ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

By Kannadaprabha News  |  First Published May 30, 2020, 2:01 PM IST

ಪ್ರಧಾನಿ ಮೋದಿ ಸಂಸದರ ಜೊತೆ ಹೇಗಿರ್ತಾರೆ..? ಫ್ರೆಂಡ್ಲೀ ಆಗಿರ್ತಾರಾ..? ಹೇಗೆ ವ್ಯವಹರಿಸುತ್ತಾರೆ..? ಈ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ.. ಮೋದಿ ಜೊತೆಗಿನ ಒಡನಾಟದ ಘಟನೆಗಳ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ ಓದಿ


ಚಿಕ್ಕಬಳ್ಳಾಪುರ(ಮೇ 30): ಮಾರಕ ಕೊರೋನಾ ವೈರಸ್‌ ದೇಶಕ್ಕೆ ನೂರು ವರ್ಷಗಳಿಗಾಗುವಷ್ಟುಪಾಠ ಕಲಿಸಿದೆ. ಈ ಸವಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಖಂಡಿತವಾಗಿಯೂ ಭಾರತ ಗೆಲುವು ಸಾಧಿಸಲಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಬಿ.ಎನ್‌. ಬಚ್ಚೇಗೌಡ. ‘ಕನ್ನಡಪ್ರಭ’ಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಸಂಸತ್‌ ಕಲಾಪ ನಡೆಯುವಾಗ ಪ್ರತಿ ಮಂಗಳವಾರ ಪ್ರಧಾನಿ ಮೋದಿ ನಡೆಸುವ ಸಭೆ ಕುರಿತೂ ಹೇಳಿದ್ದಾರೆ. ಸಂದರ್ಶನದ ಪೂರ್ಣಪಾಠ ಇಂತಿದೆ.

ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ 1 ವರ್ಷವಾಗಿದೆ. ಸಂಸದರ ಜತೆ ಅವರು ಹೇಗೆ ವ್ಯವಹರಿಸುತ್ತಾರೆ?

Tap to resize

Latest Videos

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 543 ಮಂದಿ ಸಂಸದರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಆಯಾ ಖಾತೆಯ ಸಚಿವರನ್ನು ಭೇಟಿ ಮಾಡಿದರೆ ಸಾಕು ನಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ. ಹಾಗಾಗಿ ಪದೇಪದೇ ಪ್ರಧಾನಿಯವರನ್ನು ಭೇಟಿ ಮಾಡಬೇಕಾದ ಅಗತ್ಯವಿಲ್ಲ. ಸಂಸತ್‌ ಕಲಾಪಗಳು ನಡೆಯುವ ವೇಳೆ ಪ್ರತಿ ಮಂಗಳವಾರ ಸಂಸದರ ಸಭೆಯನ್ನು ಪ್ರಧಾನಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ಸಂಸದರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಪ್ರಧಾನಿಯವರನ್ನು ಅಗತ್ಯವಾಗಿ ಭೇಟಿಯಾಗಬೇಕು ಎನ್ನುವುದಾದರೆ ಅವರ ಮನೆಗೇ ಕರೆದು ಮಾತನಾಡುತ್ತಾರೆ. ನಮ್ಮ ರಾಜ್ಯದಲ್ಲಿ ಪಕ್ಷ ಸಂಘಟನೆ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮುಂತಾದ ವಿಚಾರಗಳ ಬಗ್ಗೆ ಸಂಸದರನ್ನು ಪ್ರಧಾನಿ ವಿಚಾರಿಸುತ್ತಾರೆ.

ನೀವು ಸಂಸದರಾಗಿ 1 ವರ್ಷವಾಯ್ತು. ಕ್ಷೇತ್ರಕ್ಕಾಗಿ ಏನೇನು ಕೆಲಸ ಮಾಡಿದ್ದೀರಿ?

ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಒಂದು ವರ್ಷದಲ್ಲಿ ನಾನು ಸಾಕಷ್ಟುಶ್ರಮಿಸಿದ್ದೇನೆ. ವೈದ್ಯಕೀಯ ಕಾಲೇಜು ನಿರ್ಮಾಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಲ್ಲಿ ಆರಂಭಿಸಲು ಸಚಿವ ಸಚಿವ ಡಾ ಕೆ. ಸುಧಾಕರ್‌ ಮತ್ತು ನಾನು ಸಾಕಷ್ಟುಶ್ರಮಿಸಿದ್ದೇವೆ. ಇನ್ನು ವಿಶ್ವ ವಿಖ್ಯಾತ ಎಂಜಿನಿಯರ್‌ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಈಗಾಗಲೇ ನಾನು ಇಟ್ಟಿದ್ದೇನೆ. ಇದಕ್ಕೆ ಕೇಂದ್ರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನೂತನ ರೈಲು ಮಾರ್ಗಗಳ ಬಗ್ಗೆ ರಾಜ್ಯದವರೇ ಆದ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಈ ಕುರಿತು ಅವರೂ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನದಲ್ಲಿ ಜಿಲ್ಲೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.

ಚಿಕ್ಕಬಳ್ಳಾಪುರದ ಪ್ರಮುಖ ಸಮಸ್ಯೆಯೇ ನೀರು. ಅದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?

ಹೌದು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ನೀರಾವರಿ ಸಮಸ್ಯೆ ಇದೆ. ಇದರ ಪರಿಹಾರಕ್ಕಾಗಿ ಸಚಿವ ಸುಧಾಕರ್‌ ಅವರೂ ಹೆಚ್ಚು ಶ್ರಮಿಸುತ್ತಿದ್ದಾರೆ. ಈಗಾಗಲೇ ಎಚ್‌ಎನ್‌ ವ್ಯಾಲಿ ನೀರು ಜಿಲ್ಲೆಗೆ ಬಂದಿದೆ. ಎತ್ತಿನಹೊಳೆ ಸೇರಿದಂತೆ ಇತರೆ ಮೂಲಗಳಿಂದ ಜಿಲ್ಲೆಗೆ ನೀರು ತರಲು ಮುಖ್ಯಮಂತ್ರಿಗಳೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೂ ಚರ್ಚೆ ನಡೆಸಿ, ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಶ್ರಮಿಸಲಾಗುತ್ತಿದೆ.

ಕೊರೋನಾ ಸವಾಲನ್ನು ಕೇಂದ್ರ ಸರ್ಕಾರ ಗೆಲ್ಲುತ್ತಾ?

ಇಡೀ ವಿಶ್ವದಲ್ಲಿಯೇ ಯಾವ ದೇಶವೂ ನೀಡದ ಆರ್ಥಿಕ ಪರಿಹಾರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಪ್ರತಿ ವರ್ಷ ದೇಶಕ್ಕೆ ಒಂದೇ ಬಜೆಟ್‌ ಮಂಡನೆ ಆಗುತ್ತಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಎರಡು ಬಜೆಟ್‌ ಮಂಡನೆಯಾಗಿದೆ. ಈಗಾಗಲೇ ಫೆಬ್ರವರಿಯಲ್ಲಿ 30 ಲಕ್ಷ ಕೋಟಿ ರು. ವೆಚ್ಚದ ಆಯವ್ಯಯ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಡಿದ್ದರೆ, ಈಗ ಮತ್ತೆ ಪ್ರಧಾನಿಯವರು 20 ಲಕ್ಷ ಕೋಟಿ ವೆಚ್ಚದ ಮತ್ತೊಂದು ಕೊರೋನಾ ಬಜೆಟ್‌ ಮಂಡನೆ ಮಾಡಿದ್ದಾರೆ. ಹಾಗಾಗಿ ಈ ಬಾರಿ ದೇಶಕ್ಕೆ 50 ಲಕ್ಷ ಕೋಟಿ ವೆಚ್ಚದ ಆಯವ್ಯಯ ಮಂಡನೆಯಾದಂತಾಗಿದೆ. ಕೊರೋನಾ ಸಂಕಷ್ಟಕ್ಕೆ ಸಿಲುಕಿದ ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಣೆಯತ್ತ ತರುವ ಉದ್ದೇಶ ಪ್ರಧಾನಿಯವರಿಗಿದ್ದು, ಈ ಸವಾಲಿನಲ್ಲಿ ಅವರು ಜಯ ಗಳಿಸುವುದು ಖಚಿತ ಎಂಬ ವಿಶ್ವಾಸವಿದೆ.

