
ಸೊಸೆ ಮೇಲೆ ಹಲ್ಲೆ, ಸೊಸೆಯ ಕಥೆ ಮುಗಿಸಿದ ಗಂಡನ ಮನೆಯವರು ಎನ್ನುವ ಹಲವಾರು ಕ್ರೈಂ ಸುದ್ದಿಗಳ ನಡುವೆ, ಅಥವಾ ಮಗ ಸಣ್ಣ ವಯಸ್ಸಲ್ಲೆ ಸತ್ತರೆ ಸೊಸೆಯನ್ನೇ ದೂಷಿಸುವವರ ಮಧ್ಯೆ ಇಲ್ಲೊಬ್ಬರು ಮಾವ ತಮ್ಮ ಮಗನ ಜೀವನಕ್ಕೆ ಪತ್ನಿಯಾಗಿ ಬಂದು, ತಮ್ಮ ಮನೆಯ ಮಗಳೇ ಆಗಿದ್ದ ಸೊಸೆಗೆ, ಮಗನ ಮರಣದ ಬಳಿಕ, ಯೋಗ್ಯ ವರ ಹುಡುಕಿ ಅದ್ದೂರಿಯಾಗಿ ಮದುವೆ ಮಾಡಿಸಿದ್ದಾರೆ. ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
2018 ರಲ್ಲಿ , ಭೋಪಾಲ್ ನಿವಾಸಿ ಪ್ರಿಯಾಂಕಾ ಉಜ್ಜಯಿನಿಯ ಜೈತಾಲ್ ಗ್ರಾಮದ ನಿವಾಸಿ ಕಪಿಲ್ ಬೈರಾಗಿಯನ್ನು ವರಿಸಿದ್ದರು. ಆ ಸಮಯದಲ್ಲಿ ಪ್ರಿಯಾಂಕಾಗೆ ಕೇವಲ 19 ವರ್ಷ. ಮದುವೆಯ ನಂತರ ಜೀವನವು ಸಂತೋಷದಿಂದ ಕೂಡಿತ್ತು, ಆದರೆ ಕೆಲವೇ ವರ್ಷಗಳಲ್ಲಿ ಆ ಸಂತೋಷ ಮಣ್ಣು ಪಾಲಾಯಿತು. ಪ್ರಿಯಾಂಕಾ ಪತಿ ಕಪಿಲ್ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದರು. ಒಂದು ವರ್ಷ ಕಪಿಲ್ ಗೆ ಕ್ಯಾನ್ಸರ್ ಚಿಕಿತ್ಸೆ ನೀಡಲಾಗಿತ್ತು. ಇನ್ನೇನು ಎಲ್ಲವೂ ಸರಿ ಹೋಗುತ್ತದೆ ಎನ್ನುವಾಗಲೇ ಅಂದರೆ 2023ರಲ್ಲಿ ಕಪಿಲ್ ಕ್ಯಾನ್ಸರ್ ಗೆ ಸೋತು ಜೀವ ತೆತ್ತಿದ್ದರು. ಪತಿಯ ಮರಣದ ಬಳಿಕ ಪ್ರಿಯಾಂಕಾ ಪ್ರಪಂಚವು ಛಿದ್ರವಾಯಿತು. 24ನೇ ವಯಸ್ಸಲ್ಲೇ ವಿಧವೆಯಾಗಿದ್ದ ಪ್ರಿಯಾಂಕಾಳ ನಂತರ ಜೀವನದ ಬಗ್ಗೆ ಕುಟುಂಬದ ಮಂದಿ ಚಿಂತಿತರಾಗಿದ್ದರು.
ತನ್ನ ಮಗನನ್ನು ಕಳೆದುಕೊಂಡ ದುಃಖ ದಿನೇಶ್ ಬೈರಾಗಿಯವರನ್ನು ಕಾಡುತ್ತಿತ್ತು. ಆದರೆ ತಮ್ಮ ಕಣ್ಣೀರನ್ನು ಬದಿಗೊತ್ತಿ ದಿನೇಶ್ ದಿಟ್ಟ ಮತ್ತು ಧೈರ್ಯಶಾಲಿ ನಿರ್ಧಾರ ತೆಗೆದುಕೊಂಡರು. ಅವರು ಸೊಸೆ ಪ್ರಿಯಾಂಕಾಳ ಕೈ ಹಿಡಿದು, "ನಾನು ಅವಳನ್ನು ನನ್ನ ಸೊಸೆಯಾಗಿ ಕರೆತಂದೆ, ಆದರೆ ಈಗ ನಾನು ಅವಳನ್ನು ನನ್ನ ಮಗಳಂತೆ ಘನತೆಯಿಂದ ಕಳುಹಿಸುತ್ತೇನೆ" ಎಂದು ಪ್ರತಿಜ್ಞೆ ಮಾಡಿದನು.
ಎರಡು ವರ್ಷಗಳಿಂದ ಸೂಕ್ತ ವರನ ಹುಡುಕಾಟ: ದಿನೇಶ್ ಬೈರಾಗಿ ಖಾಂಡ್ವಾದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದರು. ಪ್ರಿಯಾಂಕಾಳ ಜೀವನವನ್ನು ಸರಿಮಾಡಲು, ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದರು. ಪ್ರಿಯಾಂಕಾ ಸಾಮಾಜಿಕ ನಿಂದನೆಗಳನ್ನು ಎದುರಿಸುತ್ತಾ, ಒಂಟಿತನದಲ್ಲಿ ಬದುಕಬಾರದು ಎಂದು ಎರಡು ವರ್ಷ ಸೂಕ್ತ ವರನಿಗಾಗಿ ಹುಡುಕಿ, ಸರಿಯಾದ ವರನನ್ನು ಹುಡುಕಿದರು. ದಿನೇಶ್ ಖುದ್ದಾಗಿ ಗೋವಿಂದ್ ಅವರ ಮನೆಗೆ ಭೇಟಿ ನೀಡಿ, ಹುಡುಗನ ಕುಟುಂಬ ಮತ್ತು ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ತೃಪ್ತರಾದ ನಂತರ,ಪ್ರಿಯಾಂಕಾಗೆ ಮದುವೆ ಮಾಡಲು ನಿರ್ಧರಿಸಿದರು. ಗೋವಿಂದ್ ಅವರ ಕುಟುಂಬವೂ ಸಹ ಇದಕ್ಕೆ ಒಪ್ಪಿಕೊಂಡರು.
ಇತ್ತೀಚೆಗೆ, ಪ್ರಿಯಾಂಕಾ ಮತ್ತು ಗೋವಿಂದ ಅವರ ವಿವಾಹವು ಭೋಪಾಲ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 350 ಅತಿಥಿಗಳ ಸಮ್ಮುಖದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಪ್ರಿಯಾಂಕಾ ಅವರ ಮಾವ ದಿನೇಶ್ ಬೈರಾಗಿ ಅವರೇ ಮದುವೆಯ ಸಂಪೂರ್ಣ ವೆಚ್ಚವನ್ನು ಭರಿಸಿದರು. ಅಷ್ಟೇ ಅಲ್ಲ ತಾವೇ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡಿದರು. ಆ ಮೂಲಕ ಮಾವ ಇಡಿ ಸಮಾಜಕ್ಕೆ ಮಾದರಿಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