ಅಮೆರಿಕ ಡೀಲ್‌ನಲ್ಲಿ ಭಾರತದ ಕೃಷಿ, ಡೈರಿಗೆ ರಕ್ಷಣೆ

Kannadaprabha News   | Kannada Prabha
Published : Feb 04, 2026, 05:50 AM IST
Piyush Goyal

ಸಾರಾಂಶ

ಭಾರತದ ಮೇಲೆ ಹೇರಲಾಗಿದ್ದ ಶೇ.50ರಷ್ಟು ತೆರಿಗೆಯನ್ನು ಶೇ.18ಕ್ಕೆ ಇಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಸರ್ಕಾರದ ಪರವಾಗಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ: ಭಾರತದ ಮೇಲೆ ಹೇರಲಾಗಿದ್ದ ಶೇ.50ರಷ್ಟು ತೆರಿಗೆಯನ್ನು ಶೇ.18ಕ್ಕೆ ಇಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಸರ್ಕಾರದ ಪರವಾಗಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಶೀಘ್ರವೇ ಏರ್ಪಡಲಿರುವ ಈ ಒಪ್ಪಂದದ ಬಗ್ಗೆ ಜಂಟಿಯಾಗಿ ಮಾಹಿತಿ ನೀಡುವೆವು’ ಎಂದು ಅವರು ಭರವಸೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೋಯಲ್‌, ‘ಉಭಯ ದೇಶಗಳು ಒಪ್ಪಂದದ ಚೌಕಟ್ಟನ್ನು ಸಿದ್ಧಪಡಿಸಿದ್ದು, ಆದಷ್ಟು ಬೇಗ ಈ ಡೀಲ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಜಂಟಿಯಾಗಿ ಹೇಳಿಕೆಯ ಮೂಲಕ ನೀಡುತ್ತೇವೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ನಮ್ಮ ಜತೆ ಆಗಿರುವ ಒಪ್ಪಂದವೇ ಉತ್ತಮವಾಗಿದೆ. ಇದರಡಿ ಭಾರತದ ಬೆಳವಣಿಗೆಗೆ ಬಲ ತುಂಬಲು ಉತ್ತಮ ಹಾಗೂ ವಿಶ್ವದರ್ಜೆಯ ತಂತ್ರಜ್ಞಾನವೂ ಸಿಗಲಿದೆ’ ಎಂದರು.

ಕೃಷಿ, ಡೈರಿ ರಕ್ಷಣೆ:

‘ಅಮೆರಿಕದೊಂದಿಗಿನ ಒಪ್ಪಂದವು ದೇಶದ ಜನರಿಗೆ ದೊಡ್ಡದೊಡ್ಡ ಅವಕಾಶಗಳನ್ನು ಒದಗಿಸುತ್ತದೆ. ಕಾರ್ಮಿಕರ ಶ್ರಮ ಬೇಡುವ ಜವಳಿ, ಪ್ಲಾಸ್ಟಿಕ್, ಜವಳಿ, ಗೃಹಾಲಂಕಾರ, ಚರ್ಮ, ಪಾದರಕ್ಷೆ, ರತ್ನ, ಆಭರಣ, ಸಾವಯವ ರಾಸಾಯನಿಕ, ರಬ್ಬರ್, ಯಂತ್ರೋಪಕರಣ ಮತ್ತು ವಿಮಾನಗಳು ಅಮೆರಿಕದ ಮಾರುಕಟ್ಟೆ ಇನ್ನಷ್ಟು ತೆರೆದುಕೊಳ್ಳಲಿದೆ’ ಎಂದು ಹೇಳಿದ ಗೋಯಲ್‌, ‘ಇದೇ ವೇಳೆ ಸೂಕ್ಷ್ಮ ವಲಯಗಳಾದ ಕೃಷಿ ಮತ್ತು ಹೈನುಗಾರಿಕೆ ರಕ್ಷಣೆಯನ್ನು ನೀಡುತ್ತದೆ’ ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ.