ಪ್ರಧಾನಿಯ ಸ್ವಾವಲಂಬಿ ಭಾರತದ ಕನಸೇ ನನ್ನ ಕನಸು: ಸಂಸದ ಬಿ ವೈ ರಾಘವೇಂದ್ರ

20 ಲಕ್ಷ ಕೋಟಿ ರು. ಪ್ಯಾಕೇಜ್‌ನಿಂದ ಏನೆಲ್ಲಾ ಬದಲಾವಣೆಯಾಗಬಹುದು?

ಪ್ರಧಾನಿಯವರು 20 ಲಕ್ಷ ಕೋಟಿ ರು. ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಈ ಅನುದಾನದಲ್ಲಿ ಅತಿ ಸಣ್ಣ, ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಸ್ಥಾಪನೆಗಾಗಿ ಸಾಲ ವಿತರಿಸುವ ಕಾರ್ಯ ನಡೆಯಲಿದೆ. ಈ ಮೂಲಕ ಗ್ರಾಮೀಣ, ನಗರ ಎಂಬ ಭೇದ ಇಲ್ಲದೆ ಎಲ್ಲ ಪ್ರದೇಶಗಳಲ್ಲಿಯೂ ಸಣ್ಣ ಕೈಗಾರಿಕೆಗಳು ತಲೆ ಎತ್ತಲಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಉದ್ಯೋಗ ಮಾಡುತ್ತಿದ್ದ ಯುವ ಸಮುದಾಯ ಉದ್ಯೋಗ ನೀಡುವ ಹಂತಕ್ಕೆ ತಲುಪಲಿದೆ. ಇದರಿಂದ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗುವ ಜೊತೆಗೆ ನಿರುದ್ಯೋಗ ನಿವಾರಣೆ ಆಗುವುದು ಬಹುತೇಕ ಖಚಿತ. ಅಲ್ಲದೆ ವಿಶ್ವದ ಮುಂದೆ ಭಾರತ ತಲೆ ಎತ್ತಿ ನಿಲ್ಲುವ ಕಾಲ ಸನ್ನಿಹಿತವಾಗಿದ್ದು, ಇದಕ್ಕೆ ಕೊರೋನಾ ವೇದಿಕೆ ಒದಗಿಸಿದೆ. ಹಾಗಾಗಿ ಕೊರೋನಾ ಸಂಕಷ್ಟದಿಂದ ಪಾರಾದ ನಂತರ ಇಡೀ ವಿಶ್ವಕ್ಕೇ ಭಾರತ ಮಾದರಿಯಾಗಿ ಆರ್ಥಿಕ ಸಬಲತೆ ಹೊಂದಲಿದೆ.

ಕೊರೋನಾ ವಿರುದ್ಧದ ಸರ್ಕಾರದ ಹೋರಾಟ ಹೇಗಿದೆ?

ಪ್ರಸ್ತುತ ಎದುರಾಗಿರುವ ಕೊರೋನಾ ಸಂಕಷ್ಟಮೂರನೇ ಮಹಾಯುದ್ಧಕ್ಕೆ ಸಮನಾಗಿದೆ. ಇದು ಒಂದು ರಾಜ್ಯ ಅಥವಾ ಒಂದು ದೇಶದ ಮೇಲಷ್ಟೇ ಬೀರಿದ ಪ್ರಭಾವ ಅಲ್ಲ. ಇಡೀ ವಿಶ್ವವೇ ಈ ಸೋಂಕಿನಿಂದ ಕಂಗೆಟ್ಟಿದೆ. ಅಮೆರಿಕ, ಇಟಲಿ, ಸ್ಪೇನ್‌ನಂತಹ ದೇಶಗಳೇ ನಡುಗುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟನಿಲುವಿನಿಂದಾಗಿ ಇಂದು ದೇಶ ಹೆಚ್ಚಿನ ಸಮಸ್ಯೆಗೆ ಒಳಗಾಗಿಲ್ಲ. ಜೊತೆಗೆ ಲಾಕ್‌ಡೌನ್‌, ಸೀಲ್‌ಡೌನ್‌ನಂತಹ ದಿಟ್ಟನಿರ್ಧಾರಗಳಿಗೆ ದೇಶದ ಜನತೆಯೂ ಸಂಪೂರ್ಣ ಸಹಕಾರ ನೀಡಿದ ಪರಿಣಾಮ ಇಂದು ದೇಶ ಸುಸ್ಥಿತಿಯಲ್ಲಿದೆ. ಇಲ್ಲವಾದರೆ ಮತ್ತಷ್ಟುಸಂಕಷ್ಟಎದುರಿಸಬೇಕಿತ್ತು. ಹಾಗಾಗಿ ಪ್ರಧಾನಿಯವರ ಕರೆಗೆ ಬೆಂಬಲಿಸಿದ ಎಲ್ಲ ಜನರಿಗೂ ಅಭಿನಂದನೆ ಸಲ್ಲಬೇಕು.

ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರದಿಂದ ಕೊರೋನಾ ನಿಗ್ರಹ ಹೇಗಿದೆ?

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇಡೀ ಸಚಿವ ಸಂಪುಟವನ್ನು ವಿಶ್ವಾಸಕ್ಕೆ ಪಡೆದಿದ್ದಾರೆ. ಡಾ.ಕೆ. ಸುಧಾಕರ್‌, ಡಾ. ಅಶ್ವತ್ಥನಾರಾಯಣ್‌, ಶ್ರೀರಾಮುಲು ಸೇರಿದಂತೆ ಎಲ್ಲ ಸಚಿವರ ಜತೆಗೂಡಿ ಸೋಂಕು ಹರಡದಂತೆ ತಡೆಯುವಲ್ಲಿ ಹೆಚ್ಚಿನ ಶ್ರಮ ಹಾಕಿದ್ದಾರೆ. ಇಡೀ ಸಚಿವ ಸಂಪುಟ ಸೋಂಕು ನಿವಾರಣೆಗಾಗಿ ನಿರಂತರವಾಗಿ ಶ್ರಮಿಸಿದೆ. ವೈದ್ಯರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಾಧ್ಯಮ ಸೇರಿ ಎಲ್ಲರೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಯಡಿಯೂರಪ್ಪ ಅವರ ಪರಿಹಾರ ಕ್ರಮಗಳು ಹೇಗಿವೆ?

ಸಂಕಷ್ಟದ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರು ಹಂತದಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು, ಮಡಿವಾಳರು, ಸವಿತಾ ಸಮಾಜದವರು, ಆಟೋ ಚಾಲಕರು ಸೇರಿದಂತೆ ಎಲ್ಲ ವರ್ಗದ ಕಾರ್ಮಿಕರು, ಬಡವರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಇದರಿಂದ ಜನರ ಕಷ್ಟದೂರವಾಗುತ್ತದೆ ಎಂದಲ್ಲ, ಆದರೆ ಕಷ್ಟದಲ್ಲಿ ನೆರವಾಗಲಿದೆ. ಇದಕ್ಕಿಂತ ಸರ್ಕಾರ ಇನ್ನೇನು ಮಾಡಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪರವಾಗಿ ಕೆಲಸ ಮಾಡುತ್ತಿವೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹಣೆ ಅಗತ್ಯವಿಲ್ಲ.

ಕೊರೋನಾದಿಂದ ನಾವು ಕಲಿಯಬೇಕಾದ ಪಾಠ ಏನು?

ಮುಂದಿನ ನೂರು ವರ್ಷಗಳಿಗೆ ಆಗುವಷ್ಟುಪಾಠವನ್ನು ಪ್ರಸ್ತುತ ಕೊರೋನಾ ಕಲಿಸಿದೆ. ಭಾರತ ಮಾತ್ರವಲ್ಲ ಇಡೀ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆದರೆ ಈ ಸೋಂಕು ಜನರಿಗೆ ಶಿಸ್ತು ಕಲಿಸಿದೆ. ಇದು ಈಗಲೇ ನಿವಾರಣೆಯಾಗುವ ಸೋಂಕಲ್ಲ. ಆದರೆ ನಾವು ಸೋಂಕಿನಿಂದ ದೂರ ಇದ್ದರೆ ಅದೇ ಸಾಯುತ್ತದೆ. ಹಾಗಾಗಿ ಕೊರೋನಾ ದೇಶಕ್ಕೆ ಕಲಿಸಿದ ಪಾಠ ಬಹಳಷ್ಟಿದೆ.

