ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಲ್ಲಿ ಹೈಅಲರ್ಟ್‌: 10000 ಪೊಲೀಸರ ಭದ್ರತೆ

By Govindaraj S  |  First Published Aug 14, 2022, 4:00 AM IST

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭರ್ಜರಿ ಸಂಭ್ರಮಾಚರಣೆಗೆ ನವದೆಹಲಿ ಸಜ್ಜಾಗಿದ್ದು, ಈ ಬಾರಿ ಹಿಂದೆಂದಿಗಿಂತಲೂ ಉಗ್ರರ ದಾಳಿಯ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭಾರೀ ಬಿಗಿಬಂದೋಬಸ್ತ್‌ ಮಾಡಲಾಗಿದ್ದು, ಹೈಅಲರ್ಟ್‌ ಘೋಷಿಸಲಾಗಿದೆ. 


ನವದೆಹಲಿ (ಆ.14): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭರ್ಜರಿ ಸಂಭ್ರಮಾಚರಣೆಗೆ ನವದೆಹಲಿ ಸಜ್ಜಾಗಿದ್ದು, ಈ ಬಾರಿ ಹಿಂದೆಂದಿಗಿಂತಲೂ ಉಗ್ರರ ದಾಳಿಯ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭಾರೀ ಬಿಗಿಬಂದೋಬಸ್ತ್‌ ಮಾಡಲಾಗಿದ್ದು, ಹೈಅಲರ್ಟ್‌ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆ.15ರ ಸೋಮವಾರ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜಾರೋಹಣ ನಡೆಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕೆಂಪುಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸುಮಾರು 7000 ಜನರನ್ನು ಆಹ್ವಾನಿಸಲಾಗಿದ್ದು, ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ. ದೆಹಲಿಯಲ್ಲಿ ಈಗಾಗಲೇ ಸೆಕ್ಷನ್‌ 144ರ ನಿಬಂಧನೆಗಳು ಜಾರಿಯಲ್ಲಿದ್ದು, ಯಾವುದೇ ಲೋಪಕ್ಕೆ ಅವಕಾಶವಿಲ್ಲದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಜೊತೆಗೆ ಪ್ರಮುಖ ಪ್ರದೇಶಗಳಲ್ಲಿ ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯಿರುವ ಕ್ಯಾಮರಾ ಅಳವಡಿಸಲಾಗಿದ್ದು, 10000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

Uttara Kannada: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯ ಕರಬಂಧಿ ಚಳುವಳಿ

