ಕಡಿಮೆ ಟೋಲ್‌ ಪಡೆವ ಹೆದ್ದಾರಿಯ ಮಾಹಿತಿ ಶೀಘ್ರ ಚಾಲಕರಿಗೆ ಲಭ್ಯ

Published : Jun 28, 2025, 05:28 AM IST
Women SHG Toll Collection

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ತಲೆಬಿಸಿಯನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಮಾರ್ಗವನ್ನು ಹುಡುಕಿದೆ. ಅದರನ್ವಯ ಕಡಿಮೆ ಟೋಲ್‌ ಸಂಗ್ರಹಿಸುವ ರಸ್ತೆಯ ಮಾಹಿತಿಯನ್ನು ಚಾಲಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ತಲೆಬಿಸಿಯನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಮಾರ್ಗವನ್ನು ಹುಡುಕಿದೆ. ಅದರನ್ವಯ ಕಡಿಮೆ ಟೋಲ್‌ ಸಂಗ್ರಹಿಸುವ ರಸ್ತೆಯ ಮಾಹಿತಿಯನ್ನು ಚಾಲಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಎನ್‌ಎಚ್‌ಎಐನ ರಾಜಮಾರ್ಗ ಆ್ಯಪ್‌ನಲ್ಲಿ ಮುಂದಿನ ತಿಂಗಳಿನಿಂದ ಜಾರಿ ಆಗುವಂತೆ ಹೊಸ ಫೀಚರ್‌ ಅಳವಡಿಸಲಾಗಿದೆ. ಇದರಲ್ಲಿ ಹೊರಡುವ ಸ್ಥಳದಿಂದ ಗಮ್ಯ ಸ್ಥಾನಕ್ಕೆ ಹಲವು ಮಾರ್ಗಗಳನ್ನು ಮಾಹಿತಿಯು ಲಭ್ಯವಿರಲಿದೆ. ದೂರ, ಟೋಲ್‌ ಸಂಗ್ರಹ ಮಾಹಿತಿ ಸೇರಿ ಹೆದ್ದಾರಿಗೆ ಸಂಬಂಧಿಸಿದ ಇತರೆ ಮಾಹಿತಿ ಇದರಲ್ಲಿರುತ್ತದೆ. ಜೊತೆಗೆ ದೂರು ಮತ್ತು ಸಲಹೆ ತಂತ್ರಾಂಶವೂ ಸಹ ಇದರಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಹಿಂದೂ ವ್ಯಕ್ತಿಗೂ ಭಗವದ್ಗೀತೆ ಪಠಣ ಹಕ್ಕಿದೆ: ಕಾಶಿ ವಿದ್ವತ್‌ ಪರಿಷತ್‌

ವಾರಾಣಸಿ: ಪ್ರತಿ ಹಿಂದೂವಿಗೂ ಭಗವದ್ಗೀತೆ ಕಥಾವಾಚನದ ಹಕ್ಕಿದೆ ಎಂದು ಕಾಶಿ ವಿದ್ವತ್‌ ಪರಿಷತ್‌ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಇಟಾವಾ ನಗರದ ದಾಂದರಪುರ ಗ್ರಾಮಕ್ಕೆ ಬಂದು ಭಗವದ್ಗೀತಾ ಕಥಾವಾಚನ ಮಾಡಿದ ಯಾದವ ಸಮುದಾಯದ ಇಬ್ಬರ ಮೇಲೆ, ಮೇಲ್ವರ್ಗದ ಕೆಲ ಮಂದಿ ಜಾತಿ ನಿಂದನೆ ಮಾಡಿದ್ದಲ್ಲದೆ, ತಲೆ ಬೋಳಿಸಿ ಮೈಮೇಲೆ ಮೂತ್ರ ವಿಸರ್ಜಿಸಿದ ಅಮಾನವೀಯ ಘಟನೆ ನಡೆದಿತ್ತು. ಕಾಶಿ ವಿದ್ವತ್ ಪರಿಷತ್ ಈ ಘಟನೆಯನ್ನು ಖಂಡಿಸಿದ್ದು, ಭಗವದ್ಗೀತಾ ಪಠಣ ಮಾಡುವ ಹಕ್ಕು ಪ್ರತಿ ಹಿಂದೂವಿಗೂ ಇದೆ ಎಂದು ಪ್ರತಿಪಾದಿಸಿದೆ.

