
ಮುಂಬೈ: ಮುಂಬೈನಲ್ಲಿ 90 ವರ್ಷಕ್ಕೂ ಹಳೆಯ ಜೈನ ದೇಗುಲವೊಂದನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೆಡವಿ ಹಾಕಿದ್ದು, ಇದನ್ನು ಖಂಡಿಸಿ ಸಾವಿರಾರು ಜೈನ ಸಮುದಾಯದ ಜನ ರಸ್ತೆಗಿಳಿದು ಶಾಂತಿಯುತ ಪ್ರತಿಭಟನೆ ನಡೆಸಿದರು. ಇದು ತಮ್ಮ ನಂಬಿಕೆಯನ್ನು ಪ್ರತಿಪಾದಿಸುವ ಸಾಂವಿಧಾನಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿ ಮುಂಬೈನಲ್ಲಿ ಸಾವಿರಾರು ಜೈನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಈ ಜೈನ ದೇವಾಲಯದ ಟ್ರಸ್ಟಿ ಅನಿಲ್ ಶಾ ಅವರು ಈ ಬಗ್ಗೆ ಮಾತನಾಡಿದ್ದು, ಈ ರಚನೆಯು 1935 ರಿಂದಲೂ ಅಸ್ತಿತ್ವದಲ್ಲಿದ್ದು, ಪುರಸಭೆಯ ನಿಯಮಗಳ ಅಡಿಯಲ್ಲಿ, 1961-62 ರ ಮೊದಲು ನಿರ್ಮಿಸಲಾದ ಯಾವುದೇ ಕಟ್ಟಡವನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ. ಆದರೆ ಪುರಸಭೆಯ ಅಧಿಕಾರಿಗಳು ಮತ್ತು ಇತರರು ಅಧಿಕಾರಿಗಳು ಈ ದೇವಾಲಯವನ್ನು ಕೆಡವಲು ಪಿತೂರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದು ಜೈನ ಧಾರ್ಮಿಕ ನಂಬಿಕೆಯ ಸಂಕೇತವಾಗಿತ್ತು. ಈ ದೇಗುಲದ ವಸ್ತು ಸ್ಥಿತಿಯ ಬಗ್ಗೆ ಸುಪ್ರೀಂಕೋರ್ಟ್, ಕೆಳ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸಲು ಎಂಟು ದಿನಗಳ ಕಾಲಾವಕಾಶ ನೀಡಿದ್ದರೂ, ನಾಗರಿಕ ಅಧಿಕಾರಿಗಳು ಬುಧವಾರ ಮುಂಜಾನೆಯೇ ಸಂಕ್ಷಿಪ್ತವಾದ ನೋಟೀಸ್ ನೀಡಿ ಕೆಡವುವಿಕೆಯನ್ನು ನಡೆಸಿದ್ದಾರೆ ಎಂದು ಶಾ ಬೇಸರಿಸಿದ್ದಾರೆ.
ದೇವಾಲಯದ ಧ್ವಂಸವಾಗಿದ್ದರೂ ಸಹ ಭಕ್ತರು ಆ ಸ್ಥಳದಲ್ಲಿ ತಮ್ಮ ಪೂಜೆಯನ್ನು ಪುನರಾರಂಭಿಸಿದ್ದಾರೆ ಮತ್ತು ದೇವಾಲಯವನ್ನು ಕಾನೂನುಬದ್ಧವಾಗಿ ಪುನರ್ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಧ್ವಂಸ ಸಮಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಭಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ವರದಿಯಾಗಿದ್ದವು. ಧ್ವಂಸ ಕಾರ್ಯಾಚರಣೆಯ ವೇಳೆ ವಿಲೇ ಪಾರ್ಲೆ ಶಾಸಕ ಪರಾಗ್ ಅಲವಾನಿ ಅವರು, ಧ್ವಂಸ ಪ್ರಕ್ರಿಯೆಯನ್ನು ಮುಂದೂಡುವಂತೆ ಮತ್ತು ನ್ಯಾಯಾಲಯದ ವಿಚಾರಣೆಗೆ ಸಮಯಾವಕಾಶ ನೀಡುವಂತೆ ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿರುವುದಾಗಿ ಬಹಿರಂಗಪಡಿಸಿದರು. ಆದರೂ ದೇವಾಲಯದ ರಚನೆಯನ್ನು ಕಾನೂನುಬಾಹಿರವೆಂದು ಪರಿಗಣಿಸಿದ ಹಿಂದಿನ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಈ ದೇಗುಲದ ತೆರವು ಕಾರ್ಯಾಚರಣೆ ಮಾಡಿದೆ.
ಬಿಎಂಸಿ ಅಧಿಕಾರಿಗಳ ಪ್ರಕಾರ, ಸೂಕ್ತ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ದೇವಾಲಯಕ್ಕೆ ಸರಿಯಾದ ಕಾನೂನು ದಾಖಲೆಗಳ ಕೊರತೆ ಇದೆ ಎಂದು ವಾದಿಸಿದ್ದಾರೆ. ಮತ್ತು ಈ ವಿಷಯವು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಗರ ಸಿವಿಲ್ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ವರೆಗೂ ಹೋಗಿರುವ ಪ್ರಕರಣವಾಗಿದೆ ಎಂದು ಗಮನಸೆಳೆದರು. ಯಾವುದೇ ತಡೆಯಾಜ್ಞೆ ಜಾರಿಯಲ್ಲಿಲ್ಲದ ಕಾರಣ, ಕಾನೂನು ಶಿಷ್ಟಾಚಾರದ ಪ್ರಕಾರ ಮುಂದುವರಿಯುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಪ್ರಿಲ್ 16ರಂದು ಏಪ್ರಿಲ್ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮುಂಬೈನ ವಿಲೇ ಪಾರ್ಲೆಯಲ್ಲಿರುವ ನೇಮಿನಾಥ್ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಒಳಗಿರುವ 90 ವರ್ಷ ಹಳೆಯ ಜೈನ ದೇವಾಲಯವನ್ನು ಕೆಡವಿತು. BMC ಈ ದೇವಾಲಯವನ್ನು ಅಕ್ರಮ ರಚನೆ ಎಂದು ಕರೆದಿದೆ. ಅಲ್ಲದೇ 20 ವರ್ಷಗಳ ಕಾನೂನು ಹೋರಾಟದ ನಂತರ ನ್ಯಾಯಾಲಯದ ಆದೇಶದಂತೆ ಧ್ವಂಸ ಮಾಡಲಾಗಿದೆ ಎಂದು ಹೇಳಿದೆ. ಆದರೆ, ದೇವಾಲಯದ ಟ್ರಸ್ಟಿಗಳು ಇದನ್ನು ಹಿಂದೆ ಬಿಎಂಸಿಯ ಅನುಮೋದನೆಯೊಂದಿಗೆ ನವೀಕರಿಸಲಾಗಿದೆ ಮತ್ತು ಸಕ್ರಮಬದ್ಧಗೊಳಿಸುವಿಕೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