ಅಸಹಾಯಕ ಆಸಿಂ ಮುನೀರ್ ಪೊಳ್ಳು ಪರಮಾಣು ಬೆದರಿಕೆ: ಭಾರತದ ಸಶಕ್ತ ಘರ್ಜನೆ

Published : Aug 11, 2025, 07:53 PM IST
Asim Munir

ಸಾರಾಂಶ

ಅಮೆರಿಕಾ ನೆಲದಲ್ಲಿ ನಿಂತು, ಭಾರತಕ್ಕೆ ಪರಮಾಣು ದಾಳಿಯ ಎಚ್ಚರಿಕೆ ನೀಡುವ ಮೂಲಕ ಜಾಗತಿಕವಾಗಿ ಗಮನ ಸೆಳೆಯುವುದು ಮುನೀರ್ ಉದ್ದೇಶವಾಗಿತ್ತು. ಆದರೆ ಈ ಗೊಡ್ಡು ಬೆದರಿಕೆಗ ಭಾರತ ಜಗ್ಗಿಲ್ಲ. ದೊಡ್ಡ ದೊಡ್ಡ ಮಾತುಗಳನ್ನಾಡಿ, ಪಾಕಿಸ್ತಾನದ ಕುಸಿತವನ್ನು ಬಚ್ಚಿಡುವ ಮುನೀರ್ ಹುನ್ನಾರ ಬಯಲಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ತನ್ನ ದುರಹಂಕಾರವನ್ನು ಮತ್ತೆ ಜಗತ್ತಿನ ಮುಂದೆ ಪ್ರದರ್ಶಿಸಿರುವ ಪಾಕಿಸ್ತಾನಿ ಸೇನಾ ಮುಖ್ಯಸ್ಥ, ಜನರಲ್ ಆಸಿಂ ಮುನೀರ್, ಆಗಸ್ಟ್ 10, 2025ರಂದು ಅಮೆರಿಕಾದ ನೆಲದಲ್ಲಿ ನಿಂತು ಮಾತನಾಡುತ್ತಾ, ಒಂದು ವೇಳೆ ತನ್ನ ದೇಶ ಏನಾದರೂ ಮೂಲೆಗುಂಪಾಗುವ ಬೆಳವಣಿಗೆಗಳು ನಡೆದರೆ, ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿ, ಅರ್ಧ ಜಗತ್ತನ್ನೇ ನಾಶಪಡಿಸುವ ಬೆದರಿಕೆ ಒಡ್ಡಿದ್ದಾರೆ.

ಪಾಕಿಸ್ತಾನಿ ಉದ್ಯಮಿಗಳು ಫ್ಲೋರಿಡಾದ ಟ್ಯಾಂಪಾದಲ್ಲಿ ಆಯೋಜಿಸಿದ್ದ ಬ್ಲ್ಯಾಕ್ ಟೈ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಮುನೀರ್, ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. ಆತನ ಮಾತುಗಳು ನೇರವಾಗಿ ಭಾರತವನ್ನೇ ಗುರಿಯಾಗಿಸಿದ್ದು, ಭಾರತ ಈಗಾಗಲೇ ಗಡಿಯಾಚೆಯಿಂದ ಇಂತಹ ಹಲವಾರು ಬೆದರಿಕೆಗಳನ್ನು ಕೇಳಿಸಿಕೊಂಡಿದೆ. ಹಾಗೆಂದು ಮುನೀರ್ ನೀಡಿರುವ ಎಚ್ಚರಿಕೆ ಸಿಂಹ ಘರ್ಜನೆಯಂತೆ ಏನೂ ತೋರುತ್ತಿಲ್ಲ. ಬದಲಿಗೆ, ಯಾರೋ ಮೂಲೆಗುಂಪಾದ, ಸಿಕ್ಕಿಹಾಕಿಕೊಂಡೆ ಎಂದು ಹಲುಬುತ್ತಿರುವ ಅಸಹಾಯಕನ ಹತಾಶ ಅಳಲಿನಂತೆ ಕಾಣುತ್ತಿದೆ!

