ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು

Published : Oct 31, 2022, 08:25 AM IST
ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು

ಸಾರಾಂಶ

ಗುಜರಾತ್‌ನ ವಡೋದರಾದಲ್ಲಿ ಏರ್‌ಬಸ್‌ ಸಿ295 ಘಟಕ ನಿರ್ಮಾಣವಾಗಿದೆ. ಇದು ದೇಶದ ಪ್ರಥಮ ಖಾಸಗಿ ಸೇನಾ ವಿಮಾನ ಕಾರ್ಖಾನೆಯಾಗಿದ್ದು, ಭಾರತವೀಗ ದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಶಂಕು ಸ್ಥಾಪನೆ ನೆರವೇರಿಸಿದೆ ಪ್ರಧಾನಿ ಮೋದಿ ಹೇಳಿದ್ದಾರೆ. 

ವಡೋದರಾ: ಜಗತ್ಪ್ರಸಿದ್ಧ ವಿಮಾನ ಉತ್ಪಾದನಾ ಕಂಪನಿ ಏರ್‌ಬಸ್‌ನ (Airbus) ಮಿಲಿಟರಿ ಸರಕು ವಿಮಾನಗಳ ಉತ್ಪಾದನಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಗುಜರಾತ್‌ನ (Gujarat) ವಡೋದರಾದಲ್ಲಿ (Vadodara) ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತ ಇಂದು ಜಗತ್ತಿನ ದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ಸರ್ಕಾರದ ನೀತಿಗಳು ಸ್ಥಿರವಾಗಿದ್ದು, ಅವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿತವಾಗುತ್ತಿವೆ. ಇದು ‘ಮೇಕ್‌ ಇನ್‌ ಇಂಡಿಯಾ’ (Make in India) ಹಾಗೂ ‘ಮೇಕ್‌ ಫಾರ್‌ ವರ್ಲ್ಡ್‌’ (Make for World) ನೀತಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.

ವಡೋದರಾದಲ್ಲಿ ನಿರ್ಮಾಣವಾಗುವ ಏರ್‌ಬಸ್‌ ಘಟಕವು ಯುರೋಪ್‌ನ ಹೊರಗೆ ನಿರ್ಮಾಣವಾಗುತ್ತಿರುವ ಮೊದಲ ಸಿ295 (C-295) ಸರಕು ವಿಮಾನ ಉತ್ಪಾದನಾ ಘಟಕವಾಗಿದೆ. ಟಾಟಾ ಕಂಪನಿಯ ಸಹಭಾಗಿತ್ವದಲ್ಲಿ ಇದು ನಿರ್ಮಾಣವಾಗುತ್ತಿದೆ. ಇಲ್ಲಿ ತಯಾರಾಗುವ ಸರಕು ಯುದ್ಧ ವಿಮಾನಗಳನ್ನು ಮೊದಲಿಗೆ ಭಾರತೀಯ ವಾಯುಪಡೆಗೆ ಪೂರೈಕೆ ಮಾಡಲಾಗುತ್ತದೆ. ಇದು ಭಾರತದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಖಾಸಗಿ ಮಿಲಿಟರಿ ವಿಮಾನ ಕಾರ್ಖಾನೆಯಾಗಿದೆ.

ಇದನ್ನು ಓದಿ; Statue of Unity : ಮಿಯವಾಕಿ ಅರಣ್ಯ, ಮೇಜ್‌ ಗಾರ್ಡನ್‌ ಏಕತಾ ಪ್ರತಿಮೆ ಬಳಿ ಮತ್ತೆರಡು ಆಕರ್ಷಣೆ!

ಭಾರತ ಜಾಗತಿಕ ಉತ್ಪಾದನಾ ಕೇಂದ್ರ:
‘ಭಾರತ ಇಂದು ಹೊಸ ಮನಸ್ಥಿತಿಯೊಂದಿಗೆ ಹಾಗೂ ಹೊಸ ಕಾಯಕ ಸಂಸ್ಕೃತಿಯೊಂದಿಗೆ ರೂಪುಗೊಳ್ಳುತ್ತಿದೆ. ದೇಶವು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಹೊಂದುತ್ತಿರುವುದರಿಂದ ದೊಡ್ಡ ದೊಡ್ಡ ಉದ್ದಿಮೆಗಳು ಭಾರತಕ್ಕೆ ಬರುತ್ತಿವೆ. ಹೀಗಾಗಿ ನಮ್ಮ ದೇಶವೀಗ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ’ ಎಂದು ನರೇಂದ್ರ ಮೋದಿ ಹೇಳಿದರು.

