ಭಾರತದ ತೈಲೋದ್ಯಮ ಸಾಹಸ ಜಗತ್ತಿನೆದುರು ಅನಾವರಣ

Kannadaprabha News   | Kannada Prabha
Published : Jan 31, 2026, 08:28 AM IST
Petrol

ಸಾರಾಂಶ

ಅಮೆರಿಕದ ಅನೂಹ್ಯ ಅಪಾಯಕಾರಿ ನಿರ್ಧಾರಗಳು, ನಿಲ್ಲದ ರಷ್ಯಾ-ಉಕ್ರೇನ್ ಸಮರ, ಮಧ್ಯಪ್ರಾಚ್ಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಪ್ರಕ್ಷುಬ್ಧ ಸಾಗರದಂತಾಗಿದ್ದರೂ ಅದರಲ್ಲಿ ಧೈರ್ಯವಾಗಿ ಈಜಬಲ್ಲೆ ಎಂಬ ಸಂದೇಶವನ್ನು ''ಇಂಡಿಯಾ ಎನರ್ಜಿ ವೀಕ್'' ಮೂಲಕ ಭಾರತ ಜಗತ್ತಿಗೆ ಸಾರುವಲ್ಲಿ ಸಫಲವಾಯಿತು.

ಎಂ.ಎಲ್.ಲಕ್ಷ್ಮೀಕಾಂತ್

ಬೇತೂಲ್ (ಗೋವಾ) : ಅಮೆರಿಕದ ಅನೂಹ್ಯ ಅಪಾಯಕಾರಿ ನಿರ್ಧಾರಗಳು, ನಿಲ್ಲದ ರಷ್ಯಾ-ಉಕ್ರೇನ್ ಸಮರ, ಮಧ್ಯಪ್ರಾಚ್ಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಪ್ರಕ್ಷುಬ್ಧ ಸಾಗರದಂತಾಗಿದ್ದರೂ ಅದರಲ್ಲಿ ಧೈರ್ಯವಾಗಿ ಈಜಬಲ್ಲೆ ಎಂಬ ಸಂದೇಶವನ್ನು ''ಇಂಡಿಯಾ ಎನರ್ಜಿ ವೀಕ್'' (ಭಾರತ ಇಂಧನ ಸಪ್ತಾಹ) ಮೂಲಕ ಭಾರತ ಜಗತ್ತಿಗೆ ಸಾರುವಲ್ಲಿ ಸಫಲವಾಯಿತು.

ದಕ್ಷಿಣ ಗೋವಾದ, ಸಮುದ್ರದ ಮಗ್ಗುಲಲ್ಲೇ ಇರುವ ಬೇತೂಲ್‌ನ ಒಎನ್‌ಜಿಸಿ ತರಬೇತಿ ಕೇಂದ್ರದ ಆವರಣದಲ್ಲಿ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ನಡೆದ ಭಾರತೀಯ ಇಂಧನ ಕ್ಷೇತ್ರದ ಜಾಗತಿಕ ಬೃಹತ್ ಸಮಾವೇಶದ ಮೂಲಕ, ಬದಲಾಗುತ್ತಿರುವ ಭಾರತದ ಆದ್ಯತೆ, ಇಂಧನ ಕ್ಷೇತ್ರದಲ್ಲಿ ಭಾರತ ಇಡುತ್ತಿರುವ ದಾಪುಗಾಲು ಹಾಗೂ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಭಾರತದ ತೈಲ ಮತ್ತು ಅನಿಲ ಕ್ಷೇತ್ರದಲ್ಲಿರುವ ಅಗಾಧ ಅವಕಾಶಗಳನ್ನು ವಿಶ್ವದ ಉದ್ಯಮಿಗಳ ಮುಂದೆ ಅನಾವರಣಗೊಳಿಸಲಾಯಿತು.