ಕೊನೆಯದಾಗಿ ಏನು ಹೇಳಲು ಬಯಸುತ್ತೀರಾ?

ನಾನು ಮೊದಲೇ ಹೇಳಿದಂತೆ ಕೊರೋನಾ ಸೋಂಕು ಮೂರನೇ ವಿಶ್ವ ಯುದ್ಧಕ್ಕೆ ಸಮವಾಗಿದೆ. ಈ ಸೋಂಕು ಹುಟ್ಟಿನ ಬಗ್ಗೆಯೇ ಸಂಶಯ ಇದೆ. ಇಡೀ ವಿಶ್ವವನ್ನೇ ಆವರಿಸುತ್ತಿರುವ ಭಯಾನಕ ಸೋಂಕು ಇದಾಗಿದೆ. ಹಾಗಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸೋಂಕಿಗೆ ಘಟಾನುಘಟಿ ದೇಶಗಳೇ ನೆಲಕಚ್ಚುತ್ತಿವೆ. ಆದರೆ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿದೆ. ಇದಕ್ಕೆ ಕಾರಣ ಜನರ ಸಹಕಾರವೇ ಆಗಿದೆ. ಪ್ರಧಾನಿಯವರ ಕರೆ ಬೆಂಬಲಿಸಿ ಜನ ಚಪ್ಪಾಳೆ ತಟ್ಟಿದರು, ದೀಪ ಹಚ್ಚಿದರು. ವಿಜ್ಞಾನದಲ್ಲಿ ಪ್ರಪಂಚ ತೀರಾ ಮುಂದಿದೆ. ಇದಕ್ಕೆ ತಪ್ಪದೇ ಲಸಿಕೆ ಕಂಡುಹಿಡಿಯಲಾಗುತ್ತದೆ. ಹಾಗಾಗಿ ಬೇಗ ಲಸಿಕೆ ಸಿಕ್ಕಿ, ಇದು ಜನ ಸಮುದಾಯದಿಂದ ನಾಶವಾಗಲಿ ಎಂದು ಬಯಸುತ್ತೇನೆ.

'ಮೋದಿಜಿ ಬರೀ ವ್ಯಕ್ತಿಯಲ್ಲ; ದೊಡ್ಡ ಶಕ್ತಿ; ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಹರಿಕಾರ'

ಸಂಸದರ ನಿಧಿಗೆ ಕತ್ತರಿ ಹಾಕಿರುವುದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುವುದಿಲ್ಲವೇ?

ಹೌದು, ಸತ್ಯವಾದ ಮಾತು. ಪ್ರತಿ ವರ್ಷ ಸಂಸದರ ನಿಧಿಗೆ 5 ಕೋಟಿ ನೀಡಲಾಗುತ್ತಿತ್ತು. ಇದರಿಂದ ಶಾಲಾ ಕಾಂಪೌಂಡ್‌ ನಿರ್ಮಾಣ, ಬಸ್‌ ತಂಗುದಾಣಗಳ ನಿರ್ಮಾಣ ಸೇರಿದಂತೆ ಹಲವು ಅಬಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕಷ್ಟಕರವಾಗಲಿದೆ. ನೀವು ಏನು ಮಾಡಿದ್ದೀರಿ ಎಂದು ಜನ ಪ್ರಶ್ನಿಸಿದರೆ ಅದಕ್ಕೆ ಏನು ಉತ್ತರ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಎರಡು ವರ್ಷಗಳ ಕಾಲ ಸಂಸದರ ನಿಧಿ ನೀಡದಿರುವುದರಿಂದ ಜನರಿಗೆ ಉಥ್ತರಿಸಲು ಆಗುವುದಿಲ್ಲ. ಇನ್ನು ಸಂಸದರ ವೇತನದಲ್ಲಿಯೂ ಶೇ.30 ರಷ್ಟುಕಡಿತ ಮಾಡಿರುವುದರಿಂದ ಸಮಸ್ಯೆ ಆಗುತ್ತಿದೆ. ಎಲ್ಲವೂ ಕೊರೋನಾ ಮಹಿಮೆ, ಏನೂ ಮಾಡಲು ಸಾಧ್ಯವಿಲ್ಲ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೂರು ಹಂತದಲ್ಲಿ ಘೋಷಣೆ ಮಾಡಿರುವ ಪರಿಹಾರದ ನಂತರವೂ ಹಲವರಿಗೆ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ.

