
ನವದೆಹಲಿ (ಏ. 17): ದ್ವೇಷ, ಧರ್ಮಾಂಧತೆ, ಅಸಹಿಷ್ಣುತೆ ಹಾಗೂ ಅಸತ್ಯ ದೇಶವನ್ನು ಆವರಿಸಿಕೊಳ್ಳುತ್ತಿದೆ. ತಡೆಯದೆ ಹೋದರೆ ಇದು ಸಮಾಜವನ್ನು ಸರಿಪಡಿಸಲಾಗದಷ್ಟುಹಾಳು ಮಾಡಿಬಿಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಹಿಜಾಬ್, ರಾಮನವಮಿ ಗಲಾಟೆ, ಮಾಂಸಾಹಾರ ಗದ್ದಲ ಹಿನ್ನೆಲೆಯಲ್ಲಿ ದೆಹಲಿ ಮೂಲದ ಆಂಗ್ಲದೈನಿಕವೊಂದಕ್ಕೆ ಲೇಖನ ಬರೆದಿರುವ ಅವರು, ಹೊತ್ತಿ ಹೊರಿಯುತ್ತಿರುವ ಈ ಬೆಂಕಿ ಹಾಗೂ ದ್ವೇಷದ ಸುನಾಮಿ ಮುಂದೆ ಹೋಗಲು ಜನತೆ ಬಿಡಬಾರದು. ತಡೆಯೊಡ್ಡಬೇಕು. ಇಲ್ಲದೇ ಹೋದರೆ ಹಲವು ಪೀಳಿಗೆಗಳು ಕಷ್ಟಪಟ್ಟು ಕಟ್ಟಿರುವ ಎಲ್ಲವನ್ನೂ ಇದು ನಾಶಮಾಡಿಬಿಡುತ್ತದೆ ಎಂದು ಹೇಳಿದ್ದಾರೆ.
ಶಾಂತಿ ಹಾಗೂ ಬಹುತ್ವವನ್ನು ಬೋಗಸ್ ರಾಷ್ಟ್ರೀಯತೆ ಹೆಸರಲ್ಲಿ ಬಲಿ ಕೊಡುವುದನ್ನು ದೇಶದ ನಾಗರಿಕರಾಗಿ ನಾವು ನೋಡುತ್ತಾ ನಿಲ್ಲಬಾರದು ಎಂದು ಅವರು ಕರೆ ನೀಡಿದ್ದಾರೆ.ಭಾರತ ಶಾಶ್ವತ ಧ್ರುವೀಕರಣ ಸ್ಥಿತಿಯಲ್ಲಿರಬೇಕೆ? ತಮ್ಮ ಅನುಕೂಲಕ್ಕಾಗಿ ದೇಶದ ನಾಗರಿಕರು ಅಂತಹ ಸ್ಥಿತಿಯಲ್ಲೇ ಇರಬೇಕು ಎಂಬ ಬಯಕೆಯನ್ನು ಅಧಿಕಾರಸ್ಥರು ಹೊಂದಿದ್ದಾರೆ. ವೇಷ, ಆಹಾರ, ನಂಬಿಕೆ, ಹಬ್ಬ ಅಥವಾ ಭಾಷೆ ಇರಬಹುದು. ಎಲ್ಲದರಲ್ಲೂ ಭಾರತೀಯರನ್ನು ಭಾರತೀಯರ ವಿರುದ್ಧವೇ ಎತ್ತಿ ಕಟ್ಟಲಾಗುತ್ತದೆ. ಅಸೌಹಾರ್ದ ವಾತಾವರಣ ಸೃಷ್ಟಿಸುವವರಿಗೆ ಎಲ್ಲ ಬಗೆಯ ಉತ್ತೇಜನ ನೀಡಲಾಗುತ್ತಿದೆ.
ಇದನ್ನೂ ಓದಿ: 400 ಸೀಟಿಗೆ ಸ್ಪರ್ಧಿಸಿ: 2024ರ ಎಲೆಕ್ಷನ್‌ಗೆ ಕಾಂಗ್ರೆಸ್ಸಿಗೆ ಪ್ರಶಾಂತ್ ಕಿಶೋರ್ ಟಾರ್ಗೆಟ್
ಇದಕ್ಕಾಗಿ ಪುರಾತನ ಹಾಗೂ ಸಮಕಾಲೀನ ಇತಿಹಾಸವನ್ನು ನಿರಂತರವಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂದು ‘ಎ ವೈರಸ್ ರೇಜಸ್’ ಎಂಬ ಲೇಖನದಲ್ಲಿ ಸೋನಿಯಾ ದೂರಿದ್ದಾರೆ.ಭಯ, ವಂಚನೆ ಹಾಗೂ ಬೆದರಿಕೆಗಳು ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ತಂತ್ರಗಾರಿಕೆಯ ಆಧಾರಸ್ತಂಭಗಳಂತಾಗಿವೆ ಎಂದು ಟೀಕಿಸಿದ್ದಾರೆ.