ಜೊತೆಗೆ ಈ ಬಾರಿ ಡ್ರೋನ್‌ ಮುಂತಾದ ವೈಮಾನಿಕ ಸಾಧನಗಳ ಮೂಲಕ ನಿಗಾ ಇಡಲಾಗುವುದು. ಅಲ್ಲದೇ ಅಂತರ್‌ರಾಜ್ಯ ಸಮನ್ವಯದೊಂದಿಗೆ ಗುಪ್ತಚರ ಹಾಗೂ ಕೇಂದ್ರ ಏಜೆನ್ಸಿಗಳ ಜೊತೆಗೆ ನೈಜ ಸಮಯದ (ರಿಯಲ್‌ ಟೈಂ) ಸಮನ್ವಯ ಸಾಧಿಸಲಾಗುವುದು. ಸ್ಫೋಟಕ ಸಾಮಗ್ರಿಗಳನ್ನು ಪತ್ತೆಹಚ್ಚಲು ಭಾರೀ ಮಟ್ಟದಲ್ಲಿ ತಪಾಸಣೆ ಕಾರ್ಯ ನಡೆದಿದೆ. ಸ್ಫೋಟಕ ಸಾಮಗ್ರಿಗಳ ಪತ್ತೆ ಹಚ್ಚುವಿಕೆ ಹಾಗೂ ಅವುಗಳನ್ನು ನಿಭಾಯಿಸಲು ಅಗತ್ಯ ತರಬೇತಿ ಪಡೆದವರ ತಂಡವನ್ನು ನೇಮಿಸಲಾಗಿದೆ. ಗಣ್ಯರು ಸಾಗಿಬರುವ ಪ್ರದೇಶ ಮತ್ತು ಇತರೆ ಆಯಕಟ್ಟಿನ ಪ್ರದೇಶಗಳಲ್ಲಿ ಸ್ನಿಪ್ಪರ್‌ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರಧ್ವಜಾರೋಹಣ ವೇಳೆಯಲ್ಲಿ ಕೆಂಪುಕೋಟೆಯ 5 ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ‘ಗಾಳಿಪಟ ಹಾರಾಟ ನಿಷೇಧಿತ ವಲಯ’ ಎಂದು ಘೋಷಿಸಲಾಗಿದೆ. ಅಲ್ಲದೇ ಗಾಳಿಪಟ ಅಥವಾ ಯಾವುದೇ ಸಂದೇಹಾತ್ಮಕ ವಸ್ತುಗಳ ಹಾರಾಟ ನಡೆಯದಂತೆ ನಿಗಾ ಇಡಲು 400 ಗಾಳಿಪಟ ಹಿಡಿಯುವವರನ್ನು ನೇಮಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯ(ಡಿಆರ್‌ಡಿಒ) ಡ್ರೋನ್‌ ವಿರೋಧಿ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಕೆಂಪುಕೋಟೆ ಸುತ್ತಲೂ ಹೈ ರೆಸಲ್ಯೂಶನ್‌ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 24 ಗಂಟೆಯೂ ಅವುಗಳ ಮೇಲೆ ನಿಗಾ ಇಡಲಾಗುವುದು. ಊಟದ ಡಬ್ಬಿ, ನೀರಿನ ಬಾಟಲಿ, ರಿಮೋಟ್‌ ಕಂಟ್ರೋಲ್‌ ನಿಯಂತ್ರಿತ ಕಾರಿನ ಕೀಲಿ, ಸಿಗರೆಟ್‌ ಲೈಟರ್‌, ಕೈಚೀಲ, ಕ್ಯಾಮರಾ, ಸೂಟ್‌ಕೇಸ್‌, ಛತ್ರಿ ಮೊದಲಾದ ವಸ್ತುಗಳನ್ನು ಕೆಂಪುಕೋಟೆಯೊಳಗೆ ಒಯ್ಯಲು ಅನುಮತಿ ನೀಡಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ದಿಲ್ಲಿಯಲ್ಲಿ ಸೆಕ್ಷನ್‌ 144: ದೆಹಲಿಯಲ್ಲಿ ಸೆಕ್ಷನ್‌ 144 ನಿಬಂಧನೆ ಜಾರಿಯಲ್ಲಿದ್ದು, ಗಾಳಿಪಟ, ಬಲೂನು, ಚೈನೀಸ್‌ ದೀಪಗಳ ಬುಟ್ಟಿಗಳನ್ನು ಕೆಂಪುಕೋಟೆ ಸುತ್ತಲಿನ ಪ್ರದೇಶದಲ್ಲಿ ಆ.13 ರಿಂದ ಆ.15ರ ವರೆಗೆ ಹಾರಿಸುವಂತಿಲ್ಲ. ಪೊಲೀಸರ ಗಸ್ತು ಹೆಚ್ಚಿಸಿದ್ದು, ಹೊಟೇಲ್‌ನಲ್ಲಿ ಅತಿಥಿ, ಸೇವಕರು ಹಾಗೂ ಬಾಡಿಗೆದಾರರ ಗುರುತು ಪರಿಶೀಲನಾ ಕಾರ್ಯ ಕೂಡ ನಡೆದಿದೆ. ಯಾವುದೇ ಸಂಶಯಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ರೋಹಿಂಗ್ಯಾಗಳು ನೆಲೆಸಿರುವ ಪ್ರದೇಶದಲ್ಲಿ ವಿಶೇಷ ನಿಗಾ ಇಡಬೇಕೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ತಂಡ ಅಲ್ಲಿ ನಿಯೋಜನೆ ಮಾಡಲಾಗಿದೆ.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಏನೇನು ಭದ್ರತೆ?
- ಉಗ್ರಾಂತಕ ಹಿನ್ನೆಲೆಯಲ್ಲಿ ರಾಜಧಾನಿಯಾದ್ಯಂತ ಭಾರೀ ಬಂದೋಬಸ್ತ್‌
- ನಿಷೇಧಾಜ್ಞೆ ಜಾರಿ. ಫೇಶಿಯಲ್‌ ರೆಕಗ್ನಿಷನ್‌ ಕ್ಯಾಮೆರಾಗಳ ಅಳವಡಿಕೆ
- ಡ್ರೋನ್‌ ಮೂಲಕ ವೈಮಾನಿಕ ಸಾಧನಗಳ ಮೇಲೆ ಸಿಬ್ಬಂದಿ ತೀವ್ರ ನಿಗಾ
- ಗಣ್ಯರು ಸಾಗಿಬರುವ ಪ್ರದೇಶ, ಆಯಕಟ್ಟಿನ ಸ್ಥಳಗಳಲ್ಲಿ ಸ್ನಿಪ್ಪರ್‌ಗಳ ನಿಯೋಜನೆ
- ಕೆಂಪುಕೋಟೆ ಸುತ್ತಲೂ ಹೈ ರೆಸಲ್ಯೂಷನ್‌ ಭದ್ರತಾ ಕ್ಯಾಮೆರಾಗಳ ಅಳವಡಿಕೆ
- ಸಮಾರಂಭ ಸ್ಥಳಕ್ಕೆ ಊಟದ ಡಬ್ಬಿ, ನೀರಿನ ಬಾಟಲಿ, ಲೈಟರ್‌ ಒಯ್ಯುವಂತಿಲ್ಲ

click me!