ಕಾಂಗ್ರೆಸ್ ಪಕ್ಷ ಬಾಕಿ ಉಳಿಸಿಕೊಂಡಿರುವ ಎಲ್ಲಾ ವರ್ಷಗಳ ತೆರಿಗೆಯನ್ನು ವಸೂಲಿ ಮಾಡಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ಈಗ 2014-15ರಿಂದ 2016-17ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ನೋಟಿಸ್‌ಅನ್ನು ಜಾರಿ ಮಾಡಿದೆ. ಇದರಿಂದಿಗೆ ಕಾಂಗ್ರೆಸ್ ಪಕ್ಷದ ಟ್ಯಾಕ್ಸ್ ಡಿಮಾಂಡ್ ಮೊತ್ತ 3567 ಕೋಟಿಗೆ ಏರಿದೆ.
ನವದೆಹಲಿ (ಮಾ.31): ದಿನದಿಂದ ದಿನಕ್ಕೆ ಕಾಂಗ್ರೆಸ್ ಪಕ್ಷದ ಆದಾಯ ತೆರಿಗೆ ಇಲಾಖೆಯ ನೋಟಿಸ್ ಬೆಟ್ಟದಷ್ಟು ಬೆಳೆಯುತ್ತಿದೆ. ಶನಿವಾರ ಆದಾಯ ತೆರಿಗೆ ಇಲಾಖೆ ಕೆಲ ದಿನಗಳ ಹಿಂದೆ 1994-95 ಹಾಗೂ 2017-18 ರಿಂದ 2020-21ರ ಅಸೆಸ್‌ಮೆಂಟ್ ವರ್ಷದ ನೋಟಿಸ್ ಕಳಿಸಿದ್ದ ಆದಾಯ ತೆರಿಗೆ ಇಲಾಖೆ 1823 ಕೋಟಿ ರೂಪಾಯಿ ಕಟ್ಟುವಂತೆ ತಿಳಿಸಿತ್ತು. ಈಗ ಕಾಂಗ್ರೆಸ್ ಪಕ್ಷದ ಇನ್ನಷ್ಟು ಮೌಲ್ಯಮಾಪನ ಮಾಡಲಾಗಿದ್ದು, 2014-15 ರಿಂದ 2016-17ರವರೆಗಿನ ಅಸೆಸ್‌ಮೆಂಟ್ ವರ್ಷದ ನೋಟಿಸ್‌ಅನ್ನೂ ಕಳಿಸಲಾಗಿದೆ. ಇದರಲ್ಲಿ ಒಟ್ಟು 1745 ಕೋಟಿ ರೂಪಾಯಿ ತೆರಿಗೆ ಡಿಮಾಂಡ್ ಮಾಡಲಾಗಿದೆ. ಇದರೊಂದಿಗೆ ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಕಳಿಸಿರುವ ಟ್ಯಾಕ್ಸ್ ಡಿಮಾಂಡ್ ನೋಟಿಸ್ 3567 ಕೋಟಿ ರೂಪಾಯಿಗೆ ಏರಿದೆ.
