ಭಾರತೀಯ ಸೇನೆ, ಇದೀಗ ಈ ಸಮಸ್ಯೆ ನಿರ್ವಹಣೆಗೆಂದೇ, ತುಂಡರಿಸಲಾಗದ ಉಕ್ಕಿನ ಬೇಲಿ ನಿರ್ಮಾಣಕ್ಕೆ ನಿರ್ಧರಿಸಿದೆ. ಉಭಯ ದೇಶಗಳೊಂದಿಗೆ ಭಾರತ ಹಂಚಿಕೊಂಡಿರುವ ಗಡಿಯಲ್ಲಿ ಸಮಸ್ಯೆ ಹೆಚ್ಚಿರುವ ಭಾಗದಲ್ಲಿ ಈ ಬೇಲಿ ನಿರ್ಮಾಣವಾಗಲಿದೆ
ನವದೆಹಲಿ [ಜ.11]: ಪಾಕಿಸ್ತಾನ ಮತ್ತು ಬಾಂಗ್ಲಾ ಗಡಿಯಲ್ಲಿ ಉಗ್ರರು ಮತ್ತು ಕಳ್ಳಸಾಗಣೆದಾರರ ಉಪಟಳ ಎದುರಿಸುವ ಭಾರತೀಯ ಸೇನೆ, ಇದೀಗ ಈ ಸಮಸ್ಯೆ ನಿರ್ವಹಣೆಗೆಂದೇ, ತುಂಡರಿಸಲಾಗದ ಉಕ್ಕಿನ ಬೇಲಿ ನಿರ್ಮಾಣಕ್ಕೆ ನಿರ್ಧರಿಸಿದೆ. ಉಭಯ ದೇಶಗಳೊಂದಿಗೆ ಭಾರತ ಹಂಚಿಕೊಂಡಿರುವ ಗಡಿಯಲ್ಲಿ ಸಮಸ್ಯೆ ಹೆಚ್ಚಿರುವ ಭಾಗದಲ್ಲಿ ಈ ಬೇಲಿ ನಿರ್ಮಾಣವಾದ ಬಳಿಕ, ಗಡಿಯಲ್ಲಿ ಒಳನುಸುಳುವಿಕೆ ಮತ್ತು ಕಳ್ಳಸಾಗಣಿಗೆ ಪೂರ್ಣ ಬ್ರೇಕ್ ಬೀಳಲಿದೆ ಎನ್ನಲಾಗಿದೆ.
ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಅಸ್ಸಾಂ ಗಡಿಯಲ್ಲಿ ಅಳವಡಿಸಿದ ಈ ಬೇಲಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಈ ಬೇಲಿಯನ್ನು ಪಾಕ್ ಮತ್ತು ಬಾಂಗ್ಲಾದೇಶದೊಂದಿಗೆ ಪ್ರಮುಖ ಗಡಿ ಪ್ರದೇಶಕ್ಕೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಯೋಜನೆ ಏಕೆ?:
ಭಾರತ ಪಾಕಿಸ್ತಾನದೊಂದಿಗೆ 3323 ಕಿ.ಮೀ ಮತ್ತು ಬಾಂಗ್ಲಾದೇಶದೊಂದಿಗೆ 4096 ಕಿ.ಮೀ ಗಡಿ ಪ್ರದೇಶ ಹಂಚಿಕೊಂಡಿದೆ. ಈ ಪೈಕಿ ಕೆಲವೊಂದು ಗಡಿ ಪ್ರದೇಶದಲ್ಲಿ ಮಾನವ ಕಳ್ಳಸಾಗಣೆ, ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಉಗ್ರರ ಒಳನುಸುಳುವಿಕೆ ಭಾರತೀಯ ಸೇನೆಗೆ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಮುಖ್ಯ ಕಾರಣ, ಹಾಲಿ ಗಡಿಯಲ್ಲಿ ಅಳವಡಿಸಿರುವ ಬೇಲಿ. ದಶಕಗಳ ಹಿಂದೆ ಅಳವಡಿಸಿರುವ ಈ ಬೇಲಿಯಲ್ಲಿ ಬಳಸಿರುವ ಉಕ್ಕನ್ನು ಹೆಚ್ಚಿನ ಶ್ರಮವಿಲ್ಲದೇ ಕತ್ತರಿಸಬಹುದು.
ಹೀಗಾಗಿಯೇ ಇದೀಗ ಕತ್ತರಿಸಲಾಗದ ಉಕ್ಕಿನ ಬೇಲಿಯನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಈ ಹೊಸ ತಂತ್ರಜ್ಞಾನದ ಬೇಲಿಯನ್ನು ಕತ್ತರಿಸುವುದು ಬಹಳ ಕಷ್ಟ. ಸಣ್ಣ ಭಾಗವನ್ನು ಕತ್ತರಿಸಲೇ ಭಾರೀ ಸಮಯ ಬೇಕು. ಹೀಗಿರುವ ವ್ಯಕ್ತಿಯೊಬ್ಬ ನುಗ್ಗಲು ಬೇಕಾದಷ್ಟುಜಾಗ ಕತ್ತರಿಸಲು ತಿಂಗಳುಗಟ್ಟಲೆ ಬೇಕು. ಇದು ಸಾಧ್ಯವಾಗದು ಮಾತು. ಹೀಗಾಗಿಯೇ ಅತ್ಯಾಧುನಿಕ ತಂತ್ರಜ್ಞಾನದ ಬೇಲಿ ಅಳವಡಿಕೆಗೆ ನಿರ್ಧರಿಸಲಾಗಿದೆ.
