ದೇಶ ತೊರೆಯುವ ಕೆಲ ಗಂಟೆಗೂ ಮೊದಲು ಶೇಕ್ ಹಸೀನಾ ನಿವಾಸದಲ್ಲಿ ಏನೆಲ್ಲಾ ನಡಿತು?

By Anusha Kb  |  First Published Aug 6, 2024, 4:25 PM IST

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ದೇಶ ತೊರೆಯುವ ಕೆಲ ಗಂಟೆಗಳಿಗೂ ಮೊದಲು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅಧಿಕೃತ ನಿವಾಸದಲ್ಲಿ ಏನೇನೆಲ್ಲಾ ನಡಿತು ಇಲ್ಲಿದೆ ಡಿಟೇಲ್ ಸ್ಟೋರಿ.


ಢಾಕಾ: ಬಾಂಗ್ಲಾದ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ದೇಶ ತೊರೆದು ಭಾರತಕ್ಕೆ ಓಡಿ ಬಂದಿದ್ದು, ಬ್ರಿಟನ್‌ನ ರಾಜಶ್ರಯಕ್ಕಾಗಿ ಕಾಯುತ್ತಿರುವುದು ಗೊತ್ತೆ ಇದೆ. ಆದರೆ ಶೇಕ್ ಹಸೀನಾ ದೇಶ ತೊರೆಯುವ ಕೆಲ ಗಂಟೆಗಳಿಗೂ ಮೊದಲು ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅಧಿಕೃತ ನಿವಾಸದಲ್ಲಿ ಏನೇನೆಲ್ಲಾ ನಡಿತು ಇಲ್ಲಿದೆ ಡಿಟೇಲ್ ಸ್ಟೋರಿ.

ಕೊನೆಕ್ಷಣದಲ್ಲಿ ಸೇನಾ ಹೆಲಿಕಾಪ್ಟರ್‌ನಲ್ಲಿ ಭಾರತಕ್ಕೆ ಪಲಾಯನ ಮಾಡುವ ಮೊದಲು ಬಾಂಗ್ಲಾದೇಶದ ಸೇನೆ ಶೇಕ್ ಹಸೀನಾಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದಾಗ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು. ದೇಶದ ಭದ್ರತಪಡೆಗಳು ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಬಯಸಿದ್ದರು. ಆದರೆ ಭದ್ರತಾ ಪಡೆಯ ಮೇಲಾಧಿಕಾರಿಗಳು ಈ ಪ್ರತಿಭಟನೆಯನ್ನು ಬಲವಂತವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಿದರು ಎಂದು ಬಾಂಗ್ಲಾದ ಸ್ಥಳೀಯ ಮಾಧ್ಯಮ ಪ್ರೊಥೊಮ್ ಅಲೋ ವರದಿ ಮಾಡಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

Tap to resize

Latest Videos

undefined

ಶೇಕ್ ಹಸೀನಾಗೆ ಕುಟುಕಿದ್ದು ಅವರೇ ಸಾಕಿದ ಗಿಣಿನಾ? ಗಡಿಪಾರಾಗಿರುವ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದೇನು?

ಪ್ರೊಥೊಮ್ ಅಲೋ ವರದಿಯ ಪ್ರಕಾರ, ದೇಶ ತೊರೆಯುವ ಕೆಲ ಗಂಟೆಗಳ ಮೊದಲು ಅವಾಮಿ ಲೀಗ್ ನಾಯಕರು ಭದ್ರತಾ ಪಡೆಯ ಹಿರಿಯ ಅಧಿಕಾರಿಗಳನ್ನು ಹಾಗೂ ಪೊಲೀಸ್ ಪಡೆಯ ಅಧಿಕಾರಿಗಳನ್ನು ಶೇಕ್ ಹಸೀನಾ ಅವರ ಮನೆಗೆ ಕರೆಸಿದ್ದರು. ಈ ವೇಳೆ ಗಲಭೆಯಿಂದ ಮೃತಪಟ್ಟವರ ಸಂಖ್ಯೆ ತೀವ್ರವಾಗಿ ಏರಿಕೆ ಆಗಿತ್ತು. ಅಲ್ಲದೇ ಶೇಕ್ ಹಸೀನಾ ಅವರ ಸಲಹೆಗಾರರೊಬ್ಬರು ಅವರಿಗೆ ಅಧಿಕಾರವನ್ನು ಸೇನೆ ಹಸ್ತಾಂತರಿಸುವ ವಿಚಾರದ ಬಗ್ಗೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದರೆ 76 ವರ್ಷದ ಶೇಕ್ ಹಸೀನಾ ಹಠಕ್ಕೆ ಬಿದ್ದಿದ್ದರು, ಅವರು ಗಲಭೆ ಸ್ಥಳದಲ್ಲಿ ಈಗಾಗಲೇ ಜಾರಿಯಲ್ಲಿರುವ ಕರ್ಫ್ಯುವನ್ನು ಮತ್ತಷ್ಟು ಬಲಪಡಿಸುವಂತೆ ಸೇನೆಗೆ ಸೂಚಿಸಿದ್ದರು. ಆದರೆ ಪರಿಸ್ಥಿತಿ ಮಾತ್ರ ಕ್ಷಣ ಕ್ಷಣಕ್ಕೂ ಬದಲಾಗುತ್ತಿತ್ತು. ಕರ್ಫ್ಯೂ ಜಾರಿ ಇದ್ದರೂ ಕೂಡ ಕ್ಯಾರೆ ಅನ್ನದ ಪ್ರತಿಭಟನಾಕಾರರು ಢಾಕಾದ ವಿವಿಧೆಡೆ ಗುಂಪುಗುಂಪಾಗಿ ಜಮಾಯಿಸಲು ಶುರು ಮಾಡಿದ್ದರು. 

