ಸೇನೆ ಮಾಹಿತಿ ಚೀನಾಕ್ಕೆ ಕೊಟ್ಟಪತ್ರಕರ್ತ ಬಂಧನ, 40 ಲಕ್ಷ ಗಳಿಸಿದ್ದ ಶರ್ಮ!

By Kannadaprabha NewsFirst Published Sep 20, 2020, 7:35 AM IST
Highlights

ಸೇನೆ ಮಾಹಿತಿ ಚೀನಾಕ್ಕೆ ಕೊಟ್ಟಪತ್ರಕರ್ತ ಬಂಧನ| ದಿಲ್ಲಿಯ ಶರ್ಮಾ ಸೆರೆ ಹಣಕೊಟ್ಟಇಬ್ಬರೂ ಬಲೆಗೆ| ಒಂದೂವರೆ ವರ್ಷದಲ್ಲಿ 40 ಲಕ್ಷ ಗಳಿಸಿದ್ದ ಶರ್ಮ

ನವದೆಹಲಿ(ಸೆ.20): ಗಡಿಯಲ್ಲಿ ಭಾರತದ ತಂತ್ರಗಾರಿಕೆ ಹಾಗೂ ಸೇನಾ ನಿಯೋಜನೆ ಕುರಿತು ಚೀನಾದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ರವಾನಿಸುತ್ತಿದ್ದ ಭಾರತೀಯ ಪತ್ರಕರ್ತನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಹಣ ನೀಡುತ್ತಿದ್ದ ಚೀನಾ ಮಹಿಳೆ ಹಾಗೂ ಆಕೆಯ ನೇಪಾಳಿ ಸಹಚರನನ್ನು ಕೂಡ ಬಂಧನಕ್ಕೆ ಒಳಪಡಿಸಲಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದ ಕೆಲವೊಂದು ಮಾಧ್ಯಮ ಸಂಸ್ಥೆಗಳಿಗೆ ಲೇಖನ ಬರೆಯುತ್ತಿದ್ದ ಪತ್ರಕರ್ತ ರಾಜೀವ್‌ ಶರ್ಮಾ ಎಂಬಾತನೇ ಬಂಧಿತ. ಈತ ಚೀನಾದಿಂದ ಕಳೆದ ಒಂದೂವರೆ ವರ್ಷದಲ್ಲಿ 40 ಲಕ್ಷ ರು. ಹಣ ಸಂಪಾದಿಸಿದ್ದ. ಪ್ರತಿ ಮಾಹಿತಿಗೂ 1000 ಡಾಲರ್‌ (73 ಸಾವಿರ ರು.) ಗಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಮಾಧ್ಯಮ ಸಂಸ್ಥೆಗಳು ಮಾತ್ರವಲ್ಲದೆ, ಚೀನಾ ಸರ್ಕಾರದ ಮುಖವಾಣಿಯಾಗಿರುವ ‘ಗ್ಲೋಬಲ್‌ ಟೈಮ್ಸ್‌’ಗೂ ಈತ ಲೇಖನ ಬರೆಯುತ್ತಿದ್ದ. 2016ರಲ್ಲಿ ಚೀನಾದ ಗುಪ್ತಚರ ಏಜೆಂಟ್‌ಗಳು ಈತನನ್ನು ಸಂಪರ್ಕಿಸಿದ್ದರು. ಆನಂತರ ಗುಪ್ತಚರ ಅಧಿಕಾರಿಗಳ ಸಂಪರ್ಕಕ್ಕೂ ಶರ್ಮಾ ಬಂದಿದ್ದ ಎಂದು ಮಾಹಿತಿ ನೀಡಿದ್ದಾರೆ.

ಈತ ಮಾಹಿತಿ ರವಾನಿಸಿದ ಬಳಿಕ ಚೀನಾ ಮೂಲದ ಮಹಿಳೆ ಹಾಗೂ ಆಕೆಯ ನೇಪಾಳ ಸಹಚರನಿಂದ ಹಣ ಬರುತ್ತಿತ್ತು. ಖೊಟ್ಟಿಕಂಪನಿಗಳನ್ನು ಬಳಸಿ ಭಾರಿ ಪ್ರಮಾಣದ ಹಣವನ್ನು ವರ್ಗಾಯಿಸಲಾಗುತ್ತಿತ್ತು. ಬಂಧಿತರಿಂದ ಹಲವು ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ದಾಖಲೆಗಳನನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿಯ ಪೀತಮ್‌ಪುರ ನಿವಾಸಿಯಾಗಿರುವ ಶರ್ಮಾನಿಂದ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವೊಂದು ರಹಸ್ಯ ಮಾಹಿತಿಗಳು ಲಭ್ಯವಾಗಿವೆ. ಸೆ.14ರಂದೇ ಶರ್ಮಾನನ್ನು ಸರ್ಕಾರಿ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಶರ್ಮಾನನ್ನು 6 ದಿನ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಸೆ.22ರಂದು ಆತನ ಜಾಮೀನು ಅರ್ಜಿ ಪಟಿಯಾಲಾ ಹೌಸ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!