
ನವದೆಹಲಿ(ಏ.17): ದೇಶದಲ್ಲಿ ಶಾಂತಿ ನೆಲೆಸಬೇಕು.ಈ ದೇಶದಲ್ಲಿ ಪ್ರಾರ್ಥನೆ ಮಾಡಲು ಯಾರಿಗೂ ನಿರ್ಬಂಧವಿಲ್ಲ. ಆದರೆ ಮುಸ್ಲಿಮರು ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡುವುದಾದರೆ ನಾವು ಕೂಡ ಮಾಡುತ್ತೇವೆ. ಈ ದೇಶದ ಕಾನೂನಿಗಿಂತ ಇಸ್ಲಾಮ್ ದೊಡ್ಡದಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ನಾಯಕ ರಾಜ್ ಠಾಕ್ರೆ ಹೇಳಿದ್ದಾರೆ.
ಮಸೀದಿ ಧ್ವನಿವರ್ಧಕ ತೆಗೆಯದಿದ್ದರೆ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂಬ ಎಂಎನ್ಎಸ್ ನಾಯಕ ರಾಜ್ ಠಾಕ್ರೆ ಹೇಳಿಕೆ ದೇಶದಲ್ಲಿ ಭಾರಿ ಆಂದೋಲನಕ್ಕೆ ಕಾರಣವಾಗಿದೆ. ಮಸೀದಿ ಧ್ವನಿವರ್ಧಕ ತೆಗೆಯುವಂತೆ ಹೋರಾಟಗಳು ನಡೆಯುತ್ತಿದೆ. ಇದರಿಂದ ಅಸಮಾಧಾನ ಗೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆ ರಾಜ್ ಠಾಕ್ರೆಗೆ ಬೆದರಿಕೆ ಹಾಕಿತ್ತು. ಈ ಬೆದರಿಕೆಗೆ ರಾಜ್ ಠಾಕ್ರೆ ಧರ್ಮಕ್ಕಿಂತ ಕಾನೂನು ಮೇಲು ಎಂದು ತಿರುಗೇಟು ನೀಡಿದ್ದಾರೆ.
ಧ್ವನಿವರ್ಧಕ ಮುಟ್ಟಿದರೆ ಯಾರೊಬ್ಬರನ್ನೂ ಬಿಡೋದಿಲ್ಲ, ಬಹಿರಂಗ ಎಚ್ಚರಿಕೆ ನೀಡಿದ ಪಿಎಫ್ಐ!
ಮಹಾರಾಷ್ಟ್ರದಲ್ಲಿ ಗಲಭೆಯಾಗುವುದು ಇಷ್ಟವಿಲ್ಲ. ನಮಗೆ ಗಲಭೆಗಳು ಬೇಕಾಗಿಲ್ಲ. ಮಸೀದಿಗಳಿಗೆ, ಮುಸಲ್ಮಾನರಿಗೆ ಮೇ 3ರ ವರೆಗೆ ಗಡುವು ನೀಡಿದ್ದೇವೆ. ಅದರೊಳಗೆ ಮಸೀದಿಗಳ ಧ್ವನಿವರ್ಧಕ ತೆಗೆಯಿರಿ. ಇಲ್ಲದಿದ್ದರೆ ಅದೇ ಮಸೀದಿ ಮುಂದೆ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದು ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರು ಧರ್ಮದ ಚೌಕಟ್ಟಿನೊಳಗೆ ಈ ಸಮಸ್ಯೆಯನ್ನು ನೋಡುವ ಅಗತ್ಯವಿಲ್ಲ. ಇದು ಸಾಮಾಜಿಕ ಸಮಸ್ಯೆ. ಧ್ವನಿವರ್ಧಕದಿಂದ ಆಗುವ ಸಮಸ್ಯೆಗಳ ಕುರಿತು ಅರಿತಿಕೊಳ್ಳಿ. ಎಲ್ಲಾ ಧರ್ಮದವರು ತಮ್ಮ ಪ್ರಾರ್ಥನೆ ಇಡೀ ಊರಿಗೆ ಕೇಳಿಸಲು ಹೊರಟರೆ ಶಾಂತಿ, ಸಾಮರಸ್ಯ ಎಲ್ಲಿರುತ್ತದೆ ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
ಪಿಎಫ್ಐ ಬೆದರಿಕೆ
