
ಚೆನ್ನೈ[ಫೆ.07]: ಪ್ರಸಿದ್ಧ ನಟ ವಿಜಯ್ ಸೇರಿದಂತೆ ತಮಿಳು ಚಿತ್ರರಂಗದ ಕೆಲವು ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಮತ್ತು ಗುರುವಾರ ನಡೆಸಿದ ದಾಳಿ ವೇಳೆ ಭರ್ಜರಿ 77 ಕೋಟಿ ರು. ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ದಾಳಿ ವೇಳೆ 300 ಕೋಟಿ ರು.ಗೂ ಅಧಿಕ ತೆರಿಗೆ ವಂಚನೆಯೂ ಬೆಳಕಿಗೆ ಬಂದಿದೆ.
'ಮಾಲ್ಗುಡಿ ಡೇಸ್' ಚಿತ್ರದಲ್ಲಿ ಸ್ಕೂಲ್ ಹುಡುಗನಾದ ವಿಜಯ್ ರಾಘವೇಂದ್ರ!
ನಟ ವಿಜಯ್ ಅವರ ಮನೆ ಸೇರಿದಂತೆ ತಮಿಳುನಾಡಿನ 38 ಕಡೆ ಬುಧವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಗುರುವಾರ ಕೂಡಾ ದಾಳಿ ಮುಂದುವರೆಸಲಾಗಿತ್ತು. ಈ ವೇಳೆ ತಮಿಳು ಸಿನಿಮಾದ ಫೈನಾನ್ಷಿಯರ್ ಒಬ್ಬರಿಂದ ಬರೋಬ್ಬರಿ 77 ಕೋಟಿ ರು. ದಾಖಲೆರಹಿತ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಯಾರದ್ದೇ ಹೆಸರನ್ನು ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಬಿಡುಗಡೆಯಾಗಿದ್ದ ವಿಜಯ್ ನಟನೆಯ ‘ಬಿಗಿಲ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಕ್ಕೆ ಸಂಬಂಧಿಸಿದಂತೆ ಭಾರಿ ತೆರಿಗೆ ಸೋರಿಕೆಯಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು 38 ತಾಣಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ದಾಳಿ ವೇಳೆ ಚೆನ್ನೈ ಮತ್ತು ಮದುರೈನ ರಹಸ್ಯ ಸ್ಥಳಗಳಲ್ಲಿ ಇಡಲಾಗಿದ್ದ 77 ಕೋಟಿ ರು. ನಗದು, ಭಾರೀ ಪ್ರಮಾಣದ ಆಸ್ತಿ ದಾಖಲೆಗಳು, ಪ್ರಾಮಿಸರಿ ನೋಟ್, ಪೋಸ್ಟ್ ಡೇಟೆಡ್ ಚೆಕ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಪರಿಶೀಲನೆ ವೇಳೆ 300 ಕೋಟಿ ರು.ಗಿಂತಲೂ ಹೆಚ್ಚಿನ ಮೊತ್ತದ ತೆರಿಗೆ ವಂಚನೆ ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.
ಕಳೆದ ವರ್ಷ ಬಿಡುಗಡೆಯಾದ ‘ಬಿಗಿಲ್’ ಸಿನಿಮಾವನ್ನು ಎಜಿಎಸ್ ಸಿನಿಮಾ ನಿರ್ಮಿಸಿತ್ತು. ತಮಿಳು ಚಿತ್ರರಂಗದ ಫೈನಾನ್ಷಿಯರ್ ಅನ್ಬು ಚೆಲಿಯನ್ ಹಾಗೂ ವಿಜಯ್ ನಡುವೆ ದಾಖಲೆ ರಹಿತ ವಹಿವಾಟು ನಡೆದಿರುವುದನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಲಿವುಡ್‌ಗೆ ಐಟಿ ಶಾಕ್, ಮಾತಾಡಲೂ ಬಿಡದೆ ವಿಜಯ್ ಕರೆದೊಯ್ದ ಅಧಿಕಾರಿಗಳು
ನಟ ವಿಜಯ್ ಅವರು ಸ್ಥಿರಾಸ್ತಿಗಳಲ್ಲಿ ಮಾಡಿರುವ ಹೂಡಿಕೆ, ಎಜಿಎಸ್ ಸಿನೆಮಾ ಕಂಪನಿಯಿಂದ ‘ಬಿಗಿಲ್’ ಸಿನೆಮಾಗೆ ಅವರು ಪಡೆದ ಸಂಭಾವನೆ, ತನಿಖೆಯ ಮುಖ್ಯ ಭಾಗವಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ವಿಜಯ್ ಬಿಗಿಲ್ ಸಿನೆಮಾಕ್ಕೆ 35-40 ಕೋಟಿ ರು. ಸಂಭಾವನೆ ಪಡೆದಿದ್ದರು ಎಂದು ವರದಿಗಳು ಹೇಳಿದ್ದವಾದರೂ, ಅದು ಎಲ್ಲೂ ಖಚಿತಗೊಂಡಿರಲಿಲ್ಲ. ಜೊತೆಗೆ ತಮ್ಮ ಮುಂಬರುವ ಚಿತ್ರಕ್ಕೆ ವಿಜಯ್ 100 ಕೋಟಿ ರು. ಪಡೆಯುತ್ತಿದ್ದಾರೆ ಎಂಬ ಸುದ್ದಿಗಳೂ ಇತ್ತೀಚೆಗೆ ಹರಡಿದ್ದವು.
ಏನೇನು ಪತ್ತೆ?
77 ಕೋಟಿ ರು.ನಗದು, ಆಸ್ತಿ ದಾಖಲೆ, ಪ್ರಾಮಿಸರಿ ನೋಟ್, ಪೋಸ್ಟ್ ಡೇಟೆಡ್ ಚೆಕ್
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