ತೈಲ ಮಾರುಕಟ್ಟೆಯಲ್ಲಿ ಪದೇ ಪದೇ ಅಲ್ಲೋಲ ಕಲ್ಲೋಲ

ಸಮಾರೋಪದ ಅಂಗವಾಗಿ ಶುಕ್ರವಾರ ನಡೆದ ಸಂವಾದದಲ್ಲಿ ಮಾತನಾಡಿದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಅವರು,‌ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪದೇ ಪದೇ ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ಅದನ್ನು ಭಾರತ ಯಶಸ್ವಿಯಾಗಿ ಎದುರಿಸಿದೆ. ಸರಬರಾಜು ಮೂಲಗಳನ್ನು ವೈವಿಧ್ಯಮಯಗೊಳಿಸಿ,‌ ಶುದ್ಧ ಇಂಧನದತ್ತ ತ್ವರಿತವಾಗಿ ಮುಖ ಮಾಡುವ ಮೂಲಕ ಭಾರತವು ಪ್ರತಿ ಸವಾಲನ್ನೂ ಅವಕಾಶವಾಗಿ ಪರಿವರ್ತಿಸಿಕೊಂಡಿದೆ. ಜಗತ್ತಿನಲ್ಲಿ ಎಂತಹದ್ದೇ ಪರಿಸ್ಥಿತಿ ಎದುರಾದರೂ ತೈಲದ ಲಭ್ಯತೆ ಕಾಯ್ದುಕೊಳ್ಳಲಿದೆ ಎಂದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಇಂಡಿಯಾ ಎನರ್ಜಿ ವೀಕ್‌ ಶುಭಾರಂಭಗೊಂಡಿತು. ಅಂದು ಇಡೀ ದಿನ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿದ್ದ ಸಚಿವ ಹರದೀಪ್ ಸಿಂಗ್ ಪುರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ 75 ಕ್ಕೂ ಅಧಿಕ ಸಿಇಒಗಳನ್ನು ಗೋವಾದಿಂದ ರಾತ್ರೋರಾತ್ರಿ ದೆಹಲಿಗೆ ಕರೆದೊಯ್ದು ಪ್ರಧಾನಿ‌ ಅವರನ್ನು ಭೇಟಿ ಮಾಡಿಸಿದ್ದು ವಿಶೇಷವಾಗಿತ್ತು.

ಇಂಧನ ಸಪ್ತಾಹದಲ್ಲಿ 120 ದೇಶಗಳ, 75 ಸಾವಿರ ಇಂಧನ ವೃತ್ತಿಪರರು ಭಾಗವಹಿಸಿದ್ದರು. 500ಕ್ಕೂ ಅಧಿಕ ಜಾಗತಿಕ ತಜ್ಞರು ವಿವಿಧ ಸಂವಾದಗಳಲ್ಲಿ ಪಾಲ್ಗೊಂಡಿದ್ದರು. ಮುಂದಿನ ವರ್ಷ ಮತ್ತೆ ಗೋವಾದ ಒಎನ್‌ಜಿಸಿ ತರಬೇತಿ ಕೇಂದ್ರದಲ್ಲೇ ಇಂಡಿಯಾ ಎನರ್ಜಿ‌ ವೀಕ್ ಐದನೇ ಆವೃತ್ತಿ 2027ರಲ್ಲಿ ಆಯೋಜನೆಯಾಗಲಿದೆ.

ಹಳೆ ಪ್ಲಾಸ್ಟಿಕ್ ಬಾಟಲಿಯಿಂದ ರೆಡಿ ಆದ ಉಡುಪು ಧರಿಸಿ ಫ್ಯಾಷನ್ ಶೋ!

ಬೈತೂಲ್ (ಗೋವಾ) : ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಸ್ಕರಿಸಿ ಅದರಿಂದ ಪಾಲಿಸ್ಟರ್ ತೆಗೆದು ಉಡುಪು ತಯಾರಿಸುವ ಕಾರ್ಯವನ್ನು ಇಂಡಿಯನ್ ಆಯಿಲ್ ಆರಂಭಿಸಿದ್ದು, ಆ ಉಡುಪುಗಳನ್ನು ಧರಿಸಿ ರೂಪದರ್ಶಿಗಳು ''ಇಂಡಿಯಾ ಎನರ್ಜಿ ವೀಕ್'' ಸಂದರ್ಭದಲ್ಲಿ ಫ್ಯಾಷನ್ ಶೋ ನಡೆಸಿದ್ದು ಗಮನಸೆಳೆಯಿತು.

ಪ್ಲಾಸ್ಟಿಕ್ ಬಾಟಲಿಯಿಂದ ಉಡುಪು ತಯಾರಿಸಲು ಇಂಡಿಯನ್ ಆಯಿಲ್ ಕಂಪನಿ ''ಅನ್‌ಬಾಟಲ್ಡ್'' ಎಂಬ ಯೋಜನೆ ಕೈಗೊಂಡಿದೆ. ಅದರಲ್ಲಿ ತಯಾರಾದ ಜಾಕೆಟ್‌ಗಳನ್ನು ನಾನೂ ಧರಿಸುತ್ತೇನೆ ಎಂದು ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಬರಿಮಲೆ ಚಿನ್ನಕ್ಕೆ ಕನ್ನ ಕೇಸು : ‘ಕಾಂತಾರ’ ನಟನ ವಿಚಾರಣೆ
India Latest News Live: ಪೀಕ್‌ ಅವರಲ್ಲಿ ವಾಹನಗಳಿಂದ ಹೆಚ್ಚು ಶುಲ್ಕ ವಸೂಲಿ ಪ್ರಸ್ತಾಪ