ಪೊಲೀಸ್ ಬಸ್ ಮೇಲೆ ನಡೆದ ದಾಳಿ ಹಿಂದೆ ಜೈಷ್ ಎ ಮೊಹಮ್ಮದ್ ಸಂಘಟನೆಯ ಕೈವಾಡ
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಉಗ್ರರ ದಾಳಿ
ಈ ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದರು.
ಶ್ರೀನಗರ(ಡಿ.15): ಸೋಮವಾರ ಇಲ್ಲಿ ಪೊಲೀಸ್ ಬಸ್(Police bus) ಮೇಲೆ ನಡೆದ ಉಗ್ರ ದಾಳಿಯ ಹಿಂದೆ ಜೈಷ್ ಎ ಮೊಹಮ್ಮದ್ ಸಂಘಟನೆ(Jaish A Mohammed Organization)ಯ ಕೈವಾಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಪೊಲೀಸ್ ಬಸ್ ಮೇಲಿನ ದಾಳಿಯು ಆಕಸ್ಮಿಕವಾಗಿ ಸಂಭವಿಸಿದ್ದಲ್ಲ. ಇದು ಪೂರ್ವ ನಿಯೋಜಿತ ಕೃತ್ಯ. ನಿತ್ಯದ ಕರ್ತವ್ಯ ಮುಗಿಸಿ ಬರುತ್ತಿದ್ದ 25 ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಗುಂಡಿನ ಸುರಿಮಳೆಗೆರೆದರು. ಪೊಲೀಸ್ ಸಿಬ್ಬಂದಿಯ ನಿತ್ಯದ ಕೆಲಸದ ಮೇಲೆ ನಿಗಾ ವಹಿಸಿದ್ದ ಉಗ್ರರು, ಸಂಚು ರೂಪಿಸಿ ಈ ದಾಳಿ ನಡೆಸಿದ್ದರು. ಈ ಮೂವರು ಉಗ್ರರ ಪೈಕಿ ಓರ್ವ ಸ್ಥಳೀಯನಾಗಿದ್ದು, ಇನ್ನಿಬ್ಬರು ವಿದೇಶಿಗರಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್(IGP Vijaya kumar) ತಿಳಿಸಿದ್ದಾರೆ.
ಈ ನಡುವೆ ಉಗ್ರರ ದಾಳಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ 12 ಗಾಯಾಳು ಪೊಲೀಸರ ಪೈಕಿ ಮಂಗಳವಾರ ಮತ್ತೋರ್ವ ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಉಗ್ರರ ದಾಳಿಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ. ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಯ ನೋವು ಇನ್ನೂ ಕರಗಿಲ್ಲ. ಅದು ಮಾಸುವ ಮೊದಲೇ ಆ ದಾಳಿಯನ್ನು ನೆನಪಿಸುವ ರೀತಿಯಲ್ಲಿ ಶ್ರೀನಗರದ ಜೆವಾನ್(Zewan Polic camp) ಪೊಲೀಸ್ ಕ್ಯಾಂಪ್ ಬಳಿಯಲ್ಲಿ ಉಗ್ರರು ದಾಳಿ ನಡೆಸಿದ್ದಾರೆ.
2001 Parliament Attack: ಸಂಸತ್ ದಾಳಿ ನಡೆದು 2 ದಶಕ: 20 ವರ್ಷದಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಬದಲು!
ಝೆವಾನ್ ಪೊಲೀಸ್ ಕ್ಯಾಂಪ್‌ನಿಂದ ಹೊರಟ ಪೊಲೀಸ್ ಬಸ್ ಪಂಥಾ ಚೌಕ್ ಏರಿಯಾ ತಲುಪುವಷ್ಟರಲ್ಲೇ ಉಗ್ರರು ಬಸ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಲು ಪೊಲೀಸರು ತಮ್ಮಲ್ಲಿರುವ ಆಯುಧ ಕೈಗೆತ್ತಿಕೊಳ್ಳಲು ಅವಕಾಶವೇ ಸಿಕ್ಕದಂತೆ ಉಗ್ರರು ಸತತ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್‌ನಲ್ಲಿದ್ದ 14 ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಗಾಯಗೊಂಡ 14 ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರ ಗಾಯಗೊಂಡ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇಂದು ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ. ಇತ್ತ 11 ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಂಥಾ ಚೌಕ್ ಏರಿಯಾವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.. ಭಯೋತ್ಪಾದಕರ ಹೆಡೆಮುರಿ ಕಟ್ಟಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದೆ.
ದಾಳಿ ಕುರಿತು ಕಾಶ್ಮೀರ ಝೋನ್ ಪೊಲೀಸ್ ಮಾಹಿತಿ ಹಂಚಿಕೊಂಡಿಕೊಂಡಿದ್ದಾರೆ. ಈ ವೇಳೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ಆರತಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಕುರಿತು ಭದ್ರತಾ ಪಡೆಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
Srinagar Terror Attack ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ, 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸುತ್ತಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಲು ಮಹತ್ವದ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಉಗ್ರರ ದಾಳಿ ಹತ್ತಿಕ್ಕುವುದು ಸವಾಲಾಗಿ ಪರಿಣಮಿಸುತ್ತಿದೆ. ಕಳೆದ 3 ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 1,033 ಭಯೋತ್ಪಾದಕ ದಾಳಿ ನಡೆದಿದೆ. 2020ರಲ್ಲಿ 195 ಉಗ್ರರ ದಾಳಿ ನಡೆದಿದೆ. 2019ರಲ್ಲಿ 90 ಭಾರತೀಯ ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದಾರೆ. 2020ರಲ್ಲಿ 62 ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನು ಕಳೆದ ತಿಂಗಳ ವರೆಗೆ 2021ರಲ್ಲಿ 35 ಯೋಧರು ಹುತಾತ್ಮರಾಗಿದ್ದಾರೆ.
ಇತ್ತೀಚೆಗೆ ನಡೆದ ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ ಮಾಡಿತ್ತು. ಇದಕ್ಕೂ ಮೊದಲು ಶ್ರೀನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಸೇನೆ ಹತ್ಯೆ ಮಾಡಿತ್ತು. ಈ ಸೇನಾ ಕಾರ್ಯಾಚರಣೆ ಭಾರಿ ಪರ ವಿರೋಧಕ್ಕೆ ಕಾರಣವಾಗಿತ್ತು.