ಸೂರ್ಯೋದಯ, ಸೂರ್ಯಾಸ್ತದ ವೇಳೆ ಹನುಮಾನ್ ಚಾಲೀಸಾ ಪಠಣ ಆರಂಭಿಸಿದ ದೇಗುಲ

By Anusha Kb  |  First Published Apr 26, 2022, 5:21 PM IST
  • ಧ್ವನಿವರ್ಧಕದ ಮೂಲಕ ಹನುಮಾನ್ ಚಾಲೀಸ್‌ ಪಠಣ
  • ಮಧ್ಯಪ್ರದೇಶದ ಖೇಡಪತಿ ಹನುಮಾನ್ ದೇವಸ್ಥಾನದಲ್ಲಿ ಪಠಣ
  • ಶಾಂತಿ ಕಾಪಾಡುವಂತೆ ಜಿಲ್ಲಾಡಳಿತದ ಮನವಿ

ಇಂದೋರ್: ಮಹಾರಾಷ್ಟ್ರ ದಲ್ಲಿ ಮಸೀದಿಗಳಿಂದ ಧ್ವನಿವರ್ಧಕಗಳ ಮೂಲಕ ಅಜಾನ್‌ ಮೊಳಗಿಸುತ್ತಿರುವ ವಿಚಾರ ತೀವ್ರ ವಿವಾದಕ್ಕೀಡಾಗಿರುವ ಬೆನ್ನಲೇ ಮಧ್ಯಪ್ರದೇಶದ ಇಂದೋರ್‌ನ ದೇವಾಲಯವೊಂದು ದಿನಕ್ಕೆ ಐದು ಬಾರಿ ಹನುಮಾನ್ ಚಾಲೀಸಾ ಮತ್ತು ರಾಮ್‌ಧುನ್ ಅನ್ನು ಮೂರು ಬಾರಿ ಧ್ವನಿವರ್ಧಕದ ಮೂಲಕ ಕೇಳಿಸಲು ಪ್ರಾರಂಭಿಸಿದೆ. ಪರಿಣಾಮವಾಗಿ, ಸ್ಥಳೀಯ ಆಡಳಿತವು ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಸಮುದಾಯವನ್ನು ಒತ್ತಾಯಿಸಿದೆ.

ಸ್ಥಳೀಯ ಸಂಘಟನೆಯಾದ ಹಿಂದ್ವಿ ಸ್ವರಾಜ್, ಮಧ್ಯಪ್ರದೇಶದ ಚಂದ್ರಭಾಗ ಪ್ರದೇಶದ ಖೇಡಪತಿ ಹನುಮಾನ್ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಮತ್ತು ರಾಮಧುನ್ (ಶ್ರೀರಾಮನನ್ನು ಸ್ತುತಿಸುವ ಭಕ್ತಿಗೀತೆಗಳು) ದಿನಕ್ಕೆ ಐದು ಬಾರಿ ಪ್ಲೇ ಮಾಡುವಂತೆ ಕೋರಿತ್ತು.ಸಂಸ್ಥೆಯ ಮುಖ್ಯಸ್ಥ ಮತ್ತು ವೃತ್ತಿಯಲ್ಲಿ ವಕೀಲರಾಗಿರುವ ಅಮಿತ್ ಪಾಂಡೆ (Amit Pandey) ಸೋಮವಾರ ಈ ವಿಚಾರವನ್ನು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. 

Tap to resize

Latest Videos

ಮೆದುಳು ಆಪರೇಷನ್ ನಡೆಯುತ್ತಿದ್ರೂ ಹನುಮಾನ್ ಚಾಲೀಸ್ ಜಪಿಸುತ್ತಿದ್ದ ಮಹಿಳೆ
 

ಈ ಹಳೆಯ ದೇವಾಲಯದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು (Hanuman Chalisa)ಧ್ವನಿವರ್ಧಕದಲ್ಲಿ ನುಡಿಸಲಾಗುತ್ತದೆ. ದೇವಾಲಯದಲ್ಲಿ ದಿನವೂ ಮೂರು ಬಾರಿ ರಾಮಧುನ್ ಅನ್ನು ಧ್ವನಿವರ್ಧಕದಲ್ಲಿ ನುಡಿಸಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ, ವಿವಿಧ ವಕೀಲರು, ಪ್ರಸ್ತುತ ನಿಯಮಾವಳಿಗಳನ್ನು ಉಲ್ಲೇಖಿಸಿ, ಮಸೀದಿಗಳಲ್ಲಿ ಹೆಚ್ಚಿನ ಶಬ್ಧಗಳ  ಧ್ವನಿವರ್ಧಕಗಳಲ್ಲಿ ಆಜಾನ್‌ ನುಡಿಸುವ ಮೂಲಕ ಜನರಿಗೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ಅನಾನುಕೂಲತೆ ಉಂಟಾಗುತ್ತಿರುವ ಬಗ್ಗೆ ನಗರದ ಪೊಲೀಸ್ ಠಾಣೆಗಳಿಗೆ ಪತ್ರ ಬರೆದಿದ್ದರು ಎಂದು ಅಮಿತ್ ಪಾಂಡೆ ಹೇಳಿದ್ದರು.