ಬಾಂಗ್ಲಾದಲ್ಲಿ ಉದ್ರಿಕ್ತರಿಂದ ದಾಂಧಲೆ: 4 ಹಿಂದೂ ದೇಗುಲಗಳ ಮೇಲೆ ದಾಳಿ

ಭದ್ರತಾ ಅಧಿಕಾರಿಗಳ ಸಭೆಯಲ್ಲಿ ಶೇಕ್ ಹಸೀನಾ ಏಕೆ ಪ್ರತಿಭಟನೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೆ ಏರಿರುವ ದೃಶ್ಯಗಳನ್ನು ಸಭೆಯಲ್ಲಿ ತೋರಿಸುತ್ತಾ ಅವರು ಏಕೆ ಭದ್ರತಾ ಪಡೆಗಳು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಒಂದು ಹಂತದಲ್ಲಂತೂ ಹಸೀನಾ, ನಿಮ್ಮನ್ನು ತಾನು ನಂಬಿದ್ದರಿಂದ ಈ ಹಂತದ ಹುದ್ದೆಗಳಿಗೆ ಏರಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳಿಗೆ ಹೇಳಿದ್ದರು ಎಂದು ವರದಿ ಆಗಿದೆ. ಪ್ರತಿಭಟನೆಯನ್ನು ಪೊಲೀಸರು ಇದುವರೆಗೆ ನಿಯಂತ್ರಿಸಿದ ರೀತಿಯನ್ನು ಹಸೀನಾ ಶ್ಲಾಘಿಸಿದರು. ಆದರೆ ಈ ವೇಳೆ ಈ ಪ್ರತಿಭಟನೆಯನ್ನು ಪೊಲೀಸರು ಹೆಚ್ಚು ಕಾಲ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಮುಖ್ಯಸ್ಥರು ಹಸೀನಾಗೆ ತಿಳಿಸಿದರು ಎಂದು ತಿಳಿದು ಬಂದಿದೆ. 

ಬಾಂಗ್ಲಾ ದಂಗೆ ಹಿಂದೆ ಪಾಕ್ ಕೈವಾಡ ಶಂಕೆ : ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್

ಭದ್ರತಾ ಪಡೆಗಳು ಹೆಚ್ಚಿನ ಬಲ ಹಾಕಿ ಪ್ರತಿಭಟನೆ ಹತ್ತಿಕ್ಕುವುದು ಈ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಕೂಡ ಶೇಕ್ ಹಸೀನಾಗೆ ಹಿರಿಯ ಅಧಿಕಾರಿಗಳು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆದರೆ ಹಸೀನಾ ಮಾತ್ರ ಇದ್ಯಾವುದನ್ನು ಕೇಳುವುದಕ್ಕೆ ಸಿದ್ಧರಿರಲಿಲ್ಲ,  ಇದಾದ ನಂತರ ಸೇನೆಯ ಹಿರಿಯ ಅಧಿಕಾರಿಗಳು ಹಸೀನಾಳ ಸೋದರಿ ರಿಹಾನಾ ಜೊತೆ ಮತ್ತೊಂದಯ ಕೋಣೆಯಲ್ಲಿ ಮಾತನಾಡಿದರು ಅಲ್ಲದೇ ಅಧಿಕಾರದಿಂದ ಕೆಳಗಿಳಿಯುವಂತೆ ಹಸೀನಾ ಮನವೊಲಿಸುವಂತೆ ಆಕೆಗೆ ಮನವಿ ಮಾಡಿದರು. ಇದಾದ ನಂತರ ರಿಹಾನಾ ಕೂಡ ಶೇಕ್ ಹಸೀನಾ ಜೊತೆ ಮಾತನಾಡಿದ್ದಾರೆ ಆದರೆ ಈ ಮನವೊಲಿಕೆ ಕೆಲಸ ಮಾಡಿಲ್ಲ, ಈ ಹಂತದಲ್ಲಿ ಶೇಕ್ ಹಸೀನಾ ಪುತ್ರ ಅಮೆರಿಕಾದಲ್ಲಿರುವ ಸಾಜೀಬ್ ವಾಜೀದ್ ಜಾಯ್ ಮಧ್ಯ ಪ್ರವೇಶಿಸಿದ್ದು, ತಾಯಿಯ ಜೊತೆ ಮಾತನಾಡಿ ಅವರ ಮನವೊಲಿಸಿ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾದರು ಎಂದು ವರದಿ ಆಗಿದೆ. 

