Indore Temple Tragedy: ದೇವಸ್ಥಾನದ ಮೇಲೂ ಬುಲ್ಡೋಜರ್‌ ಹತ್ತಿಸಿದ ನಗರ ಪಾಲಿಕೆ!

By Santosh NaikFirst Published Apr 3, 2023, 6:41 PM IST
Highlights

ಈವರೆಗೂ ಅಕ್ರಮ ಮನೆಗಳ ಮೇಲೆ ಬುಲ್ಡೋಜರ್‌ ಹತ್ತಿಸುವ ಪರಿಪಾಠವಿತ್ತು. ಆದರೆ, ರಾಮನವಮಿ ದಿನ ಇಂದೋರ್‌ ದೇವಸ್ಥಾನದ ದುರಂತದ ಬಳಿಕ, ಅಲ್ಲಿನ ನಗರ ಪಾಲಿಕೆ ದೇವಸ್ಥಾನದ ಅಕ್ರಮ ಕಟ್ಟಡಗಳ ಮೇಲೆ ಬುಲ್ಡೋಜರ್‌ ಹತ್ತಿಸಿದೆ. ಅದರೊಂದಿಗೆ ಇತರ ಮೂರು ಧಾರ್ಮಿಕ ಪ್ರದೇಶಗಳು ಲಿಸ್ಟ್‌ನಲ್ಲಿದೆ.

ಇಂದೋರ್‌ (ಏ.3): ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬೆಳೇಶ್ವರ ದೇವಸ್ಥಾನದ ಭಾಗವನ್ನು ಮುನ್ಸಿಪಲ್ ಕಾರ್ಪೊರೇಷನ್ ಸೋಮವಾರ ಬೆಳಗ್ಗೆ ನೆಲಸಮಗೊಳಿಸಿದೆ. ರಾಮನವಮಿಯಂದು ಈ ದೇವಸ್ಥಾನದ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದು 36 ಮಂದಿ ಸಾವನ್ನಪ್ಪಿದ್ದರು. ಅತಿಕ್ರಮಣ ತೆರವಿಗೆ ಪಾಲಿಕೆ ಸಿಬ್ಬಂದಿ ಬೆಳಗ್ಗೆ 6 ಗಂಟೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ್ದರು.ದೇವಸ್ಥಾನದ ಒತ್ತುವರಿ ತೆರವಿಗೆ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರಾದರೂ, ದೇವಸ್ಥಾನದ ಹೊರಗೆ ಪೊಲೀಸ್ ಬಂದೋಬಸ್ತ್ ನೀಡುವ ಮೂಲಕ ಒತ್ತುವರಿಯನ್ನು ತೆರವು ಮಾಡಲಾಗಿದೆ.  ಆಡಳಿತವು ಲಿಡ್ ವಾಲಾ ಕುವಾನ್, ಸುಖ್ಲಿಯಾ ಮತ್ತು ಗದ್ರಖೇಡಿಯಲ್ಲಿನ ಧಾರ್ಮಿಕ ಸ್ಥಳಗಳ ಅತಿಕ್ರಮಣವನ್ನು ತೆಗೆದುಹಾಕಿತು. ಗುರುವಾರ ರಾಮನವಮಿ ಹವನದ ವೇಳೆ ದೇಗುಲದ ಮೆಟ್ಟಿಲು ಬಾವಿಯ ಮೇಲ್ಛಾವಣಿ ಕುಸಿದು 60 ಮಂದಿ ಮೆಟ್ಟಿಲು ಬಾವಿಗೆ ಬಿದ್ದಿದ್ದರು. ಕೆಲವರು ತಾವಾಗಿಯೇ ಹೊರಬಂದಿದ್ದರೆ, 20 ಮಂದಿಯನ್ನು ರಕ್ಷಿಸಲಾಗಿತ್ತು. ಒತ್ತುವರಿ ಪ್ರದೇಶದ ಕಟ್ಟಡಗಳನ್ನು ತೆರವು ಮಾಡಿದ್ದು ಮಾತ್ರವಲ್ಲದೆ, ದೇವಾಲಯದ ಸಂಕೀರ್ಣದಲ್ಲಿದ್ದ ದೇವತೆಗಳ ಮೂರ್ತಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಮೆಟ್ಟಿಲುಬಾವಿಯ ಮೇಲೆಯೇ ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಈಗ ಕಟ್ಟಡವನ್ನು ಉರುಳಿಸಿದ ಕಸವನ್ನು ಮೆಟ್ಟಿಲುಬಾವಿಯಲ್ಲಿ ಸುರಿಯುವ ಮೂಲಕ ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 30 ರಂದು ಪಟೇಲ್ ನಗರದ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಾಲಯದ ಮಹಡಿ ರಾಮನವಮಿಯಂದು ಕುಸಿದು ಬಿದ್ದು 36 ಜನರು ಸಾವನ್ನಪ್ಪಿದರು. ಸಾರ್ವಜನಿಕ ಉದ್ಯಾನವನದಲ್ಲಿದ್ದ ಮೆಟ್ಟಿಲುಬಾವಿಯ ಮೇಲೆ ಸ್ಲ್ಯಾಬ್‌ಗಳನ್ನು ಹಾಕಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಅತಿಯಾದ ಭಾರ ತಾಳಲಾರದೆ ಸ್ಲ್ಯಾಬ್‌ಗಳು ಕುಸಿದು ಬಿದ್ದು, ಜನರು ಬಾವಿಯೊಳಗೆ ಬಿದ್ದಿದ್ದರು.  ಸೋಮವಾರ, ದೇವಾಲಯದಲ್ಲಿನ ಅತಿಕ್ರಮಣಗಳನ್ನು ಸಾಕಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ತೆಗೆದುಹಾಕಲಾಯಿತು, ಪೂಜಾ ಸ್ಥಳಕ್ಕೆ ಹೋಗುವ ರಸ್ತೆಗಳನ್ನು ಬ್ಯಾರಿಕೇಡ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

"ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ ನಾವು ಸಾರ್ವಜನಿಕ ಉದ್ಯಾನದಲ್ಲಿ ಎಲ್ಲಾ ಅಕ್ರಮ ನಿರ್ಮಾಣಗಳನ್ನು ತೆಗೆದುಹಾಕಿದ್ದೇವೆ. ಯಾವುದೇ ಅಪಘಾತ ಸಂಭವಿಸದಂತೆ ಬಾವಿಯನ್ನು ಅವಶೇಷಗಳಿಂದ ತುಂಬಿದೆ" ಎಂದು ಇಂದೋರ್ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸಿದ್ಧಾರ್ಥ್ ಜೈನ್ ತಿಳಿಸಿದ್ದಾರೆ. ಮಾರ್ಚ್ 30 ರ ಘಟನೆಯ ನಂತರ ಸ್ಥಳದಲ್ಲಿ ಭೂಕುಸಿತದ ಅಪಾಯವಿದ್ದ ಕಾರಣ ದೇವಸ್ಥಾನದ ಪಕ್ಕದಲ್ಲಿ ನಿರ್ಮಿಸಲಾಗುತ್ತಿದ್ದ ಹೊಸ ದೇವಾಲಯವನ್ನು ಸಹ ಕೆಡವಲಾಗಿದೆ ಎಂದು ಹೇಳಿದ್ದಾರೆ.

VIDEO | Four days after the stepwell roof collapse at a temple in Indore claimed 36 lives, the local administration launched a drive on Monday morning to remove encroachments from the religious complex and move the idols of deities to another shrine. pic.twitter.com/uIRhBS8BhR

— Press Trust of India (@PTI_News)

ರಾಮನವಮಿ ದಿನವೇ ದೇಗುಲದಲ್ಲಿ ದುರಂತ: ಬಾವಿ ಚಾವಣಿ ಕುಸಿದು 8 ಭಕ್ತರ ದುರ್ಮರಣ

ಬೇಳೇಶ್ವರ ಮಹಾದೇವ ಜುಲೇಲಾಲ್ ದೇವಾಲಯದ ಸಂಕೀರ್ಣದ ಸುತ್ತಲಿನ 10,000 ಚದರ ಅಡಿ ಭೂಮಿಯಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ. ವಿಧಿವಿಧಾನಗಳ ಪ್ರಕಾರ ವಿಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಲಾಯಿತು ಮತ್ತು ಅವುಗಳನ್ನು ಕಾಂತಫೋಡ್ ದೇವಸ್ಥಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಸ್ಥಳದಲ್ಲಿದ್ದ ದೇವಾಲಯದ ಅರ್ಚಕರು ತಿಳಿಸಿದ್ದಾರೆ.ಅತಿಕ್ರಮಣ ವಿರೋಧಿ ಕ್ರಮ ಕಾನೂನು ಬಾಹಿರವಾಗಿದ್ದು, ದುರಂತವನ್ನು ತಪ್ಪಿಸಲು ನಗರ ಪಾಲಿಕೆಯ ವೈಫಲ್ಯವನ್ನು ಮರೆಮಾಚಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

Latest Videos

ತಡೆಗೋಡೆ ಕುಸಿದು ಬಾವಿಗೆ ಬಿದ್ದ 25ಕ್ಕೂ ಹೆಚ್ಚು ಜನ: ರಾಮನವಮಿ ಆಚರಣೆ ವೇಳೆ ಘಟನೆ

ದುರಂತದಲ್ಲಿ ಪತ್ನಿ, ಸೊಸೆ ಮತ್ತು ಇತರ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡಿರುವ ಲಕ್ಷ್ಮೀಕಾಂತ್ ಪಟೇಲ್ ಕೂಡ ಈ ಕ್ರಮವನ್ನು ಖಂಡಿಸಿದ್ದಾರೆ. ದೇವಸ್ಥಾನದ ಸ್ಥಳದಲ್ಲಿಯೇ ಇವರು ವಾಸ ಮಾಡುತ್ತಿದ್ದರು. ತಮ್ಮ ಸಂಬಂಧಿಗಳೊಂದಿಗೆ ವರ್ಷಗಳಿಂದ ದೇವಾಲಯವನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ ಗುರುವಾರ ನಡೆದ ದುರಂತದ ನಂತರ, ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸೇವಾರಾಮ್ ಗಲಾನಿ ಮತ್ತು ಕಾರ್ಯದರ್ಶಿ ಮುರಳಿ ಕುಮಾರ್ ಸಬ್ನಾನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜುನಿ ಇಂದೋರ್ ಪೊಲೀಸ್ ಠಾಣೆಯ ಉಸ್ತುವಾರಿ ನೀರಜ್ ಮೇದಾ ತಿಳಿಸಿದ್ದಾರೆ.

click me!