ಭಾರತೀಯರಾಗಿ ನಾವು ಈ ನಾಟಕದ ಮುಂದೆ ಹಿಂದೆ ಏನಿದೆ ಎನ್ನುವುದನ್ನು ಸ್ಪಷ್ಟವಾಗಿ ಗಮನಿಸಬೇಕು. ನಮ್ಮ ನಿಜವಾದ ಶಕ್ತಿ ನಮ್ಮ ಒಗ್ಗಟ್ಟು, ಸ್ಥಿರವಾದ ಅಭಿವೃದ್ಧಿ, ಮತ್ತು ಸ್ಮಾರ್ಟ್ ಆದ, ಸುಸಜ್ಜಿತವಾದ ರಕ್ಷಣಾ ವ್ಯವಸ್ಥೆಯಲ್ಲಿದೆ.

ಮುನೀರ್ ಮಾತು ಈಗೇಕೆ? ಅಮೆರಿಕಾದಲ್ಲೇ ಯಾಕೆ?

ಮುನೀರ್ ಈ ಮಾತುಗಳನ್ನು ಆಡಲು ಇದೇ ಸಮಯವನ್ನು ಆರಿಸಿಕೊಂಡಿರುವುದು ಏನೂ ಆಕಸ್ಮಿಕವಲ್ಲ. ಪಾಕಿಸ್ತಾನ ಈಗಾಗಲೇ ಸಾಕಷ್ಟು ಸಂಕಷ್ಟದ ಸನ್ನಿವೇಶದಲ್ಲಿ ಸಿಲುಕಿದೆ. ಅದರ ಆರ್ಥಿಕತೆ ನಲುಗುತ್ತಿದೆ. ಅಲ್ಲಿನ ರಾಜಕೀಯ ಅಸ್ಥಿರವಾಗಿದೆ. ಪಾಕಿಸ್ತಾನ ದಿನದಿಂದ ದಿನಕ್ಕೆ ಜಾಗತಿಕವಾಗಿ ಏಕಾಂಗಿಯಾಗುತ್ತಿದೆ. ಇನ್ನು ಕಾಶ್ಮೀರ ವಿಚಾರದಲ್ಲಿ ಮತ್ತು ಭಯೋತ್ಪಾದನೆಯ ವಿಚಾರದಲ್ಲಿ ಹಲವಾರು ವರ್ಷಗಳಿಂದ ಭಾರತದೊಡನೆ ಪಾಕಿಸ್ತಾನದ ಉದ್ವಿಗ್ನತೆ ನಿರಂತರವಾಗಿ ಸಾಗಿ ಬಂದಿದೆ.

ಇತ್ತೀಚೆಗೆ, ಗಡಿ ಉದ್ವಿಗ್ನತೆಗಳು ಮತ್ತು ಉಗ್ರಗಾಮಿ ಗುಂಪುಗಳಿಗೆ ಪಾಕಿಸ್ತಾನ ಬಹಿರಂಗವಾಗಿ ಬೆಂಬಲ ನೀಡುವುದು ವಾತಾವರಣವನ್ನು ಇನ್ನಷ್ಟು ಹದಗೆಡಿಸಿವೆ. ಮುನೀರ್ ಅಮೆರಿಕಾಗೆ ಭೇಟಿ ನೀಡಿದ್ದರ ಹಿಂದೆ, ಅಮೆರಿಕಾದ ನೆರವು ಕೋರುವ, ಅಥವಾ ಪಾಕಿಸ್ತಾನದಲ್ಲಿ ದುರ್ಬಲಗೊಂಡಿರುವ ತನ್ನ ಸ್ಥಾನವನ್ನು ಬಲಪಡಿಸಲು ಕೈಜೋಡಿಸುವಂತೆ ಮನವಿ ಮಾಡಿಕೊಳ್ಳುವ ಉದ್ದೇಶವಿತ್ತು.