ಬಾಂಗ್ಲಾಗೆ ಬೆಂಕಿ ಹಚ್ಚಿದ್ದು ಶೇಕ್‌ ಹಸೀನಾರ 'ರಜಾಕಾರ' ಹೇಳಿಕೆ

ಆಂಗ್ಲ ಮಾಧ್ಯಮವೊಂದಕ್ಕೆ ಶೇಕ್ ಹಸೀನಾ ಪುತ್ರ  ಜಾಯ್ ಮಾತನಾಡಿದ್ದು, ನನ್ನ ತಾಯಿಗೆ ಬಾಂಗ್ಲಾದೇಶ ತೊರೆಯುವುದು ಇಷ್ಟವಿರಲಿಲ್ಲ, ಆಕೆ ಅಲ್ಲೇ ಇರಲು ಬಯಸಿದ್ದಳು. ಆಕೆ ಏನೇ ಆದರೂ ದೇಶ ತೊರೆಯುವುದಿಲ್ಲ ಎಂಬ ಮನಸ್ಥಿತಿಯಲ್ಲಿದ್ದಳು. ಆದರೆ ಅಲ್ಲಿರುವುದು ಸುರಕ್ಷಿತವಲ್ಲ ಎಂದು ನಾವೇ ಆಕೆಯನ್ನು ನಿರಂತರ ಒತ್ತಾಯಿಸಿದೆವು. ನಮಗೀಗ ಅವರ ದೈಹಿಕ ಸುರಕ್ಷತೆ ತುಂಬಾ ಮುಖ್ಯ. ಹೀಗಾಗಿ ದೇಶ ತೊರೆಯಲು ಆಕೆಯ ಮನವೊಲಿಸಿದೆವು ಎಂದು ಜಾಯ್ ಹೇಳಿದ್ದಾರೆ. 

ಇಷ್ಟೆಲ್ಲಾ ಪ್ರಹಸನ ನಡೆಯುವ ವೇಳೆಗಾಗಲೇ ಸಮಯ ಕೈ ಮೀರುತ್ತಿತ್ತು. ಪ್ರತಿಭಟನಾಕಾರರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದರು. ಅವರು  ಪ್ರಧಾನಿ ಶೇಖ್ ಹಸೀನಾ ಅಧಿಕೃತ ನಿವಾಸ ಗಾನಭವನದತ್ತ ಆಗಮಿಸುತ್ತಿದ್ದಾರೆ ಎಂಬ ವರದಿ ಗುಪ್ತಚರ ಅಧಿಕಾರಿಗಳು ನೀಡಿದ್ದರು. ಹೀಗಾಗಿ ತಮ್ಮ ಲಗೇಜ್ ತುಂಬಿಕೊಂಡು ಹೊರಡಲು ಶೇಖ್ ಹಸೀನಾಗೆ ಕೇವಲ 45 ನಿಮಿಷ ನೀಡಲಾಯ್ತು. ಈ ವೇಳೆ ದೇಶದ ಜನರನ್ನು ಉದ್ದೇಶಿಸಿ ಶೇಖ್ ಹಸೀನಾ ಮಾತನಾಡಲು ಮುಂದಾಗಿದ್ದರು. ಆದರೆ ಅಲ್ಲಿ ಮಾತನಾಡುವಷ್ಟು ಸಮಯ ಉಳಿದಿರಲಿಲ್ಲ, ಪ್ರಧಾನಿ ಅಧಿಕೃತ ಕಚೇರಿಯಲ್ಲಿ ರಾಜೀನಾಮೆಯ ಅಧಿಕೃತ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಸೋದರಿ ರಿಹಾನಾ ಜೊತೆ ಶೇಖ್ ಹಸೀನಾ ಮನೆ ಬಿಟ್ಟರು. 

ಮಧ್ಯಾಹ್ನ 2.30ಕ್ಕೆ ಬಾಂಗ್ಲಾದ ಸೇನಾ ಹೆಲಿಕಾಪ್ಟರ್‌ ಏರಿ ದೇಶ ತೊರೆದ ಶೇಖ್ ಹಸೀನಾ ನಿರಂತರ 15 ವರ್ಷಗಳ ಕಾಲ ಆಡಳಿತ ನಡೆಸಿ,  ಪ್ರಧಾನಿಯಾಗಿ ಮೆರೆದ ತಾಯ್ನೆಲ್ಲಕ್ಕೆ ಗುಡ್ ಬಾಯ್ ಹೇಳಿದರು. 

click me!