ಸಿಯಾಚಿನ್‌ನಲ್ಲಿ ಸೇನಾ ಮುಖ್ಯಸ್ಥ: ಜೋಶ್ ಕಂಡು ದುಶ್ಮನ್ ಅಸ್ವಸ್ಥ!
ಈ ಯೋಜನೆಯ ಮೊದಲ ಹಂತವಾಗಿ ಇದೀಗ ಪಂಜಾಬ್‌ನಲ್ಲಿ ಪಾಕಿಸ್ತಾನದೊಂದಿಗಿನ ಗಡಿಪ್ರದೇಶದಲ್ಲಿ 60 ಕಿ.ಮೀ ಉದ್ದದ ಭಾಗದಲ್ಲಿ ಬೇಲಿ ನಿರ್ಮಿಸಲಾಗುತ್ತಿದೆ. ಈ ತಂತ್ರಜ್ಞಾನದ ಬೇಲಿ ನಿರ್ಮಾಣಕ್ಕೆ ಪ್ರತಿ ಕಿ.ಮೀಗೆ 2 ಕೋಟಿ ರು.ವೆಚ್ಚವಾಗುತ್ತದೆ. ಏಕ ಸಾಲಿನ ಬೇಲಿಯ ಇದಾಗಿದ್ದು, ಬೇಲಿಯ ಮೇಲೆ ಹರಿತವಾದ ಕನ್ಸರ್ಟಿನಾ ವೈರ್‌ಗಳ ಸುರುಳಿಯನ್ನು ಸುತ್ತಲಾಗುತ್ತದೆ. ಎಂಜಿನಿಯರಿಂಗ್ ಪ್ರಾಜೆಕ್ಟ್$್ಸ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಪ್ರಾಜೆಕ್ಟ್ ಕನ್‌ಸ್ಟ್ರಕ್ಷನ್ ಕಾರ್ಪೊರೇಷನ್‌ಗೆ ಬೇಲಿ ನಿರ್ಮಾಣದ ಹೊಣೆಯನ್ನು ವಹಿಸಲಾಗಿದೆ.
ಅಸ್ಸಾಂನ ಸಿಲ್ಚಾರ್‌ನಲ್ಲಿರುವ ಬಾಂಗ್ಲಾ ಗಡಿಯಲ್ಲಿ ಪ್ರಾಯೋಗಿಕವಾಗಿ 7.18 ಕಿ.ಮೀ. ದೂರದ ವರೆಗೆ 14.30 ಕೋಟಿ ರು. ವೆಚ್ಚದಲ್ಲಿ ಸ್ಟೀಲ್ ಬೇಲಿಯನ್ನು ನಿರ್ಮಿಸಲಾಗಿತ್ತು. ಬಳಿಕ ಇದನ್ನು ಇದೀಗ ಎಲ್ಲೆಡೆ ವಿಸ್ತರಿಸಲು ನಿರ್ಧರಿಸಲಾಗಿದೆ.
ಏನಿದು ಸ್ಟೀಲ್ ಬೇಲಿ?
ಸಾಮಾನ್ಯ ಉಕ್ಕು ಬಳಸಿ ತಯಾರಿಸಿ ಬೇಲಿಯನ್ನು ಹೆಚ್ಚಿನ ಶ್ರಮವಿಲ್ಲದೇ ಕತ್ತರಿಸಬಹುದು. ಇದರಿಂದ ಗಡಿಯಲ್ಲಿ ಮಾನವ ಕಳ್ಳಸಾಗಣೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಉಗ್ರರ ಒಳನುಸುಳುವಿಕೆ ಸುಲಭವಾಗಿದೆ. ಇದನ್ನು ತಡೆಯಲು ಇದೀಗ ಹೆಚ್ಚಿನ ಸಾಮರ್ಥ ಹೊಂದಿರುವ ಸ್ಟೀಲ್ ಬಳಸಿ ಬೇಲಿ ನಿರ್ಮಿಸಲಾಗುವುದು. ಈ ಉಕ್ಕಿನ ಸಣ್ಣ ಭಾಗವನ್ನು ಕತ್ತರಿಸಲೂ ಭಾರೀ ಸಮಯ ಬೇಕು. ಇದರಿಂದ ಗಡಿ ಕಾಯುವ ಯೋಧರ ಕೆಲಸ ಸುಲಭವಾಗಲಿದೆ.