ಮೋದಿಯದ್ದು ಜನಮೆಚ್ಚಿದ, ಜಗಮೆಚ್ಚಿದ ಆಡಳಿತ; ಸಂಸದ ನಳಿನ್‌ ಕುಮಾರ್‌ ಕಟೀಲ್‌

By Kannadaprabha News  |  First Published May 30, 2020, 1:31 PM IST

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಪಕ್ಷದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಜೋಡಿಯ ನೆಚ್ಚಿನ ಹುಡುಗ ನಳಿನ್‌ ಕುಮಾರ್‌ ಕಟೀಲ್‌ ಅವರು ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ ಜೊತೆ ಮಾತನಾಡಿದ್ದಾರೆ.


- ಆತ್ಮಭೂಷಣ್‌, ಕನ್ನಡಪ್ರಭ

ಮಂಗಳೂರು: ಬೂತ್‌ ಮಟ್ಟದ ಸಾಮಾನ್ಯ ಕಾರ್ಯಕರ್ತನೂ ಪಕ್ಷದ ಚುಕ್ಕಾಣಿ ಹಿಡಿಯಬಲ್ಲ ಎಂದು ತೋರಿಸಿಕೊಟ್ಟ ಉತ್ಸಾಹಿ ವ್ಯಕ್ತಿ ನಳಿನ್‌ ಕುಮಾರ್‌ ಕಟೀಲ್‌. ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಪಕ್ಷದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಎರಡೂ ಹುದ್ದೆ ನಿಭಾಯಿಸುವ ಸವಾಲನ್ನು ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಜೋಡಿಯ ನೆಚ್ಚಿನ ಹುಡುಗ ನಳಿನ್‌ ಕುಮಾರ್‌ ಕಟೀಲ್‌ ಅವರು ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ‘ಕನ್ನಡಪ್ರಭ’ ಜೊತೆ ಮಾತನಾಡಿದ್ದಾರೆ.

Latest Videos

undefined

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಂಸದರಾಗಿ ನಿಮ್ಮ ಅಭಿಪ್ರಾಯ ಏನು?

ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಭಾರತದ ಗೌರವವನ್ನು ಜಗತ್ತಿನ ಎತ್ತರಕ್ಕೆ ಹೆಚ್ಚಿಸಿದ ಸರ್ಕಾರ ಇದು. ಪ್ರಧಾನಿ ಮೋದಿ ಅವರ ಜನಮೆಚ್ಚಿದ, ಜಗಮೆಚ್ಚಿದ ಉತ್ತಮ ಆಡಳಿತವನ್ನು 2014ರಿಂದ ಇಂದಿನವರೆಗೆ ನಾನು ಕಂಡಿದ್ದೇನೆ.

ಸಂಸದರಾಗಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಹೇಗೆ ತುಲನೆ ಮಾಡುತ್ತೀರಿ?

2009ರಿಂದ 2014ರವರೆಗೆ ಪ್ರಥಮ ಬಾರಿ ಸಂಸದನಾಗಿದ್ದಾಗ ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದರು. ಆಗ ದೇಶದಲ್ಲಿ ಆಡಳಿತ ಇರಲಿಲ್ಲ. ಈಗ ಸರ್ಕಾರವೇ ಆಡಳಿತ ನಡೆಸುತ್ತಿದೆ. ಕಳೆದ 6 ವರ್ಷಗಳಲ್ಲಿ ಹಾಕಿಕೊಂಡಿರುವ ಅಭಿವೃದ್ಧಿ ಹಾಗೂ ಯೋಜನೆಯ ವೇಗವನ್ನು ಅಟಲ್‌ ಬಿಹಾರಿ ವಾಜಪೇಯಿ ಅಧಿಕಾರದ ಅವಧಿಯನ್ನು ಹೊರತುಪಡಿಸಿದರೆ ಹಿಂದೆ ಯಾವತ್ತೂ ಕಂಡಿಲ್ಲ. ಅಟಲ್‌ಜೀ ಅವಧಿಯಲ್ಲಿ ದೇಶಾದ್ಯಂತ ಅಭಿವೃದ್ಧಿ ಯೋಜನೆಗಳಿಗೆ ವೇಗ ಸಿಕ್ಕಿತ್ತು. ಆಗ ದಿನಕ್ಕೆ 11 ಕಿ.ಮೀ. ರಸ್ತೆ ಅಭಿವೃದ್ಧಿಯಾಗುತ್ತಿತ್ತು. ಯುಪಿಎ ಅವಧಿಯಲ್ಲಿ ಅದು 4 ಕಿ.ಮೀ.ಗೆ ಇಳಿದಿತ್ತು. ಈಗ 24 ಕಿ.ಮೀ.ಗೆ ಏರಿಕೆಯಾಗಿದೆ. ಒಬ್ಬ ನಾಯಕನಿಗೆ ದೂರದರ್ಶಿತ್ವ ಹಾಗೂ ವೈಚಾರಿಕ ಬದ್ಧತೆ ಇದ್ದರೆ ಹೇಗೆ ಸಮರ್ಥ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ.

