ಕೊನೆಗೂ ವರಸೆ ಬದಲಿಸಿದ ಜಿಯೋ, ಸಾಮಾನ್ಯ ಗ್ರಾಹಕರಿಗೆ ಕಾದಿಗೆ ಶಾಕ್‌!

Published : Nov 16, 2026, 08:25 PM IST
Jio

ಸಾರಾಂಶ

ರಿಚಾರ್ಜ್ ಮಾಡಿಸದೆ ಕೇವಲ ಇನ್‌ಕಮಿಂಗ್ ಕರೆಗಳನ್ನು ಸ್ವೀಕರಿಸಲು ಜಿಯೋ ಸಿಮ್ ಬಳಸುವವರಿಗೆ ಕಂಪನಿ ಎಚ್ಚರಿಕೆ ನೀಡಿದೆ. ಸಕ್ರಿಯ ರಿಚಾರ್ಜ್ ಇಲ್ಲದ ಸಿಮ್‌ಗಳಲ್ಲಿ ಶೀಘ್ರದಲ್ಲೇ ಇನ್‌ಕಮಿಂಗ್ ಕರೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಬೆಂಗಳೂರು (ನ.16): ನೀವು ರಿಚಾರ್ಜ್ ಮಾಡಿಸದೆ ಕೇವಲ ಇನ್‌ಕಮಿಂಗ್ ಕರೆಗಳನ್ನು ಸ್ವೀಕರಿಸಲು ಜಿಯೋ (Jio) ಸಿಮ್ ಅನ್ನು ಸಕ್ರಿಯವಾಗಿಟ್ಟುಕೊಂಡಿದ್ದರೆ, ಆ ಸೌಲಭ್ಯ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ಸಕ್ರಿಯ ರಿಚಾರ್ಜ್ ಪ್ಲಾನ್ ಇಲ್ಲದ ಸಿಮ್‌ಗಳಲ್ಲಿ ಶೀಘ್ರದಲ್ಲೇ ಇನ್‌ಕಮಿಂಗ್ ಕರೆಗಳನ್ನು ಸ್ಥಗಿತಗೊಳಿಸಲು ಜಿಯೋ ಮುಂದಾಗಿದ್ದು, ಪ್ಲಾನ್ ಅವಧಿ ಮುಗಿದ ಗ್ರಾಹಕರಿಗೆ ಈ ಕುರಿತು ಎಚ್ಚರಿಕೆಯ ಎಸ್‌ಎಂಎಸ್ (SMS) ಸಂದೇಶಗಳನ್ನು ಕಳುಹಿಸಲು ಆರಂಭಿಸಿದೆ.

ಯಾವುದೇ ಪ್ಲಾನ್ ಇಲ್ಲದೆ ಸಕ್ರಿಯವಾಗಿರುವ ನಂಬರ್‌ಗಳ ಮೇಲೆ ಜಿಯೋ ಅಂತಿಮವಾಗಿ ಕಠಿಣ ನಿಯಮ ಹೇರಲು ಮುಂದಾಗಿರುವುದನ್ನು ಈ ಬೆಳವಣಿಗೆ ಸೂಚಿಸುತ್ತಿದೆ. ಖ್ಯಾತ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd on X) ಈ ಬೆಳವಣಿಗೆಯನ್ನು ಪತ್ತೆಹಚ್ಚಿದ್ದು, ಗ್ರಾಹಕರ ರಿಚಾರ್ಜ್ ಪ್ಲಾನ್ ಮುಗಿದ ತಕ್ಷಣ ಜಿಯೋ ಇನ್‌ಕಮಿಂಗ್ ಕರೆಗಳು ಮತ್ತು ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಜಿಯೋ ಕಳುಹಿಸುತ್ತಿರುವ ಎಚ್ಚರಿಕೆಯ ಸಂದೇಶದಲ್ಲಿ ಏನಿದೆ?

