ಚೀನಿ ಭಾಷೆಯಲ್ಲಿ ಪಿಜಿ ಪದವಿ ಪಡೆದ ಇಂಡೋ ಚೀನಾ ಗಡಿ ಸೈನಿಕರು!

By Kannadaprabha News  |  First Published Oct 29, 2024, 11:29 AM IST

ಭಾರತ-ಚೀನಾ ಗಡಿಯಲ್ಲಿ ನಿಯೋಜಿತ 20 ಯೋಧರು ಚೀನಿ ಭಾಷೆಯಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. 


ಅಹಮದಾಬಾದ್: ಭಾರತ ಮತ್ತು ಚೀನಾ ಗಡಿಯಲ್ಲಿ ನಿಯೋಜನೆಗೊಂಡಿರುವ 20 ಯೋಧರು ಚೀನಿ ಭಾಷೆಯನ್ನು ಕಲಿತು ಅದರಲ್ಲಿ ಪಿಜಿ ಸ್ನಾತಕೋತ್ತರ ಡಿಪ್ಲೋಮ ಪದವಿ ಪಡೆದಿದ್ದಾರೆ. ಭಾರತೀಯ ಸೇನೆಯ ಸಹಕಾರದೊಂದಿಗೆ, ಚೀನಾದೊಂದಿಗಿನ ವಾಸ್ತವಿಕ ರೇಖೆಯುದ್ದಕ್ಕೂ ನಿಯೋಜನೆಗೊಂಡಿದ್ದ ಸೈನಿಕರಿಗೆ ಧ್ವಜ ಸಭೆ, ನಿಯಮಿತ ಸಂವಾದ, ಸೈನ್ಯದ ಮಾತುಕತೆಗೆ ಚೀನಿ ಭಾಷೆ ಅಗತ್ಯವಾದ್ದರಿಂದ ಭಾಷೆ ಕಲಿತಿದ್ದಾರೆ. ಜೊತೆಗೆ ಗಡಿಯಾಚೆಗಿನ ಯೋಧರ ಜೊತೆಗಿನ ಸಂವಹನಕ್ಕೆ ಅಗತ್ಯವಾದ ಕೌಶಲ್ಯಗಳಿರಬೇಕು ಎನ್ನುವ ಕಾರಣಕ್ಕೂ ಈ ನಿರ್ಣಯ ಕೈಗೊಳ್ಳಲಾಗಿದೆ.  ಪೂರ್ವ ಕಮಾಂಡರ್‌ನ 20 ಯೋಧರು ಗುಜರಾತಿನ ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದಲ್ಲಿ ಚೀನಾದಲ್ಲಿ ಹೆಚ್ಚು ಮಾತನಾಡುವ ಮ್ಯಾಂದರಿನ್ ಭಾಷೆಯನ್ನು ಕಲಿತಿದ್ದಾರೆ.

ಭಾರತ-ಚೀನಾ ಗಡಿಯಲ್ಲಿ ಎರಡು ದೇಶಗಳಿಂದ ಸೇನಾ ಹಿಂತೆಗೆತ ಪೂರ್ಣ
ಲಡಾಖ್: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಸ್ಟೋನ್ ಹಾಗೂ ಡೆಸ್ಟ್ರಾಂಗ್ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ಸೋಮವಾರ ಹೇಳಿವೆ. ಇತ್ತೀಚೆಗೆ ಎರಡೂ ದೇಶಗಳು ಸೇನಾ ಹಿಂತೆಗೆತಕ್ಕೆ ಒಪ್ಪಂದ ಮಾಡಿಕೊಂಡಿದ್ದವು, ಆ ಪ್ರಕಾರ ಅ.25ರಂದು ಸೇನಾ ಹಿಂತೆಗೆತ ಆರಂಭವಾಗಿತ್ತು ಹಾಗೂ ಚೀನಾ ಸೈನಿಕರು ಟೆಂಟ್ ತೆರವುಗೊಳಿಸಲು ಆರಂಭಿಸಿದ್ದರು. ಆ.28-29ರ ವೇಳೆಗೆ ಹಿಂತೆಗೆತ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಮೂಲಗಳು ಹೇಳಿದ್ದವು.

Tap to resize

Latest Videos

'ಆ ಪ್ರಕಾರ ಸೇನಾ ಹಿಂತೆಗೆತ ಬಹುತೇಕ ಮುಕ್ತಾಯವಾಗಿದೆ. ಅಧಿಕೃತ ಘೋಷಣೆ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಬಳಿಕ ಒಪ್ಪಂದದಂತೆ ಎರಡೂ ದೇಶಗಳ ಯೋಧರು ಗಡಿಯಲ್ಲಿ ಜಂಟಿ ಪಹರೆ ನಡೆಸಲಿದ್ದಾರೆ' ಎಂದು ರಕ್ಷಣಾ ಮೂಲಗಳು ಹೇಳಿವೆ. 2020ರಲ್ಲಿ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಬಳಿಕ ಲಡಾಖ್‌ನ 7 ಗಡಿ ಕೇಂದ್ರಗಳಲ್ಲಿ ಉಭಯ ದೇಶಗಳ ಯೋಧರು ಬೀಡು ಬಿಟ್ಟು ಜಟಾಪಟಿ ನಡೆಸಿದ್ದರು. ಆದರೆ ನಂತರ ಶಾಂತಿ ಮಾತುಕತೆಗಳು ನಡೆದು 5 ಗಡಿಗಳಲ್ಲಿ ಸೇನಾ ಹಿಂತೆಗೆತ ಆಗಿತ್ತು. ಡೆಮೋಕ್ ಹಾಗೂ ಡೆಸ್ಟ್ರಾಂಗ್‌ನಲ್ಲಿ ಮಾತ್ರ ಆಗಿರಲಿಲ್ಲ. ಅಲ್ಲಿ ಈಗ ಸೇನಾ ಹಿಂತೆಗೆತ ಸಾಕಾರ ಆಗುತ್ತಿದ್ದು, ಗಡಿಯಲ್ಲಿ ವರ್ಷಗಳ ಬಳಿಕ ಶಾಂತಿ ನೆಲೆಸುವ ನಿರೀಕ್ಷೆ ಇದೆ.

click me!