ಅಮೆರಿಕಾ ನೆಲದಲ್ಲಿ ನಿಂತು, ಪರಮಾಣು ದಾಳಿಯ ಎಚ್ಚರಿಕೆ ನೀಡುವ ಮೂಲಕ ಜಾಗತಿಕವಾಗಿ ಗಮನ ಸೆಳೆಯುವುದು ಮುನೀರ್ ಹಂಚಿಕೆಯಾಗಿತ್ತು. ಇದರ ಪರಿಣಾಮವಾಗಿ, ಅಮೆರಿಕಾ ಪಾಕಿಸ್ತಾನದ ಪರ ವಹಿಸಿಕೊಂಡು, ಭಾರತವನ್ನು ಭಯಪಡಿಸಿ, ಭಾರತ ಹಿಂದೆ ಸರಿಯುವಂತೆ ಮಾಡುವ ಒತ್ತಡ ಸೃಷ್ಟಿಸಲಿದೆ ಎನ್ನುವುದು ಮುನೀರ್ ದೂರಾಲೋಚನೆಯಾಗಿತ್ತು. ಇದೊಂದು ಕ್ಲಾಸಿಕ್ ನಡೆಯಾಗಿದ್ದು, ದೊಡ್ಡ ದೊಡ್ಡ ಮಾತುಗಳನ್ನಾಡಿ, ಪಾಕಿಸ್ತಾನದ ಕುಸಿತವನ್ನು ಬಚ್ಚಿಡುವ ಮುನೀರ್ ಹುನ್ನಾರವಾಗಿತ್ತು.

ಆದರೆ, ಒಂದು ಕಾಲದಲ್ಲಿ ಪಾಕಿಸ್ತಾನದ ಆತ್ಮೀಯ ಸಹಯೋಗಿಯಾಗಿದ್ದ ಅಮೆರಿಕಾ, ಈ ವಿಚಾರದಲ್ಲಿ ಮೌನವಾಗಿಯೇ ಉಳಿಯಿತು. ಮುನೀರ್ ಆಡಿರುವ ಮಾತುಗಳು ಕೇವಲ ತೋರ್ಪಡಿಕೆಯ ಮಾತುಗಳೇ ಹೊರತು, ವಾಸ್ತವವಾಗಿ ಕಾರ್ಯಸಾಧುವಲ್ಲ ಎನ್ನುವುದು ಅಮೆರಿಕಾಗೂ ತಿಳಿದಿರುವ ವಿಚಾರವೇ ಆಗಿದೆ.

ಮುನೀರ್ ಬೆದರಿಕೆ ಎಷ್ಟು ಸತ್ಯ?

ವಾಸ್ತವ ವಿಚಾರ ಏನೆಂದರೆ, ಅರ್ಧ ಜಗತ್ತೇ ನಾಶವಾಗಬಹುದು ಎನ್ನುವ ಮುನೀರ್ ಬೆದರಿಕೆ ವಾಸ್ತವಕ್ಕೆ ಅತ್ಯಂತ ದೂರವಾಗಿದೆ. ಪಾಕಿಸ್ತಾನದ ಬಳಿ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವೇನೋ ಇದೆ. ತಜ್ಞರ ಪ್ರಕಾರ, ಪಾಕಿಸ್ತಾ‌ನ ಬಹುತೇಕ 170 ಅಣ್ವಸ್ತ್ರಗಳನ್ನು ಹೊಂದಿದೆ. ಪ್ರಾದೇಶಿಕ ಯುದ್ಧದಲ್ಲಿ ಈ ಪ್ರಮಾಣದ ಅಸ್ತ್ರಗಳು ಭಾರೀ ವಿಧ್ವಂಸ ಸೃಷ್ಟಿಸಬಲ್ಲವು. ಇವು ಬಹಳಷ್ಟು ಜನರನ್ನು ಕೊಂದು, ವಾತಾವರಣವನ್ನೂ ಹಾಳುಗೆಡವಬಲ್ಲವು.

