
ಭಾರತದಲ್ಲಿ ಸಾವಿರಾರು ರೈಲು ನಿಲ್ದಾಣಗಳಿವೆ. ಪ್ರತಿಯೊಂದು ನಿಲ್ದಾಣಕ್ಕೂ ತನ್ನದೇ ಆದ ಹೆಸರು ಮತ್ತು ಗುರುತು ಇರುತ್ತದೆ. ಆದರೆ ರೈಲುಗಳು ನಿಲ್ಲುವ, ಪ್ರಯಾಣಿಕರು ಇಳಿಯುವ-ಹತ್ತುವ, ಟಿಕೆಟ್‌ಗಳೂ ಸಿಗುವ… ಆದರೆ ನಾಮಫಲಕದಲ್ಲಿ ಮಾತ್ರ ಯಾವುದೇ ಹೆಸರಿಲ್ಲದ ನಿಲ್ದಾಣವೊಂದು ಇದೆ ಎಂದರೆ ನಂಬುತ್ತೀರಾ?
ಈ ವಿಚಿತ್ರ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಪೂರ್ವ ಬರ್ಧಮಾನ್ ಜಿಲ್ಲೆಯಲ್ಲಿದೆ. ಬರ್ಧಮಾನ್ ನಗರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಈ ನಿಲ್ದಾಣ ಬಂಕುರಾ–ಮಸಾಗ್ರಾಮ್ ರೈಲು ಮಾರ್ಗದಲ್ಲಿದೆ. 2008ರಲ್ಲಿ ಈ ಪ್ರದೇಶದಲ್ಲಿ ನಿಲ್ದಾಣ ನಿರ್ಮಿಸಲಾಯಿತು ಎಂದು ವರದಿಗಳು ತಿಳಿಸುತ್ತವೆ.
ಆದರೆ ನಿಲ್ದಾಣ ನಿರ್ಮಾಣವಾದ ಬಳಿಕವೇ ಅಸಲಿ ಕಥೆ ಶುರುವಾಯಿತು!
ನಿಲ್ದಾಣಕ್ಕೆ ರಾಯ್ನಾಗಢ ಎಂಬ ಹೆಸರು ಇಡಲು ಮುಂದಾದಾಗ, ಸಮೀಪದ ರಾಯ್ನಾ ಗ್ರಾಮದ ಜನರು ವಿರೋಧ ವ್ಯಕ್ತಪಡಿಸಿದರು. ನಿಲ್ದಾಣ ಇರುವ ಜಾಗ ರಾಯ್ನಾ ಗ್ರಾಮದ ವ್ಯಾಪ್ತಿಯಲ್ಲಿರುವುದರಿಂದ ಅದಕ್ಕೆ ರಾಯ್ನಾ ಎಂಬ ಹೆಸರೇ ಇರಬೇಕು ಎಂಬುದು ಅವರ ವಾದವಾಗಿತ್ತು. ಮತ್ತೊಂದೆಡೆ ರಾಯ್ನಾಗಢದವರು ತಮ್ಮ ಗ್ರಾಮದ ಹೆಸರನ್ನೇ ಉಳಿಸಬೇಕೆಂದು ಒತ್ತಾಯಿಸಿದರು.
ವಿವಾದ ಮುಂದುವರಿದ ಪರಿಣಾಮ ಕೊನೆಗೆ ನಿಲ್ದಾಣದ ನಾಮಫಲಕದಿಂದ ಹೆಸರನ್ನೇ ತೆಗೆದುಹಾಕಲಾಯಿತು.
ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ, ಹೆಸರು ಇಲ್ಲದಿದ್ದರೂ ನಿಲ್ದಾಣ ಕಾರ್ಯನಿರ್ವಹಿಸುತ್ತಲೇ ಇದೆ. ರೈಲುಗಳು ಇಲ್ಲಿ ನಿಲ್ಲುತ್ತವೆ ಮತ್ತು ಪ್ರಯಾಣಿಕರು ಕೂಡ ಪ್ರತಿದಿನ ಸಂಚರಿಸುತ್ತಾರೆ. ಕೆಲವು ವರದಿಗಳ ಪ್ರಕಾರ ಟಿಕೆಟ್ ವ್ಯವಸ್ಥೆಯಲ್ಲಿಯೂ ಹಳೆಯ ಹೆಸರನ್ನು ಬಳಸಲಾಗುತ್ತದೆ.
ಹೆಸರಿಗಾಗಿ ನಡೆದ ವಿವಾದವೊಂದು ಒಂದು ರೈಲು ನಿಲ್ದಾಣವನ್ನೇ “ಹೆಸರಿಲ್ಲದ ನಿಲ್ದಾಣ” ಎಂಬ ವಿಶಿಷ್ಟ ಗುರುತಿಗೆ ತಂದು ನಿಲ್ಲಿಸಿದೆ. ಹೆಸರು ಬೋರ್ಡ್‌ನಲ್ಲಿ ಇಲ್ಲದಿದ್ದರೂ, ಸ್ಥಳೀಯರಿಗೆ ಈ ನಿಲ್ದಾಣದ ಪರಿಚಯ ಮಾತ್ರ ಚೆನ್ನಾಗಿಯೇ ಇದೆ.
ನಿಲ್ದಾಣದ ನಾಮಫಲಕದಲ್ಲಿ ಹೆಸರು ಕಾಣಿಸದಿದ್ದರೂ, ಸ್ಥಳೀಯ ಪ್ರಯಾಣಿಕರಿಗೆ ಈ ಸ್ಥಳದ ಬಗ್ಗೆ ಯಾವುದೇ ಗೊಂದಲವಿಲ್ಲ. ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ನಿಯಮಿತ ಪ್ರಯಾಣಿಕರು ನಿಲ್ದಾಣವನ್ನು ಅದರ ಹಳೆಯ ಹೆಸರಿನಿಂದಲೇ ಗುರುತಿಸುತ್ತಾರೆ. ರೈಲು ಪ್ರಯಾಣದ ಸಂದರ್ಭದಲ್ಲಿ ಸ್ಟೇಷನ್‌ನ ಹೆಸರನ್ನು ಹುಡುಕುವವರಿಗೆ ಮಾತ್ರ ಖಾಲಿ ನಾಮಫಲಕ ಅಚ್ಚರಿ ಮೂಡಿಸುತ್ತದೆ. ಹೀಗಾಗಿ ಒಂದು ಸಾಮಾನ್ಯ ರೈಲು ನಿಲ್ದಾಣವೇ ಇಂದು ಹೆಸರಿಲ್ಲದಿದ್ದರೂ ಎಲ್ಲರಿಗೂ ಪರಿಚಿತವಾದ ಅಪರೂಪದ ಸ್ಥಳವಾಗಿ ಗಮನ ಸೆಳೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