ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು

By Kannadaprabha NewsFirst Published May 30, 2020, 2:46 PM IST
Highlights

ವಿಭಿನ್ನ ಆಡಳಿತ ಮತ್ತು ಸಾಧನೆಗಳಿಂದ ಇಡೀ ವಿಶ್ವದ ಗಮನ ಸೆಳೆದ ಕೇಂದ್ರ ಸರ್ಕಾರವು ವಿರೋಧ ಪಕ್ಷದವರ ಅನೇಕ ಟೀಕೆ ಟಿಪ್ಪಣಿಗಳಿಗೂ ಒಳಗಾಗಿತ್ತು, ಎಲ್ಲ ವಿರೋಧಗಳ ನಡುವೆಯೂ ಸದ್ಧು ಗದ್ದಲವಿಲ್ಲದೆ ಎರಡನೇ ವರ್ಷದ ಒಂದು ವರ್ಷ ಪೂರ್ಣಗೊಳಿಸಿದ ಮೋದಿ ಅವರ ಹೆಜ್ಜೆಗಳ ಕುರಿತು ಕೋಲಾರ ಲೋಕಸಭಾ ಕ್ಷೇತ್ರದ ಎಸ್‌.ಮುನಿಸ್ವಾಮಿ ಅವರ ಅಭಿಪ್ರಾಯಗಳು ಹೀಗಿವೆ.

ಕೋಲಾರ(ಮೇ 30): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದೆ. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ ಮೋದಿ ಅವರ ದಿಟ್ಟತನದಿಂದಾಗಿ ಅನೇಕ ಸಾಧನೆಗಳನ್ನೂ ಗೈದಿದೆ. ವಿಭಿನ್ನ ಆಡಳಿತ ಮತ್ತು ಸಾಧನೆಗಳಿಂದ ಇಡೀ ವಿಶ್ವದ ಗಮನ ಸೆಳೆದ ಕೇಂದ್ರ ಸರ್ಕಾರವು ವಿರೋಧ ಪಕ್ಷದವರ ಅನೇಕ ಟೀಕೆ ಟಿಪ್ಪಣಿಗಳಿಗೂ ಒಳಗಾಗಿತ್ತು, ಎಲ್ಲ ವಿರೋಧಗಳ ನಡುವೆಯೂ ಸದ್ಧು ಗದ್ದಲವಿಲ್ಲದೆ ಎರಡನೇ ವರ್ಷದ ಒಂದು ವರ್ಷ ಪೂರ್ಣಗೊಳಿಸಿದ ಮೋದಿ ಅವರ ಹೆಜ್ಜೆಗಳ ಕುರಿತು ಕೋಲಾರ ಲೋಕಸಭಾ ಕ್ಷೇತ್ರದ ಎಸ್‌.ಮುನಿಸ್ವಾಮಿ ಅವರ ಅಭಿಪ್ರಾಯಗಳು ಹೀಗಿವೆ.

* ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಮ್ಮ ಅನಿಸಿಕೆಗಳೇನು?

ನರೇಂದ್ರ ಮೋದಿ ದೇಶ ಕಂಡ ಅಪ್ರತಿಮ ನಾಯಕ, ವಿಶ್ವದ ಹಲವರು ಪ್ರಮುಖ ನಾಯಕರ ಪೈಕಿ ಒಬ್ಬರಾಗಿ ಗಮನ ಸೆಳೆದಿದ್ದಾರೆ. ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತ ಧಿಕ್ಕೇ ಬದಲಾಗಿದೆ, ಜಗತ್ತಿನ ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ನಮ್ಮದೂ ಒಂದಾಗಿದೆ. ದೇಶದ ರಕ್ಷಣೆ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ಹಾಗು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ ಅವರು ದೇಶವನ್ನು ಮುನ್ನಡೆಸುವ ದಿಟ್ಟನಾಯಕರೆನಿಸಿಕೊಂಡಿದ್ದಾರೆ. ಇಡೀ ಜಗತ್ತೇ ಮೆಚ್ಚುವಂತೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ದೇಶದ ದಿಟ್ಟನಾಯಕರು.

* ಕಳೆದ ಒಂದು ವರ್ಷದಲ್ಲಿ ಮೋದಿ ಅವರ ಸಾಧನೆಗಳೇನು?

ಭಾರತ ವಿಭಿನ್ನ ಸಂಸ್ಕೃತಿ ಹೊಂದಿರುವ ದೇಶ, ಈ ರಾಷ್ಟ್ರದ ಎಲ್ಲ ಬಡವ ಬಲ್ಲಿದರ ಉದ್ಧಾರಕ್ಕಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಎಲ್ಲರ ಸಾಮಾಜಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಜನಧನ್‌, ಗರೀಬ್‌ ಕಲ್ಯಾಣ್‌ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಗ್ಯಾಸ್‌ ರಹಿತ ಬಡವರಿಗೆ ಉಜ್ವಲ, ಅಯುಷ್ಮಾನ್‌ ಭಾರತ್‌, ರೈತರಿಗಾಗಿ ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ರೂಪಿಸಿದ್ದಾರೆ.

* ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಕೊಟ್ಟಕೊಡುಗೆ ಏನು?

ದೇಶದಲ್ಲಿ ವಾಸಿಸುವ ಎಲ್ಲ ಜಾತಿ ಧರ್ಮ, ಕುಲ ಭಾಷೆ, ಸಂಸ್ಕೃತಿಯುಳ್ಳ ಎಲ್ಲರೂ ಒಂದೇ ಎಂಬ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಬಹುವರ್ಷಗಳಿಂದ ನೆನೆಗುದಿಗೆ ಬಂದಿದ್ದ 370 ವಿಧಿಯನ್ನು ನರೇಂದ್ರ ಮೋದಿ ರದ್ಧು ಪಡಿಸಿ ಎಲ್ಲರೂ ಒಂದೇ ಎಂಬ ಧ್ಯೇಯ ವಾಕ್ಯವನ್ನು ಸಾರಿದರು. ಉತ್ತರ ಪ್ರದೇಶದಲ್ಲಿ ಹಲವು ದಶಕಗಳಿಂದ ಉಳಿದಿದ್ದ ರಾಮಜನ್ಮಭೂಮಿ ವಿವಾದವನ್ನು ಯಾವುದೇ ಸದ್ಧು ಗದ್ಧಲವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಗೆ ಹರಿಸಿದರು. ತ್ರಿಬಲ್‌ ತಲಾಕ್‌ನಿಂದ ಬಸವಳಿದಿದ್ದ ಅಲ್ಪಸಂಖ್ಯಾತ ಮಹಿಳೆಯರಿಗೂ ರಿಲೀಫ್‌ ಕೊಟ್ಟು ಸಾಮಾಜಿಕವಾಗಿ ಅವರಲ್ಲಿ ಕ್ರಾಂತಿಯನ್ನುಂಟು ಮಾಡಿದರು. ಕೊರೊನಾ ಸೋಂಕು ಹರಡುವಿಕೆ ವಿಚಾರದಲ್ಲಿ ಇಡೀ ಪ್ರಪಂಚವೇ ಮೆಚ್ಚುವಂತೆ ಲಾಕ್‌ಡೌನ್‌ ಜಾರಿಗೆ ತಂದು ಸೋಂಕು ವೇಗವಾಗಿ ಹರಡುವುದನ್ನು ತಡೆದರು. ವಿಶ್ವದಲ್ಲಿ ಅನೇಕ ಬಲಿಷ್ಠ ರಾಷ್ಟ್ರಗಳಲ್ಲಿ ಸಾವಿರಗಟ್ಟಲೆ ಹೆಣಗಳು ಬಿದ್ದರೂ ನಮ್ಮ ದೇಶದಲ್ಲಿ ಯಾವುದೇ ಆಪಾಯ ಆಗದಂತೆ ಎಚ್ಚರವಹಿಸಿದರು ಎಂದು ಬಣ್ಣಿಸಿದರು. ನೆರೆ ಹಾವಳಿಯಿಂದ ತತ್ತರಿಸಿ ಹೋಗಿದ್ದ ಕರ್ನಾಟಕಕ್ಕೆ ಸಾಕಷ್ಟುಹಣ ಕಾಸಿನ ನೆರವು ನೀಡಿ ನೆರೆಯಿಂದ ಹಾಳಾಗಿದ್ದ ಪ್ರದೇಶಗಳನ್ನು ಪುನರ್‌ ಸ್ಥಾಪಿಸಲು ನೆರವಾದರು.

ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

* ಕಳೆದ ಒಂದು ವರ್ಷದಲ್ಲಿ ನೀವು ತೋರಿದ ಸಾಧನೆಗಳೇನು?

