗಾಳದ ಜನರಿಗೆ ಭಾರಿ ಗೆಲುವು! ಇಂದು ಚುನಾವಣಾ ಆಯೋಗದ ದ ದುರಹಂಕಾರದ ಐತಿಹಾಸಿಕ ನಾಶವಾಗಿದೆ. ನಿಜವಾದ ಮತದಾರರನ್ನು ಅಳಿಸಿಹಾಕಲು ಆಯೋಗ ಪ್ರಯತ್ನಿಸುತ್ತಿದೆ. ಅವರಿಗೆ ಸುಪ್ರೀಂ ಕೋರ್ಟ್ ನಾಕ್ಔಟ್ ಪಂಚ್ ನೀಡಿದೆ.

- ಮಮತಾ ಬ್ಯಾನರ್ಜಿ, ಟಿಎಂಸಿ ಮುಖ್ಯಸ್ಥೆ/ಪ. ಬಂಗಾಳ ಸಿಎಂ

- ಆದೇಶಕ್ಕೇನು ಕಾರಣ?

- ಪ. ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆ ವೇಳೆ ಅಕ್ರಮ ಎಂದು ಟಿಎಂಸಿ ಆರೋಪ

- ಟಿಎಂಸಿ ಪರ ಹಾಗೂ ಮುಸ್ಲಿಂ ಮತದಾರರ ಹೆಸರನ್ನು ರದ್ದು ಎಂದು ಮಮತಾ ಕಿಡಿ

- ಈ ಬಗ್ಗೆ ಚುನಾವಣಾ ಆಯೋಗ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ದೀದಿ ಪಕ್ಷ

- ಚು.ಆಯೋಗ ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆ: ಸುಪ್ರೀಂ ಕೋರ್ಟ್ ಕಿಡಿ

- ಮತದಾರರ ದೂರು ನಿರ್ವಹಣೆಗೆಂದು ಜಿಲ್ಲೆಗೊಬ್ಬ ಹಾಲಿ/ಮಾಜಿ ನೇಮಿಸಿ: ಆದೇಶ

- ಎಲ್ಲ ಚುನಾವಣಾಧಿಕಾರಿಗಳು ಜಡ್ಜ್‌ಗಳಿಗೂ ಸೂಕ್ತ ಭದ್ರತೆ ನಿಡುವಂತೆ ಸೂಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್ Topless Brainless Shameless: ಎಐ ಶೃಂಗಸಭೆಯಲ್ಲಿ 'ಕೈ' ಟಾಪ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಆಕ್ರೋಶ
ಹಿಂದಿ ಉತ್ತೇಜಿಸಿದರೆ ಎಲ್ಲಾ ಭಾಷೆಗಳಿಗೂ ಬಲ, ಇವು ಒಂದೇ ತಾಯಿಯ ಮಕ್ಕಳು: ಅಮಿತ್‌ ಶಾ