ಹಲವು ತಿಂಗಳಿನಿಂದ ನಡೆಯುತ್ತಿರುವ ವ್ಯಾಪಾರ ಮಾತುಕತೆ ಅಂತಿಮವಾಗುವಲ್ಲಿ ತೊಡಕಾಗಿದ್ದುದು ಕೃಷಿ ಮತ್ತು ಡೈರಿ ವಲಯ ಎಂಬುದು ಗಮನಾರ್ಹ. ಅಮೆರಿಕ ತಮ್ಮ ಈ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ತೆರೆಯುವಂತೆ ಆಗ್ರಹಿಸಿತ್ತಾದರೂ, ತನ್ನ ಕೃಷಿಕರ ರಕ್ಷಣೆಗಾಗಿ ಭಾರತ ಇದನ್ನು ನಿರಾಕರಿಸುತ್ತಲೇ ಬಂದಿದೆ.

ಅಮೆರಿಕ ಜತೆಗಿನ ಡೀಲ್‌ ದೊಡ್ಡ ನಿರ್ಧಾರ: ಮೋದಿ

ನವದೆಹಲಿ: ‘ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದ ದೊಡ್ಡ ನಿರ್ಧಾರ. ಇದರಿಂದ ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ನಮ್ಮ ಸರ್ಕಾರ ಯಾವತ್ತಿಗೂ ದೇಶದ ಪರವಾಗಿಯೇ ಕೆಲಸ ಮಾಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿ ಅವರು ಈ ವಿಚಾರ ತಿಳಿಸಿದ್ದಾರೆ. ಅಮೆರಿಕ ಹಾಗೂ ಯುರೋಪಿಯನ್‌ ಒಕ್ಕೂಟದ ಜತೆಗಿನ ವ್ಯಾಪಾರ ಒಪ್ಪಂದಕ್ಕಾಗಿ ಎನ್‌ಡಿಎ ಸಂಸದರು ಪ್ರಧಾನಿ ಮೋದಿಯವರಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಈ ಒಪ್ಪಂದಗಳು ದೇಶದ ಉತ್ಪಾದಕರು, ರಫ್ತುದಾರರು ಹಾಗೂ ಉದ್ದಿಮೆದಾರರಿಗೆ ನೆರವಾಗಲಿವೆ ಎಂದು ಹೇಳಿಕೊಂಡಿದ್ದಾರೆ.

ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕೂಡ, ‘ಈ ರೀತಿಯ ಒಪ್ಪಂದಗಳು ಭಾರತದ ಆರ್ಥಿಕ ಸಹಭಾಗಿತ್ವ ಬಲಪಡಿಸುತ್ತವೆ ಮತ್ತು ವಿಕಸಿತ ಭಾರತದ ಗುರಿಯತ್ತ ದೇಶವನ್ನು ಕೊಂಡೊಯ್ಯಲು ನೆರವಾಗುತ್ತವೆ’ ಎಂದು ಹೇಳಿದ್ದಾರೆ.

ಭಾರತದಿಂದ ಕೃಷಿ ವಲಯ ರಕ್ಷಣೆ: ಅಮೆರಿಕ ಪ್ರತಿನಿಧಿ

ವಾಷಿಂಗ್ಟನ್‌: ಭಾರತದೊಂದಿಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಬಗ್ಗೆ ಮಾತನಾಡಿರುವ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ‘ಈ ಒಪ್ಪಂದದ ಅಡಿಯಲ್ಲಿ ಬರಲಿರುವ ಪ್ರಮುಖ ಅಂಶಗಳನ್ನು ಈಗಾಗಲೇ ನಿರ್ಧರಿಸಲಾಗಿದ್ದು, ಅದು ದಾಖಲಾಗುವುದು ಬಾಕಿ ಇದೆ. ಭಾರತ ತನ್ನ ಕೃಷಿ ವಲಯವನ್ನು ರಕ್ಷಿಸಿಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.

