
ನವದೆಹಲಿ (ಮಾ.24): ಜಮ್ಮು ಹಾಗೂ ಕಾಶ್ಮೀರದಲ್ಲಿ 370 ನೇ ವಿಧಿಯನ್ನು (Article 370) ರದ್ದುಗೊಳಿಸಿದ ನಂತರ ಹಿಂಸಾತ್ಮಕ ಕೃತ್ಯಗಳಲ್ಲಿ ಇಳಿಕೆ ಕಂಡುಬಂದಿದ್ದು, ಹೂಡಿಕೆ ಪರಿಸರ (Investment Environment) ನಿರ್ಮಾಣವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ ಹೇಳಿದ್ದಾರೆ. ಕಾಶ್ಮೀರ ಬಜೆಟ್ ಮಂಡಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ, ‘ಕಾಶ್ಮೀರದಲ್ಲಿ 890 ಕೇಂದ್ರೀಯ ಕಾನೂನು ಅಳವಡಿಸಲಾಗಿದೆ.
ಇದರಿಂದ ಮೊದಲು ಹಕ್ಕುಗಳಿಂದ ವಂಚಿತರಾದವರು ಈಗ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಆಸ್ತಿ ಖರೀದಿಸಬಹುದಾಗಿದೆ. ಇದಲ್ಲದೇ ಅನ್ಯಾಯ, ತಾರತಮ್ಯ ಮಾಡುವ 250 ರಾಜ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕಾಶ್ಮೀರದಲ್ಲಿ ಕೈಗಾರಿಕಾ ಸ್ಥಾಪನೆಯ ಹಾದಿ ಸುಲಭವಾಗಿದ್ದು, ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದರು.
ಅಲ್ಲದೇ 2021ರಲ್ಲಿ ಕಾಶ್ಮೀರದಲ್ಲಿ ಒಳನುಸುಳುವಿಕೆ ಪ್ರಮಾಣ ಶೇ. 33ಕ್ಕೆ ಇಳಿಕೆಯಾಗಿದೆ. ಕದನ ವಿರಾಮ ಉಲ್ಲಂಘನೆಯಲ್ಲಿ ಶೇ. 90ರಷ್ಟುಇಳಿಕೆ, ಶೇ.61ರಷ್ಟುಭಯೋತ್ಪಾದಕ ಕೃತ್ಯಗಳಲ್ಲಿ ಇಳಿಕೆ ಹಾಗೂ ಉಗ್ರರಿಂದ ಅಪಹರಣಕ್ಕೊಳಗಾಗುವ ಪ್ರಮಾಣ ಶೇ.80 ರಷ್ಟುಇಳಿಕೆಯಾಗಿದೆ. 2021ರಲ್ಲಿ 148 ಸ್ಥಳೀಯ ಮತ್ತು 32 ವಿದೇಶಿ ಉಗ್ರರು ಸೇರಿ ಒಟ್ಟು 180 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಸಂಸತ್ತಿಗೆ ತಿಳಿಸಿದರು.
ರಾಜ್ಯದ ಪ್ರಥಮ ಕಾಸ್ಮಾಸ್ ಕೇಂದ್ರಕ್ಕೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಭಾರತದ ಆರ್ಥಿಕತೆ ಮೇಲೆ ಉಕ್ರೇನ್ ಪರಿಣಾಮ: ಕೋವಿಡ್ ಸೋಂಕಿನಂತಹ ತುರ್ತು ಪರಿಸ್ಥಿತಿ ನಡುವೆಯೂ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿ ನಿಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ತತ್ವದಡಿ ಕೈಗೊಂಡ ಕ್ರಮಗಳೇ ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ. ಆದರೆ, ಪ್ರಸಕ್ತ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ‘ಆತ್ಮನಿರ್ಭರ ಅರ್ಥ ವ್ಯವಸ್ಥೆ ಭಾರತ’ ವಿಷಯ ಕುರಿತ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ಅವರು ಪ್ರತಿ ವಿಚಾರದಲ್ಲೂ ಬದ್ಧತೆ ಹೊಂದಿದ್ದಾರೆ. ಯಾವುದೇ ಯೋಜನೆ ಘೋಷಣೆಗೆ ಮಾತ್ರ ಸೀಮಿತಗೊಳಿಸದೆ ಅನುಷ್ಠಾನಗೊಳಿಸಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುತ್ತಿವೆ.
ಅಡುಗೆ ಅನಿಲ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾರೊಬ್ಬರೂ ಮೋದಿ ಅವರ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ’ ಎಂದರು. ‘ಕೊರೋನಾ ಸೋಂಕಿನಿಂದ ಇಡೀ ಜಗತ್ತು ತತ್ತರಿಸಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ತತ್ವದಡಿ ಜಗತ್ತಿನ ಗಮನ ಸೆಳೆದರು. ಕಡಿಮೆ ಅವಧಿಯಲ್ಲಿ ಸ್ವದೇಶಿ ಪಿಪಿಇ ಕಿಟ್, ಮಾಸ್ಕ್, ವೈದ್ಯಕೀಯ ಉಪಕರಣಗಳು, ಔಷಧಿಗಳ ತಯಾರಿಕೆಗೆ ಉತ್ತೇಜನ ನೀಡಿದರು.
ಸಚಿವೆ ನಿರ್ಮಾಲಾ ಮುಂದೆ ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರೂ ಬೇಡಿಕೆ ಇಟ್ಟ ಸಿಎಂ ಬೊಮ್ಮಾಯಿ!
ಮುಂದುವರಿದ ದೇಶಗಳೇ ಕೊರೋನಾ ಲಸಿಕೆಗಾಗಿ ಪರದಾಡುವ ಸಂದರ್ಭದಲ್ಲಿ ಭಾರತದಲ್ಲಿ ಎರಡು ಲಸಿಕೆಗಳು ಕಂಡು ಹಿಡಿದು, ದೇಶದ ಜನಕ್ಕೆ ಯಶಸ್ವಿಯಾಗಿ ನೀಡಲಾಯಿತು. ಅಷ್ಟೇ ಅಲ್ಲದೆ, ಜಗತ್ತಿನ ಹಲವು ದೇಶಗಳಿಗೆ ಲಸಿಕೆ ಪೂರೈಸಲಾಯಿತು. ಈ ಹಿಂದೆ ಪೊಲಿಯೋ ಲಸಿಕೆ ಕಂಡು ಹಿಡಿದಾಗ ಆರು ವರ್ಷಗಳ ಬಳಿಕ ಭಾರತಕ್ಕೆ ಬಂದಿತ್ತು. ಮೋದಿ ಅವರ ನಾಯಕತ್ವದಲ್ಲಿ ಭಾರತ ಸ್ವಸಾಮರ್ಥ್ಯದಿಂದ ಕಠಿಣ ಸವಾಲುಗಳನ್ನು ಎದುರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ’ ಎಂದು ಹೆಮ್ಮೆಯಿಂದ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