ಭಾರತದಲ್ಲಿ ಕೊರೋನಾ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿ ಸರಿಯಾಗಿದೆಯೇ?

ಬಹಳ ಅದ್ಭುತವಾಗಿ ಕೋವಿಡ್‌-19 ಅನ್ನು ನಿಭಾಯಿಸಲಾಗುತ್ತಿದೆ. ಜಗತ್ತಿನ ಹಿರಿಯಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕ ಇದರಲ್ಲಿ ಸೋತಿದೆ. ವೈದ್ಯಕೀಯ ರಂಗದಲ್ಲಿ ಮುಂಚೂಣಿಯಲ್ಲಿರುವ ಇಟಲಿ ಕೂಡ ಸೋತು, ಭಾರತ ಗೆಲವು ಸಾಧಿಸಿದೆ. ಕೊರೋನಾ ಸೋಂಕು ಹರಡುವಿಕೆ ಮತ್ತು ಸಾವಿನ ಸಂಖ್ಯೆ ಭಾರತದಲ್ಲಿ ನಿಯಂತ್ರಣದಲ್ಲಿದೆ. ಪ್ರಧಾನಿಯವರು ಕೂಡಲೇ ಜನತಾ ಕಫä್ರ್ಯ, ಲಾಕ್‌ಡೌನ್‌ನಂತಹ ತೀರ್ಮಾನ ಕೈಗೊಂಡಿದ್ದಕ್ಕೆ ದೇಶದ 130 ಕೋಟಿ ಜನತೆಯ ಮೇಲಿನ ವಿಶ್ವಾಸವೇ ಕಾರಣ.

ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ರು.ಗಳ ಬೃಹತ್‌ ವಿಶೇಷ ಪ್ಯಾಕೇಜ್‌ನಿಂದ ಆರ್ಥಿಕತೆ ಅಭಿವೃದ್ಧಿಯಾಗಲು ಸಾಧ್ಯವೇ?

ಭಾರತದಲ್ಲಿ ಯಾರೂ ನಿರೀಕ್ಷಿಸದ ಆರ್ಥಿಕತೆ ಉತ್ತೇಜನದ ಪ್ಯಾಕೇಜ್‌ ಅನ್ನು ಪ್ರಧಾನಿ ಘೋಷಿಸಿದ್ದಾರೆ. ಇದೊಂದು ಅದ್ಭುತ. ಸ್ವದೇಶಿ ಭಾರತ ಪರಿಕಲ್ಪನೆಯಲ್ಲಿ ಇದನ್ನು ರೂಪಿಸಲಾಗಿದೆ. ದೇಶದಲ್ಲೇ ಉತ್ಪಾದಿಸಿ, ಸ್ವಾಭಿಮಾನಿ ಭಾರತ ನಿರ್ಮಾಣ ಇದರ ಉದ್ದೇಶ.

ದೇಶದ ಆರ್ಥಿಕತೆಗೆ ಕೊರೋನಾ ಸಾಕಷ್ಟುಹೊಡೆತ ನೀಡಿದೆ. ಇದರಿಂದ ಚೇತರಿಕೆ ಸುಲಭ ಸಾಧ್ಯವೇ?