ಮೇ 9 ರೊಳಗೆ ಆಝಾನ್ ತೆಗೆಸಿ, ಇಲ್ಲದಿದ್ರೆ ಹನುಮಾನ್ ಚಾಲೀಸ್ ಪಠಣ: ಶ್ರೀರಾಮಸೇನೆ ಪಟ್ಟು
ಆದರೂ ಪೊಲೀಸರಾಗಲಿ, ಜಿಲ್ಲಾಡಳಿತವಾಗಲಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು. ನಾವು ನಗರದಲ್ಲಿ 25 ದೇವಾಲಯಗಳನ್ನು ಗುರುತಿಸಿದ್ದೇವೆ. ಅಲ್ಲಿ ನಾವು ದಿನಕ್ಕೆ ಐದು ಬಾರಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಮತ್ತು ರಾಮಧುನ್ ನುಡಿಸಲು ಯೋಜಿಸುತ್ತಿದ್ದೇವೆ ಎಂದು ಪಾಂಡೆ ಹೇಳಿದರು.

ಶಾಂತಿ ಕಾಪಾಡುವುದು ಆಡಳಿತದ ಪ್ರಮುಖ ಆದ್ಯತೆಯಾಗಿದೆ ಎಂದು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ (district collector) ಮನೀಶ್ ಸಿಂಗ್ (Manish Singh) ಹೇಳಿದರು. ಸಮಸ್ಯೆಯನ್ನು ಪರಿಹರಿಸಲು ಸಮಾಜದ ಪ್ರಮುಖ ಮುಖಂಡರ ನಡುವೆ ಮಾತುಕತೆ ನಡೆಸಲು ಅವರು ಒಲವು ತೋರಿದ್ದಾರೆ.

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಬೇಕು ಮತ್ತು ಯಾವುದೇ ಕೋಮು ಉದ್ವಿಗ್ನತೆ ಇರಬಾರದು. ನಗರದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಬಗ್ಗೆ ದೂರುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ದೂರುಗಳ ಬಗ್ಗೆ ನಾವು ವಿವಿಧ ಮಸೀದಿಗಳ ವ್ಯವಸ್ಥಾಪಕ ಸಮಿತಿಗಳೊಂದಿಗೆ ಮಾತನಾಡಿದ ನಂತರ, ಅಲ್ಲಿ ಅಳವಡಿಸಲಾದ ಧ್ವನಿವರ್ಧಕಗಳ (loudspeaker) ಪರಿಮಾಣವನ್ನು ಕಡಿಮೆ ಮಾಡಲಾಗಿದೆ ಎಂದರು. ಮಹಾರಾಷ್ಟ್ರದಲ್ಲಿ(Maharashtra), ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಧ್ವನಿವರ್ಧಕದ ಮೂಲಕ ಹನುಮಾನ್‌ ಚಾಲೀಸ್‌ ಪಠಿಸುವುದಾಗಿ ಅವರು ಹೇಳಿದ್ದರು.

ಈ ನಡುವೆ ರಾಜ್ಯದಲ್ಲಿ ಆಜಾನ್ (Azaan) ವಿರುದ್ಧ ಹಿಂದೂ ಸಂಘಟನೆಗಳು ಸಮರ ಮುಂದುವರೆದಿದೆ. ಮೇ 09 ರ ಒಳಗೆ ಮಸೀದಿಗಳ ಮೈಕ್ (LoudSpeaker) ತೆರವು ಮಾಡಬೇಕು. ಇಲ್ಲದಿದ್ದರೆ ಪ್ರತಿನಿತ್ಯ 5 ಬಾರಿ ಭಜನೆ ನಡೆಸುವುದಾಗಿ ಶ್ರೀರಾಮಸೇನೆ (Sriramasene) ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಸೀದಿಗಳಲ್ಲಿನ ಆಜಾನ್‌ ನಿಷೇಧ ಕುರಿತಂತೆ ಸರ್ಕಾರ ಯಾವುದೇ ಹೊಸ ಕಾನೂನುಗಳನ್ನು ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  ಸರ್ಕಾರದ ದೃಷ್ಟಿಯಲ್ಲಿ ಎಲ್ಲ ಜಾತಿ-ಧರ್ಮದವರೂ ಸಮಾನರು. ಈ ವಿಚಾರದಲ್ಲಿ ಯಾವುದೇ ಸಂಘಟನೆಯಾಗಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

click me!