
ನ್ಯೂಯಾರ್ಕ್ : ಭಾರತದ ದೇಗುಲಗಳಿಂದ ಅಕ್ರಮವಾಗಿ ಸಾಗಿಸಲಾಗಿದ್ದ, ವಿಜಯನಗರ ಕಾಲದ ಸಂತ ಸುಂದರರ್ ವಿಗ್ರಹ ಸೇರಿ 3 ಅಪರೂಪದ ಶಿಲ್ಪಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ಮುಂದಾಗಿದೆ.
ದಕ್ಷಿಣ ಭಾರತದ ದೇವಾಲಯಗಳಿಂದ ಈ ವಿಗ್ರಹಗಳು ಕಳ್ಳಸಾಗಣೆಯಾದ ಕುರಿತು ಕಠಿಣ ಸಂಶೋಧನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿರುವುದಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಸ್ಮಿತ್ಸೋನಿಯನ್ ಸಂಸ್ಥೆಯ ರಾಷ್ಟ್ರೀಯ ಏಷ್ಯನ್ ಕಲಾ ವಸ್ತುಸಂಗ್ರಹಾಲಯ ತಿಳಿಸಿದೆ.
ಚೋಳರ ಕಾಲದ ಸುಮಾರು ಕ್ರಿ.ಶ. 990ರ ಅವಧಿಯ ಶಿವ ನಟರಾಜ ವಿಗ್ರಹ, 12ನೇ ಶತಮಾನದ ಸೋಮಸ್ಕಂದ ವಿಗ್ರಹ ಹಾಗೂ ವಿಜಯನಗರ ಕಾಲದ 16ನೇ ಶತಮಾನಕ್ಕೆ ಸೇರಿದ ಪರವಯೀ ಸಮೇತ ಸಂತ ಸುಂದರರ್ ಶಿಲ್ಪಗಳು ಸ್ವದೇಶಕ್ಕೆ ಮರಳಲಿವೆ.
ಶಿವ ನಟರಾಜ ವಿಗ್ರಹವು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುತ್ತುರೈಪ್ಪುಂಡಿ ತಾಲೂಕಿನ ಭಾವ ಔಷಧೇಶ್ವರ ದೇಗುಲಕ್ಕೆ ಸೇರಿದ್ದಾಗಿದೆ. 1957ರಲ್ಲಿ ಇದರ ಛಾಯಾಚಿತ್ರ ತೆಗೆಯಲಾಗಿತ್ತು. 2002ರಲ್ಲಿ ಇದು ನ್ಯೂಯಾರ್ಕ್‌ನ ವಸ್ತುಸಂಗ್ರಹಾಲಯ ತಲುಪಿದೆ. ಸೋಮಸ್ಕಂದ ಶಿಲ್ಪವು ಮಣ್ಣರ್ಕುಡಿ ತಾಲೂಕಿನ ಅಲತ್ತೂರು ಎಂಬಲ್ಲಿನ ವಿಶ್ವನಾಥ ದೇಗುಲಕ್ಕೆ ಸೇರಿದ್ದು.
1559ರಲ್ಲಿ ಇದರ ಚಿತ್ರ ತೆಗೆಯಲಾಗಿತ್ತು. ಪರವಯೀ ಸಮೇತ ಸಂತ ಸುಂದರರ್ ವಿಗ್ರಹವು ಕಲ್ಲಕುರುಚ್ಚಿ ತಾಲೂಕಿನ ಶಿವ ದೇವಸ್ಥಾನಕ್ಕೆ ಸೇರಿದ್ದಾಗಿದ್ದು, 1956ರಲ್ಲಿ ಇದರ ಛಾಯಾಚಿತ್ರವನ್ನೂ ತೆಗೆಯಲಾಗಿತ್ತು. ಇವೆರಡನ್ನೂ ಇತರ 1,000 ವಸ್ತುಗಳ ಜೊತೆ 1987ರಲ್ಲಿ ವಸ್ತುಸಂಗ್ರಹಾಲಯಕ್ಕೆ ಮಾರಾಟ ಮಾಡಲಾಗಿದೆ. ಈ ಶಿಲ್ಪಗಳ ಹಳೆಯ ಫೋಟೊಗಳು ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಪಾಂಡಿಚೇರಿಯ ಫೋಟೊ ಗ್ಯಾಲರಿಯಲ್ಲಿ ಲಭ್ಯವಾಗಿವೆ. ಇವುಗಳನ್ನು ಮರಳಿ ಕರೆತರಲು ಭಾರತ ಮತ್ತು ಅಮೆರಿಕ ಸರ್ಕಾರಗಳು ಅಂತಿಮ ಹಂತದ ಸಿದ್ಧತೆ ನಡೆಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