
ನವದೆಹಲಿ[ಜ.11]: ಇತ್ತೀಚೆಗೆ ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ನಡೆದ ಮುಸುಕುಧಾರಿಗಳ ದಾಳಿ ಹಾಗೂ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು 9 ಶಂಕಿತರ ಛಾಯಾಚಿತ್ರಗಳನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಅಚ್ಚರಿ ವಿಷಯವೆಂದರೆ ಹಿಂಸಾಚಾರದ ಆರೋಪ ಮಾಡಿದವರೇ, ಇದೀಗ ಆರೋಪಿಗಳಾಗಿ ಹೊರಹೊಮ್ಮಿದ್ದಾರೆ.
ಇದರಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ (ಜೆಎನ್‌ಯುಎಸ್‌ಯು) ಅಧ್ಯಕ್ಷೆ ಆಯಿಷಿ ಘೋಷ್ ಫೋಟೋ ಕೂಡ ಇದೆ ಎಂಬುದು ಗಮನಾರ್ಹ. ಒಟ್ಟು 9 ಫೋಟೋಗಳಲ್ಲಿ ಎರಡು ಫೋಟೋಗಳು ಬಿಜೆಪಿ-ಆರೆಸ್ಸೆಸ್ ಬೆಂಬಲಿತ ಎಬಿವಿಪಿ ಕಾರ್ಯಕರ್ತರದ್ದಾಗಿದ್ದರೆ, ಇನ್ನುಳಿದವು ಎಡಪಂಥೀಯ ವಿಚಾರಧಾರೆ ಹೊಂದಿದ ಕಾರ್ಯಕರ್ತರದ್ದಾಗಿವೆ. ಆದರೆ ಮುಸುಕುಧಾರಿಗಳ ಗುರುತು ಪತ್ತೆಯಲ್ಲಿ ತೊಂದರೆ ಎದುರಿಸುತ್ತಿದ್ದೇವೆಂದು ಪೊಲೀಸರು ಒಪ್ಪಿಕೊಂಡಿದ್ದಾರೆ.
ಜೆಎನ್‌ಯು ದಾಳಿಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸರು!
ಇದರ ಬೆನ್ನಲ್ಲೇ ಕೇಂದ್ರ ಸಚಿವರಾದ ರವಿಶಂಕರ ಪ್ರಸಾದ್ ಹಾಗೂ ಪ್ರಕಾಶ ಜಾವಡೇಕರ್ ಅವರು ಪ್ರತಿಕ್ರಿಯಿಸಿದ್ದು, ‘ದಾಳಿ ಮಾಡಿದ್ದು ಯಾರೆಂದು ಈಗ ಸಾಬೀತಾಗಿದೆ. ಎಬಿವಿಪಿ ಹಾಗೂ ಬಿಜೆಪಿ ಹೆಸರು ಕೆಡಿಸಲು ಎಡಪಂಥೀಯ ಸಂಘಟನೆಗಳು ಮುಂಚೆಯೇ ಷಡ್ಯಂತ್ರ ರಚಿಸಿದ್ದವು. ಸಿಸಿಟೀವಿ ಹಾಗೂ ಸರ್ವರ್‌ಗಳನ್ನು ನಿಷ್ಕಿ್ರಯಗೊಳಿಸಿ ಅವು ಪೂರ್ವಯೋಜಿತ ದಾಳಿ ನಡೆಸಿದ್ದವು’ ಎಂದು ಹೇಳಿದ್ದಾರೆ.
