
ಹೈದರಾಬಾದ್(ಫೆ.10): ಪ್ರಬಲ ಪ್ರತಿಪಕ್ಷದ ಕೊರತೆ ಇರುವ ತೆಲಂಗಾಣ ರಾಜಕಾರಣಕ್ಕೆ ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಸೋದರಿ ವೈ.ಎಸ್. ಶರ್ಮಿಳಾ ಪಾದಾರ್ಪಣೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಅವರು ಹೊಸ ಪಕ್ಷವೊಂದನ್ನು ಸ್ಥಾಪಿಸಿ ತೆಲಂಗಾಣ ರಾಜಕಾರಣದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆ ಇದೆ.
ಜಗನ್ಮೋಹನ ರೆಡ್ಡಿ ಅವರು ಜೈಲಿನಲ್ಲಿದ್ದಾಗ 2012ರಲ್ಲಿ ಅಖಂಡ ಆಂಧ್ರದಾದ್ಯಂತ 3000 ಕಿ.ಮೀ. ಪಾದಯಾತ್ರೆ ನಡೆಸಿದ್ದ ಶರ್ಮಿಳಾ, ಜಗನ್ ಅವರು 2019ರಲ್ಲಿ ಆಂಧ್ರ ಸಿಎಂ ಆದ ಬಳಿಕ ತೆರೆಮರೆಗೆ ಸರಿದಿದ್ದರು. ಇದೀಗ ಅವರ ಕಣ್ಣು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಆಡಳಿತದಲ್ಲಿರುವ ತೆಲಂಗಾಣ ಮೇಲೆ ಬಿದ್ದಿದೆ. ಅಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಭದ್ರ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ತಮ್ಮ ತಂದೆ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಜತೆ ಒಡನಾಟ ಹೊಂದಿದ್ದ ನಾಯಕರ ಜತೆ ಶರ್ಮಿಳಾ ಸರಣಿ ಮಾತುಕತೆ ಆರಂಭಿಸಿದ್ದಾರೆ.
ಮಂಗಳವಾರ ನಲ್ಗೊಂಡಾ ಜಿಲ್ಲಾ ಮುಖಂಡರ ಜತೆ ಸಮಾಲೋಚನೆ ನಡೆಸಿರುವ ಅವರು, ತೆಲಂಗಾಣದ ಎಲ್ಲ ಜಿಲ್ಲೆಗಳ ನಾಯಕರೊಂದಿಗೆ ಮಾತುಕತೆ ನಡೆಸಿ ತಳಮಟ್ಟದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಅರಿಯಲು ಹೊರಟಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರುವ ಶರ್ಮಿಳಾ, ‘ತೆಲಂಗಾಣದಲ್ಲಿ ರಾಜಣ್ಣ ರಾಜ್ಯಂ (ರಾಜಶೇಖರರೆಡ್ಡಿ ಆಡಳಿತ) ಇಲ್ಲ. ಏಕೆ ಹೀಗಾಗಿದೆ ಅಂತ ಗೊತ್ತಿಲ್ಲ? ಅದನ್ನು ನಾವು ತರಕೂಡದೆ? ಜಗನ್ ಅವರು ಆಂಧ್ರದಲ್ಲಿ ತಮ್ಮ ಕೆಲಸ ಮಾಡುತ್ತಿದ್ದಾರೆ. ನಾನು ತೆಲಂಗಾಣದಲ್ಲಿ ನನ್ನ ಕೆಲಸ ಮಾಡುತ್ತೇನೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಕುರಿತು ಶೀಘ್ರದಲ್ಲೇ ನಿಮಗೆ ಎಲ್ಲ ಗೊತ್ತಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