1994-95 ಮತ್ತು 2017-18 ರಿಂದ 2020-21 ರವರೆಗಿನ ಮೌಲ್ಯಮಾಪನ ವರ್ಷಗಳ ನೋಟಿಸ್‌ನೊಂದಿಗೆ ಈಗ ಹೊಸ ನೋಟಿಸ್ ಕೂಡ ಐ-ಟಿ ಇಲಾಖೆ ಕಳಿಸಿರುವ ಕಾರಣ, ಒಟ್ಟು ಟ್ಯಾಕ್ಸ್ ಡಿಮಾಂಡ್ 3,567 ಕೋಟಿ ರೂಪಾಯಿಗೆ ಏರಿದೆ. 2014-15 ರಿಂದ 2016-17 ರ ಮೌಲ್ಯಮಾಪನ ವರ್ಷಗಳ ಹೊಸ ನೋಟೀಸ್‌ಗಳನ್ನು ಶುಕ್ರವಾರ ಸಂಜೆ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ನಂತರ ಸ್ವೀಕಾರ ಮಾಡಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ "ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು" ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪಕ್ಷ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, 5 ವರ್ಷಗಳ ಕಾಲದ ಟ್ಯಾಕ್ಸ್ ನೋಟಿಸ್‌ಅನ್ನು ಪಕ್ಷ ಸ್ವೀಕರಿಸಿದೆ ಎಂದು ತಿಳಿಸಿದೆ. ಒಟ್ಟಾರೆ, ಟಾಕ್ಸ್ ಡಿಮಾಂಡ್ ಮೊತ್ತ 1823 ಕೋಟಿ ರೂಪಾಯಿ ಆಗಿದೆ. ಇನ್ನು ದೇಶದ ಅತ್ಯಂತ ಪುರಾತನ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಮೌಲ್ಯವೇ 1430 ಕೋಟಿ ರೂಪಾಯಿ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇಷ್ಟು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ 2017-18 ಹಾಗೂ 2020-21 ವರ್ಷದ ನೋಟಿಸ್‌ನಲ್ಲಿ ಬಡ್ಡಿ ಹಾಗೂ ಪೆನಾಲ್ಟಿ ಕೂಡ ಸೇರಿದೆ. ಐಟಿ ಇಲಾಖೆಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಗಳ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಈ ನೋಟಿಸ್‌ನೀಡಲಾಗಿದೆ. ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ದೆಹಲಿ ಹೈಕೋರ್ಟ್ ಪೀಠವು ಮರು ಮೌಲ್ಯಮಾಪನವನ್ನು ಇನ್ನೊಂದು ವರ್ಷದವರೆಗೆ ತೆರೆಯಲು ಮಧ್ಯಪ್ರವೇಶಿಸಲು ನಿರಾಕರಿಸಿದ ಹಿಂದಿನ ನಿರ್ಧಾರಕ್ಕೆ ಅನುಗುಣವಾಗಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.
ಕೇಂದ್ರ ಸರ್ಕಾರ ತೆರಿಗೆ ಭಯೋತ್ಪಾದನೆ ನಿಲ್ಲಿಸಬೇಕು, 1700 ಕೋಟಿ ತೆರಿಗೆ ನೋಟಿಸ್‌ಗೆ ಕಾಂಗ್ರೆಸ್ ಕಿಡಿ!
ಐಟಿ ಇಲಾಖೆಯ ನೋಟಿಸ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, "ಪ್ರಧಾನಿ ಅವರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಬಯಸುತ್ತಿರುವ ಮನಸ್ಥಿತಿಯನ್ನು ಇದು ತೋರಿಸುತ್ತದೆ" ಎಂದು ಹೇಳಿದರು. 2023-24ರ ಅಸೆಸ್‌ಮೆಂಟ್ ವರ್ಷಕ್ಕೆ ಕಾಂಗ್ರೆಸ್ ಸಲ್ಲಿಸಿರುವ ಆದಾಯ ತೆರಿಗೆ ರಿಟರ್ನ್ಸ್ ಪ್ರಕಾರ, ಕಾಂಗ್ರೆಸ್ ಪಕ್ಷದಲ್ಲಿ ಒಟ್ಟು ಹಣ 657 ಕೋಟಿ ಇದೆ. ನಿವ್ವಳ ಆಸ್ತಿ 340 ಕೋಟಿ ರೂಪಾಯಿ ಇದ್ದರೆ, 388 ಕೋಟಿ ನಗದು ಸಮಾನ ಮೊತ್ತವನ್ನು ಹೊಂದಿದೆ. ಒಟ್ಟಾರೆ ಪಕ್ಷದ ಮೌಲ್ಯ 1430 ಕೋಟಿ ರೂಪಾಯಿ ಆಗಿದೆ.
ದೆಹಲಿ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ಗೆ 1700 ಕೋಟಿ ರೂಪಾಯಿ ಐಟಿ ನೋಟಿಸ್!