ಕಳೆದ ಒಂದು ವರ್ಷದಲ್ಲಿ ಅನೇಕ ಜನ ಪರ ಕಾರ್ಯಕ್ರಮಗಳನ್ನು ಹಾಕಿ ಕೊಂಡು ಕ್ಷೇತ್ರದ ಅಭಿವೃದ್ದಿ ಪಡಿಸಲಾಗಿದೆ. ಹಿಂದೆಂದೂ ಇಲ್ಲದಷ್ಟುಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲಾಗಿದೆ. ಪ್ರಮುಖವಾಗಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಕೋಚ್‌ ಫ್ಯಾಕ್ಟರಿಯ ಬದಲಾಗಿದೆ ರೈಲ್ವೆ ವರ್ಕ್ಶಾಪ್‌ ಸ್ಥಾಪಿಸಲು ಅಗತ್ಯವಾಗಿ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸದಾ ಬರಗಾಲದ ದವಡೆಗೆ ಸಿಕ್ಕಿ ನಲುಗಿ ಹೋಗಿದ್ದ ಕೋಲಾರ ಜಿಲ್ಲೆಗೆ ಅಟಲ್‌ ಭೂಜಲ್‌ ಯೋಜನೆಯಲ್ಲಿ ಸುಮಾರು 200 ಕೋಟಿ ಯೋಜನೆಯನ್ನು ಜಿಲ್ಲೆಗೆ ತರಲಾಗಿದೆ, ಕೆರೆಗಳಿಗೆ ಈಗಾಗಲೇ ಕೆ.ಸಿ.ವ್ಯಾಲಿ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ, ಸದ್ಯ 260 ಎಂಎಲ್‌ಡಿ ನೀರು ಹರಿಯುತ್ತಿದ್ದು ಇದನ್ನು 440 ಎಂಎಲ್‌ಡಿಗೆ ಹರಿಸಲು ಯೋಜನೆ ರೂಪಿಸಲಾಗಿದೆ.ಇದರಿಂದ ಅಂತರ್ಜಲ ಮಟ್ಟವೃದ್ಧಿಯಾಗಿ ಇಡೀ ಜಿಲ್ಲೆಯನ್ನು ಹಸಿರುಮಯ ಗೊಳಿಸಲಾಗುವುದು.

ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ

ಕೋಲಾರ ಗೋಲ್ಡ್‌ಫೀಲ್ಡ್‌ ಬಾಗಿಲು ಮುಚ್ಚಿ ಅನೇಕ ವರ್ಷಗಳೇ ಆಗಿವೆ, ಗಣಿ ಮುಚ್ಚಿರುವುದರಿಂದ ಕೆಜಿಎಫ್‌ ಮತ್ತು ಸುತ್ತಮುತ್ತ ಸಾವಿರಾರು ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಇದನ್ನು ಗಮನಿಸಿ ಅಲ್ಲಿ ಗಣಿಯನ್ನು ಪುನಃಶ್ಚೇತನಗೊಳಿಸಿ ಕೆಜಿಎಫ್‌ನ್ನು ಹಿಂದಿನ ವೈಭವಕ್ಕೆ ಕೊಂಡೊಯ್ಯಲು ಯೋಜನೆ ರೂಪಿಸಲಾಗಿದೆ. ಕೋಲಾರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಹಾಗು ಕೆಜಿಎಫ್‌ ಹಾಗು ಬಂಗಾರಪೇಟೆಯಲ್ಲಿರುವ ಸಾವಿರಾರು ಕಾರ್ಮಿಕರಿಗೆ ಮಾರಿಕುಪ್ಪಂನಿಂದ ಬೆಂಗಳೂರಿಗೆ ಹೊಸ ರೈಲುಗಳನ್ನು ಹಾಕಲಾಗಿದೆ. ಹಾಲು ಉತ್ಪಾದಕರಿಗಾಗಿ ಗೋಲ್ಡನ್‌ ಡೇರಿ ತೆರೆಯಲು 180 ಕೋಟಿ ಯೋಜನೆಯನ್ನು ರೂಪಿಸಲಾಗಿದೆ. ಕೋಲಾರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಮಹಾ ಮಾರಿಯಂತೆ ಅಪ್ಪಳಿಸಿರುವ ಕೊರೊನಾ ಸಿಕ್ಕಿಕೊಂಡಿರುವ ಸಾವಿರಾರು ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು, ಅಲ್ಲದೆ ಲಾಕ್‌ಡೌನ್‌ನಿಂದ ಮಾರುಕಟ್ಟೆವ್ಯವಸ್ಥೆ ಇಲ್ಲದೆ ತೋಟಗಳಲ್ಲೇ ಕೊಳೆಯುತ್ತಿದ್ದ ರೈತರ ತರಕಾರಿಗಳನ್ನು ಖರೀದಿಸಿ ನೆರವು ನೀಡಲಾಯಿತು.

* ನಿಮ್ಮ ಮುಂದಿರುವ ಸವಾಲುಗಳೇನು?

ಜಿಲ್ಲೆಯಲ್ಲಿ ಕೃಷಿ, ನಿರುದ್ಯೋಗ, ದಲಿತರ ಹಲವಾರು ಸಮಸ್ಯೆಗಳಿವೆ, ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ತಂದು ಕೃಷಿ ಬಿಕ್ಕಟ್ಟಿಗೆ ಪರಿಹಾರ ಕೊಡುವುದು ಅಲ್ಲದೆ ಕೈಗಾರಿಕೆಗಳನ್ನೂ ಜಿಲ್ಲೆಗೆ ತಂದು ನಿರುದ್ಯೋಗ ನಿವಾರಿಸುವುದು ನಮ್ಮ ಗುರಿಯಾಗಿದೆ.

-ಜೆ.ಸತ್ಯರಾಜ್

click me!