ನಾನು ದೇವಸ್ಥಾನಕ್ಕೆ ಹೋಗೋದು ದೇವರನ್ನು ನೋಡೋಕೂ ಅಲ್ಲ; ಪ್ರಾರ್ಥಿಸೋಕೂ ಅಲ್ಲ: ISRO ಮಾಜಿ ಅಧ್ಯಕ್ಷ ಸೋಮನಾಥ್

Published : May 25, 2026, 10:49 AM IST
isro ex chairman somanath

ಸಾರಾಂಶ

ISRO Chairman S Somanath full name: ಇಸ್ರೋದ ಮಾಜಿ ಅಧ್ಯಕ್ಷ ಸೋಮನಾಥ್‌ ಅವರು ದೇವರು ಎಂದರೇನು? ದೇವರು ಹುಟ್ಟಿನ ಬಗ್ಗೆ, ದೇವರನ್ನು ಅವರು ನಂಬುತ್ತಾರಾ? ಇಲ್ಲವಾ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

ಇಸ್ರೋದ ( ISRO ) ಮಾಜಿ ಅಧ್ಯಕ್ಷ ಸೋಮನಾಥ್‌ ಅವರು ದೇವರ ಬಗ್ಗೆ ಸಂದರ್ಶನ ಕೊಟ್ಟಿರೋದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಹಾಗಾದರೆ ಅವರು ಹೇಳಿದ್ದೇನು?

ಸೋಮನಾಥ್‌ ಏನಂದ್ರು?

ನಾನು ದೇವಸ್ಥಾನಗಳಿಗೆ ಹೋಗುವ ವ್ಯಕ್ತಿ. ದೇವಸ್ಥಾನಗಳಿಗೆ ಜನರು ಹಲವಾರು ಕಾರಣಗಳಿಂದ ಹೋಗುತ್ತಾರೆ. ದೇವಸ್ಥಾನ ಎನ್ನುವುದು ಕೇವಲ ಪೂಜೆಯ ಸ್ಥಳವಲ್ಲ; ಅದು ನಮ್ಮ ಪೀಳಿಗೆಯ ಸಂಸ್ಕೃತಿಯ ಉಳಿವು, ನಮ್ಮ ಪರಂಪರೆಯ ಒಂದು ಭಾಗ. ಹೊಸ ದೇವಸ್ಥಾನಗಳಾಗಲಿ ಹಳೆಯ ದೇವಸ್ಥಾನಗಳಾಗಲಿ — ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ.

ಪ್ರಾರ್ಥನೆ ಮಾಡೋಕೆ ಅಲ್ಲ

ನಾನು ದೇವಸ್ಥಾನಕ್ಕೆ ಹೋಗುವುದು ದೇವರನ್ನು ನೋಡಲು ಅಥವಾ ಬೇಡಿಕೊಳ್ಳಲು ಅಲ್ಲ. ಅಲ್ಲಿ ಪ್ರಾರ್ಥನೆ ಮಾಡಿದರೆ ಏನಾದರೂ ಸಿಗುತ್ತದೆ ಎಂಬ ನಂಬಿಕೆ ನನಗಿಲ್ಲ. ನಾನು ದೇವಸ್ಥಾನಕ್ಕೆ ಹೋಗುವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ, ಆ ಅನುಭವವನ್ನು ಅರ್ಥಮಾಡಿಕೊಳ್ಳಲು.

ನಾನು ನನ್ನನ್ನು “ಭಕ್ತ” ಎಂದು ಕರೆಯುವುದಿಲ್ಲ. ನಾನು ಆತ್ಮಶೋಧನೆಯ ಒಂದು ಪ್ರಕ್ರಿಯೆಯಲ್ಲಿ ಇರುವ ವ್ಯಕ್ತಿ. ನಾನು ಹುಡುಕುವವನು — ಪ್ರಶ್ನೆಗಳನ್ನು ಕೇಳುತ್ತಾ, ಅರಿತುಕೊಳ್ಳಲು ಪ್ರಯತ್ನಿಸುತ್ತಿರುವವನು. ಬಹಳ ಓದಿದ್ದೇನೆ, ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೂ ಇನ್ನೂ ಸಂಪೂರ್ಣ ಉತ್ತರಗಳು ಸಿಕ್ಕಿಲ್ಲ. ನನ್ನ ಬಳಿ ಇನ್ನೂ ಅನೇಕ ಪ್ರಶ್ನೆಗಳಿವೆ, ಆದರೆ ಉತ್ತರಗಳಿಲ್ಲ.

ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ!

