
ಕಾಶ್ಮೀರ(ಏ.27): ಕರ್ನಾಟದ ಉಡುಪಿಯಿಂದ ಆರಂಭಗೊಂಡ ಹಿಜಾಬ್ ವಿವಾದ ದೇಶದ ಇತರ ಭಾಗ ಹಾಗು ವಿದೇಶಗಳಲ್ಲೂ ಭಾರಿ ಸದ್ದು ಮಾಡಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದರೂ ಹೋರಾಟ ನಿಂತಿಲ್ಲ. ಈಗಲೂ ಹಿಜಾಬ್ ವಿವಾದ ಬಗೆಹರಿದಿಲ್ಲ. ಇದೀಗ ಕಾಶ್ಮೀರ ಶಾಲೆಯಲ್ಲೂ ಹಿಜಾಬ್ ವಿವಾದ ಭುಗಿಲೆದ್ದಿದೆ. ಮಕ್ಕಳಿಗೆ ಪಾಠ ಮಾಡುವಾಗ ತರಗತಿಯೊಳಗೆ ಹಿಜಾಬ್ ಧರಿಸುವಂತಿಲ್ಲ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಇದು ಕಾಶ್ಮೀರದ ಹಲವು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಾರಮುಲ್ಲಾದ ದಗ್ಗರ್ ಪರಿವಾರ್ ಶಾಲಾ ಆಡಳಿತ ಮಂಡಳಿ ಈ ಖಡಕ್ ಸೂಚನೆ ನೀಡಿದೆ. ಪುಣೆ ಮೂಲದ ಇದ್ರಾಣಿ ಬಾಲನ್ ಫೌಂಡೇಶನ್ ಹಾಗೂ ಭಾರತೀಯ ಸೇನೆ ಜಂಟಿಯಾಗಿ ನಡೆಸುತ್ತಿರುವ ವಿಶೇಷತ ಚೇತನ ಮಕ್ಕಳ ಶಾಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹಿಜಾಬ್ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ!
ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ, ಸುರಕ್ಷಿತ ಹಾಗೂ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸಲು ಶಿಕ್ಷಕಿಯರು ಶಾಲಾ ಸಮಯದಲ್ಲಿ ಹಿಬಾಜ್ ಧರಿಸಬಾರದು ಎಂದು ಸುತ್ತೋಲೆ ಹೊರಡಿಸಿದೆ. ಶಾಲೆ ಮಕ್ಕಳ ಕಲಿಕೆಯ ಜೊತೆಗೆ ಅವರ ಬೌದ್ಧಿಕ ಮಟ್ಟ, ಆತ್ಮವಿಶ್ವಾಸ, ಧೈರ್ಯ, ಭಾವನಾತ್ಮಕ, ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಯುವ ಕೇಂದ್ರವಾಗಿದೆ. ಮಕ್ಕಳ ಸಂಪೂರ್ಣ ಅಭಿವೃದ್ಧಿ ಶಾಲೆಯ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಆತ್ಮವಿಶ್ವಾಸ, ಆತ್ಮೀಯತೆ ಬೆಳೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಶಾಲಾ ಸುತ್ತೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಕೆರಳಿರುವ ಪಿಡಿಪಿ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬ ಮುಫ್ತಿ ಆಕ್ರೋಶ ಹೊರಹಾಕಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಆಡಳಿತಿವರಬಹುದು. ಆದರೆ ಇಲ್ಲಿ ಬುಲ್ಡೋಜರ್ ನೀತಿ ತರಲು ಸಾಧ್ಯವಿಲ್ಲ. ಬಿಜೆಪಿ ಚಿಂತನೆಗಳನ್ನು ಹೇರಲು ಬಿಡುವುದಿಲ್ಲ. ಮಹಿಳೆಯ ಉಡುಪು ಆಕೆಯ ಆಯ್ಕೆಯಾಗಿದೆ ಎಂದು ಮುಫ್ತಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಹಿಜಾಬ್ ವಿವಾದದ ಬೆನ್ನಲ್ಲೇ ಕರ್ನಾಟಕದಲ್ಲಿ ಭುಗಿಲೆದ್ದ ಬೈಬಲ್ ವಿವಾದ!
ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅವಾಂತರ ಸೃಷ್ಟಿಸಿ ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಓಮರ್ ಹೇಳಿದ್ದಾರೆ.
ಪರೀಕ್ಷೆಗಿಂತ ಹಿಜಾಬ್ ಮುಖ್ಯ: ಉಡುಪಿ 3 ವಿದ್ಯಾರ್ಥಿನಿಯರು ಮತ್ತೆ ಗೈರು
ಹಿಜಾಬ್‌ಗಾಗಿ ಹೈಕೋರ್ಚ್ ಮೆಟ್ಟಿಲೇರಿದ್ದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರಲ್ಲಿ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಂಗಳವಾರವೂ ವಾರ್ಷಿಕ ಪರೀಕ್ಷೆಗೆ ಗೈರಾಗಿದ್ದಾರೆ. ಈ ಮೂಲಕ ಶಿಕ್ಷಣಕ್ಕಿಂತ ತಮಗೆ ಹಿಜಾಬ್ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ. ಸರ್ಕಾರದ ಆದೇಶದಂತೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲದಿರುವುದರಿಂದ ಈ ವಿದ್ಯಾರ್ಥಿಗಳು ಶನಿವಾರ ಕೂಡ ಮೊದಲ ಪರೀಕ್ಷೆಗೆ ಹಾಜರಾಗಿರಲಿಲ್ಲ. ಈ ಮೂವರಲ್ಲಿ ಒಬ್ಬಾಕೆ ಹಾಲ್ ಟಿಕೆಟ್ ಪಡೆದಿದ್ದರೆ, ಇನ್ನಿಬ್ಬರು ಹಾಲ್ ಟಿಕೆಟನ್ನೇ ಪಡೆದಿಲ್ಲ. ಈ ಹಿಂದೆ ಇಬ್ಬರು ಕಾಮರ್ಸ್ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರೂ, ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಒಪ್ಪದೆæ ಮನೆಗೆ ವಾಪಸ್ ಹೋಗಿದ್ದರು. ಇನ್ನೊಬ್ಬ ಪ್ರಥಮ ಪಿಯು ವಿದ್ಯಾರ್ಥಿನಿ ಕೂಡ ವಾರ್ಷಿಕ ಪರೀಕ್ಷೆ ಬರೆದಿಲ್ಲ.ಬುಧವಾರ ಜಿಲ್ಲೆಯಲ್ಲಿ ರಸಾಯನಶಾಸ್ತ್ರ ಪರೀಕ್ಷೆಯಲ್ಲಿ 36, ಮನಃಶಾಸ್ತ್ರ ಪರೀಕ್ಷೆಯಲ್ಲಿ 3 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