Farm Laws: ರೈತರ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೊಸ ಸಮಿತಿ!

By Kannadaprabha NewsFirst Published Nov 28, 2021, 5:00 AM IST
Highlights

* ಎಂಎಸ್‌ಪಿ ಸೇರಿ ರೈತರ ಬೇಡಿಕೆ ಪರಿಶೀಲಿಸಲು ಸಮಿತಿ: ಕೇಂದ್ರ

* ಬಹುಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ

* ರೈತರಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ಭರವಸೆ

ನವದೆಹಲಿ(ನ.28): ಒಂದು ವರ್ಷದಿಂದ ದೆಹಲಿಯಲ್ಲಿ ಪ್ರತಿಭಟನೆ (Delhi farmers Protest) ನಡೆಸುತ್ತಿರುವ ರೈತರ ಆಗ್ರಹಕ್ಕೆ ಮಣಿದು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು (Three Farm laws) ವಾಪಸ್‌ ಪಡೆಯುವುದಾಗಿ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇದೀಗ ರೈತರ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಹೊಸ ಸಮಿತಿ ರಚನೆ ಘೋಷಿಸಿದೆ. ಪ್ರತಿಭಟನಾನಿರತ ರೈತರ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿರುವ ಕನಿಷ್ಠ ಬೆಂಬಲ ಬೆಲೆ (MSP) ಕುರಿತೂ ಹೊಸ ಸಮಿತಿ ಸಮಾಲೋಚಿಸಲಿದೆ ಎಂಬ ಆಶ್ವಾಸನೆ ನೀಡಿದೆ. ಈ ಮೂಲಕ ಕೃಷಿ ಕಾಯ್ದೆ ವಾಪಸ್‌ ಘೋಷಣೆ ಮಾಡಿದರೂ ಪ್ರತಿಭಟನೆ (Farmers Protest) ಮುಂದುವರಿಸಿರುವ ರೈತರನ್ನು ವಿಶ್ವಾಸಕ್ಕೆ ಪಡೆಯಲು ಯತ್ನಿಸಿದೆ. 

ಬಹುಬೆಳೆ ಪದ್ಧತಿಗೆ ಪ್ರೋತ್ಸಾಹ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ಹಾಗೂ ಕನಿಷ್ಠ ಬೆಂಬಲ ಬೆಲೆಯಲ್ಲಿ ಪಾರದರ್ಶಕತೆ ಸೇರಿದಂತೆ ರೈತರ ಕಲ್ಯಾಣ ವಿಷಯಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಹೊಸ ಸಮಿತಿ ರಚಿಸಲು ನಿರ್ಧರಿಸಿದೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳೂ ಇರಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ (narendra Singh Tomar) ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ರೈತನಿಗೆ ಲಭ್ಯ ಇರುವ ಜಮೀನಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಒಂದೇ ಬೆಳೆ ಬೆಳೆಯದೇ ವಿವಿಧ ಬೆಳೆಗಳನ್ನು ಬೆಳೆಯುವುದು ಬಹುಬೆಳೆ ಪದ್ಧತಿ. ಇದರಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆ ಆತನ ಕೈಹಿಡಿಯಲಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ. ಇನ್ನು ರೈತರು ರಸಗೊಬ್ಬರಗಳನ್ನು ಬಳಸದೇ, ತಮ್ಮ ಬಳಿ ಲಭ್ಯ ಇರುವ ಸಗಣಿ ಗೊಬ್ಬರ, ಎಲೆ ಗೊಬ್ಬರ ಇತ್ಯಾದಿಗಳನ್ನು ಬಳಸಿ ಕೃಷಿ ಮಾಡುವುದಕ್ಕೆ ‘ಶೂನ್ಯ ಕೃಷಿ’ ಎನ್ನುತ್ತಾರೆ. ಇದಕ್ಕೆ ಉತ್ತೇಜನ ನೀಡುವುದು ಮೋದಿ ಸರ್ಕಾರದ ಉದ್ದೇಶ.

ಕೇಸು ವಾಪಸು ರಾಜ್ಯಗಳ ವಿವೇಚನೆಗೆ:

ಈ ನಡುವೆ, ತಮ್ಮ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂಬ ರೈತರ ಆಗ್ರಹಕ್ಕೆ ಪೂರಕ ಉತ್ತರ ನೀಡಿದ ತೋಮರ್‌ ಅವರು, ‘ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ದಾಖಲಾಗಿರುವ ಪ್ರಕರಣ ವಾಪಸಾತಿ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬೇಕು’ ಎಂದರು.

