Covid19 Vaccine: ಒಮಿಕ್ರೋನ್‌ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

By Kannadaprabha NewsFirst Published Dec 4, 2021, 7:36 AM IST
Highlights

*ಹೊಸ ರೂಪಾಂತರಿಯಿಂದ ಪ್ರತಿಕಾಯ ಶಕ್ತಿ ಕುಂದಬಹುದು
*ಆದರೆ ಲಸಿಕೆ ಪರಿಣಾಮಕಾರಿಯಲ್ಲ ಎಂಬುದಕ್ಕೆ ಸಾಕ್ಷ್ಯವಿಲ್ಲ
*40 ವರ್ಷ ಮೇಲ್ಪಟ್ಟವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ
*ಇಂಥವರಿಂದ ಸೋಂಕು ವ್ಯಾಪಕವಾಗಿ ಹಬ್ಬುವ ಭೀತಿಯಿದೆ

ನವದೆಹಲಿ(ಡಿ. 04): ಕೊರೋನಾದ ಹೊಸ ತಳಿಯಾದ ‘ಒಮಿಕ್ರೋನ್‌’ (Covid 19 New Variant Omicron) ಮೇಲೆ ಕೋವಿಡ್‌ ಲಸಿಕೆಗಳು (Corona Vaccine) ಪರಿಣಾಮ ಬೀರದು ಎಂಬ ವಾದಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ  ಶುಕ್ರವಾರ ಸ್ಪಷ್ಟಪಡಿಸಿದೆ. ‘ಒಮಿಕ್ರೋನ್‌’ ತಳಿ ಹಾವಳಿ ಆಫ್ರಿಕಾದಲ್ಲಿ ಆರಂಭವಾದ ನಂತರ ಬೆಂಗಳೂರು ಮೂಲಕ ಭಾರತವನ್ನೂ ಪ್ರವೇಶಿಸಿದೆ. ಈ ಬಗ್ಗೆ ಎದ್ದಿರುವ ನಾನಾ ಶಂಕೆಗಳು, ಊಹೆಗಳ ಬಗ್ಗೆ ಆರೋಗ್ಯ ಸಚಿವಾಲಯವು ಕೆಲವು ಸ್ಪಷ್ಟೀಕರಣ ನೀಡಿದೆ.

ಲಸಿಕೆ ಪಡೆಯಿರಿ:

‘ಲಸಿಕೆಗಳು ಒಮಿಕ್ರೋನ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಕೊರೋನಾದ ಹೊಸ ತಳಿಗಳು, ಲಸಿಕೆಯಿಂದ ಉತ್ಪಾದನೆಯಾದ ಪ್ರತಿಕಾಯ ಶಕ್ತಿಗಳನ್ನು (Antibodies) ಕೆಲ ಮಟ್ಟಿಗೆ ಕುಂದಿಸಹುದು. ಆದರೂ ಲಸಿಕೆ ಪಡೆಯುವುದರಿಂದ ಪ್ರತಿಕಾಯ ಶಕ್ತಿ (Immunity Power) ಹುಟ್ಟುತ್ತದೆ. ತೀವ್ರತರದ ಸೋಂಕಿನಿಂದ ಲಸಿಕೆಗಳು ರಕ್ಷಣೆ ನೀಡುತ್ತವೆ. ಹೀಗಾಗಿ ಅರ್ಹರೆಲ್ಲರೂ ಬೇಗ ಲಸಿಕೆ ಪಡೆಯಬೇಕು’ ಎಂದು ಸಚಿವಾಲಯ ಹೇಳಿದೆ.

Omicron Virus: ಓಮಿಕ್ರಾನ್ ಎಚ್ಚರಿಕೆ ಅಗತ್ಯ, ಜನರ ಆತಂಕದ ಪ್ರಶ್ನೆಗೆ ಕೇಂದ್ರ ಆರೋಗ್ಯ ಇಲಾಖೆ ಉತ್ತರ

3ನೇ ಅಲೆ ತೀವ್ರವಾಗಿರದು:

‘ಇನ್ನು ದಕ್ಷಿಣ ಆಫ್ರಿಕಾ ಹಾಗೂ ಇನ್ನುಇತರ ಕೆಲವು ದೇಶಗಳಲ್ಲಿ ಒಮಿಕ್ರೋನ್‌ ಪ್ರಕರಣ ಹೆಚ್ಚಾಗಿರುವುದರಿಂದ ಭಾರತದಲ್ಲಿ 3ನೇ ಅಲೆ (Corona 3rd Wave) ಏಳಬಹುದೇ’ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, ‘ಭಾರತದಲ್ಲಿ ಲಸಿಕಾಕರಣ ತೀವ್ರಗತಿಯಲ್ಲಿ ನಡೆದಿದೆ ಹಾಗೂ ಡೆಲ್ಟಾರೂಪಾಂತರಿ ತಳಿ (Delta Varinat) ಸಾಕಷ್ಟುಜನರ ಮೇಲೆ ಪರಿಣಾಮ ಬೀರಿದ್ದರಿಂದ ಪ್ರತಿಕಾಯ ಶಕ್ತಿಗಳು ಜನರಲ್ಲಿ ಉತ್ಪಾದನೆ ಆಗಿವೆ ಎಂದು ಸಿರೋ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ 3ನೇ ಅಲೆ ಅಷ್ಟುಪರಿಣಾಮ ಬೀರದು’ ಎಂದು ಸಚಿವಾಲಯ ಹೇಳಿದೆ. ಆದರೂ ಈ ಬಗ್ಗೆ ಇನ್ನಷ್ಟುವೈಜ್ಞಾನಿಕ ಅಧ್ಯಯನ ನಡೆದಿದೆ’ ಎಂದು ಸ್ಪಷ್ಟಪಡಿಸಿದೆ.

