
ನವದೆಹಲಿ: ಬಿಸ್ಲೇರಿ ಪ್ಯಾಕೇಜ್ಡ್ ಕುಡಿಯುವ ನೀರಿನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಬಿಸ್ಲೇರಿ ಸೇರಿದಂತೆ ಎಲ್ಲಾ ಪ್ರಮುಖ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಮುಂದಾಗಿದೆ. ನಿಯಮಗಳನ್ನು ಪಾಲಿಸದ ಮತ್ತು ಸುರಕ್ಷಿತ ನೀರನ್ನು ವಿತರಿಸದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಮೂಲಗಳು ತಿಳಿಸಿವೆ.
ಸಾರ್ವಜನಿಕ ಹಿತಾಸಕ್ತಿಯಿಂದ ಕೈಗೊಳ್ಳಲಾದ ಈ ಕಾರ್ಯಾಚರಣೆಯ ಅಡಿಯಲ್ಲಿ, ಪ್ಯಾಕೇಜ್ಡ್ ನೀರಿನ ಘಟಕಗಳ ಮೇಲೆ ಅಧಿಕಾರಿಗಳು ತಪಾಸಣೆ ನಡೆಸಿ, ಪ್ರಯೋಗಾಲಯದ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪರೀಕ್ಷೆಯಲ್ಲಿ ಮಾದರಿಗಳು ವಿಫಲವಾದರೆ ಮತ್ತು ನಿಯಮಗಳ ಉಲ್ಲಂಘನೆ ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು FSSAI ಮೂಲಗಳು ಸ್ಪಷ್ಟಪಡಿಸಿವೆ.
ಪ್ಯಾಕೇಜ್ಡ್ ಕುಡಿಯುವ ನೀರು ಎನ್ನುತ್ತಿದ್ದಂತೆ ನೆನಪಾಗುವ ಬಿಸ್ಲೇರಿಯ ಕೆಲ ಮಾದರಿಗಳು ‘ಅಸುರಕ್ಷಿತ’ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ, ಬಿಸ್ಲೆರಿ ಇಂಟರ್‌ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿರುವುದಾಗಿ ಆಹಾರ ನಿಯಂತ್ರಕ ಸಂಸ್ಥೆ FSSAI ಭಾನುವಾರ ತಿಳಿಸಿದೆ. ಆದರೆ ಯಾವ ವಿಧದ ಬಿಸ್ಲೇರಿ ನೀರು ಸೇವನೆಗೆ ಅನರ್ಹವಾಗಿದೆ ಎಂಬುದನ್ನು ಅದು ಬಹಿರಂಗಪಡಿಸಿಲ್ಲ.
ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಆವರಣದಿಂದ ಪ್ಯಾಕ್ ಮಾಡಿದ (ಮಿನರಲ್ ವಾಟರ್ ಅಲ್ಲದ) ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದ್ದು, ಆ ವೇಳೆ ನಿಗದಿತ ಬ್ರೋಮೇಟ್ ಮಿತಿಗಳನ್ನು ಅನುಸರಿಸಲಾಗಿಲ್ಲ ಎಂಬುದು ಪತ್ತೆಯಾಗಿದೆ. ಆದ್ದರಿಂದ ಅದನ್ನು ಎಫ್‌ಎಸ್‌ಎಸ್ ಕಾಯ್ದೆ, 2006 ರ ಅಡಿಯಲ್ಲಿ ಅಸುರಕ್ಷಿತವೆಂದು ಘೋಷಿಸಲಾಗಿದೆ ಎಂದು ನಿಯಂತ್ರಕ ಸಂಸ್ಥೆ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದೆ.
ಬಿಸ್ಲೇರಿ ಜತೆಗೆ ಇನ್ನೂ ಕೆಲ ಆಹಾರ ತಯಾರಿಕಾ ಸಂಸ್ಥೆಗಳ ವಿರುದ್ಧವೂ ಎಫ್‌ಎಸ್‌ಎಸ್‌ಎಐ ಕ್ರಮ ಕೈಗೊಂಡಿದೆ. ‘ಆಶಾ ಕನ್ಫೆಕ್ಷನರಿ’ ತಯಾರಿಸಿದ ಚಾಕೊಲೇಟ್ ಭರಿತ ಕುಕೀಸ್‌ನಲ್ಲಿ ಕಾರ್ಮೋಸಿನ್ ಎಂಬ ಕಲರಿಂಗ್ ಏಜೆಂಟ್ (ತಿನಿಸಿಗೆ ಆಕರ್ಷಕ ಬಣ್ಣ ನೀಡಲು ಬಳಸುವ ಪದಾರ್ಥ) ಅನ್ನು ಸೇರಿಸಲಾಗಿದ್ದರೂ ಅದನ್ನು ಕುಕೀಸ್ ಪ್ಯಾಕೆಟ್ ಮೇಲೆ ಮುದ್ರಿಸದ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿರುವ ಆ ಉತ್ಪನ್ನಗಳನ್ನು ಹಿಂಪಡೆಯುವಂತೆ ಆದೇಶಿಸಿದೆ.
ಜತೆಗೆ, ಆಶಾ ಕುಕೀಸ್‌ನಲ್ಲಿ ನಿಗದಿತ ಗರಿಷ್ಠ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಟಾರ್ಟ್ರಾಜೈನ್ ಕಂಡುಬಂದಿದೆ. ಇದಲ್ಲದೆ, ನಿಚೇಧಿತ ‘ಸನ್‌ಸೆಟ್ ಎಲ್ಲೋ ಎಫ್‌ಸಿಎಫ್’ ಎಂಬ ಬಣ್ಣಕಾರಕವೂ ಅದರಲ್ಲಿ ಇದ್ದುದು ಪರೀಕ್ಷೆ ವೇಳೆ ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