ಅಭಿಷೇಕ್ ಯಾದವ್ ಅವರು ಜಿಯೋ ಗ್ರಾಹಕರಿಗೆ ಬರುತ್ತಿರುವ ಎಸ್‌ಎಂಎಸ್‌ನ ಸ್ಕ್ರೀನ್‌ಶಾಟ್ ಅನ್ನು ಸಾಕ್ಷಿಯಾಗಿ ಹಂಚಿಕೊಂಡಿದ್ದಾರೆ. JB-JIOURG-S ಎಂಬ ಸೆಂಡರ್ ಐಡಿಯಿಂದ (Sender ID) ಬರುತ್ತಿರುವ ಈ ಸಂದೇಶದಲ್ಲಿ, "ನಿಮ್ಮ ರಿಚಾರ್ಜ್ ಪ್ಲಾನ್ ಅವಧಿ ಮುಗಿದಿದೆ ಮತ್ತು ನಿಮ್ಮ ಇನ್‌ಕಮಿಂಗ್ ಕರೆಗಳು ಯಾವುದೇ ಕ್ಷಣದಲ್ಲಿ ಸ್ಥಗಿತಗೊಳ್ಳಬಹುದು (may stop anytime soon)" ಎಂದು ಗ್ರಾಹಕರಿಗೆ ಎಚ್ಚರಿಸಲಾಗಿದೆ. ಸಂಪರ್ಕದಲ್ಲಿರಲು ತಕ್ಷಣ ರಿಚಾರ್ಜ್ ಮಾಡುವಂತೆ ಮನವಿ ಮಾಡಲಾಗಿದ್ದು, ಜಿಯೋ ರಿಚಾರ್ಜ್ ಪುಟದ ಲಿಂಕ್ ಅನ್ನೂ ನೀಡಲಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಈ ಎಸ್‌ಎಂಎಸ್‌ನಲ್ಲಿ ಕೇವಲ ಇನ್‌ಕಮಿಂಗ್ ಕರೆಗಳ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆಯೇ ಹೊರತು ಇನ್‌ಕಮಿಂಗ್ ಎಸ್‌ಎಂಎಸ್ ಬಗ್ಗೆ ಪ್ರಸ್ತಾಪವಿಲ್ಲ. ಅಲ್ಲದೆ, ಕರೆಗಳು ನಿಖರವಾಗಿ ಯಾವಾಗ ನಿಲ್ಲುತ್ತವೆ ಎಂಬ ಕಾಲಮಿತಿಯನ್ನು (Timeline) ನೀಡಿಲ್ಲ ಮತ್ತು 'ನಿಲ್ಲಬಹುದು' (may stop) ಎಂದಷ್ಟೇ ಹೇಳಿದೆ. ಜಿಯೋ ಕಂಪನಿಯು ನೀತಿ ಬದಲಾವಣೆಯ ಕುರಿತು ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಸೆಕೆಂಡರಿ ಸಿಮ್ ಬಳಕೆದಾರರ ಮೇಲೆ ಇದರ ಪರಿಣಾಮವೇನು?

ಕಳೆದ ಹಲವು ವರ್ಷಗಳಿಂದ ಪ್ಲಾನ್ ಅವಧಿ ಮುಗಿದ ಗ್ರಾಹಕರ ವಿಚಾರದಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಜಿಯೋ ಹೆಚ್ಚು ಉದಾರವಾಗಿತ್ತು. ಏರ್‌ಟೆಲ್ (Airtel) ಮತ್ತು ವಿಐ (Vi) ಕಂಪನಿಗಳು ಸಾಮಾನ್ಯವಾಗಿ ಪ್ಲಾನ್ ಮುಗಿದ ಸುಮಾರು ಒಂದು ವಾರದೊಳಗೆ ಇನ್‌ಕಮಿಂಗ್ ಕರೆಗಳನ್ನು ಸ್ಥಗಿತಗೊಳಿಸುತ್ತವೆ. ಜಿಯೋ (Jio) ನಂಬರ್ ಬಳಕೆಯಲ್ಲಿದ್ದರೆ ಪ್ಲಾನ್ ಮುಗಿದ ನಂತರವೂ ತಿಂಗಳುಗಟ್ಟಲೆ ಇನ್‌ಕಮಿಂಗ್ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯ ನೀಡುತ್ತಿತ್ತು. ಇದೇ ಕಾರಣಕ್ಕೆ ಅನೇಕರು ಹಣ ಪಾವತಿಸದೆ ಕೇವಲ ಕರೆ ಮತ್ತು ಒಟಿಪಿ (OTP) ಪಡೆಯಲು ಜಿಯೋವನ್ನು 'ಸೆಕೆಂಡರಿ ಸಿಮ್' ಆಗಿ ಬಳಸುತ್ತಿದ್ದರು. ಈಗ ಪ್ಲಾನ್ ಮುಗಿದ ತಕ್ಷಣ ಜಿಯೋ ಇನ್‌ಕಮಿಂಗ್ ಕರೆ ಕಡಿತಗೊಳಿಸಲು ಆರಂಭಿಸಿದರೆ, ಅಂತಹ ಬಳಕೆದಾರರು ತಮ್ಮ ನಂಬರ್ ಚಾಲ್ತಿಯಲ್ಲಿಡಲು ನಿಯಮಿತವಾಗಿ ರಿಚಾರ್ಜ್ ಮಾಡಿಸಬೇಕಾಗುತ್ತದೆ.

