ಹಿಂದೆಲ್ಲಾ ನಮ್ಮ ದೇಶದ ನಾಯಕರು ವಿದೇಶಕ್ಕೆ ಹೋದರೆ ಸಾಲ ಕೇಳಲು ಬಂದಿದ್ದಾರೆಂದು ತಾತ್ಸಾರವಾಗಿ ನೋಡುತ್ತಿದ್ದರು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವೇ ಬದಲಾಯಿತು. ಇಂದು ಭಾರತದ ಪ್ರಧಾನಿ ಯಾವುದೇ ದೇಶಕ್ಕೆ ಹೋಗುತ್ತಾರೆಂದರೂ ಅಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ ಎಂದಿದ್ದಾರೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ.
ದಾವಣಗೆರೆ: ಕೋವಿಡ್-19 ಮಹಾಮಾರಿ ಮಧ್ಯೆ ಆರ್ಥಿಕತೆಗಿಂತಲೂ ಜನರ ಆರೋಗ್ಯವೇ ಅತೀ ಮುಖ್ಯವೆಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ಹಂತದ ಲಾಕ್ ಡೌನ್ ಜಾರಿಗೊಳಿಸುವ ಮೂಲಕ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಪ್ರಪಂಚ ವ್ಯಕ್ತಿಯಾಗುವ ಮೂಲಕ ಭಿನ್ನವಾಗಿ ನಿಂತಿದ್ದಾರೆ ಎನ್ನುತ್ತಾರೆ ದಾವಣಗೆರೆ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ. ದೇಶದ ಇತಿಹಾಸದಲ್ಲೇ, ಬಹುಶಃ ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ 2ನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದ ಪ್ರಧಾನಿಯಾಗಿ ಮೋದ ಕೈಗೊಂಡ ದಿಟ್ಟಕ್ರಮಗಳು ವಿಶ್ವದ ಗಮನ ಸೆಳೆದಿವೆ. ಸ್ವತಃ ಬಹುತೇಕ ದೇಶಗಳು ಇಂದು ಕೊರೋನಾ ವೈರಸ್ ನಿಯಂತ್ರಣಕ್ಕೆ ನಾಲ್ಕು ಹಂತದ ಲಾಕ್ ಡೌನ್ ಜಾರಿಗೊಳಿಸಿ, ಆರ್ಥಿಕತೆಗಿಂತ ಜನರ ಆರೋಗ್ಯ ಮುಖ್ಯವೆಂಬ ಸಂದೇಶ ಜಗತ್ತಿಗೆ ಸಾರಿದ ಮೋದಿ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿವೆ ಎಂದು ಕನ್ನಡಪ್ರಭಕ್ಕೆ ನೀಡಿರುವ ಸಂದರ್ಶನದಲ್ಲಿ ಸಿದ್ದೇಶ್ವರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಬಗ್ಗೆ ನಿಮ್ಮ ಅನಿಸಿಕೆ ಏನು?
ಸಿದ್ದೇಶ್ವರ-ಸತತವಾಗಿ 2ನೇ ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಆಳ್ವಿಕೆ ಇದೀಗ 6 ವರ್ಷ ಪೂರೈಸಿ, 7ನೇ ವರ್ಷದತ್ತ ಸಾಗುತ್ತಿದೆ. ಕಳೆದ 6 ವರ್ಷದಲ್ಲಿ ದೇಶದ ಆರ್ಥಿಕತೆ ಸದೃಢಗೊಳಿಸಿ, ರಾಷ್ಟ್ರದ ಭದ್ರತೆಗೆ ಒತ್ತು ನೀಡಿದ ಮೋದಿಯವರು ಕಳೆದೊಂದು ವರ್ಷದ ಅವಧಿಯಲ್ಲಿ ಸಾಕಷ್ಟುಯೋಜನೆ ಜಾರಿಗೊಳಿಸಿದ್ದಾರೆ. ದೀನ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಶ್ರಮಿಕ ವರ್ಗ ಹೀಗೆ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಲೇ ಇದ್ದಾರೆ.
ಕೋವಿಡ್-19 ಸಂಕಷ್ಟದ ಬಗ್ಗೆ ಮೋದಿ ಕೈಗೊಂಡ ಕ್ರಮಗಳು ನಿಮಗೆ ತೃಪ್ತಿ ತಂದಿವೆಯೇ?
