ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು

Kannadaprabha News   | Kannada Prabha
Published : Dec 06, 2025, 04:54 AM IST
Indigo Flight

ಸಾರಾಂಶ

ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬಕ್ಕೆ ಕೊನೆ ಹಾಡುವ ಉದ್ದೇಶದಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿದ್ದ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

ನವದೆಹಲಿ: ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬಕ್ಕೆ ಕೊನೆ ಹಾಡುವ ಉದ್ದೇಶದಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೊರಡಿಸಿದ್ದ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಶುಕ್ರವಾರ ತಿಳಿಸಿದ್ದಾರೆ.

ವಿದ್ಯಮಾನದ ತನಿಖೆಗೆ 4 ಸದಸ್ಯರ ಸಮಿತಿ

ಇದಲ್ಲದೆ, ಇಡೀ ವಿದ್ಯಮಾನದ ತನಿಖೆಗೆ 4 ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ 15 ದಿನದಲ್ಲಿ ವರದಿ ನೀಡಲು ಸೂಚಿಸಲಾಗಿದೆ.

ಕಳೆದ 4 ದಿನಗಳಿಂದ ಇಂಡಿಗೋ ವಿಮಾನದಲ್ಲಾದ ಅಸ್ತವ್ಯಸ್ತತೆ ಕುರಿತು ಡಿ.4ರಂದು ನಾಯ್ಡು ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಶುಕ್ರವಾರ ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದಾರೆ. ‘ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಮತ್ತು ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರಕ್ಕೆ ಆದ್ಯತೆ ನೀಡಲು ಡಿಜಿಸಿಎ ಹೊರಡಿಸಿದ ಎಫ್‌ಡಿಟಿಎಲ್‌ ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ರದ್ದಾದ ವಿಮಾನಗಳ ಟಿಕೆಟ್ ಮೊತ್ತ ಮರುಪಾವತಿ, ಹೋಟೆಲ್ ವಸತಿ ವ್ಯವಸ್ಥೆ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಸಹ ಪ್ರಾರಂಭಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ಸರ್ಕಾರದ ಅತ್ಯುನ್ನತ ಆದ್ಯತೆ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ,

ನಿರ್ಬಂಧ ಏನು?:

ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಒದಗಿಸಿ, ಅಪಘಾತದ ಸಂಭವನೀಯತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಡಿಜಿಸಿಎ ‘ವಿಮಾನ ಕರ್ತವ್ಯ ಸಮಯದ ಮಿತಿಗಳು’ (ಎಫ್‌ಡಿಟಿಎಲ್‌) ಎಂಬ ನಿಯಮಗಳನ್ನು ನ.1ರಿಂದ ಜಾರಿಗೆ ತಂದಿತ್ತು. ಇದರಿಂದಾಗಿ ಪೈಲಟ್‌ಗಳ ಕೆಲಸದ ಅವಧಿ ತೀವ್ರ ಕಡಿತವಾಗಿ, ವಿಮಾನಗಳ ಸಂಚಾರವನ್ನು ರದ್ದುಪಡಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅದರ ಪ್ರಕಾರ, ಸಿಬ್ಬಂದಿ ಕರ್ತವ್ಯದಲ್ಲಿ ಇರಬಹುದಾದ ಗಂಟೆಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿತ್ತು. ದಿನಕ್ಕೆ 8 ಗಂಟೆಗಳು, ವಾರಕ್ಕೆ 35 ಗಂಟೆ, ತಿಂಗಳಿಗೆ 125 ಗಂಟೆ ಮತ್ತು ವರ್ಷಕ್ಕೆ 1,000 ಗಂಟೆಗಳ ಹಾರಾಟ ಮಾತ್ರ ನಡೆಸಬೇಕು ಎಂದು ಸೂಚಿಸಲಾಗಿತ್ತು. ಇದಲ್ಲದೆ, ಹಿಂದೆ ಒಬ್ಬ ಪೈಲಟ್‌ ಒಂದು ರೋಸ್ಟರ್‌ನಲ್ಲಿ ರಾತ್ರಿ ವೇಳೆ 6 ವಿಮಾನಗಳನ್ನು ಲ್ಯಾಂಡ್‌ ಮಾಡಬಹುದಿತ್ತು. ಅದನ್ನೀಗ 2 ಬಾರಿಗೆ ಇಳಿಸಲಾಗಿತ್ತು. ಹೀಗಾಗಿ ರಾತ್ರಿ ವೇಳೆ ಹೆಚ್ಚು ವಿಮಾನಗಳನ್ನು ನಡೆಸಲು ಸಾಕಷ್ಟು ಪೈಲಟ್‌ಗಳಿರಲಿಲ್ಲ. ಇದು ವಿಮಾನಗಳ ರದ್ದು ಅಥವಾ ವಿಳಂಬಕ್ಕೆ ಕಾರಣವಾಗಿತ್ತು.