ಆದರೆ, ಅರ್ಧ ಜಗತ್ತನ್ನೇ ಅಳಿಸಿ ಹಾಕುವುದು? ಅದು ಕೇವಲ ಆಸಿಮ್ ಮುನೀರ್ ಉತ್ಪ್ರೇಕ್ಷೆಯಷ್ಟೇ. ಬಾಲಿವುಡ್ ಚಲನಚಿತ್ರಗಳಲ್ಲಿ ಖಳನಟ ಅಸಾಧ್ಯವನ್ನು ಸಾಧಿಸುತ್ತೇನೆ ಎನ್ನುವಷ್ಟೇ ಮುನೀರ್ ಹೇಳಿಕೆಯೂ ಹಾಸ್ಯಾಸ್ಪದವಾಗಿದೆ.

ವಿಜ್ಞಾನಿಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪೂರ್ಣ ಪ್ರಮಾಣದ ಪರಮಾಣು ಯುದ್ಧ ತಲೆದೋರಿದರೆ, ಅದರಿಂದ 'ಪರಮಾಣು ಚಳಿಗಾಲ' ಉಂಟಾಗಬಹುದು. ಅಂದರೆ, ಭೂಮಿ ತಣ್ಣಗಾಗಿ, ಬೆಳೆಗಳು ನಾಶವಾಗಬಹುದು. ಆದರೆ, ಅದರಿಂದ ಅರ್ಧ ಭೂಮಿ ನಾಶವಾಗುವುದು ಸಾಧ್ಯವಿಲ್ಲ.

ಮುನೀರ್ ಮಾತುಗಳು ಭಯ ಮೂಡಿಸುವ ಉದ್ದೇಶ ಹೊಂದಿದ್ದವೇ ಹೊರತು, ವಾಸ್ತವ ವಿಚಾರವನ್ನು ಒಳಗೊಂಡಿರಲಿಲ್ಲ. ಪಾಕಿಸ್ತಾನ ಹೊಂದಿರುವ ಪರಮಾಣು ಶಸ್ತ್ರಾಸ್ತ್ರಗಳು ಸಂಭಾವ್ಯ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಇವೆಯೇ ಹೊರತು, ಜಗತ್ತನ್ನು ಆಳಲಲ್ಲ. ಒಂದು ವೇಳೆ ಪಾಕಿಸ್ತಾನ ಏನಾದರೂ ಭಾರತದ ವಿರುದ್ಧ ಅಣ್ವಸ್ತ್ರ ಬಳಸಿದರೆ, ಅದಕ್ಕೆ ಭಾರತದ ಪ್ರತಿಕ್ರಿಯೆ ಅತ್ಯಂತ ಕ್ಷಿಪ್ರವೂ, ಅಸಾಧ್ಯ ತೀಕ್ಷ್ಣವೂ ಆಗಿರಲಿದೆ. ಭಾರತದ ಬಳಿ ಅತ್ಯಂತ ಶಕ್ತಿಶಾಲಿ ರಕ್ಷಣಾ ವ್ಯವಸ್ಥೆಗಳಿದ್ದು, ಅಗ್ನಿ, ಬ್ರಹ್ಮೋಸ್‌ನಂತಹ ಅತ್ಯಾಧುನಿಕ ಕ್ಷಿಪಣಿಗಳು ಭಾರತದ ರಕ್ಷಣೆಗೆ ಸರ್ವ ಸನ್ನದ್ಧವಾಗಿವೆ.