ರಾಜ್ ಠಾಕ್ರೆ ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯಲು ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಸ್ಲಿಮ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರ ನಡುವೆ ಪಿಎಫ್ಐ ಸಂಘಟನೆ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಮುಟ್ಟಿದರೆ ಯಾರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಕೆಲವರಿಗೆ ನಮ್ಮ ಅಜಾನ್‌ನಲ್ಲಿ ಸಮಸ್ಯೆಗಳು ಕಾಣುತ್ತಿದೆ. ಆದರೆ ಧ್ವನಿವರ್ಧಕ ಮುಟ್ಟಲು ಬಂದರೆ ಪಿಎಫ್ಐ ಸುಮ್ಮನೆ ಬಿಡುವುದಿಲ್ಲ ಎಂದು ಪಿಎಫ್ಐ ನಾಯಕ ಮತೀನ್ ಶೇಖಾನಿ ಬೆದರಿಕೆ ಹಾಕಿದ್ದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ, ತಡರಾತ್ರಿ ರಾಜ್ ಠಾಕ್ರೆ ಭೇಟಿಗೆ ಆಗಮಿಸಿದ ಗಡ್ಕರಿ!
ಧ್ವನಿವರ್ಧಕ ತೆರವುಗೊಳಿಸಲು ರಾಜ್ ಠಾಕ್ರೆ ಹನುಮಾನ್ ಚಾಲೀಸಾ ಅಭಿಯಾನ
‘ನಾನು ಪ್ರಾರ್ಥನೆ ವಿರೋಧಿಸುವುದಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥಿಸಬಹುದು. ಆದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದನ್ನು ಮೈಕ್‌ನಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಸೀದಿಯಿಂದ ಧ್ವನಿವರ್ಧಕ ತೆಗೆಸಬೇಕು. ಇಲ್ಲದೇ ಹೋದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು, ಮಸೀದಿಗಳ ಮುಂದೆ ಧ್ವನಿವರ್ಧಕಗಳಲ್ಲಿ ಮಸೀದಿ ಧ್ವನಿಗಿಂತ ಡಬ್ಬಲ್ ಜೋರಾಗಿ ಹನುಮಾನ್ ಚಾಲೀಸಾ ಪ್ರಸಾರ ಮಾಡಲಿದ್ದಾರೆ’ ಎಂದು ಎಚ್ಚರಿಸಿದ್ದರು.
ಅಲ್ಲದೇ ಮಹಾರಾಷ್ಟ್ರದಲ್ಲಿರುವ ಮದರಸಾ ಹಾಗೂ ಮಸೀದಿಗಳ ಬಳಿ ರೈಡ್ ಮಾಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ. ಮದರಸಾಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ವಾಸಿಸಿದ್ದಾರೆ. ಸ್ಥಳೀಯ ಶಾಸಕರು ಇವರನ್ನು ಮತ ಬ್ಯಾಂಕ್ ಎಂಬಂತೇ ಬಳಸುತ್ತಿದ್ದಾರೆ. ಆಧಾರ ಕಾರ್ಡ್ ಕೂಡ ಇಲ್ಲದ ಈ ಜನರಿಗೆ ಶಾಸಕರೇ ಆಧಾರ ಕಾರ್ಡ್ ಮಾಡಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಠಾಕ್ರೆ ಗಂಭೀರ ಆರೋಪ ಮಾಡಿದ್ದರು.
ಇದರ ಬೆನ್ನಲ್ಲೇ ಎಂಎನ್ಎಸ್ ಪಕ್ಷದ ಕಾರ್ಯಕರ್ತನೊಬ್ಬ ಮುಂಬೈನ ಮಸೀದಿಯೊಂದರ ಎದುರಿನ ಮರಕ್ಕೆ ಮೈಕ್ ಕಟ್ಟಿದೊಡ್ಡದಾಗಿ ಹನುಮಾನ್ ಚಾಲೀಸಾ ಪ್ರಸಾರ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಆತನನ್ನು ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