ನಕ್ಸಲ್‌ ಪೀಡಿತ ಬಸ್ತರ್‌ ಮೊದಲ ರೈಲು ಸೇವೆ ಪಡೆಯುವತ್ತ ಪ್ರಯಾಣ

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ನಕ್ಸಲ್‌ ಪೀಡಿತ ಪ್ರದೇಶಗಳ ಪೈಕಿ ಒಂದಾದ ಛತ್ತೀಸ್‌ಗಢದ ಬಸ್ತರ್‌ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. ಬಸ್ತರ್‌ನಿಂದ ತೆಲಂಗಾಣ ಸಂಪರ್ಕಿಸುವ 160 ಕಿ.ಮೀ. ಮಾರ್ಗ ನಿರ್ಮಾಣದ ಕುರಿತ ಪ್ರಸ್ತಾಪ ಅಂತಿಮ ಹಂತಕ್ಕೆ ಬಂದಿದೆ. ಇದು ಜಾರಿಯಾದರೆ ಮೊದಲ ಬಾರಿಗೆ ನಕ್ಸಲ್‌ ಬಾಧಿತ ಸುಕ್ಮಾ, ದಂತೇವಾಡ, ಬಿಜಾಪುರ ಜಿಲ್ಲೆಗಳು ರೈಲು ಸಂಪರ್ಕಕ್ಕೆ ಒಳಪಡಲಿವೆ. ಕೊಥಗುಡೆಮ್‌ನಿಂದ (ತೆಲಂಗಾಣ) ಕಿರಾಂಡುಲ್‌ಗೆ (ಛತ್ತೀಸ್‌ಗಢ) ರೈಲು ಸಂಪರ್ಕದ ಗುರಿ ರೂಪಿಸಲಾಗಿದೆ.

ಆಂತರಿಕ ಚುನಾವಣೆ: 3 ರಾಜ್ಯಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ

ನವದೆಹಲಿ: ನೂತನ ರಾಷ್ಟ್ರಾಧ್ಯಕ್ಷರ ಆಯ್ಕೆಗೂ ಮುನ್ನ ಬಹುತೇಕ ರಾಜ್ಯಗಳಲ್ಲಿ ಸಂಘಟನಾ ಚುನಾವಣೆ ಪೂರ್ಣಕ್ಕೆ ಮುಂದಾಗಿರುವ ಬಿಜೆಪಿ, 3 ರಾಜ್ಯಗಳಲ್ಲಿ ಚುನಾವಣೆ ಮೇಲೆ ನಿಗಾಕ್ಕೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದಲ್ಲಿ ಪಕ್ಷದ ಅಧ್ಯಕ್ಷರು ಮತ್ತು ರಾಷ್ಟ್ರೀಯ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲು ಕಿರಣ್‌ ರಿಜಿಜು, ರವಿಶಂಕರ್‌ ಪ್ರಸಾದ್‌, ಹರ್ಷ್‌ ಮಲ್ಹೋತ್ರಾರನ್ನು ನೇಮಿಸಲಾಗಿದೆ. ಬಿಜೆಪಿಯಲ್ಲಿ 37 ಆಡಳಿತಾತ್ಮಕ ರಾಜ್ಯಗಳಿದ್ದು, ಅವುಗಳಲ್ಲಿ ಕನಿಷ್ಠ 19ಕ್ಕೆ ಅಧ್ಯಕ್ಷರ ನೇಮಕವಾದಲ್ಲಿ ಮಾತ್ರ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಯಲಿದೆ.

ಆಗಸ್ಟ್‌ನಿಂದ ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಪಾವತಿ ಸ್ವೀಕಾರ ಶುರು

ನವದೆಹಲಿ: ದೇಶಾದ್ಯಂತ ಅಂಚೆ ಕಚೇರಿಗಳು ತಮ್ಮ ಐಟಿ ವ್ಯವಸ್ಥೆಯಲ್ಲಿ ಹೊಸ ಅಪ್ಲಿಕೇಷನ್ ಅನ್ನು ಪರಿಚಯಿಸಿರುವುದರಿಂದ ಇದೇ ಆಗಸ್ಟ್‌ನಿಂದ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಂಚೆ ಇಲಾಖೆ ತನ್ನ ಐಟಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಡೈನಾಮಿಕ್ ಕ್ಯೂಆರ್ ಕೋಡ್‌ನೊಂದಿಗೆ ವಹಿವಾಟುಗಳನ್ನು ನಿರ್ವಹಿಸಲು ಹೊಸ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದೆ. ಕರ್ನಾಟಕದಲ್ಲಿ ಐಟಿ 2.0 ಅಡಿಯಲ್ಲಿ ಈಗಾಗಲೇ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಮೈಸೂರು ಮತ್ತು ಬಾಗಲಕೋಟೆ ಪ್ರಧಾನ ಕಚೇರಿ ಹಾಗೂ ಅವುಗಳ ಅಧೀನ ಕಚೇರಿಗಳಲ್ಲಿ ಕ್ಯೂಆರ್ ಕೋಡ್‌ ಮೂಲಕ ಯಶಸ್ವಿಯಾಗಿ ವಹಿವಾಟನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು