
ನವದೆಹಲಿ (ನ. 29): ರಾಷ್ಟ್ರಮಟ್ಟದ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಮಾತ್ರವೇ ಅಲ್ಲದೇ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಬೇಕು ಎಂಬ ಹಿಂದಿಯೇತರ ರಾಜ್ಯಗಳ ಕೂಗಿಗೆ ಮಹತ್ವದ ಯಶಸ್ಸು ದೊರೆತಿದೆ. ದೇಶದ ವಿವಿಧ ಭಾಗಗಳಲ್ಲಿ ತನ್ನ ಅನುದಾನದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ಜರುಗುವ ಜಂಟಿ ಪ್ರವೇಶ ಪರೀಕ್ಷೆ (ಮೇನ್)ಯನ್ನು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕನ್ನಡ, ತಮಿಳು, ತೆಲುಗು, ಮರಾಠಿ, ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಒಡಿಯಾ ಹಾಗೂ ಉರ್ದುವಿನಲ್ಲಿ 2021ರ ಜನವರಿಯಿಂದ ಜೆಇಇ (ಮೇನ್) ಪರೀಕ್ಷೆಗಳನ್ನು ನಡೆಸಲು ಸಜ್ಜಾಗುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚನೆ ನೀಡಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ.
1104 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ: SSLC ಪಾಸಾದವರೂ ಅರ್ಜಿ ಹಾಕ್ಬಹುದು
ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್‌ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿರುವ ಇನ್ನಿತರೆ ತಾಂತ್ರಿಕ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ಜೆಇಇ (ಮೇನ್) ನಡೆಸಲಾಗುತ್ತದೆ. ಸದ್ಯ ಈ ಪರೀಕ್ಷೆ ಇಂಗ್ಲಿಷ್, ಹಿಂದಿ ಹಾಗೂ ಗುಜರಾತಿನಲ್ಲಿ ಮಾತ್ರವೇ ಇದೆ. ಜೆಇಇ (ಮೇನ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಗಳ ಪ್ರವೇಶಕ್ಕಾಗಿ ನಡೆಸುವ ಜೆಇಇ (ಅಡ್ವಾನ್ಸ್$್ಡ)ಗೆ ಅರ್ಹತೆ ಪಡೆಯುತ್ತಾರೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈವರೆಗೆ ಜೆಇಇ (ಮೇನ್) ಪರೀಕ್ಷೆಯನ್ನು ನಡೆಸುತ್ತಿತ್ತು. ಕಂಪ್ಯೂಟರ್ ಆಧರಿತ ಪರೀಕ್ಷೆ ಇದಾಗಿದ್ದು, ಇತ್ತೀಚೆಗೆ ಇದರ ಹೊಣೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ವರ್ಗಾಯಿಸಲಾಗಿದೆ. ಜೆಇಇ (ಮೇನ್)ಯಲ್ಲಿ ಗುಜರಾತಿ ಭಾಷೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇತರೆ ಪ್ರಾದೇಶಿಕ ಭಾಷೆಗಳನ್ನೂ ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದರು.
ಗುಜರಾತ್ ಸರ್ಕಾರದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಗುಜರಾತಿಯನ್ನು ಸೇರ್ಪಡೆ ಮಾಡಲಾಗಿದೆ ಎಂದು ಎನ್‌ಟಿಇ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಕೂಡ 2020ರಿಂದಲೇ ಬಂಗಾಳಿ ಸೇರ್ಪಡೆ ಮಾಡಿ ಎಂದು ಕೋರಿಕೆ ಇಟ್ಟಿತ್ತು. ಇದೀಗ 11 ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.
12 ವರ್ಷದ ಪೋರ Data Scientist, ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಕೆಲಸ!
2020ರ ಪರೀಕ್ಷೆಗಾಗಿ ಈಗಾಗಲೇ ನೋಂದಣಿ, ಇತರೆ ಕೆಲಸಗಳು ಪೂರ್ಣಗೊಂಡಿವೆ. ಪ್ರಶ್ನೆಗಳನ್ನು ತರ್ಜುಮೆ ಮಾಡಲು ಸಮಯ ಹಿಡಿಯುತ್ತದೆ. ಆತುರಾತುರವಾಗಿ ಆ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ 2021ರ ಪರೀಕ್ಷೆಯಲ್ಲಿ 11 ಭಾಷೆಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