ಜಿಯೋ ತನ್ನ ನಿಯಮಗಳನ್ನು ಬಿಗಿಗೊಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲೇ, ರಿಚಾರ್ಜ್ ಮಾಡಿಸದೆ ದೀರ್ಘಕಾಲ ನಿಷ್ಕ್ರಿಯವಾಗಿದ್ದ ಸಿಮ್ ಕಾರ್ಡ್‌ಗಳನ್ನು ಜಿಯೋ ಡಿಆಕ್ಟಿವೇಟ್ (Deactivate) ಮಾಡಲು ಆರಂಭಿಸಿದೆ ಎಂದು ಹಲವು ವರದಿಗಳು ತಿಳಿಸಿದ್ದವು.

ಇನ್‌ಕಮಿಂಗ್ ಕರೆ ಕಡಿತಗೊಳ್ಳದಂತೆ ಜಿಯೋ ನಂಬರ್ ಸಕ್ರಿಯವಾಗಿಟ್ಟುಕೊಳ್ಳುವುದು ಹೇಗೆ?

ನೀವು ಕೇವಲ ಇನ್‌ಕಮಿಂಗ್ ಕರೆ ಅಥವಾ ಒಟಿಪಿಗಳಿಗಾಗಿ ಜಿಯೋ ನಂಬರ್ ಬಳಸುತ್ತಿದ್ದರೆ, ವಿಶೇಷವಾಗಿ ಆ ನಂಬರ್ ನಿಮ್ಮ ಬ್ಯಾಂಕ್ ಖಾತೆ, ಯುಪಿಐ (UPI) ಅಥವಾ ಇತರ ಪ್ರಮುಖ ಸೇವೆಗಳಿಗೆ ಲಿಂಕ್ ಆಗಿದ್ದರೆ ಅದರಲ್ಲಿ ಸಕ್ರಿಯ ಪ್ಲಾನ್ ಇಟ್ಟುಕೊಳ್ಳುವುದು ಉತ್ತಮ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಆದೇಶದ ಮೇರೆಗೆ ಜಿಯೋ ಈ ತಿಂಗಳ ಆರಂಭದಲ್ಲೇ ಭಾರತದಲ್ಲಿ ಕೇವಲ ಕರೆ ಸೌಲಭ್ಯವಿರುವ 'ವಾಯ್ಸ್-ಓನ್ಲಿ' (Voice-only) ರಿಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ನಿಮ್ಮ ನಂಬರ್ ಅನ್ನು ಸಕ್ರಿಯವಾಗಿಟ್ಟುಕೊಳ್ಳಲು ಈ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಬಳಸಿಕೊಳ್ಳಬಹುದು. ಈ ವಿಚಾರವಾಗಿ ಜಿಯೋ ಶೀಘ್ರದಲ್ಲೇ ಅಧಿಕೃತ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದು ಊಟಕ್ಕೆ 4,800 ರೂಪಾಯಿ ಬಿಲ್! ನನ್ನ 7 ದಿನದ ಸಂಬಳ ಖಾಲಿ ಎಂದು ಗೋಳಾಡಿದ ಯುವತಿ!
Viral Kid: ಜಸ್ಟ್ ಒಂದು ವಿಡಿಯೋ, 26 ತಿಂಗಳ ಮಗುವಿಗೆ ಒಲಿದ ಅದೃಷ್ಟ; ಬದಲಾಯ್ತು ಬದುಕು!