ಪ್ರಯಾಣಿಕರಿಗೆ ಟಿಕೆಟ್‌ ಹಣ ರೀಫಂಡ್‌, ಹೋಟೆಲ್‌ ವ್ಯವಸ್ಥೆ: ಇಂಡಿಗೋ

ನವದೆಹಲಿ: ಪೈಲಟ್‌ಗಳ ಕರ್ತವ್ಯಾವಧಿ ಮೇಲೆ ಸರ್ಕಾರ ನಿರ್ಬಂಧ ಹೊರಡಿಸಿದ ಪರಿಣಾಮ, ಅತಿ ಹೆಚ್ಚು ಸಂಕಷ್ಟ ಅನುಭವಿಸುತ್ತಿರುವ ಇಂಡಿಗೋ ವಿಮಾನಯಾನ ಕಂಪನಿ, ಡಿಸೆಂಬರ್ 5 ರಿಂದ 15 ರವರೆಗೆ ರದ್ದಾದ ಎಲ್ಲಾ ವಿಮಾನಗಳಿಗೆ ಪೂರ್ಣ ಮರುಪಾವತಿಯನ್ನು ನೀಡುವುದಾಗಿ ಶುಕ್ರವಾರ ಘೋಷಿಸಿದೆ.ಪ್ರಯಾಣಿಕರಿಗೆ ರದ್ದಾದ ಟಿಕೆಟ್‌ ಮೊತ್ತವು ಸ್ವಯಂಚಾಲಿತವಾಗಿ ಅವರ ಖಾತೆಗೆ ಜಮೆ ಆಗಲಿದೆ ಎಂದು ಶುಕ್ರವಾರ ಅದು ಟ್ವೀಟ್ ಮಾಡಿದೆ,ಇದಲ್ಲದೆ, ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು, ವಿಮಾನ ನಿಲ್ದಾಣಗಳಲ್ಲಿ ಆಹಾರ ಮತ್ತು ತಿಂಡಿ ಜೊತೆಗೆ ಸಾವಿರಾರು ಹೋಟೆಲ್ ಕೊಠಡಿಗಳು ಮತ್ತು ಪರ್ಯಾಯ ಸಾರಿಗೆ ಆಯ್ಕೆಗೆ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಸಾಧ್ಯವಾದಲ್ಲೆಲ್ಲಾ ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಪ್ರವೇಶವನ್ನು ನೀಡಲಾಗುತ್ತಿದೆ ಎಂದು ಹೇಳಿದೆ.

ಇದೇ ವೇಳೆ, ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವ್ಯಾಪಕ ಅವ್ಯವಸ್ಥೆಗೆ ಕಾರಣವಾದ ವಿಮಾನ ಸ್ಥಗಿತಕ್ಕೆ ಇಂಡಿಗೋ ಪ್ರಯಾಣಿಕರಿಗೆ ಕ್ಷಮೆಯಾಚಿಸಿದೆ.

ಪ್ರಯಾಣ ರದ್ದು: ಇಂಡಿಗೋ ಪ್ರಯಾಣಿಕರ ಗೋಳು

ಹೋಟೆಲ್‌ ದರಗಳು ಭಾರಿ ಏರಿಕೆ

ನವದೆಹಲಿ: ಇಂಡಿಗೋ ವಿಮಾನಗಳು ರದ್ದಾದ ಬೆನ್ನಲ್ಲೇ ಅನೇಕ ಪ್ರಯಾಣಿಕರು ಊರಿಗೆ ತೆರಳಲು ಆಗದೇ ಪರದಾಡುತ್ತಿದ್ದಾರೆ. ಅನೇಕರು ಬೇರೆ ವಿಮಾನಕ್ಕೆ ಟಿಕೆಟ್ ಬುಕ್ಕಿಂಗ್‌ ಆಗುವವರೆಗೆ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ಇದೇ ಅವಕಾಶ ಬಳಸಿಕೊಂಡು ಅನೇಕ ಹೋಟೆಲ್‌ಗಳು ಭಾರಿ ಪ್ರಮಾಣದಲ್ಲಿ ಬಾಡಿಗೆ ಏರಿಸಿವೆ.

ಇಂಡಿಗೋ ವಿಮಾನ ರದ್ದಾದ ಕಾರಣ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಮಹತ್ವದ ಕೆಲಸಗಳಿಗೆ ಹೊರಟಿದ್ದ ಪ್ರಯಾಣಿಕರು ಏರ್‌ಪೋರ್ಟ್‌ವರೆಗೆ ಬಂದು ನಿರಾಶೆಯ ಮುಖ ಹೊತ್ತು ವಾಪಸಾಗಿದ್ದಾರೆ ಅಥವಾ ಹೆಚ್ಚು ಬೆಲೆ ತೆತ್ತು ಇನ್ನೊಂದು ಕಂಪನಿ ವಿಮಾನದ ಮೂಲಕ ಸಾಗಿದ್ದಾರೆ.ಬೆಂಗಳೂರಲ್ಲಿ ಮಹಿಳೆಯೊಬ್ಬರು ಮಾತನಾಡಿ, ‘ನನ್ನ ತಂದೆಯ ಅಸ್ಥಿ ಹೊತ್ತು ಹರಿದ್ವಾರಕ್ಕೆ ಹೋಗಬೇಕಿದೆ. ಇದಕ್ಕಾಗಿ ನಾನು ಬೆಂಗಳೂರಿಂದ ದಿಲ್ಲಿ ಹಾಗೂ ದಿಲ್ಲಿಯಿಂದ ಡೆಹ್ರಾಡೂನ್‌ಗೆ ವಿಮಾನ ಬುಕ್‌ ಮಾಡಿದ್ದೇನೆ. ಆದರೆ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿಮಾನ ರದ್ದುಪಡಿಸಲಾಗಿದೆ. ನಮ್ಮನ್ನು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ವಿಮಾನ ಕಾಯ್ದಿರಿಸಲು ಕೇಳುತ್ತಿದ್ದಾರೆ’ ಎಂದು ಗೋಳು ತೋಡಿಕೊಂಡರು.

ಇನ್ನೊಂದು ಜೋಡಿ ಮಾತನಾಡಿ, ‘ನಾವು ಹನಿಮೂನ್‌ಗೆ ಟಿಕೆಟ್‌ ಬುಕ್‌ ಮಾಡಿದ್ದೆವು. ಆದರೆ ವಿಮಾನ ರದ್ದಾಗಿದೆ’ ಎಂದು ಬೇಸರಿಸಿದರು.

ಬ್ಯಾಗೂ ನಾಪತ್ತೆ:

ಮಹಿಳೆಯೊಬ್ಬರು 25,000 ರು. ನೀಡಿ ದೆಹಲಿಯಿಂದ ಮುಂಬೈಗೆ ಕುಟುಂಬಕ್ಕೆಂದು ಟಿಕೆಟ್‌ ಪಡೆದುಕೊಂಡಿದ್ದರು. ಗುರುವಾರ ರಾತ್ರಿ 8:30ಕ್ಕೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿ ರಾತ್ರಿಯಿಡೀ ಕಾಯುವಂತಾಯಿತು. ಕೊನೆಗೆ ಶುಕ್ರವಾರ ಬೆಳಿಗ್ಗೆ ವಿಮಾನ ರದ್ದಾಗಿರುವ ಮಾಹಿತಿ ಬಂತು. ಇದೇ ವೇಳೆ ಚೆಕ್‌-ಇನ್‌ನಲ್ಲಿ ಅನುವು ಪಡೆದುಕೊಂಡಿದ್ದ ಬ್ಯಾಗ್‌ಗಳೂ ನಾಪತ್ತೆಯಾಗಿದ್ದವು. ಈ ಘಟನೆ ವಿರುದ್ಧ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.

ಇನ್ನೊಂದು ವಿಮಾನ ಶುಕ್ರವಾರ ಸಂಜೆ 5:30ಕ್ಕೆ ನಿಗದಿಯಾಗಿತ್ತು. ಆದರೆ ಅನಿರ್ದಿಷ್ಟ ಸಮಯ ವಿಳಂಬವಾಯಿತು. ಇದರಿಂದ ಕುಪಿತರಾದ ಪ್ರಯಾಣಿಕರು ಪ್ರತಿಭಟನೆ ನಡೆಸಿದ ಬಳಿಕ ಶುಕ್ರವಾರ ನಸುಕಿನ 2 ಗಂಟೆಗೆ ಹಾರಾಟ ನಡೆಸಲಾಯಿತು. ಇಂಥ ಹಲವು ಕಹಿ ಅನುಭವಗಳನ್ನು ಪ್ರಯಾಣಿಕರು ಹಂಚಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