ಆರ್‌ಟಿಪಿಸಿಆರ್‌ನಿಂದ ಪತ್ತೆ:

‘ವ್ಯಕ್ತಿಗೆ ಅಂಟಿರುವ ಕೋವಿಡ್‌ ಸೋಂಕು ‘ಒಮಿಕ್ರೋನ್‌’ ತಳಿಯಿಂದಲೇ ಬಂದಿದ್ದಾ?’ ಎಂಬುದನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಮಾಡಲು ಈಗಿರುವ ಆರ್‌ಟಿಪಿಸಿಆರ್‌ ಪರೀಕ್ಷೆ (RTPCR Test) ಸಮರ್ಥವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ. ಆದರೆ ಅಂತಿಮ ಹಂತದಲ್ಲಿ ಖಚಿತಪಡಿಸಿಕೊಳ್ಳಲು ‘ಜಿನೋಮ್‌ ಸೀಕ್ವೆನ್ಸಿಂಗ್‌’ ಬೇಕು ಎಂದು ಹೇಳಿದೆ.

ಮುಂಜಾಗ್ರತೆ ಅಗತ್ಯ:

‘ಒಮಿಕ್ರೋನ್‌ ಹರಡುವಿಕೆ ಇತರ ತಳಿಗಳಿಗಿಂತ ವೇಗವಾಗಿದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯ, ‘ಈಗಾಗಲೇ ಕಂಡುಬಂದಿದ್ದ ರೂಪಾಂತರಿಗಳ ಪರಿಣಾಮ ಆಧರಿಸಿ ಒಮಿಕ್ರಾನ್‌ ಅನ್ನು ‘ಕಳವಳಕಾರಿ ರೂಪಾಂತರಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಈ ಹಿಂದಿನ ಕೋವಿಡ್‌ ಮಾರ್ಗಸೂಚಿಗಳನ್ನೇ ಮತ್ತೆ ಪಾಲಿಸಬೇಕು. ಎರಡೂ ಡೋಸ್‌ ಲಸಿಕೆ ಪಡೆಯಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್‌ ಧರಿಸಬೇಕು’ ಎಂದು ಸಲಹೆ ನೀಡಿದೆ.

40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌!

ಭಾರತದಲ್ಲಿ ಇಬ್ಬರಿಗೆ ರೂಪಾಂತರಿ ಒಮಿಕ್ರೋನ್‌ (Covid 19 Variant Omicron) ದೃಢಪಟ್ಟಿರುವ ಬೆನ್ನಲ್ಲೇ, ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ (Booster Dose) ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಜಿನೋಮ್‌ ಸಿಕ್ವೆನ್ಸಿಂಗ್‌ ಕನ್ಸೋರ್ಟಿಯಂನ (SARS-CoV-2 Genetics Consortium) ವಿಜ್ಞಾನಿಗಳ ತಂಡ ಸಲಹೆ ನೀಡಿದೆ. 

Name and Shame: ಲಸಿಕೆ ಪಡೆಯದ ಶಿಕ್ಷಕರ ಮಾನ ಹರಾಜು, ಶೇಮ್ ಶೇಮ್ ಎನ್ನುತ್ತೆ ಸರ್ಕಾರ

ಇದುವರೆಗೂ ಲಸಿಕೆ ಪಡೆಯದೆ ಇರುವವರೆಲ್ಲರಿಗೂ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುವ 40 ವರ್ಷ ಮೇಲ್ಪಟ್ಟವರಲ್ಲಿ ಈ ವೈರಸ್‌ ಹೆಚ್ಚು ಹರಡುವ ಮತ್ತು ವೈರಸ್‌ ಬಾಧಿಸುವ ಸಾಧ್ಯತೆಯಿದೆ. ಜತೆಗೆ ಸೋಂಕಿತ ವ್ಯಕ್ತಿಯ ಜಿನೋಮ್‌ ಪರೀಕ್ಷೆಯಿಂದ ಯಾವ ವೈರಸ್‌ ಇದೆ ಎಂಬುದನ್ನು ಪತ್ತೆ ಹಚ್ಚಲು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಬೂಸ್ಟರ್‌ ಡೋಸ್‌ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದೆ.

click me!