ಕಷ್ಟಬಂದಾಗ ಕಣ್ಣೀರು ಹಾಕುತ್ತಾ ಕೂರುವುದಲ್ಲ. ಬೇಗನೆ ಎದ್ದುನಿಂತು ಬೇರೆ ದೇಶಗಳಿಗಿಂತ ಮುಂದೆ ಹೋಗುವ ಜಾಯಮಾನ ಭಾರತದ್ದು. ಭಾರತ ತನ್ನ ಸಾಮರ್ಥ್ಯದಿಂದ ಆರ್ಥಿಕ ಚೈತನ್ಯವನ್ನು ಪಡೆಯಲಿದೆ. ಜಗತ್ತಿನ ಮಾರುಕಟ್ಟೆಎದುರು ಭಾರತ ಅಗ್ರಪಂಕ್ತಿಯಲ್ಲಿರಲಿದೆ. ಪ್ರಧಾನಿ ಘೋಷಿಸಿದ ಆರ್ಥಿಕ ಪ್ಯಾಕೇಜ್‌ನಿಂದಾಗಿ ಇನ್ನು ಎರಡು ವರ್ಷಗಳಲ್ಲಿ ಮತ್ತೆ ಉದ್ಯಮಶೀಲತೆಯಲ್ಲಿ ಭಾರತ ದಾಪುಗಾಲು ಕಾಣಲಿದೆ.

ಸಂಸದರ 3 ವರ್ಷದ ವೇತನ ಜೊತೆಗೆ ಸಂಸದರ ನಿಧಿಯನ್ನೂ ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಹೀಗಾದರೆ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಹೇಗೆ?

ದೇಶಕ್ಕೆ ಆಪತ್ತು ಬಂದಾಗ ನಿಧಿಯ ಬಳಕೆ ಅನಿವಾರ್ಯ. ಇದೊಂದು ಸಹಜ ಪ್ರಕ್ರಿಯೆ. ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಆಪತ್ತು ನಿಧಿಗಳು ಮರಳಿ ಜನತೆಗೆ ಸೇರುತ್ತವೆ. ಹಾಗಾಗಿ ಇದು ಪೂರ್ತಿಯಾಗಿ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಗ್ರಾಮ ಪಂಚಾಯ್ತಿಗಳು ಕೂಡ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಪ್ರತ್ಯೇಕ ಅನುದಾನದ ಬೇಡಿಕೆ ಇದೆಯೇ?

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಕೋವಿಡ್‌ಗೆ ಪ್ಯಾಕೇಜ್‌ ರೂಪದಲ್ಲಿ ನೆರವು ಬಿಡುಗಡೆ ಮಾಡಿದೆ. ಕೇಂದ್ರದಿಂದ ರಾಜ್ಯಗಳಿಗೆ ನ್ಯಾಯ ಸಿಕ್ಕಿಯೇ ಸಿಗುತ್ತದೆ. ಕರ್ನಾಟಕಕ್ಕೂ ಕೂಡ.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಹುದ್ದೆ ಎರಡನ್ನೂ ಈಗ ಹೇಗೆ ನಿಭಾಯಿಸುತ್ತೀರಿ?

ನನ್ನ ಹಾಗೆಯೇ ಜನಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ ಇದ್ದಾರೆ. ಅವರೆಲ್ಲರೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸ್ವಕ್ಷೇತ್ರಕ್ಕೆ ಇಂತಿಷ್ಟುದಿನ, ಉಳಿದ ಶೇ.70 ದಿನವನ್ನು ರಾಜ್ಯ ಪ್ರವಾಸಕ್ಕೆ ಮೀಸಲಿರಿಸಿದ್ದೇನೆ. ಈಗಾಗಲೇ ಮೂರನೇ ಸುತ್ತಿನ ಪ್ರವಾಸ ಮುಕ್ತಾಯಗೊಳಿಸಿದ್ದೇನೆ. ಆಯಾ ಕ್ಷೇತ್ರಗಳ ಭೌಗೋಳಿಕ ಅಧ್ಯಯನ, ರಾಜಕೀಯ ತಿಳಿವಳಿಕೆ ಗಳಿಸಿಕೊಂಡಿದ್ದೇನೆ. ಪ್ರವಾಸದಿಂದ ರಾಜ್ಯಕ್ಕೆ ಹಾಗೂ ಪಕ್ಷ ಸಂಘಟನೆಗೆ ಲಾಭವಾಗುವಂತೆ ನೋಡಿಕೊಂಡಿದ್ದೇನೆ. ಯಡಿಯೂರಪ್ಪ ಅವರು ಅನುಭವಿ ಸಿಎಂ ಆಗಿರುವುದರಿಂದ ಕೋವಿಡ್‌ ನಿಯಂತ್ರಣದಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯ 2ನೇ ಸ್ಥಾನ ಪಡೆಯಿತು. ಸಿಎಂ ಅವರು ಹೆಚ್ಚು ಕ್ರಿಯಾಶೀಲ ಇರುವ ಕಾರಣ ಪಕ್ಷ ಕಡೆಗೆ ಗಮನ ಕೊಟ್ಟರೆ ಸಾಕಾಗುತ್ತದೆ. ಅದೇ ರೀತಿ ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಈಶ್ವರಪ್ಪ, ಪ್ರಹ್ಲಾದ್‌ ಜೋಶಿ ಮುಂತಾದವರ ಮಾರ್ಗದರ್ಶನ ಪಡೆಯುತ್ತಿರುತ್ತೇನೆ.