ಹೌದು. ಪ್ರಸ್ತುತ ಕೊರೋನಾ ಸೃಷ್ಟಿಸಿರುವ ಸಮಸ್ಯೆ ಅಷ್ಟುಗಂಭೀರವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಆರ್ಥಿಕವಾಗಿ ಸಂಕಷ್ಟಎದುರಿಸುವ ಪರಿಸ್ಥಿತಿಗೆ ಕೊರೋನಾ ತಂದು ನಿಲ್ಲಿಸಿದೆ. ಆದರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಎಲ್ಲ ತಳ ಸಮುದಾಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲೇ ಬೇಕು. ಆದರೆ ಕೊರೋನಾ ಸಮಯದಲ್ಲಿ ಹೆಚ್ಚು ಶ್ರಮಿಸಿದ ಪತ್ರಕರ್ತರಿಗೂ ಕನಿಷ್ಠ 25 ಸಾವಿರ ರು. ಪರಿಹಾರ ಘೋಷಣೆ ಮಾಡಬೇಕಿತ್ತು. ಹಗಲು ರಾತ್ರಿ ಎನ್ನದೆ ಶ್ರಮಿಸಿದ ಪೊಲೀಸ್‌ ಇಲಾಖೆಯ ಪೇದೆಗಳಿಗೂ ಪರಿಹಾರ ನೀಡುವತ್ತ ಮುಖ್ಯಮಂತ್ರಿಗಳು ಗಮನ ಹರಿಸಬೇಕಿತ್ತು. ಆದರೆ ಅದು ಆಗಿಲ್ಲ, ಈಗಲಾದರೂ ಪತ್ರಿಕಾ ಪ್ರತಿನಿಧಿಗಳು ಮತ್ತು ಪೊಲೀಸ್‌ ಪೇದೆಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ಗಮನ ಹರಿಸಬೇಕು. ಗೃಹ ಸಚಿವರು ಮಧ್ಯೆಪ್ರವೇಶ ಮಾಡಿ ಇವರಿಗೆ ಪರಿಹಾರ ದೊರೆಯಲು ಗಮನ ಹರಿಸಬೇಕು.

ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಸೋಂಕು ಹೆಚ್ಚಾಗುವ ಅಪಾಯ ಇದೆ ಎಂಬ ಆರೋಪಗಳು ಕೇಳಿಬಂದಿವೆ.

ಇದು ನಿಜವಾದ ಮಾತು, ನಾನು ಸಂಪೂರ್ಣ ಮದ್ಯಪಾನ ವಿರೋಧಿ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಒತ್ತಾಯಿಸುತ್ತೇನೆ. 23 ಸಾವಿರ ಕೋಟಿ ಖಜಾನೆಗೆ ಆದಾಯ ಬರುತ್ತದೆ ಎಂಬುದು ಸತ್ಯವಾದರೂ ಬಡವರ ಹಣಕ್ಕೆ ಕೊಳ್ಳಿ ಇಡುವುದು ಒಳ್ಳೆಯದಲ್ಲ. ಅದರಲ್ಲೂ ಕೊರೋನಾ ಮಹಾಮಾರಿಯಿಂದ ಇನ್ನೂ ನಾವು ಹೊರ ಬರುವ ಮೊದಲೇ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದಿತ್ತು. ಇದಕ್ಕೆ ಅವಕಾಶ ನೀಡಿದ್ದು ತಪ್ಪು, ಸರ್ಕಾರದ ಆದಾಯಕ್ಕಾಗಿ ಬಡ ಕುಟುಂಬಗಳನ್ನು ಹಾಳು ಮಾಡುವುದಕ್ಕೆ ನಾನು ವಿರೋಧಿ, ಹಾಗಾಗಿ ರಾಜ್ಯದಲ್ಲಿ ಮದ್ಯ ನಿಷೇಧ ಆಗಬೇಕು.

-ಅಶ್ವತ್ಥ್‌ ನಾರಾಯಣ . ಎಲ್

click me!