ಒಪ್ಪಂದದಿಂದ ಆರ್ಥಿಕತೆಗೆ ವೇಗ: ಬಿಜೆಪಿ ಅಧ್ಯಕ್ಷ ನವೀನ್‌

ನವದೆಹಲಿ: ‘ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಭಾರತೀಯ ಆರ್ಥಿಕತೆಗೆ ಹೊಸ ವೇಗ ಬರಲಿದ್ದು, ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ದಾರಿಯಾಗಲಿದೆ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನವೀನ್‌ ಬಣ್ಣಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟಿಸಿರುವ ಅವರು, ‘ಭಾರತ ಮತ್ತು ಅಮೆರಿಕ ಸಂಬಂಧಗಳಲ್ಲಿನ ಈ ಹೊಸ ಪ್ರಗತಿ ಶ್ಲಾಘನೀಯ. ಜಗತ್ತಿನ ಎರಡು ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಸಂಬಂಧದ ಬಲವರ್ಧನೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದ ಆರ್ಥಿಕತೆಗೆ ಹೊಸ ವೇಗ ನೀಡುತ್ತದೆ. ಜತೆಗೆ ಆತ್ಮ ನಿರ್ಭರ್‌ ಭಾರತ್‌ ಮತ್ತು ಮೇಕ್ ಇನ್‌ ಇಂಡಿಯಾಗೆ ಶಕ್ತಿ ತುಂಬುತ್ತದೆ’ ಎಂದಿದ್ದಾರೆ.

ಮೋದಿ ದೇಶ ಮಾರಿದ್ದಾರೆ: ಅಮೆರಿಕ ಜತೆ ಒಪ್ಪಂದಕ್ಕೆ ಕೈ ನಾಯಕರು ಕಿಡಿ

ನವದೆಹಲಿ: ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಖುಷಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಪೂರ್ಣ ಶರಣಾಗಿದ್ದಾರೆ. ಕೃಷಿಕರ ಹಿತಾಸಕ್ತಿಯನ್ನು ಕಡೆಗಣಿಸಿ ಭಾರತವನ್ನು ಮಾರಿದ್ದಾರೆ’ ಎಂದು ವಿಪಕ್ಷ ಕಾಂಗ್ರೆಸ್‌ ಆರೋಪಿಸಿದೆ. ಅಮೆರಿಕದ ಉತ್ಪನ್ನಗಳು ಭಾರತದಲ್ಲಿ ತೆರಿಗೆರಹಿತವಾಗಲಿವೆ ಎಂದು ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಇಂತಹ ಟೀಕೆಗಳು ವ್ಯಕ್ತವಾಗಿವೆ.

ಒಪ್ಪಂದ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕದ ಒತ್ತಡಕ್ಕೆ ಮಣಿದು ಡೀಲ್‌ ಮಾಡಿಕೊಳ್ಳುವ ಮೂಲಕ ಮೋದಿ ಅವರು ಭಾರತೀಯ ರೈತರ ಪರಿಶ್ರಮದ ಜತೆಗೆ ಇಡೀ ದೇಶವನ್ನೇ ಮಾರಿದ್ದಾರೆ. ಅಮೆರಿಕದಲ್ಲಿ ಅದಾನಿ ಅವರ ಕಂಪನಿಯ ಮೇಲೆ ದಾಖಲಾಗಿರುವ ಪ್ರಕರಣ ಮತ್ತು ಎಪ್‌ಸ್ಟೀನ್‌ ಫೈಲ್ಸ್‌(ಅದರಲ್ಲಿ ಮೋದಿ ಹೆಸರು ಉಲ್ಲೇಖವಾಗಿದೆ) ಮೋದಿಯವರ ಮೇಲೆ ಒತ್ತಡ ಹೇರುತ್ತಿರುವ ಅಂಶಗಳು’ ಎಂದರು.ಅತ್ತ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್‌, ‘ಟ್ರಂಪ್‌ ಹೇಳಿಕೆಯಿಂದ ಮೋದಿ ಸಂಪೂರ್ಣ ಶರಣಾಗತರಾಗಿರುವುದು ತಿಳಿಯುತ್ತದೆ. ಮೇ 10ರಂದು(ಆಪರೇಷನ್‌ ಸಿಂದೂರ ನಿಲ್ಲಿಸಿದ್ದಾಗಿ ಟ್ರಂಪ್‌ ಮೊದಲ ಬಾರಿ ಹೇಳಿದ್ದ ದಿನ) ಹೀಗೇ ಆಗಿತ್ತು. ಆ ಬಳಿಕ ನಡೆದ ಘಟನೆಗಳಿಂದಾಗಿ ಭಾರತದ ನಿಲುವು ಕುಗ್ಗಿಹೋಗಿದೆ’ ಎಂದರು. ಜತೆಗೆ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕದೊಂದಿಗೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದದ ಅಂಶಗಳನ್ನು ಉಭಯ ಸದನಗಳಲ್ಲಿ ಮಂಡಿಸಿ ಚರ್ಚೆಗೆ ಒಳಪಡಿಸಬೇಕು. ಆ ಮೂಲಕ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಅಮೆರಿಕದ ಮೇಲೆ ಭಾರತ ಶೂನ್ಯ ತೆರಿಗೆ: ಏನಿದರರ್ಥ?