ಪ್ರಸಕ್ತ ರಾಜ್ಯ ಸರ್ಕಾರದ ಆಡಳಿತ ಹೇಗೆ ನಡೆಯುತ್ತಿದೆ? ನಿಮ್ಮ ನಿಲುವು ಏನು?

ಬಿಎಸ್‌ವೈ ಸರ್ಕಾರ ಅದ್ಭುತವಾಗಿ ಆಡಳಿತ ನಡೆಸುತ್ತಿದೆ. ಯಡಿಯೂರಪ್ಪ ಸಿಎಂ ಆದಾಗ ನೆರೆ ಬಂತು, ಹಿಂದಿನ ಯಾವ ಸಿಎಂ ಮಾಡದಂತೆ ಅವರೊಬ್ಬರೇ ರಾಜ್ಯವ್ಯಾಪಿ ಓಡಾಟ ನಡೆಸಿ ಸಮರ್ಥವಾಗಿ ಪರಿಹಾರ ಕಾರ್ಯ ಕೈಗೊಂಡು ಸಂತ್ರಸ್ತರ ಕಣ್ಣೀರು ಒರೆಸಿದರು. ನಂತರ ಉಪಚುನಾವಣೆ ಬಂತು, ಅದರಲ್ಲೂ ಅಹರ್ನಿಶಿ ಪ್ರಚಾರ ನಡೆಸಿ ಗೆಲುವು ಪಡೆದರು. ಅಭಿವೃದ್ಧಿಗೆ ವೇಗ ಸಿಗುವ ವೇಳೆ ಈಗ ಕೊರೋನಾ ಕಾಣಿಸಿ ಲಾಕ್‌ಡೌನ್‌ ಆಯಿತು. ಆದರೂ ಗಟ್ಟಿತೀರ್ಮಾನ ತೆಗೆದುಕೊಂಡು ಸಿಎಂ ಅವರು ರಾಜ್ಯದಲ್ಲೂ ಕೋವಿಡ್‌ ಪ್ಯಾಕೇಜ್‌ ಪ್ರಕಟಿಸಿದರು. ಇದರಿಂದಾಗಿ ವಿಪಕ್ಷಗಳು ಕೂಡ ಸಿಎಂರನ್ನು ಹೊಗಳುವಂತಾಗಿದೆ. ಅಂದರೆ ವಿರೋಧಿಗಳೂ ಹೊಗಳುವ ಶೈಲಿಯ ಆಡಳಿತವನ್ನು ಯಡಿಯೂರಪ್ಪ ನೀಡುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ.

ಕೊರೋನಾ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಪಕ್ಷದಿಂದ ಸರ್ಕಾರಕ್ಕೆ ಏನು ಸಲಹೆ ನೀಡಲು ಬಯಸುತ್ತೀರಿ?

ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರದ ನೆರವಿಗೆ ಪೂರಕವಾಗಿ ಪಕ್ಷದಿಂದಲೂ ಕಾರ್ಯಕರ್ತರು, ಶಾಸಕರು ಜನತೆಗೆ ಎಲ್ಲರ ಸಹಕಾರದಿಂದ ಆಹಾರ ಕಿಟ್‌ಗಳನ್ನು ವಿತರಿಸಿದ್ದಾರೆ. ರಾಜ್ಯದಲ್ಲಿ ಸುಮಾರು ಎರಡೂವರೆ ಕೋಟಿ ಮಂದಿಗೆ ಆಹಾರ ನೀಡಲಾಗಿದೆ. ಒಂದೂವರೆ ಕೋಟಿ ಆಹಾರ ಕಿಟ್‌ ವಿತರಿಸಲಾಗಿದೆ. ಈಗ ಸಿಎಂ ತೆಗೆದುಕೊಂಡ ನೆರವಿನ ತೀರ್ಮಾನ ಸರಿಯಾಗಿಯೇ ಇದೆ. ಮುಂದೆ ಕೊರೋನಾ ವ್ಯಾಪಿಸದಂತೆ ಸಿಎಂರಿಂದ ಮತಗಟ್ಟೆವರೆಗೆ ಎಲ್ಲರೂ ಸರ್ಕಾರದ ಜೊತೆಗೆ ಕೈಜೋಡಿಸಬೇಕಾಗಿದೆ.

ಕೇಂದ್ರ ಸರ್ಕಾರ ಕಾರ್ಪೊರೇಟ್‌ ವಲಯಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಏನು ಹೇಳುತ್ತೀರಿ?

ಸಾಮಾನ್ಯ ರೈತನಿಂದ ಬಹಳ ಬಡತನ ಹೊಂದಿರುವ ವ್ಯಕ್ತಿಗೂ ಜೀವನೋಪಾಯ ಕಲ್ಪಿಸಿದ್ದು ಈ ಕೇಂದ್ರ ಸರ್ಕಾರ. ಉದಾಹರಣೆಗೆ ಉಜ್ವಲ ಯೋಜನೆಯಲ್ಲಿ ಮಹಿಳೆಯರಿಗೆ ಗ್ಯಾಸ್‌ ಸಿಲಿಂಡರ್‌ ವಿತರಣೆ, 18 ಸಾವಿರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, ಕೋಟ್ಯಂತರ ಮನೆ ಬಾಗಿಲಿಗೆ ಶೌಚಾಲಯ, ವಸತಿ ಹೀನರಿಗೆ ವಸತಿ, ಸಾಮಾನ್ಯ ವರ್ಗಕ್ಕೆ ಜನಧನ್‌ ಹಣ ನೀಡಲಾಗಿದೆ. ಸಾಮಾನ್ಯರೂ ಬ್ಯಾಂಕ್‌ ಖಾತೆ ನಿರ್ವಹಣೆ ಮಾಡುವುದನ್ನು ಕಲಿಸಲಾಗಿದೆ. ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಬಡವರಿಗೆ ಆರೋಗ್ಯ ಸೌಲಭ್ಯ, ಮೇಕ್‌ ಇನ್‌ ಇಂಡಿಯಾದಡಿ ಸಾಮಾನ್ಯರಲ್ಲಿ ಉದ್ಯಮಶೀಲತೆ, ಸ್ಕಿಲ್‌ ಇಂಡಿಯಾದಲ್ಲಿ ವೃತ್ತಿ ಬದುಕು ರೂಪಿಸಿದ್ದು ಮೋದಿ ಸರ್ಕಾರ. ಹಾಗಿರುವಾಗ ಹೇಗೆ ಮೋದಿ ಸರ್ಕಾರವನ್ನು ಕಾರ್ಪೊರೇಟ್‌ ವಲಯ ಪರ ಎಂದು ಬೊಟ್ಟು ಮಾಡಲು ಸಾಧ್ಯ? ಹಳದಿ ರೋಗದ ಕಣ್ಣುಗಳಲ್ಲಿ ಎಲ್ಲವೂ ಹಳದಿಯೇ ಕಾಣುತ್ತದೆ ಎನ್ನುವುದು ಇದಕ್ಕೆ.

ಹಾಗಾದರೆ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಸಮರ್ಪಕವಾಗಿಲ್ಲ ಎಂದು ವಿಪಕ್ಷಗಳು ಪದೇ ಪದೇ ಆರೋಪಿಸುವುದು ಯಾಕೆ?