ಕೋಮುದ್ವೇಷದ ಬಗ್ಗೆ 12 ವಿಪಕ್ಷ ನಾಯಕರಿಂದ ಕಳವಳ: ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರ ಮತ್ತು ದ್ವೇಷ ಭಾಷಣದ ಬಗ್ಗೆ ಕಾಂಗ್ರೆಸ್, ಟಿಎಂಸಿ, ಎನ್‌ಸಿಪಿ ಸೇರಿದಂತೆ 13 ವಿರೋಧ ಪಕ್ಷಗಳ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ಮೌನಕ್ಕೆ ಶರಣಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಶನಿವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಹೇಮಂತ್ ಸೊರೇನ್ ಅವರು ಆಹಾರ, ಉಡುಗೆ, ನಂಬಿಕೆ, ಹಬ್ಬ ಮತ್ತು ಭಾಷೆಯ ವಿಷಯದಲ್ಲಿ ಸಮಾಜವನ್ನು ಒಡೆಯಲು ನಡೆಯುತ್ತಿರುವ ಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
‘ಮತಾಂಧತೆಯನ್ನು ಪ್ರಚಾರ ಮಾಡುತ್ತಾ ಸಮಾಜವನ್ನು ಒಡೆಯುತ್ತಿರುವವರ ಹೆಡೆಮುರಿ ಕಟ್ಟಲು ವಿಫಲವಾಗಿ ಮೌನಕ್ಕೆ ಶರಣಾಗಿರುವ ಪ್ರಧಾನಿ ಮೋದಿ ಅವರ ನಡೆಯನ್ನು ಕಂಡು ಆಘಾತಕ್ಕೊಳಗಾಗಿದ್ದೇವೆ. ಈ ಮೌನವು ಶಸ್ತ್ರಸಜ್ಜಿತ ಖಾಸಗಿ ಗಲಭೆಕೋರ ಗುಂಪುಗಳು ಅಧಿಕೃತ ಕೃಪಾಪೋಷಣೆ ಹೊಂದಿರುವುದಕ್ಕೆ ಸಾಕ್ಷಿ’ ಎಂದು ಪ್ರಧಾನಿ ಮೋದಿ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಬಿಜೆಪಿಗೆ ನಷ್ಟ ಮಾಡಲು ರಾಹುಲ್ ಗಾಂಧಿ ಅಜ್ಜಿಯಿಂದಲೇ ಆಗಿಲ್ಲ, ಇನ್ನು ಮೊಮ್ಮಗನಿಂದ ಏನಾಗುತ್ತೆ'
ಇದೇ ವೇಳೆ, ಶತಮಾನಗಳಿಂದ ಭಾರತವನ್ನು ವ್ಯಾಖ್ಯಾನಿಸಿದ ಮತ್ತು ಶ್ರೀಮಂತಗೊಳಿಸಿದ ಸಾಮಾಜಿಕ ಸಾಮರಸ್ಯದ ಬಂಧಗಳನ್ನು ಬಲಪಡಿಸಲು ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಸಂಕಲ್ಪ ಮಾಡಿದರು. ನಂತರ ನಮ್ಮ ಸಮಾಜದಲ್ಲಿ ವಿಭಜನೆಯನ್ನು ಬೇರೂರಿಸಲು ಪ್ರಯತ್ನಿಸುತ್ತಿರುವ ವಿಷಕಾರಿ ಸಿದ್ಧಾಂತಗಳನ್ನು ಎದುರಿಸುವ ಬದ್ಧತೆ ಹೊಂದಿದ್ದೇವೆ. ಕೋಮು ಧ್ರುವೀಕರಣವನ್ನು ಬಯಸುವ ದುಷ್ಟಶಕ್ತಿಗಳ ಉದ್ದೇಶವನ್ನು ವಿಫಲಗೊಳಿಸಲು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಏಪ್ರಿಲ್ 10ರಂದು ರಾಮ ನವಮಿ ಸಂದರ್ಭದಲ್ಲಿ ದೇಶದ ಕೆಲವು ಭಾಗಗಳಲ್ಲಿ ಕೋಮುಗಲಭೆಯ ಘಟನೆಗಳು ವರದಿಯಾಗಿವೆ. ಅಲ್ಲದೆ ಕರ್ನಾಟಕದಲ್ಲಿ ಹಿಜಾಬ್, ಹಲಾಲ್ ಮತ್ತು ಜಟ್ಕಾ ವಿವಾದ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಮುಂತಾದ ಕೋಮು ಆಧಾರಿತ ಸಂಘರ್ಷಕ್ಕೆ ದೇಶ ಸಾಕ್ಷಿಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