
ಚಂಢಿಗಢ: ನಿನ್ನೆ ತಾನು ವಾಸ ಮಾಡ್ತಿದ್ದ ಮನೆಯಲ್ಲೇ ಗುಂಡಿಕ್ಕಿಕೊಂಡು ಸಾವಿಗೆ ಶರಣಾದ ಹಿರಿಯ ಐಪಿಎಸ್ ಅಧಿಕಾರಿ ವೈ ಪುರಾನ್ ಕುಮಾರ್, ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನಿತ್ ಪಿ ಕುಮಾರ್ ಅವರು ಈಗ ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ತಮ್ಮ ಪತಿಯ ಸಾವಿಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ. ಹರ್ಯಾಣದ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್, ರೋಹ್ಟಕ್‌ನ ಸೂಪರಿಟೆಂಡೆಂಟ್ ಆಫ್ ಪೊಲೀಸ್ ನರೇಂದ್ರ ಬಿಜರ್ನಿಯಾ ಅವರ ವಿರುದ್ಧ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ. ಡಿಜಿಪಿ ಪೊಲೀಸ್ ಇಲಾಖೆಯ ರಾಂಕಿಂಗ್ ನಲ್ಲಿ ಅತೀ ಉನ್ನತ ಹುದ್ದೆಯಾಗಿದ್ದು, ಆ ಹುದ್ದೆಯಲ್ಲಿರುವ ಅಧಿಕಾರಿ ವಿರುದ್ಧವೇ ಪುರಾನ್ ಕುಮಾರ ಪತ್ನಿ ಐಎಎಸ್ ಅಧಿಕಾರಿ ಅಮ್ನಿತ್ ಕುಮಾರ್ ಅವರು ತಮ್ಮ ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರು ದಾಖಲಿಸಿದ್ದು, ಹಿರಿಯ ಅಧಿಕಾರಿ ತನ್ನ ಪತಿಯನ್ನು ಜಾತಿ ಆಧರಿತವಾಗಿ ನಿಂದನೆ ಮಾಡಿದ್ದಾರೆ ಎಂದು ಅಮ್ನಿತ್ ಪಿ ಕುಮಾರ್ ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಅಮ್ನಿತ್ ಪಿ ಕುಮಾರ್ ಆರೋಪಿಸಿದ್ದಾರೆ. ಅಮ್ನಿತ್ ಅವರು ಹರ್ಯಾಣ ಸರ್ಕಾರದ ವಿದೇಶಾಂಗ ಸಹಕಾರ ಇಲಾಖೆಯ ಆಯುಕ್ತ ಮತ್ತು ಕಾರ್ಯದರ್ಶಿಯಾಗಿದ್ದು, ತಮ್ಮ ಪತಿ ಪುರಾನ್ ಕುಮಾರ್ ಅವರು ಸಾವಿಗೆ ಶರಣಾಗುವ ವೇಳೆ ಅವರು ವಿದೇಶ ಪ್ರವಾಸದಲ್ಲಿದ್ದರು. ಹರ್ಯಾಣ ಮುಖ್ಯಮಂತ್ರಿ ನಯಾಬ್ ಸೈನಿ ನೇತೃತ್ವದ ನಿಯೋಗದ ಭಾಗವಾಗಿ ಅವರು ಜಪಾನ್‌ನಲ್ಲಿ ಪ್ರವಾಸದಲ್ಲಿದ್ದಾಗ ಅವರ ಪತಿ ವೈ ಪೂರಣ್ ಕುಮಾರ್ ಅವರು ಸಾವಿಗೆ ಶರಣಾಗಿದ್ದರು. ಚಂಡೀಗಢದ ಸೆಕ್ಟರ್ 11ರಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ವೈ ಪುರಾನ್ ಕುಮಾರ್ ಅವರು ಸಾವಿಗೆ ಶರಣಾಗಿದ್ದರು.
ಹರ್ಯಾಣ ಡಿಜಿ ಹಾಗೂ ಎಸ್‌ಪಿಯ ಬಂಧನಕ್ಕೆ ಪತ್ನಿಯ ಆರೋಪ
ಅಧಿಕಾರಿ ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಅವರ ಮಗಳು ನೆಲಮಾಳಿಗೆಯಲ್ಲಿ ನೋಡಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ವಶಪಡಿಸಿಕೊಂಡ ಎಂಟು ಪುಟಗಳ ಪತ್ರದಲ್ಲಿ ಕಿರುಕುಳದ ಬಗ್ಗೆ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ. 2001 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿ ವೈ ಪೂರಣ್ ಕುಮಾರ್ ಅವರು ತಮ್ಮ ಪತ್ರದಲ್ಲಿ, ಸೇವೆಯಲ್ಲಿರುವ ಮತ್ತು ನಿವೃತ್ತರಾದ 10 ಹಿರಿಯ ಅಧಿಕಾರಿಗಳ ಮೇಲೆ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಜಾತಿನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದ ಪತ್ನಿ
ಘಟನೆಗೆ ಸಂಬಂಧಿಸಿದಂತೆ ಶತ್ರುಜೀತ್ ಸಿಂಗ್ ಕಪೂರ್ ಮತ್ತು ನರೇಂದ್ರ ಬಿಜಾರ್ನಿಯಾ ಈ ಇಬ್ಬರೂ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ಇವರಿಬ್ಬರೂ ಪ್ರಭಾವಿಗಳಾಗಿದ್ದು, ಸಾಕ್ಷ್ಯಗಳನ್ನು ತಿರುಚುವುದು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಸೇರಿದಂತೆ ತನಿಖೆಗೆ ಅಡ್ಡಿಯಾಗುವ ಮೂಲಕ ಪರಿಸ್ಥಿತಿಯನ್ನು ತಮ್ಮ ಪರವಾಗಿ ನಿರ್ವಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಮೃತ ಅಧಿಕಾರಿಯ ಪತ್ನಿ ಅಮ್ನಿತ್ ಕುಮಾರ್ ಹೇಳಿದ್ದಾರೆ.
ನಾನು ನನ್ನ ಕುಟುಂಬಕ್ಕಾಗಿ ಮಾತ್ರವಲ್ಲ, ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿಯ ಜೀವ ಮತ್ತು ಘನತೆಯ ಮೌಲ್ಯಕ್ಕಾಗಿಯೂ ವಾದಿಸುತ್ತಿದ್ದೇನೆ. ಇದು ಸಾಮಾನ್ಯ ಆತ್ಮ*ಹತ್ಯೆ ಪ್ರಕರಣವಲ್ಲ. ಎಸ್‌ಸಿ ಸಮುದಾಯದಿಂದ ಬಂದ ಅಧಿಕಾರಿಯಾಗಿರುವ ನನ್ನ ಪತಿಯ ಮೇಲೆ ಪ್ರಭಾವಿ ಮತ್ತು ಉನ್ನತ ಹುದ್ದೆಯ ಅಧಿಕಾರಿಗಳು ವ್ಯವಸ್ಥಿತವಾಗಿ ನಡೆಸಿದ ಕಿರುಕುಳದ ನೇರ ಪರಿಣಾಮವಾಗಿದೆ. ಅವರು ತಮ್ಮ ಹುದ್ದೆಗಳನ್ನು ಬಳಸಿಕೊಂಡು ಅವರನ್ನು ಮಾನಸಿಕವಾಗಿ ಹಿಂಸಿಸಿದ್ದಾರೆ. ಅಂತಿಮವಾಗಿ ಅವರು ತಮ್ಮ ಪ್ರಾಣವನ್ನೇ ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಷ್ಟರ ಮಟ್ಟಿಗೆ ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕೃತ ವರದಿಗಳು ಅಧಿಕಾರಿ ಸಾವಿಗೆ ಶರಣಾಗಿರುವುದನ್ನು ಸೂಚಿಸುತ್ತಿದ್ದರೂ, ಹಿರಿಯ ಅಧಿಕಾರಿಗಳಿಂದ ನನ್ನ ಪತಿಗೆ ವರ್ಷಗಳ ಕಾಲ ವ್ಯವಸ್ಥಿತ ಅವಮಾನ, ಕಿರುಕುಳವನ್ನು ಕಂಡ ಹೆಂಡತಿಯಾಗಿ ನನ್ನ ಆತ್ಮ ನ್ಯಾಯಕ್ಕಾಗಿ ಅಳುತ್ತಿದೆ ಎಂದು ಅವರು ಹೇಳಿದರು. ಎಂಟು ಪುಟಗಳ ಅವರ ಸಾವಿನ ಪತ್ರವು ಅವರ ಕುಸಿದು ಹೋದ ಶಕ್ತಿಗೆ ದಾಖಲೆಯಾಗಿದೆ. ಈ ಪತ್ರ ಅವರನ್ನು ಸಾವಿನಂಚಿಗೆ ತಳ್ಳಿದ ಹಲವಾರು ಅಧಿಕಾರಿಗಳ ಹೆಸರುಗಳನ್ನು ಬಯಲು ಮಾಡುತ್ತದೆ ಎಂದು ಹೇಳಿದ್ದಾರೆ.
ನ್ಯಾಯವು ಕೇವಲ ನಡೆಯಬಾರದು, ಬದಲಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಶಕ್ತಿಶಾಲಿಗಳ ಕ್ರೌರ್ಯದಿಂದ ಛಿದ್ರಗೊಂಡ ನಮ್ಮಂತಹ ಕುಟುಂಬಗಳಿಗೂ ಸಹ. ನನ್ನ ಮಕ್ಕಳು ಉತ್ತರಗಳಿಗೆ ಅರ್ಹರಾಗಿದ್ದಾರೆ. ನನ್ನ ಪತಿಯ ದಶಕಗಳ ಸಾರ್ವಜನಿಕ ಸೇವೆಯು ಮೌನಕ್ಕಲ್ಲ ಘನತೆಗೆ ಅರ್ಹವಾಗಿದೆ ಎಂದು ಪುರಾನ್ ಕುಮಾರ್ ಪತ್ನಿ ಅಮ್ನಿತ್ ಕುಮಾರ್ ರೋಧಿಸಿದ್ದಾರೆ. ರಾಜ್ಯ ಸರ್ಕಾರದ ಅನುಮತಿಯಿಲ್ಲದ ಮದ್ಯ ಗುತ್ತಿಗೆದಾರರೊಬ್ಬರ ದೂರಿನ ಮೇರೆಗೆ ಲಂಚ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಕ್ಕೆ ದಿವಂಗತ ಅಧಿಕಾರಿ ತೀವ್ರ ಬೇಸರಗೊಂಡಿದ್ದರು ಎಂದು ವರದಿಯಾಗಿದೆ.
ಕುಮಾರ್ ಅವರ ಸಹಾಯಕ ಸುಶೀಲ್ ಕುಮಾರ್ ಅವರು ಅಧಿಕಾರಿಯ ಹೆಸರಿನಲ್ಲಿ 2.5 ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಮದ್ಯ ಗುತ್ತಿಗೆದಾರ ನೀಡಿದ ದೂರಿನ ಆಧಾರದ ಮೇಲೆ ರೋಹ್ಟಕ್ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಸುಶೀಲ್ ಅವರನ್ನು ಬಂಧಿಸಿದ್ರೆ ಮತ್ತೊಂದೆಡೆ ಎಫ್‌ಐಆರ್‌ನಲ್ಲಿ ವೈ ಪೂರಣ್ ಕುಮಾರ್ ಅವರ ಹೆಸರನ್ನು ಸೇರಿಸಲಾಗಿದೆ.
ಸೆಪ್ಟೆಂಬರ್ 29 ರಂದು ಪುರಾನ್ ಕುಮಾರ್ ಅವರನ್ನು ರೋಹ್ಟಕ್‌ನ ಸುನೇರಿಯಾದಲ್ಲಿರುವ ಪೊಲೀಸ್ ತರಬೇತಿ ಕಾಲೇಜಿಗೆ ವರ್ಗಾಯಿಸಲಾಯಿತು. ಇದಕ್ಕೂ ಮೊದಲು ಅವರನ್ನು ಇನ್ಸ್‌ಪೆಕ್ಟರ್ ಜನರಲ್ (ರೋಹ್ಟಕ್ ಶ್ರೇಣಿ) ಆಗಿ ನೇಮಿಸಲಾಗಿತ್ತು. ಎಂಜಿನಿಯರಿಂಗ್ ಪದವೀಧರರಾದ ಅವರು ಮೇ 19, 1973 ರಂದು ಜನಿಸಿದರು ಮತ್ತು ಮೇ 31, 2033 ರಂದು ನಿವೃತ್ತರಾಗಬೇಕಿತ್ತು. ಆದರೆ ದುರಂತಮಯವಾಗಿ ಸಾವಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಮಾಂಸಹಾರ ತಿನ್ನುವಂತೆ ಒತ್ತಾಯ: 85ರ ಸಸ್ಯಹಾರಿ ವೃದ್ಧ ಉಸಿರುಕಟ್ಟಿ ಸಾವು
ಇದನ್ನೂ ಓದಿ: ಮನೆಯಲ್ಲೇ ಗುಂಡಿಕ್ಕಿಕೊಂಡು ಸಾವಿಗೆ ಶರಣಾದ ಐಪಿಎಸ್ ಅಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