
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಗೊತ್ತುವಳಿಯೊಂದನ್ನು ಭಾರೀ ಗದ್ದಲದ ನಡುವೆಯೇ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬುಧವಾರ ಅಂಗೀಕರಿಸಿದೆ.
ಬುಧವಾರ ಕಲಾಪ ಆರಂಭವಾಗುತ್ತಲೇ ಗೊತ್ತುವಳಿ ಮಂಡಿಸಿದ ಉಪಮುಖ್ಯಮಂತ್ರಿ ಸರಿಂದರ್ ಚೌಧರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಸುರಿಂದರ್ ಚೌಧರಿ, ‘ವಿಶೇಷ ಸ್ಥಾನಮಾನದ ಮಹತ್ವ ಮತ್ತು ರಾಜ್ಯದ ಜನರ ಹೆಗ್ಗುರುತು, ಸಂಸ್ಕೃತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಗ್ಯಾರಂಟಿಯನ್ನು ಈ ವಿಧಾನಸಭೆ ದೃಢೀಕರಿಸುತ್ತದೆ. ಜೊತೆಗೆ ಇಂಥ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ’ ಎಂದರು.
ಆದರೆ ಗೊತ್ತುವಳಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಬಿಜೆಪಿ ಸದಸ್ಯರು, ಕಲಾಪದ ಪಟ್ಟಿಯಲ್ಲಿ ಇರದ ವಿಷಯವನ್ನು ಮಂಡಿಸಲಾಗಿದೆ. ನಾವು ಇದನ್ನು ಪೂರ್ಣವಾಗಿ ವಿರೋಧಿಸುತ್ತೇವೆ. ಸಂಸತ್ ಕೈಗೊಂಡಿರುವ ನಿರ್ಧಾರವನ್ನು ಬದಲಿಸಲಾಗದು ಎಂದು ಗೊತ್ತಿದ್ದರೂ ಕೆಲ ಪಕ್ಷಗಳು ಪ್ರಚಾರಕ್ಕಾಗಿ ಸುಮ್ಮನೆ ಗದ್ದಲ ಎಬ್ಬಿಸುತ್ತಿವೆ ಎಂದರು. ಈ ವೇಳೆ ಎನ್‌ಸಿ, ಪಿಡಿಪಿ, ಕಾಂಗ್ರೆಸ್ ಹಾಗೂ ಇತರೆ ಕೆಲ ಪಕ್ಷಗಳು ನಾಯಕರು ಜೋರಾಗಿ ಘೋಷಣೆ ಕೂಗಿ ಸದನದ ಬಾವಿಯತ್ತ ನುಗ್ಗುವ ಪ್ರಯತ್ನ ಮಾಡಿದರಾದರೂ ಅದನ್ನು ಮಾರ್ಷಲ್‌ಗಳು ತಡೆದರು.
ಇದರ ನಡುವೆಯೇ ಬಿಜೆಪಿ ಸದಸ್ಯರು, ‘ಆಗಸ್ಟ್ 5 ಜಿಂದಾಬಾದ್’, ‘ಜೈ ಶ್ರೀರಾಮ್’, ‘ವಂದೇ ಮಾತರಂ’, ‘ಪಾಕಿಸ್ತಾನಿ ಅಜೆಂಡಾ ನಹೀ ಚಲೇಗಾ’ ಎಂದು ಘೋಷಣೆ ಕೂಗತೊಡಗಿದರು. ಈ ವೇಳೆ ವಿಧಾನಸಭೆಯ ಸ್ಪೀಕರ್ ಗೊತ್ತುವಳಿಯನ್ನು ಧ್ವನಿಮತಕ್ಕೆ ಹಾಕಿ ಅದರ ಮೂಲಕ ಅಂಗೀಕರಿಸಿರುವುದಾಗಿ ಘೋಷಿಸಿದರು.
ಇದನ್ನೂ ಓದಿ: ಯಾರಿಂದಲೂ 370 ವಾಪಸ್ ತರಲು ಸಾಧ್ಯವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಬಳಿಕ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರು ಜಾರಿ ಬಗ್ಗೆ ರಾಜ್ಯ ವಿಧಾನಸಭೆ ಏನು ಮಾಡಬಹುದಿತ್ತೋ ಅದನ್ನು ಮಾಡಿದೆ. ಅದಕ್ಕಿಂತ ಹೆಚ್ಚೇನೂ ಹೇಳಲಾರೆ’ ಎಂದು ಹೇಳಿದರು.
370ನೇ ವಿಧಿ ರದ್ದು: 2019ರ ಆ.5ರಂದು ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿತ್ತು.
ಇದನ್ನೂ ಓದಿ: ರಾತ್ರೋರಾತ್ರಿ ಬುಲ್ಡೋಜರ್ ಬಳಸಿ ಮನೆ ಧ್ವಂಸ ಮಾಡುವಂತಿಲ್ಲ: ಯುಪಿ ಸರ್ಕಾರಕ್ಕೆ ಸುಪ್ರೀಂ ಖಡಕ್ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