ದೇಶದ 73 ವರ್ಷಗಳ ಇತಿಹಾಸದಲ್ಲೇ ಜನರು ಇಂತಹ ಆರ್ಥಿಕ ಸ್ಥಿತಿ ನೋಡಿದ್ದರೋ ಇಲ್ಲವೋ ಗೊತ್ತಿಲ್ಲ. ಇಡೀ ವಿಶ್ವವೇ ಆರ್ಥಿಕವಾಗಿ ಕುಸಿತ ಕಂಡರೂ ಮೋದಿ ಧೃತಿಗೆಡದೇ ವಿಶ್ವಕ್ಕೆ ಸವಾಲಾಗಿದ್ದ ಕೊರೋನಾ ವೈರಸ್ ನಿಯಂತ್ರಣಕ್ಕೆ ದಿಟ್ಟಕ್ರಮ ಕೈಗೊಂಡರು. ವಿಶೇಷವಾಗಿ ಕಳೆದ 34 ತಂಗಳಲ್ಲಿ ಕೋವಿಡ್ ವೈರಸ್ ತಡೆಗೆ 4 ಹಂತದ ಲಾಕ್ ಡೌನ್ ಜಾರಿಗೊಳಿಸಿದ್ದು, 1.70 ಲಕ್ಷ ಕೋಟಿ ರು.ಗಳನ್ನು ಬಡವರಿಗಾಗಿ ವಿಶೇಷ ಯೋಜನೆ ತಂದಿದ್ದು, 20 ಲಕ್ಷ ಕೋಟಿ ರು. ಪ್ಯಾಕೇಜನ್ನು ಬಡ ರೈತರು, ಕಾರ್ಮಿಕರು ಪಡೆದುಕೊಂಡಿದ್ದಾರೆ.
ಹಿಂದಿನ ಆಡಳಿತ ಹಾಗೂ ಮೋದಿ ಆಡಳಿತಗಳಲ್ಲಿ ನಿಮಗೆ ಕಾಣಿಸುವ ವ್ಯತ್ಯಾಸವೇನು?
ಹಿಂದೆಲ್ಲಾ ನಮ್ಮ ದೇಶವನ್ನು ವಿದೇಶಗಳಲ್ಲಿ ಕೆಳ ಮಟ್ಟದಲ್ಲಿ ನೋಡುತ್ತಿದ್ದ ಕಾಲವಿತ್ತು. ನಮ್ಮ ದೇಶದಿಂದ ವಿದೇಶಕ್ಕೆ ಹೋದರೆ ಸಾಲ ಕೇಳಲು ಬಂದಿದ್ದಾರೆಂಬ ಕಾರಣಕ್ಕೆ ವಿದೇಶಗಳು ಹಿಂದಡಿ ಇಡುತ್ತಿದ್ದವು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವೇ ಬದಲಾಯಿತು. ಇಂದು ಭಾರತದ ಪ್ರಧಾನಿ ಯಾವುದೇ ದೇಶಕ್ಕೆ ಹೋಗುತ್ತಾರೆಂದರೂ ಅಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ವಿಶ್ವದ ಮುಂಚೂಣಿ ರಾಷ್ಟ್ರಗಳ ನಾಯಕರ ಸರಿಸಮಾನವಾಗಿ ನಮ್ಮ ಪ್ರಧಾನಿ ನಿಲ್ಲುವಂತಹ ವಾತಾವರಣ ನಿರ್ಮಾಣವಾಗಿದೆ. ಇದು ಅತ್ಯಂತ ದೊಡ್ಡ ಹೆಜ್ಜೆ, ಬೆಳವಣಿಗೆಯಾಗಿದೆ.
ದಾವಣಗೆರೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಸ್ಪಂದಿಸುತ್ತಿದೆಯೇ?
ಮೊದಲ ಸಲ ಮೋದಿ ಇಲ್ಲಿಂದ ಕಮಲ ಗೆಲ್ಲಿಸಿ, ದಿಲ್ಲಿಗೆ ಕಳಿಸಿ. ಅದರಲ್ಲಿ ಲಕ್ಷ್ಮಿ ಕೂಡಿಸಿ, ಇಲ್ಲಿಗೆ ಕಳಿಸುತ್ತೇನೆಂದಿದ್ದರು. ಅದರಂತೆ ಸ್ಮಾರ್ಟ್ ಸಿಟಿ ಯೋಜನೆ, ಅಮೃತ್ ಸಿಟಿ ಹೀಗೆ ನಾನಾ ಯೋಜನೆಯಡಿ ಕೇಂದ್ರ ಸ್ಪಂದಿಸುತ್ತಿದೆ. ನನ್ನ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 140 ಕೋಟಿ ನೀಡಿದ್ದಾರೆ. ಸ್ಮಾರ್ಟ್ ಸಿಟಿಯಡಿ ಜಿಲ್ಲಾ ಕೇಂದ್ರದಲ್ಲಿ ಸಾಕಷ್ಟುಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಅದೇ ರೀತ ಅಮೃತ ಸಿಟಿಯಡಿ ಜಲ ಸಿರಿಯಡಿ
ದೇಶದ 7 ದಶಕಗಳ ಕನಸು ಈಗ ನನಸಾಗುತ್ತಿದೆ: ಶೋಭಾ ಕರಂದ್ಲಾಜೆ
100 ಕೋಟ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಿಸಿ, ಜಿಲ್ಲಾ ಕೇಂದ್ರಕ್ಕೆ ನೀರು ಕೊಡಲಾಗುತ್ತಿದೆ. ಕೊರೋನಾದಿಂದಾಗಿ ಕೆಲಸ ಸ್ಥಗತಗೊಂಡಿದ್ದು, ಆದಷ್ಟುಬೇಗನೆ ಪುನಾರಂಭವಾಗಲಿವೆ.
