ಶತಮಾನದ ವಿವಾದ ಶಾಂತಿಯುತವಾಗಿ ಅಂತ್ಯ; ಕೊನೆಗೂ ರಾಮಮಂದಿರ ಕೆಲಸ ಶುರು

By Kannadaprabha News  |  First Published May 30, 2020, 4:44 PM IST

ಕೊರೋನಾ ವೈರಸ್‌ ಆರ್ಭಟದ ನಡುವೆಯೂ ಉತ್ತರ ಪ್ರದೇಶ ರಾಜ್ಯ ಸರ್ಕಾರ ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ‍್ಯಕ್ಕೆ ಚಾಲನೆ ನೀಡಿದೆ. ಸದ್ಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ವಚ್ಛತಾ ಕಾರ‍್ಯ ಆರಂಭವಾಗಿದೆ. ಈ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸಿಆರ್‌ಪಿಎಫ್‌ ಕ್ಯಾಂಪನ್ನು ಸ್ಥಳಾಂತರಿಸಲಾಗಿದೆ. 


ಅತ್ಯಂತ ವಿವಾದಿತ ವಿಷಯ ಎಂದು ಪರಿಗಣಿಸಲ್ಪಟ್ಟಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಸುಪ್ರೀಂಕೋರ್ಟ್‌ ತೀರ್ಪಿನಿಂದ ಭಾರತದಲ್ಲಿ ಶಾಂತಿ ಸುವ್ಯವಸ್ಥೆ ಕದಡಬಹುದು ಎಂದು ಭಾವಿಸಲಾಗಿತ್ತು. ಆದರೆ ತೀರ್ಪು ಪ್ರಕಟವಾದ ನಂತರ ಅಚ್ಚರಿಯೆಂಬಂತೆ ಅದನ್ನು ಎಲ್ಲಾ ಪಕ್ಷಗಾರರೂ ಸ್ವಾಗತಿಸಿದರು.

ಹಿಂದು-ಮುಸ್ಲಿಮರೂ ಶಾಂತಿಯುತವಾಗಿ ಅದನ್ನು ಸ್ವೀಕರಿಸಿದರು. ಇದಕ್ಕೆ ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ನಡೆಸಿದ ಸಂಧಾನಗಳು ಹಾಗೂ ಕೈಗೊಂಡ ಮುನ್ನೆಚ್ಚರಿಕೆಗಳು. ಅದರ ಪರಿಣಾಮ, ಶತಮಾನಗಳ ಕಾಲದ ವಿವಾದಿತ ವಿಷಯವೊಂದು 2019ರಲ್ಲಿ ಅತ್ಯಂತ ನಾಜೂಕಿನಿಂದ, ಶಾಂತಿಯುತವಾಗಿ ಪರಿಹಾರವಾಯಿತು.

Latest Videos

undefined

ಕೊರೋನಾ ಆರ್ಭಟದ ನಡುವೆ ರಾಮಮಂದಿರ ನಿರ್ಮಾಣ ಆರಂಭ

ಮಸೀದಿ ನಿರ್ಮಾಣಕ್ಕೆ ಜಾಗ

ಸುಮಾರು ಒಂದೂವರೆ ಶತಮಾನಗಳಿಂದ ವ್ಯಾಜ್ಯಕ್ಕೆ ಮೂಲವಾಗಿದ್ದ ಅಯೋಧ್ಯೆ ವಿವಾದ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ನವೆಂಬರ್‌ 9ರಂದು ಮಹತ್ವದ ಐತಿಹಾಸಿಕ ತೀರ್ಪು ಪ್ರಕಟಿಸಿ, ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಭೂಮಿ ಹಕ್ಕು ಹಿಂದುಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕರೆ ಪ್ರತ್ಯೇಕ ಜಾಗ ನೀಡಬೇಕೆಂದು ಹೇಳಿತ್ತು. ಅದರಂತೆ ಉತ್ತರ ಪ್ರದೇಶ ಸರ್ಕಾರ ಮಸೀದಿ ನಿರ್ಮಾಣಕ್ಕಾಗಿ ಮಿರ್ಜಾಪುರ, ಶಂಶುದ್ದೀನ್‌ಪುರ ಮತ್ತು ಚಾಂದ್‌ಪುರನಲ್ಲಿ 5 ಸ್ಥಳಗಳನ್ನು ಗುರುತಿಸಿದೆ. ಜೊತೆಗೆ ಸುಪ್ರೀಂಕೋರ್ಟ್‌ ಆದೇಶದಂತೆ ಸುನ್ನಿ ವಕ್ಪ್‌ ಬೋರ್ಡ್‌ ಯಾವುದು ಸೂಕ್ತ ಸ್ಥಳ ಎಂದು ತಿಳಿಸಲು ಉತ್ತರ ಪ್ರದೇಶ ಸರ್ಕಾರ ಸೂಚನೆ ನೀಡಿದೆ.

