ಬಿಹಾರದಲ್ಲಿ ‘ಪ್ರೆಗ್ನೆನ್ಸಿ ಜಾಬ್’ ವಂಚನೆ ಜಾಲ ಬಯಲು: ಮಕ್ಕಳಾಗದ ಸ್ತ್ರೀಯರ ಗರ್ಭಿಣಿ ಮಾಡಿದರೆ 13 ಲಕ್ಷದ ಆಮಿಷ

By Kannadaprabha News  |  First Published Jan 1, 2024, 2:23 PM IST

ಮಹಿಳೆಯರ ಫೋಟೋಗಳನ್ನು ಕಳುಹಿಸಿ, ಭದ್ರತಾ ಠೇವಣಿಯಾಗಿ 5 ಸಾವಿರದಿಂದ 20 ಸಾವಿರ ರೂ.ಗಳನ್ನು ವಸೂಲಿ ಮಾಡಲಾಗುತ್ತಿತ್ತು. ಭದ್ರತಾ ಠೇವಣಿಯು, ಪುರುಷರು ಆಯ್ಕೆ ಮಾಡಲಾಗುವ ಮಹಿಳೆಯರ ಸೌಂದರ್ಯದ ಮೇಲೆ ನಿರ್ಣಯವಾಗುತ್ತಿತ್ತು ಎಂದು ಪಟನಾ ಡಿಎಸ್‌ಪಿ ಹೇಳಿದ್ದಾರೆ.


ಪಟನಾ (ಜನವರಿ 1, 2024): ಮಕ್ಕಳನ್ನು ಪಡೆಯಲು ಕಷ್ಟ ಪಡುತ್ತಿರುವ ಮಹಿಳೆಯರನ್ನು ಗರ್ಭವತಿ ಮಾಡಿದರೆ 13 ಲಕ್ಷ ರೂ. ನೀಡುವುದಾಗಿ ಪುರುಷರನ್ನು ವಂಚಿಸುತ್ತಿದ್ದ ಸೈಬರ್‌ ಜಾಲವೊಂದನ್ನು ಬಿಹಾರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ನವಾಡ ಜಿಲ್ಲೆಯಲ್ಲಿ ‘ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಏಜೆನ್ಸಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದ ವಂಚಕರು, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಲಿಂಕ್‌ ಹಂಚುವ ಮೂಲಕ ಜನರನ್ನು ಸೆಳೆಯುತ್ತಿದ್ದರು. ಈ ಸೈಟ್‌ಗಳಿಗೆ ಭೇಟಿ ಕೊಟ್ಟವರ ವಾಟ್ಸಾಪ್ ನಂಬರ್‌ ಪಡೆದುಕೊಂಡು ಅವರಿಂದ ನೋಂದಣಿ ಶುಲ್ಕವಾಗಿ 799 ರೂ.ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ಬಳಿಕ ಅವರಿಗೆ ಮಹಿಳೆಯರ ಫೋಟೋಗಳನ್ನು ಕಳುಹಿಸಿ, ಭದ್ರತಾ ಠೇವಣಿಯಾಗಿ 5 ಸಾವಿರದಿಂದ 20 ಸಾವಿರ ರೂ.ಗಳನ್ನು ವಸೂಲಿ ಮಾಡಲಾಗುತ್ತಿತ್ತು. ಭದ್ರತಾ ಠೇವಣಿಯು, ಪುರುಷರು ಆಯ್ಕೆ ಮಾಡಲಾಗುವ ಮಹಿಳೆಯರ ಸೌಂದರ್ಯದ ಮೇಲೆ ನಿರ್ಣಯವಾಗುತ್ತಿತ್ತು ಎಂದು ಪಟನಾ ಡಿಎಸ್‌ಪಿ ಹೇಳಿದ್ದಾರೆ.

Latest Videos

undefined

ಇದನ್ನು ಓದಿ: ಬಿಹಾರದಲ್ಲಿ ಮರಳಿ ಬಂತಲ್ಲ ಜಂಗಲ್‌ ರಾಜ್‌? ರಾತ್ರೋರಾತ್ರಿ ಕೆರೆಯನ್ನೇ ಕದ್ದ ಖದೀಮರು!

‘ನಾವು ತೋರಿಸುವ ಮಹಿಳೆಯನ್ನು ಗರ್ಭವತಿ ಮಾಡಿದರೆ 13 ಲಕ್ಷ ರೂ. ಬಹುಮಾನ ನೀಡುತ್ತೇವೆ. ಒಂದು ವೇಳೆ ಆಕೆ ಗರ್ಭಿಣಿ ಆಗದಿದ್ದರೂ ಕನಿಷ್ಠ 5 ಲಕ್ಷ ರೂ. ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತೇವೆ’ ಎಂದು ಈ ಗ್ಯಾಂಗ್‌ ನೋಂದಣಿ ಮಾಡಿಕೊಂಡವರಿಗೆ ಭರವಸೆ ನೀಡುತ್ತಿತ್ತು. ಆದರೆ ಭದ್ರತಾ ಠೇವಣಿ ದೊರೆಯುತ್ತಿದ್ದಂತೆ ಗ್ಯಾಂಗ್‌ ಪರಾರಿಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಈ ಸೈಬರ್‌ ವಂಚಕರ ಬೆನ್ನು ಹತ್ತಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದು, 9 ಮೊಬೈಲ್‌ ಫೋನ್‌, 2 ಪ್ರಿಂಟರ್‌ ಮತ್ತು ಕೆಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದ ಮಾಸ್ಟರ್‌ ಮೈಂಡ್‌ ಮುನ್ನ ಕುಮಾರ್‌ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನು ಓದಿ: ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್‌

click me!