
ಮುಂಬೈ [ನ.29]: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಮಾಣವಚನ ಸ್ವೀಕರಿಸುವ ಕೆಲವೇ ತಾಸುಗಳ ಮುನ್ನ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡ ‘ಮಹಾ ವಿಕಾಸ ಅಘಾಡಿ’ ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ)ವನ್ನು ಪ್ರಕಟಿಸಿತು. ಮಹಾರಾಷ್ಟ್ರದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.80ರಷ್ಟುಮೀಸಲಾತಿ ನೀಡಲು ಕಾಯ್ದೆ ರೂಪಿಸುವುದಾಗಿ ಘೋಷಿಸಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ರೈತರ ಸಾಲ ಮನ್ನಾ, ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ 1 ರುಪಾಯಿ ಕ್ಲಿನಿಕ್, ಅದರಲ್ಲಿ ಕನಿಷ್ಠ ಆರೋಗ್ಯ ತಪಾಸಣೆ ಸೌಲಭ್ಯ, 10 ರು.ಗೆ ಊಟ ನೀಡಲು ಯೋಜನೆ, ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ವಿಮೆ ಕಾರ್ಯಕ್ರಮ, ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಧಾನಮಂತ್ರಿ ಗ್ರಾಮಸಡಕ್ ರೀತಿ ಮುಖ್ಯಮಂತ್ರಿಗಳ ಗ್ರಾಮಸಡಕ್ ಯೋಜನೆ ಜಾರಿಗೆ ತರುವುದಾಗಿ ಪ್ರಕಟಿಸಲಾಗಿದೆ.
ವಿಶೇಷ ಎಂದರೆ, ಶಿವಸೇನೆ ಕಟ್ಟರ್ ಹಿಂದುತ್ವವಾದಿ ಪಕ್ಷವಾಗಿ ಗುರುತಿಸಿಕೊಂಡಿದ್ದರೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪೀಠಿಕೆಯಲ್ಲಿ ಜಾತ್ಯತೀತ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಬಿಜೆಪಿ- ಶಿವಸೇನೆ ಮಿತ್ರಕೂಟ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಪೂರ್ವದಲ್ಲಿ ವೀರ ಸಾವರ್ಕರ್ ಅವರಿಗೆ ಭಾರತರತ್ನ ಕೊಡಿಸಲು ಪ್ರಯತ್ನಿಸುವುದಾಗಿ ಹೇಳಿತ್ತು. ಆದರೆ ಸಿಎಂಪಿಯಲ್ಲಿ ಅದರ ಬಗ್ಗೆ ಉಲ್ಲೇಖವಿಲ್ಲ.
ಎನ್‌ಸಿಪಿ ನಾಯಕರಾದ ಜಯಂತ್ ಪಾಟೀಲ್, ನವಾಬ್ ಮಲಿಕ್, ಶಿವಸೇನೆಯ ಏಕನಾಥ ಶಿಂಧೆ ಅವರು ಸುದ್ದಿಗಾರರೆದುರು ಸಿಎಂಪಿಯನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಸರ್ಕಾರದಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಒಂದು ಮತ್ತು ಮೈತ್ರಿಕೂಟದಲ್ಲಿ ಒಂದು ಸಮನ್ವಯ ಸಮಿತಿ ರಚಿಸಲೂ ಮೂರೂ ಪಕ್ಷಗಳು ಸಮ್ಮಿತಿಸಿವೆ.
ಇತರೆ ಪ್ರಮುಖ ಅಂಶಗಳು
- 2 ಸಮನ್ವಯ ಸಮಿತಿ. ಒಂದು ಸಂಪುಟದೊಳಗೆ. ಮತ್ತೊಂದು ಮಿತ್ರಪಕ್ಷಗಳ ನಡುವೆ.
- ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ, ಬರಪೀಡಿತ ಪ್ರದೇಶಗಳಿಗೆ ನೀರು ಸರಬರಾಜು
- ಆರ್ಥಿಕ ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
- ಕೃಷಿ ಕೂಲಿಕಾರರ ಮಕ್ಕಳು ಹಾಗೂ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಶೂನ್ಯ ಬಡ್ಡಿ ಸಾಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