ದೇವರು ಎಂದರೇನು? ಜೀವನದ ಅರ್ಥ ಏನು? ಇಂತಹ ಪ್ರಶ್ನೆಗಳಿಗೆ ಸುಲಭ ಉತ್ತರಗಳಿಲ್ಲ. ವಿಜ್ಞಾನಕ್ಕೂ ತನ್ನ ಮಿತಿಗಳಿವೆ. ನಾನು ವಿಜ್ಞಾನಿ ಅಲ್ಲ, ಆದರೆ ಸ್ವಲ್ಪ ಮಟ್ಟಿಗೆ ಓದಿದ್ದೇನೆ. ಆ ಓದು ನನಗೆ ಒಂದು ವಿಷಯ ಕಲಿಸಿತು. ನಾವು ತಿಳಿದಿರುವುದಕ್ಕಿಂತ ತಿಳಿಯದಿರುವುದು ತುಂಬಾ ಹೆಚ್ಚು. ಒಂದು ಜೀವನದಲ್ಲಿ ಈ ಎಲ್ಲ ಪ್ರಶ್ನೆಗಳ ಉತ್ತರ ಸಿಗುತ್ತವೆಯೇ ಎಂಬ ಖಾತರಿ ನನಗಿಲ್ಲ. ಆದರೂ ಹುಡುಕಾಟ ನಿಲ್ಲಬಾರದು.

ಯಾಕೆ ದೇವಸ್ಥಾನಕ್ಕೆ ಹೋಗುತ್ತೀರಿ?

“ನೀವು ವಿಜ್ಞಾನವನ್ನು ನಂಬುತ್ತಿದ್ದರೆ ದೇವಸ್ಥಾನಕ್ಕೆ ಯಾಕೆ ಹೋಗುತ್ತೀರಿ?” ಕೆಲವರು ಕೇಳಬಹುದು. ನನ್ನ ಅನಿಸಿಕೆಯಲ್ಲಿ ಜೀವನವನ್ನು ಕೇವಲ ವೈಜ್ಞಾನಿಕ ಚಿಂತನೆಯ ಮೂಲಕವೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವಿಜ್ಞಾನವೂ ಬೇಕು, ಆತ್ಮಶೋಧನೆಯೂ ಬೇಕು. ಓದು, ವಿಚಾರ, ವಿಜ್ಞಾನ — ಇವೆಲ್ಲ ಜ್ಞಾನ ಕೊಡುತ್ತವೆ. ಆದರೆ ಸ್ವತಃ ನಮ್ಮೊಳಗಿನ ಹುಡುಕಾಟವೂ ಅಷ್ಟೇ ಮುಖ್ಯ. ಬಹಳ ಬಾರಿ ಉತ್ತರಗಳು ಪುಸ್ತಕಗಳಲ್ಲಿ ಇಲ್ಲ, ದೇವಸ್ಥಾನಗಳಲ್ಲಿ ಇಲ್ಲ, ಸ್ವಾಮೀಜಿಗಳ ಬಳಿಯೂ ಇಲ್ಲ. ಅವನ್ನು ನಾವು ನಮ್ಮೊಳಗೇ ಹುಡುಕಬೇಕು.

ಪೂಜೆ ಮಾಡುತ್ತಿದ್ದರೆ ತಪ್ಪು ಎಂದು ಹೇಳಲ್ಲ

ಜನರು ಪೂಜೆ ಮಾಡುತ್ತಾರೆ. ದೇವಸ್ಥಾನಕ್ಕೆ ಹೋಗುತ್ತಾರೆ. ರಾಕೆಟ್ ಲಾಂಚ್ ಮಾಡುವ ಮೊದಲು ನಿಂಬೆಕಾಯಿ, ಮೆಣಸಿನಕಾಯಿ ಕಟ್ಟುತ್ತಾರೆ. ಇದನ್ನು ನೋಡಿ ಹಾಸ್ಯ ಮಾಡಬೇಕೇ? ನನ್ನ ಅಭಿಪ್ರಾಯದಲ್ಲಿ ಬೇಡ. ಅದು ಅವರ ಸಂಸ್ಕಾರ, ಅವರ ಮನೋಭಾವ, ಅವರ ಬೆಳೆವಣಿಗೆಯ ಭಾಗ.

ಯಾರಾದರೂ ಪೂಜೆ ಮಾಡುತ್ತಿದ್ದರೆ, “ಇದು ತಪ್ಪು” ಎಂದು ಹೇಳಬೇಕಾದ ಅಗತ್ಯ ನನಗಿಲ್ಲ. ಅದು ಸಮಾಜದ ಸೌಹಾರ್ದತೆಗೆ ಅಥವಾ ಮತ್ತೊಬ್ಬರ ಜೀವನಕ್ಕೆ ಹಾನಿ ಮಾಡದವರೆಗೆ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯ.

ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರಿಗೂ ತಮ್ಮದೇ ನಂಬಿಕೆ, ಅನುಭವ, ಮನಸ್ಥಿತಿ ಇರುತ್ತದೆ. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ವಿಜ್ಞಾನ ಮತ್ತು ನಂಬಿಕೆ ಎರಡನ್ನೂ ಒಂದೇ ರೀತಿಯಲ್ಲಿ ಅಳೆಯಲು ಸಾಧ್ಯವಿಲ್ಲ. ವಿಜ್ಞಾನಕ್ಕೆ ಸಾಕ್ಷಿ ಬೇಕು. ನಂಬಿಕೆಗೆ ಸಾಕ್ಷಿ ಬೇಕೆಂಬುದು ಅವಶ್ಯಕವಲ್ಲ. ನಾನು ಯಾವುದನ್ನೂ ಕಣ್ಣುಮುಚ್ಚಿ ನಂಬುವುದಿಲ್ಲ. ಆದರೆ “ಇಲ್ಲ” ಎಂದು ಕೂಡ ತೀರ್ಮಾನಿಸಲು ಸಾಧ್ಯವಿಲ್ಲ. ನನಗೆ ಸತ್ಯವಾಗಿ ಹೇಳಬೇಕಾದರೆ “ನನಗೆ ತಿಳಿದಿಲ್ಲ.” “ತಿಳಿದಿಲ್ಲ” ಎಂದು ಹೇಳಲು ಬಹಳ ವಿನಯ ಬೇಕು.

ಜ್ಯೋತಿಷ್ಯ, ವಾಸ್ತು, ಹಸ್ತರೇಖೆ — ಇವು ಸತ್ಯವೇ ತಪ್ಪೇ ಎಂಬುದಕ್ಕೂ ನಾನು ಖಚಿತ ಉತ್ತರ ಕೊಡಲಾರೆ. “ತಪ್ಪು” ಎಂದು ಹೇಳುವುದಕ್ಕಿಂತ “ನನಗೆ ಗೊತ್ತಿಲ್ಲ” ಎಂದು ಹೇಳುವುದು ಹೆಚ್ಚು ಪ್ರಾಮಾಣಿಕ.

ಆಯುರ್ವೇದ, ಹೋಮಿಯೋಪತಿ ಇತ್ಯಾದಿಗಳ ಬಗ್ಗೆ ಕೂಡ ಇದೇ ಅನಿಸಿಕೆ. ಅವು ವೈಜ್ಞಾನಿಕವಾಗಿ ಸಂಪೂರ್ಣ ಸಾಬೀತಾಗಿಲ್ಲ ಎಂದು ಕೆಲವರು ಹೇಳಬಹುದು. ಆದರೆ ಅನೇಕ ಜನರಿಗೆ ಅವು ಕಾರ್ಯನಿರ್ವಹಿಸುತ್ತವೆ ಎಂಬ ಅನುಭವವೂ ಇದೆ. ಅದು ವೈಜ್ಞಾನಿಕ ಸಾಕ್ಷಿಯೇ ಅಲ್ಲದಿರಬಹುದು, ಆದರೆ ಅನುಭವವನ್ನು ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ.

ಕೊನೆಯಲ್ಲಿ, ಪ್ರತಿಯೊಬ್ಬರಿಗೂ ತಮ್ಮದೇ ಆಯ್ಕೆ ಮಾಡುವ ಸ್ವಾತಂತ್ರ್ಯ ಇರಬೇಕು. ಯಾರ ಮೇಲೂ ನಂಬಿಕೆ ಅಥವಾ ಅನಂಬಿಕೆಯನ್ನು ಬಲವಂತವಾಗಿ ಹೇರಬಾರದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲಿನಲ್ಲಿ ಹಣಕ್ಕಾಗಿ ತೃತೀಯಲಿಂಗಿಯ ಅಸಭ್ಯ ವರ್ತನೆ: ಜನರೆಲ್ಲಾ ಒಗ್ಗಟ್ಟಾಗಿ 'ಬುದ್ಧಿ ಕಲಿಸುವ' ವಿಡಿಯೋ ವೈರಲ್!
ಪಹಲ್ಗಾಂ ಉಗ್ರರ ಬಳಿ ಅಮೆರಿಕ ನಿರ್ಮಿತ ಕ್ಯಾಮೆರಾ ಬಂದಿದ್ದು ಹೇಗೆ? ದೆಹಲಿ ಸ್ಪೋಟಕ್ಕೆ AI ಬಳಕೆ