
ನವದೆಹಲಿ ಮಾ.4): ಅಯೋಧ್ಯೆಯ ರಾಮಮಂದಿರ ಮತ್ತು ಗುಜರಾತ್‌ನ ವಿಶ್ವಪ್ರಸಿದ್ಧ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎನ್ನಲಾದ ಶಂಕಿತ ಉಗ್ರನೊಬ್ಬನನ್ನು ಹರ್ಯಾಣ ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರೀದಾಬಾದ್‌ನಲ್ಲಿ ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ (19) ಎಂದು ಗುರುತಿಸಲಾಗಿದೆ. ಈತ ವಿಶ್ವದ ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್ ನಂಟು ಹೊಂದಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಸೂಚನೆಯಂತೆ ದಾಳಿಗೆ ಸಂಚು ರೂಪಿಸಲಾಗಿದ್ದ ಎಂದು ಹೇಳಲಾಗಿದೆ.
ಬಂಧನದ ಬೆನ್ನಲ್ಲೇ ರೆಹಮಾನ್ ನೀಡಿದ ಸುಳಿವಿನ ಮೇರೆಗೆ ಆತನ ಮನೆಯಿಂದ ಎರಡು ಗ್ರೆನೇಡ್ ವಶಕ್ಕೆ ಪಡೆಯಲಾಗಿದೆ. ಭಾನುವಾರವೇ ಅಬ್ದುಲ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಸೋಮವಾರ ಗುಜರಾತ್‌ಗೆ ಕರೆದೊಯ್ಯಲಾಗಿದೆ. ಈತನ ಬಂಧನದೊಂದಿಗೆ ದೊಡ್ಡ ಉಗ್ರ ಸಂಚೊಂದು ವಿಫಲವಾದಂತಾಗಿದೆ.
ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕಆರೋಪ, ಜಮ್ಮು-ಕಾಶ್ಮೀರ ಗವರ್ನರ್ ನಿಂದ 3 ಸರ್ಕಾರಿ ನೌಕರರ ವಜಾ
ನಿಖರ ಮಾಹಿತಿ:
ಕೇಂದ್ರೀಯ ಗುಪ್ತಚರ ಸಂಸ್ಥೆಗಳು ನೀಡಿದ ಖಚಿತ ಮಾಹಿತಿ ಅನ್ವಯ ಭಾನುವಾರ ಕಾರ್ಯಾಚರಣೆ ನಡೆಸಿದ್ದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಹರ್ಯಾಣದ ಫರೀದಾಬಾದ್‌ನ ವಿಶೇಷ ಕಾರ್ಯಪಡೆ ಸಿಬ್ಬಂದಿ, ಉತ್ತರಪ್ರದೇಶದ ಫೈಜಾಬಾದ್‌ನಲ್ಲಿ ಮಟನ್ ಶಾಪ್ ಇಟ್ಟುಕೊಂಡಿರುವ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿದ್ದಾರೆ.
ಅಬ್ದುಲ್, ಫರೀದಾಬಾದ್‌ನಲ್ಲಿ ವ್ಯಕ್ತಿಯೊಬ್ಬರಿಂದ ಎರಡು ಗ್ರೆನೇಡ್ ಪಡೆದು ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನ ಬಳಿ ಇದ್ದ ಎರಡು ಗ್ರೆನೇಡ್ ವಶಪಡಿಸಿಕೊಂಡಿರುವ ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಇದೀಗ ಹೊಸ ಸಮಸ್ಯೆ: ಜೆಸಿಬಿಗಳ ಬಳಸಿ ಪಾದರಕ್ಷೆ ವಿಲೇವಾರಿ
ವಿಚಾರಣೆ ವೇಳೆ ತಾನು ಅಯೋಧ್ಯೆ ರಾಮಮಂದಿರ, ಸೋಮನಾಥ ದೇಗುಲದ ಬಗ್ಗೆ ಸಂಚರಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿರುವ ವಿಷಯವನ್ನು ರೆಹಮಾನ್ ಬಾಯಿಬಿಟ್ಟಿದ್ದಾನೆ. ಅಲ್ಲದೆ ಆತನ ಬಳಿ ಆತ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಕುರಿತು ಸಾಕಷ್ಟು ಮಹತ್ವದ ದಾಖಲೆ ಕೂಡಾ ಲಭ್ಯವಾಗಿದೆ ಎಂದು ವರದಿಗಳು ಹೇಳಿವೆ.
ಇಷ್ಟು ಮಾತ್ರವಲ್ಲದೇ, ಆತ ನೀಡಿದ ಮಾಹಿತಿ ಮೇರೆಗೆ ಫೈಜಾಬಾದ್‌ನ ಆತನ ಮನೆಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಕೂಡಾ ವಶಪಡಿಸಿಕೊಂಡಿದ್ದಾರೆ. ಜೊತೆಗೆ ನಿರ್ವಸಿತ ಮನೆಯೊಂದರಿಂದ ಎರಡು ಗ್ರೆನೇಡ್ ಕೂಡಾ ವಶಪಡಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