ಮನೆಗೆ ಮರಳಿ:

ಹೊಸ ಸಮಿತಿ ರಚನೆ ಘೋಷಣೆಯೊಂದಿಗೆ, ಕನಿಷ್ಠ ಬೆಂಬಲ ಬೆಲೆ ಕುರಿತ ರೈತರ ಬೇಡಿಕೆ ಈಡೇರಿದೆ. ಬೆಳೆಯ ಕೂಳೆ (ಬೆಳೆತ್ಯಾಜ್ಯ) ಸುಡುವುದನ್ನು ಅಪರಾಧಮುಕ್ತಗೊಳಿಸಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ಅದನ್ನೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಪ್ರತಿಭಟನೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ತಮ್ಮ ಮನೆಗಳಿಗೆ ಮರಳಬೇಕು ಎಂದು ಮನವಿ ಮಾಡಿಕೊಂಡರು.

ರೈತರು ಏನಂತಾರೆ?:

ಕೇಂದ್ರ ಸರ್ಕಾರದ ಹೊಸ ಸಮಿತಿ ನಿರ್ಧಾರ ಕುರಿತು ಪ್ರತಿಕ್ರಿಯಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕ ಬಲಬೀರ್‌ ಸಿಂಗ್‌ ರಾಜೇವಾಲ್‌, ನೂತನ ಸಮಿತಿಯ ವಿವರಗಳ ಬಗ್ಗೆ ನಾವು ಇನ್ನೂ ಓದಿಲ್ಲ. ಆ ಕುರಿತ ವಿವರಗಳು ಲಭಿಸಿದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ.

ರೈತರ ನಾಳಿನ ಟ್ರ್ಯಾಕ್ಟರ್‌ ಪರೇಡ್‌ ಮುಂದೂಡಿಕೆ

ಕೃಷಿ ಕಾಯ್ದೆ ವಿರೋಧಿ ರೈತ ಹೋರಾಟದ ಭಾಗವಾಗಿ ನ.29ರಂದು ಸಂಸತ್ತಿನವರೆಗೆ ಟ್ರ್ಯಾಕ್ಟರ್‌ ಪರೇಡ್‌ ನಡೆಸುವ ತೀರ್ಮಾನವನ್ನು ಸದ್ಯ ಅಮಾನತಿನಲ್ಲಿಡಲಾಗಿದೆ ಎಂದು ರೈತ ನಾಯಕರು ಶನಿವಾರ ತಿಳಿಸಿದ್ದಾರೆ. ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ಕೃಷಿ ಕಾಯ್ದೆ ವಿರೋಧಿ ಚಳವಳಿಯ ಮುಂದಿನ ರೂಪುರೇಷೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಾಗಿದೆ. ಇದೇ ವೇಳೆ ಭವಿಷ್ಯ ಹೋರಾಟದ ಬಗ್ಗೆ ಚರ್ಚಿಸಲು ಮತ್ತೊಮ್ಮೆ ಡಿ.4ರಂದು ಸಭೆ ಕರೆಯಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕ ದರ್ಶನ್‌ ಪಾಲ್‌, ‘ಸರ್ಕಾರ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕಾಯ್ದೆ ರದ್ದು ಮಾಡುವ ಆಶ್ವಾಸನೆ ನೀಡಿದ್ದರಿಂದ ಸೋಮವಾರ ನಡೆಯಬೇಕಿದ್ದ ಟ್ರ್ಯಾಕ್ಟರ್‌ ಪರೇಡ್‌ ಅನ್ನು ಅಮಾನತಿನಲ್ಲಿಡಲು ನಿರ್ದರಿಸಿದ್ದೇವೆ. ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ವಾಪಸ್‌ ಪಡೆಯುವ ಜೊತೆಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಇತರ 6 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅನಂತರವೂ ಪ್ರತಿಕ್ರಿಯೆ ಬಾರದಿದ್ದಲ್ಲಿ ಭವಿಷ್ಯದ ಹೋರಾಟದ ಬಗ್ಗೆ ನಿರ್ಣಯಿಸಲು ಡಿ.4ರಂದು ಮತ್ತೊಂದು ಸಭೆ ಕರೆದಿದ್ದೇವೆ’ ಎಂದು ತಿಳಿಸಿದರು.

click me!