ಚೀನಾ ಯೋಧರ ವಿರುದ್ಧ ಹೋರಾಡಲು ಐಟಿಬಿಪಿ ಯೋಧರಿಗೆ ವಿಶಿಷ್ಟ ಟ್ರೇನಿಂಗ್ ನೀಡಲಾಗುತ್ತಿದೆ. ಚೀನಾ-ಭಾರತ ಗಡಿಯಲ್ಲಿ ಯೋಧರಿಗೆ ಶಸ್ತ್ರಾಸ್ತ್ರ ಬಳಕೆ ನಿರ್ಬಂಧ ಹಿನ್ನೆಲೆ ಐಟಿಬಿಪಿ ಯೋಧರಿಗೆ ಮುಷ್ಟಿಯುದ್ಧ, ಒದೆತದ ತರಬೇತಿ ನೀಡಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ಪಂಚಕುಲ:‘ಭಾರತ-ಚೀನಾ ಗಡಿಯಲ್ಲಿ (Indo - China Border) ಯೋಧರು ಇದ್ದರೂ ಅವರು ನಿಶ್ಶಸ್ತ್ರರಾಗಿರಬೇಕು’ ಎಂಬ ಒಪ್ಪಂದವಿದೆ. ಹೀಗಾಗಿಯೇ ಇತ್ತೀಚೆಗೆ ಗಡಿಯ ಗಲ್ವಾನ್‌ನಲ್ಲಿ (Galwan) ಉಭಯ ದೇಶಗಳ ಯೋಧರ ಸಂಘರ್ಷ ನಡೆದಿದ್ದರೂ ಅದರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬಳಕೆ ಆಗಿರಲಿಲ್ಲ. ಈಗ ಚೀನಾ ಗಡಿಯಲ್ಲಿ ನಿಯೋಜಿತವಾಗಿರುವ ಇಂಡೋ-ಟಿಬೆಟ್ ಗಡಿ ಪಡೆ (Indo Tibet Boder Force) (ಐಟಿಬಿಬಿ) (ITBP), ಇದಕ್ಕೆ ಅನುಗುಣವಾಗಿ ತನ್ನ ಯೋಧರಿಗೆ (Soldiers) ವಿಶಿಷ್ಟ ಯುದ್ಧ ತರಬೇತಿ (Training) ನೀಡಲು ಆರಂಭಿಸಿದೆ.
ಒದೆತ, ಮುಷ್ಟಿಯಿಂದ ಗುದ್ದುವಿಕೆ, ಬಿಗಿ ಹಿಡಿತ.. ಮುಂತಾದ ಪಟ್ಟುಗಳನ್ನು ಒಳಗೊಂಡ ಜುಡೋ, ಕರಾಟೆ, ಕ್ರಾವ್ ಮಾಗಾ ಸೇರಿದಂತೆ ವಿವಿಧ 15-20 ಕಾಳಗದ ಕಲೆಗಳನ್ನು ಐಟಿಬಿಪಿ ಯೋಧರಿಗೆ ನೀಡಲಾಗುತ್ತಿದೆ. 3 ತಿಂಗಳ ಮಟ್ಟಿಗೆ ಈಗ ತರಬೇತಿ ಆರಂಭವಾಗಿದೆ. ಈಗಾಗಲೇ ಗಡಿಯಲ್ಲಿ ಪಳಗಿರುವ ಐಟಿಬಿಪಿ ಯೋಧರು, ಹೊಸ ಯೋಧರಿಗೆ ಈ ತರಬೇತಿಗಳನ್ನು ನೀಡುತ್ತಿದ್ದಾರೆ. ಒಂದು ವೇಳೆ ಗಲ್ವಾನ್‌ನಲ್ಲಿ ಚೀನಾ ಯೋಧರ (China Soldiers) ಜತೆ ನಡೆದ ಸಂಘರ್ಷದ ವಾತಾವರಣ ಮತ್ತೆ ಸೃಷ್ಟಿಯಾದರೆ ಈ ಶಸ್ತ್ರರಹಿತ ಯುದ್ಧಕೌಶಲ್ಯಗಳು ನೆರವಾಗಲಿವೆ ಎಂದು ಐಟಿಬಿಪಿ ಇನ್ಸ್‌ಪೆಕ್ಟರ್ ಈಶ್ವರ್ ಸಿಂಗ್ ದುಹಾನ್ ಹೇಳಿದ್ದಾರೆ.