ಭಾರತದ ಸ್ಪಷ್ಟ ನಿಲುವು

ಭಾರತ ಸದಾ ಜವಾಬ್ದಾರಿಯುತ ಪರಮಾಣು ಶಕ್ತಿಯಾಗಿದೆ. ಭಾರತ ತಾನೇ ಮೊದಲಾಗಿ ಅಣ್ವಸ್ತ್ರ ಬಳಕೆ ಮಾಡುವುದಿಲ್ಲ (ನೋ ಫಸ್ಟ್ ಯೂಸ್) ಎನ್ನುವ ನೀತಿಯನ್ನು ಅನುಸರಿಸುತ್ತದೆ. ಅಂದರೆ, ಭಾರತ ಪರಮಾಣು ಯುದ್ಧವನ್ನು ಆರಂಭಿಸುವುದಿಲ್ಲ. ಆದರೆ, ಒಂದು ವೇಳೆ ಭಾರತದ ಮೇಲೆ ಪರಮಾಣು ದಾಳಿ ನಡೆದರೆ, ಭಾರತದ ಪ್ರತಿಕ್ರಿಯೆ ಅತ್ಯಂತ ಕ್ಷಿಪ್ರ ಮತ್ತು ಪ್ರಬಲವಾಗಿರಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಶಕ್ತಿಯನ್ನು ಆಧರಿಸಿದ ಶಾಂತಿ ಎಂಬ ವಿಚಾರದಲ್ಲಿ ನಂಬಿಕೆ ಇರಿಸಿದೆ. ನಮ್ಮ ಆರ್ಥಿಕತೆಯನ್ನು ಬಲಪಡಿಸಿ, ಮಿಲಿಟರಿಯನ್ನು ಆಧುನೀಕರಣಗೊಳಿಸಿ, ಅಮೆರಿಕಾ, ರಷ್ಯಾ ಮತ್ತು ಜಪಾನ್‌ನಂತಹ ದೇಶಗಳೊಡನೆ ಜಾಗತಿಕ ಸ್ನೇಹವನ್ನು ಬಲಪಡಿಸುವ ಮೂಲಕ ಶಕ್ತಿ ಮತ್ತು ಶಾಂತಿಯ ವೃದ್ಧಿ ಭಾರತದ ಆದ್ಯತೆಯಾಗಿದೆ.

ಭಾರತ ಅಭಿವೃದ್ಧಿಗಾಗಿ ಹೂಡಿಕೆ ನಡೆಸುತ್ತಿದ್ದರೆ, ಇನ್ನೊಂದೆಡೆ ಈಗಾಗಲೇ ಆರ್ಥಿಕವಾಗಿ ಹದಗೆಟ್ಟಿರುವ ಪಾಕಿಸ್ತಾನ ತನ್ನ ಅಳಿದುಳಿದ ಹಣವನ್ನೂ ಆಯುಧಗಳ ಮೇಲೆ ಸುರಿಯುತ್ತಿದೆ. ಭಾರತ ಲಕ್ಷಾಂತರ ಜನರನ್ನು ಬಡತನ ರೇಖೆಯಿಂದ ಮೇಲೆ ತರುತ್ತಿದ್ದು, ಆಧುನಿಕ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಿ, ತಂತ್ರಜ್ಞಾನದಲ್ಲಿ ನಾಯಕನಾಗಿ ಹೊರಹೊಮ್ಮುತ್ತಿದೆ. ಇಂತಹ ಸಂದರ್ಭದಲ್ಲಿ ಮುನೀರ್ ನೀಡಿರುವ ಎಚ್ಚರಿಕೆ ಕೇವಲ ಪಾಕಿಸ್ತಾನದ ದೌರ್ಬಲ್ಯವನ್ನು ಪ್ರದರ್ಶಿಸಿದೆ. ತನ್ನ ಉಳಿವಿಗಾಗಿ ವಿದೇಶಗಳ ನೆರವು ಬೇಡುತ್ತಾ ಬದುಕಿರುವ ಪಾಕಿಸ್ತಾನ, ವಿಧ್ವಂಸ ನಡೆಸುವ ಕನಸು ಕಾಣುತ್ತಿದೆ!