ಜಗತ್ತಿನಲ್ಲಿ ಆರ್ಥಿಕತೆ ಕುಸಿತ ಆದಾಗ, ನೋಟ್‌ ಬ್ಯಾನ್‌ ಬಂದ ಮೇಲೂ ಬೇರೆಲ್ಲ ದೇಶಕ್ಕಿಂತ ಆರ್ಥಿಕ ಸ್ಥಿತಿ ಚೆನ್ನಾಗಿರುವುದು ಭಾರತದಲ್ಲಿ ಮಾತ್ರ. ಜಗತ್ತು ಕೊರೋನಾದಿಂದ ತತ್ತರಿಸುತ್ತಿರುವಾಗ ಅದನ್ನು ನಿಯಂತ್ರಿಸಲು 20 ಲಕ್ಷ ಕೋಟಿ ರು.ಗಳ ಬೃಹತ್‌ ಯೋಜನೆ ಪ್ರಕಟಿಸಿದ್ದು ಭಾರತ. ಆದ್ದರಿಂದ ಭಾರತದ ಆರ್ಥಿಕತೆ ಉತ್ತಮವಾಗಿದೆ ಎಂದೇ ಅರ್ಥ.

ರಾಜ್ಯದಲ್ಲಿ ಕಳೆದ ಬಾರಿ ಭಾರೀ ನೆರೆ ಪರಿಸ್ಥಿತಿ ತಲೆದೋರಿದಾಗ ಕೇಂದ್ರ ಸರ್ಕಾರ ವಿಳಂಬವಾಗಿ ಸ್ಪಂದಿಸಿದ್ದು ಸ್ವಪಕ್ಷೀಯರ ಅಸಮಾಧಾನಕ್ಕೂ ಕಾರಣವಾಗಿತ್ತಲ್ಲವೇ?

ಆಗ ದೇಶದಲ್ಲಿ ಹಲವಾರು ರಾಜ್ಯಗಳಿಗೆ ನೆರೆ ಬಂದಿತ್ತು. ಪ್ರತಿ ವರ್ಷ ಪ್ರಾಕೃತಿಕ ವಿಕೋಪ ಸಮಸ್ಯೆಗಳು ಬಂದಾಗ ಬೇರೆ ಬೇರೆ ಹಂತಗಳಲ್ಲಿ ಕೇಂದ್ರ ಸರ್ಕಾರ ನೆರವು ಬಿಡುಗಡೆ ಮಾಡುತ್ತದೆ. ರಾಜ್ಯಗಳಿಗೆ ಪರಿಹಾರ ನೀಡಬೇಕಾದರೆ, ಅದರದ್ದೇ ಆದ ಮಾನದಂಡಗಳಿವೆ. ಅದರ ಅನುಸಾರ ಪರಿಹಾರ ನೀಡಬೇಕು. ಮೊದಲು ತಕ್ಷಣದ ಪರಿಹಾರ ನೀಡಿ, ನಂತರ ಅಧ್ಯಯನ ತಂಡದ ವರದಿ ಆಧರಿಸಿ ಹೆಚ್ಚಿನ ಪರಿಹಾರ ನೀಡುವುದು ಕ್ರಮ. ಕರ್ನಾಟಕಕ್ಕೂ ಹೆಚ್ಚಿನ ಕೇಂದ್ರ ನೆರವು ಲಭಿಸಿದೆ.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಆಡಳಿತ ವೈಖರಿ ಹೇಗಿದೆ?

ಇವರಿಬ್ಬರೂ ಮಂತ್ರಿ ಮಂಡಲವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ಕೈಗೊಳ್ಳುತ್ತಾರೆ. ಸಚಿವರಿಗೂ ಖಾತೆ ನಿರ್ವಹಣೆಯಲ್ಲಿ ಸ್ವಾತಂತ್ರ್ಯ ನೀಡಿದ್ದಾರೆ. ಈವರೆಗೆ ಯಾರೊಬ್ಬರೂ ಅಪಸ್ವರ ಎತ್ತಿಲ್ಲ. ಪ್ರಧಾನಿಯವರು ಟೀಂ ಆಗಿ ಯೋಜನೆ ರೂಪಿಸಿ ತಜ್ಞರ ಅಭಿಪ್ರಾಯವನ್ನೂ ಪಡೆದು ಕಾರ್ಯನಿರ್ವಹಿಸುತ್ತಾರೆ. ಸರ್ವರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಾರೆ. ಯುಪಿಎ ಸರ್ಕಾರ ಇದ್ದಾಗ ಪ್ರಧಾನಿ ಮೌನವಾಗಿದ್ದರು. ಆಗ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದುದು 10 ಜನಪಥ ನಿವಾಸ. ಆದರೆ ಈಗ ಪ್ರಧಾನಿ ತೀರ್ಮಾನ, ಪಕ್ಷದ ತೀರ್ಮಾನ ಎಲ್ಲವೂ ಒಂದೇ. ಆಗ ಪ್ರಧಾನಿ ತೀರ್ಮಾನವನ್ನು ಅವರ ಪಕ್ಷದ ಚುಕ್ಕಾಣಿ ಹಿಡಿದವರೇ ಹರಿದುಹಾಕುತ್ತಿದ್ದರು. ಆಗ ದೇಶಕ್ಕೆ ಅವಮಾನ ಮಾಡುತ್ತಿದ್ದರೆ, ಈಗ ದೇಶದ ಬಗ್ಗೆ ಗೌರವ ಮೂಡಿಸಲಾಗುತ್ತಿದೆ.

ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಎಂ ಘೋಷಿಸಿದ ಪ್ಯಾಕೇಜ್‌ ಎಲ್ಲ ವರ್ಗಗಳನ್ನು ತಲುಪಿಲ್ಲ ಎಂಬ ಟೀಕೆ ಇದೆಯಲ್ಲ?

ಸಿಎಂ ಯೋಜನೆ ರೂಪಿಸಿದ್ದಾರೆ. ಆಯಾ ಇಲಾಖೆಗೆ ಫಲಾನುಭವಿಗಳ ಪಟ್ಟಿಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಇದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ.

ರಾಜ್ಯಾದ್ಯಂತ ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ?

ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಪೇಜ್‌ ಪ್ರಮುಖರನ್ನು ನೇಮಿಸುವ ಕಾರ್ಯ ನಡೆಯುತ್ತಿದೆ. ಈಗ ಪ್ರತಿ ಮತಗಟ್ಟೆಯಲ್ಲಿ ನೂರಕ್ಕಿಂತ ಜಾಸ್ತಿ ಕಾರ್ಯಕರ್ತರಿದ್ದಾರೆ. ರಾಜ್ಯವ್ಯಾಪಿ ಪ್ರವಾಸ ನಡೆಸಿ ಪಕ್ಷವನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಲಾಗುತ್ತಿದೆ.

ರಾಜ್ಯಾಧ್ಯಕ್ಷರಾಗಿ ನಿಮ್ಮ ಮತ್ತು ಸಿಎಂ ನಡುವಿನ ಒಡನಾಟ ಹೇಗಿದೆ?

ಸಿಎಂ ಅವರ ಬಗ್ಗೆ ಗೌರವದ ಅಭಿಮಾನ, ಸ್ಥಾನ ನನ್ನಲ್ಲಿದೆ. ನಮ್ಮೊಳಗಿನ ಬಾಂಧವ್ಯ ಚೆನ್ನಾಗಿಯೇ ಇದೆ. ಅವರು ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ. ಪಕ್ಷದಲ್ಲಿ ವ್ಯತ್ಯಾಸ ಇದ್ದರೆ, ದೂರವಾಣಿ ಕರೆ ಮಾಡಿ ತಿಳಿಸುತ್ತಾರೆ. ಪ್ರತಿ ತಿಂಗಳು ಎರಡು ಬಾರಿ ಕೋರ್‌ ಕಮಿಟಿ ಸಭೆ ಸೇರುತ್ತೇವೆ. 15 ದಿನಕ್ಕೊಮ್ಮೆ ವೈಯಕ್ತಿಕವಾಗಿ ಕುಳಿತು ಮಾತುಕತೆ ನಡೆಸುತ್ತೇವೆ.

‘ಕಾರ್ಯಕರ್ತ’ ಎಂಬ ಶಬ್ದವೇ ದೊಡ್ಡ ಹುದ್ದೆ!

ಮೂರನೇ ಬಾರಿ ಸಂಸದ, ಮೊದಲ ಬಾರಿ ರಾಜ್ಯಾಧ್ಯಕ್ಷ, ಮುಂದೆ...?