67 ಎಕರೆ ಭೂಮಿ ಹಸ್ತಾಂತರ

1993 ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಬಳಿಕ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್‌ ಸಮಿತಿಗೆ ಸೇರಿದ್ದು. ಈ ವಿವಾದ ಬಗೆಹರಿಯುವ ವರೆಗೂ ಈ ಜಮೀನು ಸರ್ಕಾರದ ಅದೀನದಲ್ಲಿಯೇ ಇರಬೇಕು. ಅದನ್ನು ಯಾರಿಗೂ ಹಸ್ತಾಂತರ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿತ್ತು.

ಸದ್ಯ ಅಯೋಧ್ಯೆ ವಿವಾದ ಬಗೆಹರಿದ ಹಿನ್ನೆಲೆಯಲ್ಲಿ ಈ ಭೂಮಿ ರಾಮಮಂದಿರದ ಉಸ್ತುವಾರಿ ಹೊತ್ತಿರುವ ರಾಮ ಜನ್ಮ ವ್ಯಾಸ ಸಮಿತಿಗೆ ಸೇರಿದ್ದು, ಅದನ್ನು ವ್ಯಾಸ ಸಮಿತಿಗೆ ಮರಳಿ ನೀಡಬೇಕೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಈ ನೂತನ ಅರ್ಜಿ ವಿಚಾರಣೆ ಇನ್ನಷ್ಟೆನಡೆಯಬೇಕಿದೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ!

ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚನೆ

ಅಯೋಧ್ಯೆ ತೀರ್ಪು ಶಾಂತಿಯುತವಾಗಿ ಬಗೆಹರಿದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಆದೇಶದಂತೆ ‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ರಚನೆ ಮಾಡುವುದಾಗಿ ಲೋಕಸಭೆಯಲ್ಲಿ ಬಜೆಟ್‌ ಅಧಿವೇಶನದ ವೇಳೆ ಫೆ.5ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅದರಂತೆ ಫೆ.19ರಂದು ‘ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ನ ಅಧ್ಯಕ್ಷರಾಗಿ ಮಹಾಂತ ನೃತ್ಯ ಗೋಪಾಲ್‌ ದಾಸ್‌ ನೇಮಕ ಮಾಡಲಾಯಿತು.

ಚಂಪತ್‌ರಾಯ್‌ ಅವರನ್ನು ಟ್ರಸ್ಟ್‌ ಪ್ರಧಾನ ಕಾರ‍್ಯದರ್ಶಿಯಾಗಿ, ಸ್ವಾಮಿ ಗೋವಿಂದ ದೇವ್‌ ಗಿರಿ ಅವರನ್ನು ಖಜಾಂಚಿಯಾಗಿ ನೇಮ ಮಾಡಲಾಗಿದೆ. ಇನ್ನು ದೇಗುಲ ನಿರ್ಮಾಣ ಸಮಿತಿ ಮುಖ್ಯಸ್ಥರಾಗಿ ಪ್ರಧಾನಿ ಮೋದಿ ಅವರ ಮಾಜಿ ಮುಖ್ಯ ಕಾರ‍್ಯದರ್ಶಿ ನೃಪೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ಮಂದಿರ ನಿರ್ಮಾಣ ಕಾರ‍್ಯವನ್ನು ವೇಗಗತಿಯಲ್ಲಿ ನಡೆಸುವ ಉದ್ದೇಶದಿಂದ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಏಳು ಜನ ಸದಸ್ಯರು, ಐವರು ನಾಮ ನಿರ್ದೇಶನ ಸದಸ್ಯರು ಹಾಗೂ ಮೂವರು ಟ್ರಸ್ಟ್‌ಗಳು ನೇಮಕವಾಗಿದ್ದಾರೆ. ಟ್ರಸ್ಟ್‌ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ, ಶಂಕು ಸ್ಥಾಪನೆಗೆ ದಿನ ನಿಗದಿ ಮತ್ತು ನಿರ್ಮಾಣ ಹೊಣೆಯನ್ನು ಮತ್ತೊಂದು ಸಮಿತಿಗೆ ವರ್ಗಾಯಿಸಿದೆ.

ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ರಾಮಮಂದಿರ ನಿರ್ಮಾಣ ಕಾರ‍್ಯಕ್ಕೆ ಚಾಲನೆ

ಕೊರೋನಾ ವೈರಸ್‌ ಆರ್ಭಟದ ನಡುವೆಯೂ ಉತ್ತರ ಪ್ರದೇಶ ರಾಜ್ಯ ಸರ್ಕಾರ ಅಯೋಧ್ಯಾ ರಾಮಮಂದಿರ ನಿರ್ಮಾಣ ಕಾರ‍್ಯಕ್ಕೆ ಚಾಲನೆ ನೀಡಿದೆ. ಸದ್ಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ವಚ್ಛತಾ ಕಾರ‍್ಯ ಆರಂಭವಾಗಿದೆ. ಈ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸಿಆರ್‌ಪಿಎಫ್‌ ಕ್ಯಾಂಪನ್ನು ಸ್ಥಳಾಂತರಿಸಲಾಗಿದೆ.

ಸ್ಥಳದ ಸುತ್ತಲೂ ಲೋಹದ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಎಲ್‌ ಆಂಡ್‌ ಟಿ ಕಂಪನಿ ಯಾವುದೇ ಲಾಭ ಉದ್ದೇಶ ಇಲ್ಲದೆಯೇ ಮಂದಿರ ನಿರ್ಮಿಸಲು ಮುಂದಾಗಿದೆ. ಹಂತ ಹಂತವಾಗಿ ರಾಮ ಮಂದಿರ ಕಾರ‍್ಯ ನಡೆಯಲಿದೆ ಎಂದು ಕೇಂದ್ರ ಸರ್ಕಾರ ನೇಮಿತ ಟ್ರಸ್ಟ್‌ ತಿಳಿಸಿದೆ. ಅಲ್ಲದೆ ಈ ಸಂಬಂಧ ಟ್ರಸ್ಟ್‌ನ ಸದಸ್ಯರು ವಿಡಿಯೋ ಕಾಲ್‌ ಮೂಲಕ ನಿರಂತರವಾಗಿ ನಿರ್ಮಾಣ ಕಾರ‍್ಯದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.

ಬಿಜೆಪಿ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆ ಈಡೇರಿಕೆ

2014ರ ಸಾರ್ವತ್ರಿಕ ಚುನಾವಣೆ ವೇಳೆ ಮತ್ತು 2019ರ ಚುನಾವಣೆ ವೇಳೆ ಸಂವಿಧಾನದ ಚೌಕಟ್ಟಿನ ಒಳಗೆ ಇರುವ ಅವಕಾಶ ಬಳಸಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾಗಿತ್ತು. ಆದರೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ರಾಮ ಮಂದಿರ ವಿವಾದ ಸುಪ್ರೀಂಕೋರ್ಟ್‌ ಅಂಗಳದಲ್ಲಿತ್ತು. ಆದರೆ ಎರಡನೇ ಅವಧಿಯಲ್ಲಿ ಅಯೋಧ್ಯೆ ವಿವಾದಿತ ಜಾಗದ ಬಗ್ಗೆ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ರಾಮ ಮಂದಿರ ನಿರ್ಮಾಣ ಹೊಣೆಯನ್ನು ಸಮಿತಿಗೆ ವರ್ಗಾಯಿಸಿದೆ. ಹಾಗಾಗಿ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಯೊಂದನ್ನು ಬಿಜೆಪಿ ಈಡೇರಿಸಿದಂತಾಗಿದೆ.

click me!