ಶಾಂತಿ ಮತ್ತು ಒಗ್ಗಟ್ಟಿನಿಂದ ಇರೋಣ

ಮುನೀರ್ ಪೊಳ್ಳು ಬೆದರಿಕೆಯ ಮಾತಿನಿಂದ ಭಾರತೀಯರು ಚಿಂತೆಗೀಡಾಗಿ, ನಿದ್ದೆ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ನಾವು ನಮ್ಮ ನಾಯಕರು ಮತ್ತು ಸೇನಾ ಪಡೆಗಳೊಡನೆ ಬಲವಾಗಿ ನಿಲ್ಲುವ ಅಗತ್ಯವಿದೆ ಅಷ್ಟೇ.

ಭಾರತ ಶಾಂತಿ ಮಾತುಕತೆಗಳಿಗೆ ಸದಾ ಸಿದ್ಧವಾಗಿದೆ. ಆದರೆ, ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಶಾಂತಿ ಮಾತುಕತೆಗಳು ನಡೆಯಲು ಸಾಧ್ಯ. ಸಮಸ್ತ ಜಗತ್ತು ಮುನೀರ್ ನೀಡಿರುವ ಅಪಾಯಕಾರಿ ಹೇಳಿಕೆಯ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ. ಯಾಕೆಂದರೆ, ಪರಮಾಣು ಬೆದರಿಕೆಗಳು ಎಲ್ಲರನ್ನೂ ಅಪಾಯಕ್ಕೆ ತಳ್ಳಬಲ್ಲವು.

ಒಂದು ವೇಳೆ ಅಂತಹ ಸಮಯ ಬಂದರೂ, ಭಾರತ ಇಂತಹ ಸಾಕಷ್ಟು ಸವಾಲುಗಳನ್ನು ಎದುರಿಸಿ, ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿರುವುದು ಎಲ್ಲರಿಗೂ ತಿಳಿದಿದೆ. ನಮ್ಮ ಸಂಸ್ಕೃತಿ ನಮಗೆ ತಾಳ್ಮೆ ಮತ್ತು ಸಂಯಮವನ್ನು ಕಲಿಸುತ್ತದೆ. ಪಾಕಿಸ್ತಾನ ಅದರ ಪಾಡಿಗೆ ಗಲಾಟೆ ಮಾಡುತ್ತಿದ್ದರೆ, ಭಾರತ ತಾನು ಮುಂದೆ ಸಾಗುತ್ತಿರಬಹುದು.

ಇಷ್ಟೆಲ್ಲ ಆದರೂ, ಕೊನೆಗೆ ಆಸಿಮ್ ಮುನೀರ್ ಮಾತುಗಳು ಕೇವಲ ಒಂದು ಅವನತಿಯತ್ತ ಸಾಗುತ್ತಿರುವ ದೇಶದ ಅಸಹಾಯಕ ಅಳಲು, ಗಮನ ಸೆಳೆಯುವ ತಂತ್ರವಷ್ಟೇ. ಭಾರತ ಶಾಂತಿ, ಪ್ರಗತಿ ಮತ್ತು ಜಗತ್ತನ್ನು ಬೆಳೆಸುವಂತಹ ಶಕ್ತಿಯ ಪ್ರತೀಕವೇ ಹೊರತು, ವಿಧ್ವಂಸಕ ಶಕ್ತಿಯ ಪ್ರತಿನಿಧಿಯಲ್ಲ.

ನಾವು ಎಲ್ಲರೂ ಒಂದಾಗಿ, ವಿಶ್ವಾಸದಿಂದ, ಭಯರಹಿತರಾಗಿ ನಮ್ಮ ಮಹಾನ್ ದೇಶವನ್ನು ನಿರ್ಮಿಸುವತ್ತ ಗಮನ ಹರಿಸೋಣ.

ಜೈ ಹಿಂದ್!

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್