ಮುಂದಿನ ನಾಲ್ಕು ವರ್ಷದಲ್ಲಿ ಪ್ರಧಾನಿ ಮೋದಿಯಿಂದ ದಾವಣಗೆರೆ ಕ್ಷೇತ್ರದ ಅಭಿವೃದ್ಧಿಗೆ ಏನೇನು ನಿರೀಕ್ಷೆಯಿದೆ?
ಕೇಂದ್ರ, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಪಾಲಿಕೆ, ಜಿಪಂ, ದೂಡಾ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೆರೆಗಳಿಗೆ ನೀರು ತುಂಬಿಸುವುದು, ಶುದ್ಧ ನೀರಿನ ಘಟಕಗಳ ಸ್ಥಾಪನೆ, ಪಿಎಚ್‌ಸಿಗಳ ನಿರ್ಮಾಣ, ಜಿಲ್ಲಾ, ತಾಲೂಕು ಕೇಂದ್ರಗಳ ಆಸ್ಪತ್ರೆಗಳ ಅಭಿವೃದ್ಧಿ ಗುರಿ ಇದೆ. ದಾವಣಗೆರೆ ರೈಲ್ವೆ ನಿಲ್ದಾಣ, ಹಳೆ ಬಸ್ಸು ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಕಾಮಗಾರಿ ಆಗಲಿವೆ. ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದೇವೆ. ದಾವಣಗೆರೆಗೆ ಕೃಷಿ ವಿಶ್ವ ವಿದ್ಯಾನಿಲಯ, ಸರ್ಕಾರಿ ವೈದ್ಯಕೀಯ ಕಾಲೇಜು, ಸೂಳೆಕೆರೆ ಪ್ರವಾಸಿ ತಾಣವಾಗಿಸುವ ಪ್ರಯತ್ನ ನಡೆಸಿದ್ದೇನೆ. ಕೈಗಾರಿಕೆ, ಕೃಷಿ ಆದಾರಿತ ಕೈಗಾರಿಕೆ ತರಲು ಪ್ರಯತ್ನ ಸಾಗಿದೆ. ಹರಿಹರದಲ್ಲಿ ಫರ್ಟಿಲೈಸರ್ ಕಾರ್ಖಾನೆ ಆರಂಭವಾಗಲಿದೆ. 2 ಜಿ ಎಥೆನಾಲ್ ಕಾರ್ಖಾನೆಗೆ ಪ್ರಯತ್ನ ಮುಂದುವರಿದಿದೆ. ಶಿಕ್ಷಣ, ಕೃಷಿ, ಕೈಗಾರಿಕೆಗೆ ಒತ್ತು ನೀಡಿದ್ದೇವೆ.
ಸಂಸತ್ತಿನಲ್ಲಿ ನಿಮ್ಮನ್ನು ಮೋದಿ ಅಚ್ಚರಿಗೊಳಿಸಿದ ಕ್ಷಣಗಳಿವೆಯೇ?
ಹೌದು, ಸಾಕಷ್ಟು ಇವೆ. ಈ ಪೈಕಿ ಲೋಕಸಭೆಯಲ್ಲಿ ಸಂಸದರು ಮತ ಚಲಾಯಿಸುವ ಸಂದರ್ಭದಲ್ಲಿ ನನ್ನ ಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ಕುರ್ಚಿಯಲ್ಲಿ ಕುಳಿತಿದ್ದೆ. ಅದೇ ವೇಳೆ ಅಲ್ಲಿಗೆ ಆಗಮಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ‘ಕೈಸೇ ಹೋ ಸಿದ್ದೇಶ್ವರ್ ಜೀ? ಕ್ಯಾ ಹೋಗಯಾ ಹೈ ಆಪ್ ಕೇ ಪಾವ್ ಕೋ...’ ಎಂಬುದಾಗಿ ಆತ್ಮೀಯವಾಗಿ ಕುಶಲೋಪರಿ ವಿಚಾರಿಸಿದ್ದರು. ಅದೇ ರೀತಿ 371ನೇ ಪರಿಚ್ಛೇದ ತಂದಾಗ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಮಾತಿನ ಶೈಲಿ, ಭಾಷೆಯ ಮೇಲಿನ ಹಿಡಿತ, ಆತ್ಮವಿಶ್ವಾಸದ ಮಾತುಗಳು ಅಚ್ಚರಿ ಮೂಡಿಸಿದ್ದವು.