ನಾನು ಆರ್‌ಎಸ್‌ಎಸ್‌ ಸ್ವಯಂಸೇವಕ. ಸಂಘ ಕಾರ್ಯದಿಂದ ರಾಷ್ಟ್ರ ಕಾರ್ಯಕ್ಕೆ ಬಂದಿದ್ದೇನೆ. ಯಾವುದೇ ಆಸೆ, ಅಪೇಕ್ಷೆ ಇಲ್ಲದೆ ಪಕ್ಷದ ಹಿರಿಯರು ಹಾಕಿಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಅಧಿಕಾರ ಸಿಕ್ಕಿದಾಗ ಏನಾಗುತ್ತೇನೆ ಎಂದು ಗೊತ್ತಿರಲಿಲ್ಲ, ಮುಂದೆ ಏನಾಗುತ್ತದೆ ಎಂಬುದೂ ಗೊತ್ತಿಲ್ಲ. ಆದರೆ ಕಟ್ಟಕಡೆಯವರೆಗೆ ಉಸಿರಿನ ತನಕ ನಾನೊಬ್ಬ ಸ್ವಯಂಸೇವಕ ಹಾಗೂ ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಎಲ್ಲದಕ್ಕಿಂತ ದೊಡ್ಡ ಗೌರವ ‘ಕಾರ್ಯಕರ್ತ’ ಎಂಬ ಶಬ್ದ. ಅದುವೇ ನನಗೆ ದೊಡ್ಡ ಹುದ್ದೆ!

ದೇಶದಲ್ಲಿ ತಲೆದೋರಿದ ಭದ್ರತಾ ಆತಂಕ, ಆರ್ಥಿಕ ಹಿಂಜರಿತದಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸರ್ವಪಕ್ಷ ಸಭೆ ಕರೆಯಲು ಪ್ರಧಾನಿ ಹಿಂದೇಟು ಹಾಕುತ್ತಾರೆ ಎಂಬ ವಿಪಕ್ಷಗಳ ಟೀಕೆಗೆ ಏನು ಹೇಳುತ್ತೀರಿ?

ಎಲ್ಲ ಸಂದರ್ಭಗಳಲ್ಲಿ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ಈ ಹಿಂದೆಯೂ ಈಗಲೂ ಸರ್ವಪಕ್ಷ ಸಭೆ ನಡೆಸಿಕೊಂಡು ತೀರ್ಮಾನಿಸಲು ಸಮಯ ಇರುವುದಿಲ್ಲ. ಅಧಿಕಾರದ ಅವಕಾಶ ಸಿಗದೆ, ಎಲ್ಲದರಲ್ಲೂ ವಿಫಲರಾದ ವಿಪಕ್ಷಗಳು ಯಾವುದೇ ಕಾರಣ ಸಿಗದಿದ್ದಾಗ ಈ ರೀತಿಯ ಟೀಕೆ ಮಾಡುತ್ತಿವೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿರುವುದು. ಇದು ರಾಜ್ಯ ಸರ್ಕಾರಕ್ಕೆ ಹಿನ್ನಡೆಯಲ್ಲವೇ?

-ಕೋವಿಡ್‌ ವಿಚಾರದಲ್ಲಿ ಕೇಂದ್ರ ಸರ್ಕಾರ ತಜ್ಞರ ತಂಡದ ಸಲಹೆ ಮಾರ್ಗದರ್ಶನ ಪಡೆದುಕೊಂಡು ಸೂಚನೆಗಳನ್ನು ನೀಡುತ್ತದೆ. ಅದರ ಪ್ರಕಾರ ಲಾಕ್‌ಡೌನ್‌, ಸಡಿಲಿಕೆ, ತೆರವು ನಡೆಯುತ್ತದೆ. ಈ ಆಧಾರದಲ್ಲಿ ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳುತ್ತವೆ. ಆದರೆ ವಿಪಕ್ಷಗಳಿಗೆ ಯಾವುದೇ ಆಸ್ತ್ರ ಇಲ್ಲದೆ ಮದ್ಯ ಮಾರಾಟ, ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆಯನ್ನು ಬಳಸಿಕೊಳ್ಳುತ್ತಿವೆ. ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರೂಪಿಸಲಾಗಿತ್ತು. ಅದನ್ನು ಎಲ್ಲ ರಾಜ್ಯಗಳು ಅಂಗೀಕರಿಸಿವೆ. ನಮ್ಮ ರಾಜ್ಯದಲ್ಲಿ ಬಾಕಿ ಇತ್ತು, ಈಗ ಅಂಗೀಕಾರ ಪಡೆದುಕೊಳ್ಳುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
 

click me!