ವಿಮಾನಗಳ ರಫ್ತಿಗೆ ಗುರಿ:
ವಡೋದರಾದಲ್ಲಿ ತಯಾರಾಗುವ ಏರ್‌ಬಸ್‌ ಮಿಲಿಟರಿ ಸರಕು ವಿಮಾನಗಳ ಪೈಕಿ ಮೊದಲ 56 ಸಿ295 ವಿಮಾನಗಳನ್ನು ಭಾರತೀಯ ವಾಯುಪಡೆ ಒಟ್ಟು 21,935 ಕೋಟಿ ರು.ಗೆ ಖರೀದಿಸಲು ಈಗಾಗಲೇ ಒಪ್ಪಂದವಾಗಿದೆ. ನಂತರ ಈ ಘಟಕದಲ್ಲಿ ತಯಾರಾಗುವ ವಿಮಾನಗಳು ವಿದೇಶಗಳಿಗೂ ರಪ್ತಾಗಲಿವೆ. ಭಾರತೀಯ ವಾಯುಪಡೆಗೆ ನೀಡಲಾಗುವ ವಿಮಾನಗಳಲ್ಲಿ ಬಿಎಚ್‌ಇಎಲ್‌ನ ಎಲೆಕ್ಟ್ರಾನಿಕ್‌ ಯುದ್ಧ ಸಲಕರಣೆಗಳನ್ನು ಅಳವಡಿಸಲಾಗುತ್ತದೆ.

ಏರ್‌ಬಸ್‌ ಕಂಪನಿಯವರು ಸ್ಪೇನ್‌ನಲ್ಲಿ ತಯಾರಿಸುವ ಬಿಡಿಭಾಗಗಳ ಪೈಕಿ ಶೇ.96ರಷ್ಟುಭಾಗಗಳು ಇನ್ನು ವಡೋದರಾದಲ್ಲೂ ಉತ್ಪಾದನೆಯಾಗಲಿವೆ. ಮೂಲಗಳ ಪ್ರಕಾರ, ಸಿ295 ವಿಮಾನದ 13,400 ಬಿಡಿ ಭಾಗಗಳು, 4600 ಉಪ ಬಿಡಿ ಭಾಗಗಳು ಮತ್ತು ಎಲ್ಲಾ ಏಳು ಮಹತ್ವದ ಭಾಗಗಳು ಇಲ್ಲಿ ತಯಾರಾಗಲಿವೆ.

ಇದನ್ನೂ ಓದಿ: ಮೇಕ್‌ ಇನ್‌ ಇಂಡಿಯಾ: ರಕ್ಷಣಾ ಕ್ಷೇತ್ರದಲ್ಲಿ ಸ್ವದೇಶಿ ಮಂತ್ರ..!

ಸಿ295 ಏರ್‌ಬಸ್‌ ವಿಶೇಷತೆ ಏನು?
ಸಿ295 ಮಿಲಿಟರಿ ಸರಕು ವಿಮಾನವಾಗಿದ್ದು, 5ರಿಂದ 10 ಟನ್‌ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಗರಿಷ್ಠ 480 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದ ಮಧ್ಯಮ ಗಾತ್ರದ ಈ ವಿಮಾನ, ದೊಡ್ಡ ಸರಕು ವಿಮಾನಗಳು ಇಳಿಯಲು ಸಾಧ್ಯವಿಲ್ಲದ ದುರ್ಗಮ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲಕರವಾಗಿದೆ. ಸೈನಿಕರು ಹಾಗೂ ಸರಕುಗಳನ್ನು ಆಗಸದಿಂದಲೇ ಇಳಿಸಲು ವಿಮಾನದ ಹಿಂಭಾಗದಲ್ಲಿ ತೆರೆದುಕೊಳ್ಳುವ ರಾರ‍ಯಂಪ್‌ ಇರುತ್ತದೆ. ಅರೆಬರೆ ಸಿದ್ಧಗೊಂಡಿರುವ ಏರ್‌ಸ್ಟ್ರಿಪ್‌ ಅಥವಾ ಸಮತಟ್ಟು ಜಾಗಗಳಿಂದಲೂ ಬಹಳ ಕಡಿಮೆ ಅಂತರದಲ್ಲಿ ಈ ವಿಮಾನ ಟೇಕಾಫ್‌ ಆಗುತ್ತದೆ. ಪರಿಹಾರ ಕಾರ್ಯಾಚರಣೆಗಳಿಗೆ ಇದು ಹೇಳಿಮಾಡಿಸಿದಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..