ಇದನ್ನು ಓದಿ: ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ರಾತ್ರಿ ಕಳೆದ Modi: ಸರಳತೆ ಮೆರೆದ ಪ್ರಧಾನಿ
‘ಈ ಕಾಳಗದ ಕಲೆಗಳಲ್ಲಿ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ- ಎರಡೂ ಅಂಶಗಳಿವೆ. ಕಳೆದ ವರ್ಷ ಇವನ್ನು ಪಡೆಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈ ಯುದ್ಧ ಕಲೆಗಳಿಂದ ಎದುರಾಳಿ ನಿಸ್ತೇಜನಾಗುತ್ತಾನೆ ಹಾಗೂ ಬಲ ಕಳೆದುಕೊಳ್ಳುತ್ತಾನೆ’ ಎಂದು ದುಹಾನ್ ನುಡಿದರು. ತರಬೇತಿ ನೀಡುತ್ತಿರುವ ಅಧಿಕಾರಿಯೊಬ್ಬರು ಕೂಡ ಈ ಬಗ್ಗೆ ಮಾತನಾಡಿ, ‘ಈ ನಿಶ್ಶಸ್ತ್ರ ಸಮರ ಕಲೆಗಳಲ್ಲಿ ಡೆಡ್ಲಿ ಪಂಚ್‌ಗಳು ಇರುತ್ತವೆ’ ಎಂದರು.
ಹಾಗಂತ ಈ ಯುದ್ಧಕಲೆಗಳು ಮೊದಲು ಐಟಿಬಿಪಿಯಲ್ಲಿ ಇರಲೇ ಇಲ್ಲ ಎಂದೇನಲ್ಲ. ಆದರೆ ಗಡಿಯಲ್ಲಿ ಈಗ ತ್ವೇಷಮಯ ಸ್ಥಿತಿ ಹೆಚ್ಚುತ್ತಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಕರಾಟೆ (Karate), ಜುಡೋದಂಥ (Judo) ತರಬೇತಿಗಳನ್ನು ನಡೆಸುತ್ತಿದ್ದೇವೆ ಎಂದು ದುಹಾನ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಪಿಒಕೆ, ಅಕ್ಸಾಯ್‌ಚಿನ್ ಭಾರತದ್ದೆಂದು ಚಿತ್ರಿಸಿದ ರಷ್ಯಾ, ಭೂಪಟ ಬಿಡುಗಡೆ
ಇದೇ ವೇಳೆ, ‘ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವ ದುರ್ಗಮ ಪ್ರದೇಶಗಳಲ್ಲಿ ಇನ್ನು ಪಡೆಯ ಒಂದೇ ತುಕಡಿಯನ್ನು 90 ದಿನಕ್ಕಿಂತ ಹೆಚ್ಚು ಕಾಲ ಇಡುವುದಿಲ್ಲ. 90 ದಿನಕ್ಕೆ ಆ ಪಡೆಯನ್ನು ವಾಪಸ್ ಕರೆಸಿ, ಬೇರೆ ತಂಡ ನಿಯೋಜಿಸಲಾಗುತ್ತದೆ. ಸುದೀರ್ಘಾವಧಿಗೆ ಪಡೆಗಳನ್ನು ಇರಿಸಿದರೆ ಯೋಧರ ದೇಹದ ಮೇಲೆ ಪರಿಣಾಮಗಳು ಆಗುತ್ತವೆ’ ಎಂದು ಅವರು ಹೇಳಿದರು.
2020ರ ಗಲ್ವಾನ್ ಸಂಘರ್ಷದ ವೇಳೆ ಚೀನಾ ಹಾಗೂ ಭಾರತದ ಯೋಧರ ನಡುವೆ ಸಂಘರ್ಷ ನಡೆದಾಗ ಚೀನಾ ಯೋಧರು ಗನ್ ಬಳಸಿರಲಿಲ್ಲ. ಇದರ ಬದಲು ಕಬ್ಬಿಣದ ಸರಳು, ಬಡಿಗೆಗಳನ್ನು ಬಳಸಿದ್ದರು. ಇದರಲ್ಲಿ ಭಾರತದ 20 ಯೋರು ಸಾವನ್ನಪ್ಪಿದ್ದರು. ಚೀನಾದ 45 ಯೋಧರು ಸಾವನ್ನಪ್ಪಿದ್ದಾಗಿ ರಷ್ಯಾ ಮಾಧ್ಯಮ ಹಾಗೂ 35 ಮಂದಿ ಸಾವನ್ನಪ್ಪಿದ್ದಾಗಿ ಅಮೆರಿಕ ಗುಪ್ತಚರರು ವರದಿ ಮಾಡಿದ್ದರು. ಆದರೆ ಚೀನಾ ಅಧಿಕೃತವಾಗಿ ಏನೂ ಹೇಳಿರಲಿಲ್ಲ.
ಇದನ್ನೂ ಓದಿ: India China Relations: ಪೂರ್ವ ಲಡಾಖ್‌ನಿಂದ ಪೂರ್ಣ ಸೇನಾ ವಾಪಸಿಗೆ ಕೊನೆಗೂ ಚೀನಾ ಒಪ್ಪಿಗೆ