ಆದರೆ, ದಾಳಿ ನಡೆಸಿದ ಆರೋಪಗಳನ್ನು ವಿವಿಯ ವಿದ್ಯಾರ್ಥಿ ನಾಯಕಿ ಆಯಿಷಿ ಘೋಷ್ ನಿರಾಕರಿಸಿದ್ದಾರೆ. ‘ದಾಳಿ ನಡೆಸಿದ್ದು ನಾನೇ ಎಂಬ ಬಗ್ಗೆ ಪೊಲೀಸರ ಬಳಿ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಲಿ. ನಾನು ದಾಳಿ ನಡೆಸಿಲ್ಲ. ಆದರೆ ನಾನೇ ದಾಳಿಗೆ ಒಳಗಾದೆ. ಆದರೆ ನನ್ನ ದೂರನ್ನು ಪರಿಗಣಿಸಿ ಎಫ್‌ಐಆರ್‌ಅನ್ನು ಪೊಲೀಸರು ದಾಖಲಿಸಿಲ್ಲವೇಕೆ? ಪೊಲೀಸರು ಪಕ್ಷಪಾತಿಯಾಗಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಪೊಲೀಸರು ಹೇಳಿದ್ದೇನು?:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲ್ಲಿ ಪೊಲೀಸ್ ಅಪರಾಧ ವಿಭಾಗದ ಡಿಸಿಪಿ ಜಯ್ ಟಿರ್ಕೆ, ‘ಜನವರಿ 1ರಿಂದ 5ರವರೆಗೆ ಜೆಎನ್‌ಯುನಲ್ಲಿ ಚಳಿಗಾಲದ ಸೆಮಿಸ್ಟರ್‌ಗೆ ಅಡ್ಮಿಶನ್ ಮಾಡಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಬಹುಮತದಷ್ಟುವಿದ್ಯಾರ್ಥಿಗಳು ಅಡ್ಮಿಶನ್ ಪರವಾಗಿದ್ದರು. ಆದರೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಅಡ್ಮಿಶನ್‌ಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಸಂದರ್ಭದಲ್ಲಿ ಜನವರಿ 5ರಂದು ವಿಶ್ವವಿದ್ಯಾಲಯದ ಪೆರಿಯಾರ್ ಹಾಸ್ಟೆಲ್‌ನಲ್ಲಿನ ನಿರ್ದಿಷ್ಟಕೋಣೆಗಳ ಮೇಲೆ ದಾಳಿ ಮಾಡಲಾಯಿತು. ವಿವಿಯ ಸರ್ವರ್ ರೂಮ್‌ಗಳ ಮೇಲೂ ದಾಳಿ ನಡೆಯಿತು. ಚಳಿಗಾಲದ ಸೆಮಿಸ್ಟರ್‌ಗೆ ಆನ್‌ಲೈನ್ ಮೂಲಕ ಅಡ್ಮಿಶನ್ ತಡೆಯಲು ಹಾಗೂ ವಿವಿಧ ಶುಲ್ಕಗಳನ್ನು ಹೆಚ್ಚಳ ಮಾಡಿದ್ದ ವಿವಿ ಕುಲಪತಿ ನಿರ್ಧಾರ ಖಂಡಿಸಿ ಸರ್ವರ್ ರೂಮ್‌ಗಳ ಮೇಲೆ ದಾಳಿ ಮಾಡಲಾಯಿತು. ದಾಳಿಕೋರರಲ್ಲಿ ಆಯಿಷಿ ಘೋಷ್ ಹಾಗೂ ಇತರ ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳು ಇದ್ದರು’ ಎಂದು ಮಾಹಿತಿ ನೀಡಿದರು.
'ಹಿಸುಕಿ ಪೊದೆಗೆ ಎಸೀತೀವಿ': CAA ಪರ ಧ್ವನಿ ಎತ್ತಿದ ಮುಸ್ಲಿಂ ಮಖಂಡನಿಗೆ ಕೊಲ್ಲಿ ರಾಷ್ಟ್ರದಿಂದ ಕೊಲೆ ಬೆದರಿಕೆ
ಪೊಲೀಸರು ಬಿಡುಗಡೆ ಮಾಡಿರುವ ಫೋಟೋಗಳು ಆಯಿಷಿ ಘೋಷ್, ಚುಂಚನ್ ಕುಮಾರ್, ಪಂಕಜ್ ಮಿಶ್ರಾ, ವಾಸ್ಕರ್ ವಿಜಯ್, ಸುಚೇತಾ ತಾಲೂಕ್‌ದಾರ್, ಪ್ರಿಯಾ ರಂಜನ್, ಡೋಲನ್ ಸಾವಂತ್, ಯೋಗೇಂದ್ರ ಭಾರದ್ವಾಜ್ ಹಾಗೂ ವಿಕಾಸ್ ಪಟೇಲ್ ಅವರವು. ಈ ಪೈಕಿ ವಿಕಾಸ್ ಪಟೇಲ್ ಹಾಗೂ ಯೋಗೇಂದ್ರ ಭಾರದ್ವಾಜ್ ಅವರು ಎಬಿವಿಪಿ ಕಾರ‍್ಯಕರ್ತರು.
ಆದರೆ ಮುಸುಕುಧಾರಿ ದಾಳಿಕೋರರ ಪತ್ತೆ ಮಾಡಲು ಕಠಿಣವಾಗುತ್ತಿದೆ. ಏಕೆಂದರೆ ದಾಳಿಯ ಸಂದರ್ಭದಲ್ಲಿ ಸಿಸಿಟೀವಿಗಳು ಕೆಲಸ ಮಾಡುತ್ತಿರಲಿಲ್ಲ. ಲಭ್ಯವಿರುವ ಕೆಲವು ವಿಡಿಯೋಗಳು ಅನಧಿಕೃತವಾಗಿವೆ. ಸಾಕ್ಷಿಗಳು ಕೂಡ ಸಮರ್ಪಕ ಸಾಕ್ಷ್ಯ ನೀಡಿಲ್ಲ ಎಂದು ಟಿರ್ಕೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