ನವದೆಹಲಿ: ‘ಅಮೆರಿಕದ ಉತ್ಪನ್ನಗಳ ಮೇಲೆ ಇನ್ನುಮುಂದೆ ಭಾರತದಲ್ಲಿ ಶೂನ್ಯ ತೆರಿಗೆ ಹೇರಲಾಗುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತೆರಿಗೆ ಸಡಿಲಿಕೆ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು. ಇದನ್ನು ವಿಪಕ್ಷ ಕಾಂಗ್ರೆಸ್‌ ವಿರೋಧಿಸಿ, ‘ಮೋದಿ ದೇಶವನ್ನು ಅಮೆರಿಕಕ್ಕೆ ಮಾರಿದ್ದಾರೆ’ ಎಂದು ಆರೋಪಿಸಿತ್ತು. ಆದರೆ ಅಸಲಿ ವಿಷಯವೆಂದರೆ, ಭಾರತ ಅಮೆರಿಕದ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹೇರುವುದು ಅಸಾಧ್ಯ.

ವಿದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ 2 ರೀತಿಯ ಸುಂಕ ಹೇರಲಾಗುತ್ತದೆ. ಒಂದು, ಸ್ಥಳೀಯ ಉತ್ಪಾದಕರನ್ನು ರಕ್ಷಿಸುವ ಸಲುವಾಗಿ ವಿದೇಶಿ ಉತ್ಪನ್ನಗಳ ಮೇಲೆ ಹೇರಲಾಗುವ ತೆರಿಗೆ. ಇದರ ಹೇರಿಕೆಯಿಂದ ಅನ್ಯ ದೇಶಗಳ ವಸ್ತುಗಳು ದುಬಾರಿಯಾಗಿ, ಅವುಗಳ ಬೇಡಿಕೆ ತಗ್ಗುತ್ತದೆ.ಇನ್ನೊಂದು, ಸುಂಕೇತರ ತಡೆ. ಇದನ್ನು ಕೋಟಾ (ಆಮದಾಗುವ ವಸ್ತುಗಳ ಪ್ರಮಾಣ ನಿಗದಿ), ಸಬ್ಸಿಡಿ, ಪರವಾನಗಿ, ಕಠಿಣ ನಿಯಮಗಳ ಮೂಲಕ ಜಾರಿಗೆ ತರಲಾಗುತ್ತದೆ. ಇದೀಗ ಟ್ರಂಪ್ ಪ್ರಸ್ತಾಪಿಸಿರುವುದು ಇದನ್ನೇ ಎನ್ನಲಾಗಿದೆ. ಆದರೆ ಸರ್ಕಾರದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಅಥವಾ ಮಾಹಿತಿ ಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫಾದರ್ ಆಫ್‌ ಆಲ್‌ ಡೀಲ್ಸ್‌ : ಭಾರತ ಮತ್ತು ಅಮೆರಿಕ ಘೋಷಿಸಿದ ಒಪ್ಪಂದ
ಗಂಡನನ್ನು ಹಾಸಿಗೆಗೆ ತಳ್ಳಿ ಆತನ ಮೇಲೇರಿ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