
ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿ ಇನ್ಫೋಸಿಸ್, ನಿಗದಿಪಡಿಸಿರುವ ಕೆಲಸದ ಅವಧಿಯನ್ನು ಮೀರುವ ತನ್ನ ಉದ್ಯೋಗಿಗಳಿಗೆ ವೈಯಕ್ತಿಕ ಎಚ್ಚರಿಕೆ ಇಮೇಲ್‌ಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು ವಾರಕ್ಕೆ 70 ಗಂಟೆಗಳ ಕೆಲಸ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಇದು ನೇರವಾಗಿ ವಿರುದ್ಧವಾದ ಕ್ರಮವಾಗಿದೆ. ಬೆಂಗಳೂರು ಮೂಲದ ಈ ಸಂಸ್ಥೆ, ಸ್ವಯಂಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಚಯಿಸಿದ್ದು, ಉದ್ಯೋಗಿಗಳು ಪ್ರತಿದಿನ 9 ಗಂಟೆ 15 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದಾಗ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ವಾರಕ್ಕೆ ಐದು ದಿನಗಳವರೆಗೆ ಪ್ರತಿದಿನ 9.15 ಗಂಟೆಗಳ ಕಾಲ ಕೆಲಸ ಮಾಡಬೇಕು. ದೂರದಿಂದ ಕೆಲಸ ಮಾಡುವ ವೇಳೆ ಈ ಅವಧಿಯನ್ನು ಮೀರುವುದರಿಂದ ಎಚ್ಚರಿಕೆ ಸಂದೇಶ ಬರುತ್ತದೆ ಎಂದು ಓರ್ವ ಉದ್ಯೋಗಿ ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ಫೋಸಿಸ್‌ನ ಮಾನವ ಸಂಪನ್ಮೂಲ (HR) ವಿಭಾಗ ಈಗ ಉದ್ಯೋಗಿಗಳ ಮಾಸಿಕ ವರ್ಕ್ ಫ್ರಮ್ ಹೋಂ ಕೆಲಸದ ವೇಳೆಯನ್ನು ಟ್ರ್ಯಾಕ್ ಮಾಡುತ್ತಿದೆ. ನಿಗದಿತ ಸಮಯ ಮೀರಿದ ಸಿಬ್ಬಂದಿಗೆ, ಅವರ ಒಟ್ಟು ಕೆಲಸದ ಗಂಟೆಗಳ ವಿವರಣೆ ಮತ್ತು ಮನೆಯಿಂದ ಮಾಡುವ ಕೆಲಸದ ದಿನಗಳ ವಿವರಗಳೊಂದಿಗೆ ಅಧಿಸೂಚನೆಗಳನ್ನು ಕಳುಹಿಸುತ್ತಿದೆ. 2023ರ ನವೆಂಬರ್‌ನಲ್ಲಿ ಜಾರಿಗೆ ತಂದ ಕೆಲಸದ ನೀತಿಯಂತೆ, ಸಿಬ್ಬಂದಿ ಕನಿಷ್ಠ ತಿಂಗಳಿಗೆ 10 ದಿನ ಕಚೇರಿಗೆ ಹಾಜರಾಗಬೇಕೆಂಬ ನಿಯಮವಿದೆ.
“ನಿಮ್ಮ ಬದ್ಧತೆಯನ್ನು ನಾವು ಮೆಚ್ಚುತ್ತೇವೆ, ಆದರೆ ಆರೋಗ್ಯಕರ ಕೆಲಸ-ಜೀವನ ಸಮತೋಲನವನ್ನು ಕಾಯ್ದುಕೊಳ್ಳುವುದು ನಿಮ್ಮ ಯೋಗಕ್ಷೇಮ ಹಾಗೂ ದೀರ್ಘಕಾಲಿಕ ವೃತ್ತಿಪರ ಯಶಸ್ಸಿಗೆ ಅತ್ಯಂತ ಮುಖ್ಯವೆಂದು ನಾವು ನಂಬುತ್ತೇವೆ ಎಂದು HR ವಿಭಾಗದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗಿಗಳ ವ್ಯಕ್ತಿಗತ ಯೋಗಕ್ಷೇಮ ಹಾಗೂ ವೃತ್ತಿಪರ ಯಶಸ್ಸಿಗೆ ಆರೋಗ್ಯ ಮತ್ತು ಸಮತೋಲನ ಆದ್ಯತೆ ಎಂದು ಇಮೇಲ್‌ಗಳಲ್ಲಿ ತಿಳಿಸಲಾಗಿದೆ.
ಯುವ ತಂತ್ರಜ್ಞಾನ ವೃತ್ತಿಪರರು, ವಿಶೇಷವಾಗಿ ಅನಿಯಮಿತ ಆಹಾರ ಮತ್ತು ವಿಶ್ರಾಂತಿ ಕ್ರಮಗಳಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಇನ್ಫೋಸಿಸ್ ಈ ಕ್ರಮವನ್ನು ಕೈಗೊಂಡಿದೆ. ಕಂಪನಿಯ ಮಾರ್ಗದರ್ಶನದಲ್ಲಿ ವಿಶೇಷ ಶಿಫಾರಸುಗಳಿವೆ. ನಿಮ್ಮ ಕೆಲಸದ ದಿನದಲ್ಲಿ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ; ನೀವು ಅತಿಯಾದ ಒತ್ತಡಕ್ಕೆ ಒಳಗಾಗಿದ್ದರೆ ಅಥವಾ ಆದ್ಯತೆಗಳನ್ನು ನಿರ್ಧರಿಸಲು ಸಹಾಯ ಬೇಕಾದರೆ ನಿಮ್ಮ ಮೇಲ್ವಿಚಾರಕರಿಗೆ ತಿಳಿಸಿ.
ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಭಾರತೀಯರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ನಾರಾಯಣ ಮೂರ್ತಿ ಇತ್ತೀಚೆಗೆ ಮಾಡಿರುವ ಹೇಳಿಕೆಗಳಿಗೆ ಈ ಕ್ರಮವೊಂದು ಗಮನಾರ್ಹ ವ್ಯತ್ಯಾಸವಾಗಿದೆ. ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಸುಸ್ಥಿರ ಉತ್ಪಾದಕತಿಗೆ ಮಹತ್ವ ನೀಡುತ್ತಿರುವುದರಿಂದ, ಭಾರತೀಯ ಐಟಿ ವಲಯದಲ್ಲಿ ಕೆಲಸದ ಸ್ಥಳದ ಮಾನದಂಡಗಳು ಕ್ರಮೇಣ ಬದಲಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